ತೆಪ್ಪದುತ್ಸವ ನಿನಗೆ ಏನು ಹಿತವೋ
ಅಪ್ಪ ಹನುಮಯ್ಯ ನಿನ್ನಾಟಕೇನೆಂತೆಂಬೆ ಪ.
ರಾಮ ಉಂಗುರ ಸತಿಗೆ ಕಂಡಿತ್ತು ಬಾರೆನಲು
ನೇಮದಿಂದಲಿ ನೂರು ಯೋಜನುದಧಿ
ಪ್ರೇಮದಿಂದಲಿ ಹಾರಿ ಕುರುಹು ತಂದಾ ಮಹಿಮ
ಈ ಮಡುವಿನ ಜಲದಿ ಈ ಆಟವಾಡುವುದು 1
ಕುರುಕುಲಾರ್ಣವವೆಂಬ ಘನ ಶತ್ರು ಸೈನ್ಯವನು
ಒರಸಿ ಕ್ಷಣದಲಿ ಭುಜಬಲದ ಶೌರ್ಯದಲಿ
ಧುರವೆಂಬ ಶರಧಿಯನು ಲೀಲೆಯಲಿ ದಾಟಿದಗೆ
ವರ ಸರೋವರದ ಈ ಜಲದಾಟವಾಡುವುದು 2
ಅನ್ಯ ದುರ್ಮತ ಮಹಾರ್ಣವನು ಶೋಷಿಸುತ ಬಹು
ಉನ್ನತದ ವೇದ ಶಾಸ್ತ್ರಾರ್ಣವದಲಿ
ಚೆನ್ನಾಗಿ ಈಜಿ ಶ್ರೀ ಹರಿಚರಣ ದಡ ಸೇರ್ದ
ಘನ್ನ ಮಹಿಮನಿಗೆ ಈ ಚಿನ್ನ ಮಡುವೀಜುವುದು 3
ಮುಕ್ತಿಯೊಗ್ಯರ ಕರ್ಮಶರಧಿಯನು ದಾಟಿಸುತ
ಮುಕ್ತರಾಶ್ರನ ಪುರ ಸೇರಿಸುವನೆ
ಅತ್ಯಂತ ಅಲ್ಪ ಈ ಜಲದಾಟವಾಡಿದರೆ
ಭಕ್ತರಾದಂತ ದಾಸರು ನಗರೆ ಹನುಮ 4
ವರ ಕದರುಂಡಲಿಯಲ್ಲಿ ನೆಲಸಿರುವ ಭಕ್ತರಿಗೆ
ಮರುಳುಗೊಳಿಸುತ ಮಹಾ ಮಹಿಮನೆನಿಸಿ
ಪರಿಪರಿಯ ಉತ್ಸವಪಡುವೆ ಶ್ರೀ ಕಾಂತೇಶ
ಸಿರಿರಮಣ ಗೋಪಾಲಕೃಷ್ಣವಿಠ್ಠಲನ ದಾಸ 5
****
No comments:
Post a Comment