ಕಾಖಂಡಕಿ ಶ್ರೀ ಕೃಷ್ಣದಾಸರು
ಮನವೇ ಬರಿದೇ ಚಿಂತಿಸಲಿ ಬ್ಯಾಡಾ | ಹರಿಚರಣ ಸ್ಮರಿಸಿ ಸುಖಿಯಾಗು ಕಂಡ್ಯಾ ಪ
ಕರ್ಮ ಜನಿತ ಲಾಭಾ ಲಾಭ | ವಿಧಿ ವರೆದ ಪರಿಯಾ | ತನ್ನಿಂದ ತಾನೇ ಬಹದೆಂದು ಖರಿಯಾ | ಇನ್ನು ತಾ ಬಯಸಿದರೆ ಬಾರದರಿಯಾ | ನಿನ್ನೊಳು ನೀ ತಿಳಿದು ನಂಬು ಹರಿಯಾ 1
ಬಸಿರೊಳಗ ಬೆಳೆಸಿ ಶಿಶುತನದಿಂದ ಯೌವನದ | ದೆಸೆಗೊಟ್ಟು ಸಲುಹಿದ ನಲ್ಲವೇನೋ | ಬಿಸಜಾಕ್ಷ ಅಸಮರ್ಥನಾದನೇನೋ | ಕುಶಲ ನಾನೆಂದ-ಹಂಕರಿಸಿದೇನೋ 2
ಬೊಂಬಿಯಾನು ಆಡಿಸುವ ಸೂತ್ರಧಾರಕನಂತೆ | ಇಂಬಾಗಿ ಕುಣಿಸುವನು ಪ್ರಾಣಿಗಳನು | ಡಿಂಬಿನೊಳು ನಿಂತು ತಾ ಚೇತಿಸುವನು | ಕುಂಭಿನಲಿ ಸ್ವತಂತ್ರನಲ್ಲ ನೀನು | ಅಂಬುಜನಾಭನ ಲೀಲೆಯೆಂದು ಕಾಣು 3
ಬದಿಲಿದ್ದ ಪಾತ್ರೆಯನು ಬಾವಿಯೊಳಗದ್ದಿದ್ದರೆ | ಉದಕ ತುಸು ಬಹದೆಂದು ನುಡಿದು ಸೊಲ್ಲಾ | ನದಿಯೊಳೆದ್ದಲು ನೀರು ಹೆಚ್ಚದಲ್ಲಾ | ಇದನರಿಯದೆವೆ ಭ್ರಾಂತಿಯೊಳಗ ಖುಳ್ಳಾ | ಕುದಿದು ಸಂಸಾರದಲಿ ಸೊರಗಿದನೆಲ್ಲಾ 4
ಗುರು ಮಹಿಪತಿಸ್ವಾಮಿ ಬೋಧಾಮೃತವ ಸವಿದು | ಹರಿಚರಣದಲಿ ಭಾರವಪ್ಪಿಸಿಟ್ಟು | ದೊರಕಿದದರಿಂದ ಸಂತುಷ್ಟಬಟ್ಟು | ಸ್ಥಿರಚಿತ್ತನಾಗಿ ಕಳವಳಿಕೆ ಬಿಟ್ಟು | ತರುಣೋಪಾಯದ ತಿಳಿಯೋ ಜ್ಞಾನಗುಟ್ಟು 5
***
No comments:
Post a Comment