Monday, 2 August 2021

ಬುದ್ಧಿ ಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ ankita krishnavittala

ಬುದ್ಧಿಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ

ಮನ ಶುದ್ದಳಾಗಿ ಗಂಡನೊಡನೆ ಬಾಳ ಬೇಕಮ್ಮ ಪ


ಮಾತು ಮಾತಿಗೆ ಮಾತ ಜೋಡಿಸಿ ಆಡಬೇಡಮ್ಮಮಗಳೆ

ಪ್ರೀತಿ ಪಡುವ ಗಂಡನೆಂದು ಹೆಮ್ಮೆ ಬೇಡಮ್ಮ

ನೀತಿ ತಪ್ಪಿ ನಡಿಯಬೇಡ ಯೆಂದಿಗಾದರೂ ಮಗಳೆ

ಸೋತು ನಡೆಯಲು ಲೇಸುಯೆಂದು ತಿಳಿಯ ಬೇಕಮ್ಮ 1

ಅತ್ತೆ ಮಾವ ಗಂಜಿ ಕೊಂಡು ನಡಿಯ ಬೇಕಮ್ಮ ಮಗಳೆ

ಮತ್ತೆ ಪತಿಯ ಮನವ ಮೆಚ್ಚಿಸಿ ಬಾಳ ಬೇಕಮ್ಮ

ವಿತ್ತ ವಿದ್ದರು ಭೃತ್ಯರಿದ್ದರು ತೊತ್ತಿನಂತೆ

ದುಡಿಯ ಬೇಕಮ್ಮ ಮಗಳೆ

ಚಿತ್ತದಲ್ಲಿ ಹರಿಯ ಭಕ್ತಿ ಬಿತ್ತಬೇಕಮ್ಮ 2

ನೋಟ ಆಟದಲ್ಲಿ ಮಮತೆ ಬಹಳ ಬೇಡಮ್ಮ ಮಗಳೆ

ಕೊಟ್ಟು ಕ್ರಯವ ತಿಂಡಿ ತಿಂಬೊ ನಡತೆ ಬೇಡಮ್ಮ

ಕೂಟ ಜನರ ಮಾತು ಕೇಳೆ ಕೇಡು ಕೇಳಮ್ಮ ಮಗಳೆ

ಸಾಟಿ ನಾನು ಗಂಡಗೆಂದು ಹಠವು ಬೇಡಮ್ಮ 3

ಕಂಡು ಕಂಡುದೆ¯್ಲ ಬಯಸೆ ಕ್ಲೇಶ ಕೇಳಮ್ಮ ಮಗಳೆ

ಗಂಡ ತಂದುದೆ ದೊಡ್ಡದೆಂದು ಉಂಡು ಬಾಳಮ್ಮ

ಗಂಡೀ ನಂತೆ ಮೆರೆಯ ಬಾರ್ದು ತಗ್ಗಿ ನಡೆಯಮ್ಮ ಮಗಳೆ

ತೊಂಡಳಾಗಿ ಹರಿಗೆ ಬಾಳೆ ಸುಖವು ನಿನಗಮ್ಮ 4

ಹರಿಯು ಕೊಟ್ಟರೂಪವೆ ಛಂದ ಲಜ್ಜೆ ಬೇಡಮ್ಮ ಮಗಳೆ

ಬರಿಯ ವೇಷ ನಾಟಕದಂತೆ ಮೋಸ ಕಾಣಮ್ಮ

ಜರಿಯ ಬೇಡ ಹಿರಿಯರ ಮಾತು ಹಾನಿ ಹೌದಮ್ಮ ಮಗಳೆ

ಮರಿಯೆ ಹರಿಯ ಭವವು ತಪ್ಪದು ಜೋಕೆ ನೋಡಮ್ಮ 5

