Monday, 2 August 2021

ಯಾಕೆ ನೀನು ಹೀಗೆ ಮಾಡುವಿ ವೀರ ಹನುಮ ankita gopalakrishna vittala

ಯಾಕೆ ನೀನು ಹೀಗೆ ಮಾಡುವಿ ವೀರ ಹನುಮ

ಯಾಕೆ ನೀನು ಹೀಗೆ ಮಾಡುವಿ ಪ. 


ಯಾಕೆ ನೀನು ಹೀಗೆ ಮಾಡುವಿ

ಜೋಕೆಯಿಂದ ಸಲಹೊ ಎಂಬ

ವಾಕು ಕೇಳದೇನೋ ನಿನಗೆ

ಸಾಕು ಸಾಕು ನಿನ್ನ ಬಿಂಕ ಅ.ಪ.


ಸತ್ಯವಂತನೆಂಬ ವಾಕು

ಎತ್ತ ಪೋಯಿತೀಗ ಬಿರುದು

ಒತ್ತಿ ಒತ್ತಿ ಕೇಳಿದರೂ

ಉತ್ತರವÀ ಕಾಣೆನಲ್ಲೊ 1

ಒಡೆಯ ರಾಮಭಂಟನೆನಿಸಿ

ಒಡವೆ ವಸ್ತು ಇಟ್ಟುಕೊಂಡು

ಬಡಿವಾರದಲಿ ನಿಂತರೀಗ

ಬಡವರೆಮ್ಮ ಗತಿಯದೇನೊ 2

ವೀರ ಉಡುಪು ಧರಿಸಿಕೊಂಡು

ವೀರ ಭೀಮನೆನಿಸಿಕೊಂಡು

ಮೋರೆ ಎತ್ತಿ ನೋಡದಿರಲು

ದಾರಿಯಾವುದೆಮಗೆ ಪೇಳು 3

ಮುನಿಯ ರೂಪ ತಾಳಿ ಮತ್ತೆ

ಮೌನಧರಿಸಿ ನಿಂತರೀಗ

ಮಾನತನದಿ ತುತಿಸುವೆಮಗೆ

ಏನು ಮುಂದೆ ಗತಿಯು ಇನ್ನು 4

ಬೇಡಲಿಲ್ಲೊ ನಿನ್ನ ಒಡವೆ

ಬೇಡಲಿಲ್ಲೊ ನಿನ್ನ ಭಾಗ್ಯ

ಆಡೊ ಒಂದು ಮಾತು ಎನಲು

ಮಾಡಿರುವೆ ಮನವ ಕಲ್ಲು 5

ಏನು ಸೇವೆ ಮಾಡಲೀಗ

ಏನು ನಿನ್ನ ಸ್ತುತಿಸಲೀಗ

ಏನು ಧ್ಯಾನ ಮಾಡಲೀಗ

ಏನು ತಿಳಿಯದಲ್ಲೊ ಎನಗೆ 6

ಶುದ್ಧವಾದ ನಿನ್ನ ಒಂದು

ಮುದ್ದು ಮಾತು ಕೇಳೆನೆಂದು

ಒದ್ದಾಡುವೆನೊ ಮನದಿ ಬಹಳ

ಇದ್ದಿಯಾಕೊ ಸುಮ್ಮನಿನ್ನು 7

ಮನದಿ ಎನಗೆ ದೃಢವು ಇಲ್ಲ

ಹನುಮ ನಿನಗೆ ದಯವು ಇಲ್ಲ

ಮುನಿಸು ಮಾಡೆ ನೀನು ಸಲ್ಲ

ಘನವೆ ನಿನಗೆ ಪೇಳೊ ಸೊಲ್ಲ 8

ನಿನ್ನ ಹೊರತು ಪೊರೆವರಿಲ್ಲ

ಮನ್ನಿಸಿನ್ನು ಕಾಳಿನಲ್ಲ

ನಿನ್ನ ಕೀರ್ತಿ ಜಗದಿ ಬಹಳ

ಉನ್ನತದಲಿ ಮೆರೆಸೊ ಮಲ್ಲ 9

ಅನ್ನಕೊಡಿಸಿ ಇಟ್ಟುಕೊಂಡು

ಮನ್ನಿಸುವೆನೆಂಬೋ ಇಂಥ

ಭಿನ್ನನಾದ ನುಡಿಗೆ ನಾನು

ಇನ್ನು ಒಪ್ಪಲಾರೆ ಕಂಡ್ಯ 10

ಕದರುಮಂಡಲಿಗಿ ಹನುಮ

ಹೆದರಲಾರೆ ನಿನಗೆ ಇನ್ನು

ಒದಗಿ ಪಾಲಿಸೆಂದು ಬೇಡೆ

ಹೃದಯ ಕರಗದಲ್ಲೊ ನಿನಗೆ 11

ನಿರುತ ನಿನ್ನ ದಾಸಳೆನಿಸಿ

ಚರಿಸುವಂಥ ಎನಗೆ ಒಲಿದು

ಅರುಹದಿರಲು ಒಂದು ವಾಕು

ಬಿರುದು ಉಳಿವುದೇನೊ ಇನ್ನು 12

ಇಷ್ಟ ಸಲಿಸದಿರೆ ಗೋಪಾಲ

ಕೃಷ್ಣವಿಠ್ಠಲಗ್ಹೇಳಿ ನಾನು

ಕಟ್ಟಿ ಹಾಕಿಸುವೆನೊ ಎನ್ನ

ಶ್ರೇಷ್ಠ ಮನದಿ ನಿನ್ನ ಮೂರ್ತಿ 13

ಗುರುಗಳಾಜ್ಞೆಯಿಂದ ನಾನು

ಹರುಷದಿಂದ ಬಳಿಗೆ ಬರಲು

ಗರುವದಿಂದ ನಿನ್ನ ನೇತ್ರ

ತೆರದು ನೋಡದಿರುವರೇನೊ 14

ತಂದೆ ನೀನೆ ಸಲಹೊ ಎಂದು

ಬಂದು ನಿನ್ನ ಅಡಿಗೆ ಎರಗೆ

ಒಂದು ಮಾತನಾಡದಂಥ

ಕುಂದು ಏನು ಪೇಳೊ ಇನ್ನು15

ಬೇಡ ಬೇಡ ಛಲವು ಇನ್ನು

ಬೇಡಿಕೊಂಬೆ ಹನುಮ ನಿನ್ನ

ಪಾಡಿಪೊಗಳುವಂತೆ ದಯವ

ಮಾಡು ಎನ್ನ ಮೊರೆಯ ಕೇಳಿ 16

****


No comments:

Post a Comment