ಇಲ್ಲದ ಸಲ್ಲದ ಡಂಭ ಬೇಡ ಸೊಲ್ಲು ಕೇಳಮ್ಮ ಮಗಳೆ

ನಲ್ಲನ ಬಲುಮೆಗೆ ಒಳ್ಳೆ ಗುಣವೆ ಮುಖ್ಯ ತಿಳಿಯಮ್ಮ ಮಗಳೆ

ಒಳ್ಳೆ ಮಾತನಾಡಿ ಸರ್ವರ ಹಿತವ ಕೋರಮ್ಮ 6

ಏನೇ ಬಂದರು ಜರಿದು ಪತಿಯ ನುಡಿಯ ಬೇಡಮ್ಮಮಗಳೆ

ನಿನ್ನದೆಂದು ಪುಟ್ಟಿದ ಮನೆಯ ತಿಳಿಯ ಬೇಡಮ್ಮ

ಮಾನವೆ ಮುಖ್ಯ ಮಾನಿನೀಗೆ ತಿಳಿದು ಬಾಳಮ್ಮಾ ಮಗಳೆ

ಮಾನವು ನೀಡೆ ಮಾನವು ಬಾಹೋದು ಮರ್ಮ ತಿಳಿಯಮ್ಮ 7

ನಾನು ನಾನು ನಾನೆಂಬೋದೆ ಹೀನ ಕೇಳಮ್ಮಾ ಮಗಳೆ

ಸಾನುರಾಗದ ನುಡಿಯೆ ಸಕ್ಕರೆ ಕೀರ್ತಿ ಉಳಿಸಮ್ಮ

ಸ್ನಾನ ಪಾನದಲ್ಲೇ ಮುಳುಗದೆ ಹರಿಯ ಸೆನೆಯಮ್ಮ ಮಗಳೆ

ಶ್ರೀನಿವಾಸನ ಭಕ್ತರ ಪೂಜೆ ಯತ್ನದಿ ಮಾಡಮ್ಮಾ 8

ಪರರ ಸಿರಿಯ ನೋಡಿ ಮನದಿ ಕೊರಗ ಬೇಡಮ್ಮ ಮಗಳೆ

ಹರಿಯು ನೀಡಿಹ ಸಿರಿಯೆ ಸಾಕುಯೆಂದು ಸುಖಿಸಮ್ಮ

ಯರವಿನಿಂದ ಒಡವೆ ವಸ್ತ್ರ ಧರಿಸ ಬೇಡಮ್ಮ ಮಗಳೆ

ಅರಿತು ಹರಿಯ ಗುಣಗಳ ಮನದಿ ನೆನೆದು ನೆನೆಯಮ್ಮ 9


ಸತತ ನಗೆ ಮೊಗಳಾಗಿ ಬಾಳು ಗಂಟು ಬೇಡಮ್ಮ ಮಗಳೆ

ಸತತ ಕಾಯುವ ಹರಿಯೇಯೆಂದು ದೃಢದಿ ಭಜಿಸಮ್ಮ

ವಿತತ ವಿಷ್ಣುವು ದ್ರೌಪತಿಯಂತೆ ಸಲಹುವನೆಂಬೆ

ಕೇಳಮ್ಮಾ ಮಗಳೆ

ಜತನ ಮಾಡಿ ನೀತಿಯ ಮರ್ಮ ನಿತ್ಯ ಸುಖಿಸಮ್ಮ 10


ಪತಿಯ ಭಕ್ತಿಯೆ ತಾರಕ ನಿನಗೆ ಧೋರಣೆ ಬೇಡಮ್ಮ ಮಗಳೆ

ಪತಿಯ ಜರಿಯುತ ವ್ರತಗಳ ಮಾಡೆ ಫಲವೇ ಇಲ್ಲಮ್ಮ

ರತಿಯಿಂ ನುಡಿದಿಹೆ ಶೃತಿಗಳಸಾರ ಯುಕ್ತಿಗಳಮ್ಮ ಮಗಳೆ

ಸತತ ಜಯಮುನಿ ವಾಯ್ವಂತರ್ಗತ ಶ್ರೀಕೃಷ್ಣವಿಠಲನ

ಮೊರೆಯ ಹೋಗಮ್ಮ 11

****


No comments:

Post a Comment