Wednesday 10 November 2021

ಪೋಷಿಸೆನ್ನನು ನಿರುತ ಶೇಷ ದೇವ ದೋಷ ನಾಶ ankita shyamasundara POSHISENNANU NIRUTA SHESHA DEVA DOSHA NAASHA


 

" ಶ್ರೀ ಶೇಷದೇವರ ಸ್ತುತಿ "


ಪೋಷಿಸೆನ್ನನು ನಿರುತ ಶೇಷದೇವ ।

ದೋಷ ನಾಶನಗೊಳಿಸಿ ಲೇಸಾಗಿ ಪಿಡಿ ಕರವ ।। ಪಲ್ಲವಿ ।।


ವನಧಿಶಯನಿಗೆ ತಲ್ಪ ಅನುಜ ಪೂರ್ವಜನಾ ।

ಘನ ಸೇವೆಯನು ಗೈದ ಫಣಿರಾಜನೇ ।

ವಿನಯದಲಿ ಬಿನ್ನೈಪೆ ನಿನಗ ಶನವಾದಾತ ।

ಎನಗೊಲಿದು ಪೊರೆವಂತೆ ಅನುಗ್ರಹಿಸಿ ಅನುದಿನ ।। ಚರಣ ।।


ಭೂ ಗಗನ ಪಾತಾಳ ಸಾಗರವ ವ್ಯಾಪಿಸಿದ ।

ಯೋಗ ಸಾಧನ ಶೂರ ನಾಗನಾಥ ।

ಬಾಗಿ ಬೇಡುವೆ ಭವದ ರೋಗಕೌಷಧವಾದ ।

ಭಾಗವತ ಶ್ರವಣ ಸುಖರಾಗದಲಿ ನೇ ಕೊಟ್ಟು ।। ಚರಣ ।।


ಸಾಸಿರಾಂಬಕ ನಮಿತ ಸಾಸಿರಾನನನಾದ ।

ವಾಸುಕೀಪರ ವಾರುಣೀಶ ನಿನ್ನ ।

ಹಾಸಿಗೆಯಗೈದಂಥ ಶ್ರೀ ಶ್ಯಾಮಸುಂದರನ ।

ದಾಸರಾದವರ ಸಹವಾಸ ಪಾಲಿಸಿ ನಿತ್ಯ ।। ಚರಣ ।।

***

ರಾಗ : ಕಾಂಬೋಧಿ    ತಾಳ : ಝ೦ಪೆ (raga, taala may differ in audio)


ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ವನಧಿಶಯನಗೆ = ಕ್ಷೀರ ಸಮುದ್ರ ಶಯನನಾದ ಶ್ರೀ ಹರಿಗೆ 

ತಲ್ಪ = ಹಾಸಿಗೆ 

ಅನುಜ = ಶ್ರೀ ಲಕ್ಷ್ಮಣದೇವರು  

ಪೂರ್ವಜನಾ = ಶ್ರೀ ಬಲರಾಮ ದೇವರು   

" ನಿನಗಶನವಾದಾತ ಎನಗೊಲಿದು ಪೊರೆವಂತೆ ಅನುಗ್ರಹಿಸಿ ಅನುದಿನದಿ " 

ಸರ್ಪಕ್ಕೆ ಆಹಾರವಾದ ಶ್ರೀ ವಾಯುದೇವರು. ಅಂದರೆ,

ಶ್ರೀ ವಾಯುದೇವರು ಎನಗೆ ಅನುಗ್ರಹಿಸಿ ರಕ್ಷಿಸುವಂತೆ ಮಾಡುಯೆಂದು ಶ್ರೀ ದಾಸಾರ್ಯರ ವಚನ. 

" ಭವದ ರೋಗಕೌಷಧವಾದ ಭಾಗವತ ಶ್ರವಣ ಸುಖರಾಗದಲಿ ನೇ ಕೊಟ್ಟು "

ಪ್ರಸಕ್ತ ಬ್ರಹ್ಮ ಕಲ್ಪದಲ್ಲಿರುವ ಶ್ರೀ ರುದ್ರದೇವರೇ ಶ್ರೀ ಭಾವಿ ಶೇಷದೇವರು. 

ಅಂತಹ ಶ್ರೀ ಶೇಷದೇವರು ಹಿಂದಿನ ಕಲ್ಪದಲ್ಲಿ ಶ್ರೀ ಮಹಾರುದ್ರದೇವರಾಗಿದ್ದಾಗ ಶ್ರೀ ಶುಕ ಮುನಿಗಳಾಗಿ ಪ್ರಯೋಪವೇಶ ದೀಕ್ಷಾಪರನಾಗಿದ್ದ ಶ್ರೀ ಪರೀಕ್ಷಿತ ಮಹಾರಾಜನಿಗೆ ಶ್ರೀಮದ್ಭಾಗವತ ಶಾಸ್ತ್ರವನು ಶ್ರವಣ ಮಾಡಿಸಿದವರು. 

ಸಾಸಿರಾಂಬಕ ನಮಿತ = ಸಹಸ್ರಾಕ್ಷರಾದ ಶ್ರೀ ಇಂದ್ರದೇವರಿಂದ ವಂದಿತರು 

ವಾರುಣೀಶ   ವಾರುಣೀದೇವಿಯರ ಪತಿ 

" ಹಾಸಿಗೆಯಗೈದಂಥ ಶ್ರೀ ಶ್ಯಾಮಸುಂದರನ 

ದಾಸರಾದವರ ಸಹವಾಸ ಪಾಲಿಸಿ ನಿತ್ಯ "

ನಿನ್ನನ್ನೇ ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡ ಯೆನ್ನ ಬಿಂಬ ರೂಪಿಯಾದ ಶ್ರೀ ಶ್ಯಾಮಸುಂದರೋsಭಿನ್ನ ಶ್ರೀ ಹರಿಯ ದಾಸರ ಸಹವಾಸವನ್ನು ಎನಗಿತ್ತು ನನ್ನನ್ನು ನಿತ್ಯದಲಿ ಪರಿಪಾಲಿಸು ಎಂದು ಶ್ರೀ ಶ್ಯಾಮಸುಂದರ ದಾಸರು ನಮ್ಮ ಪರವಾಗಿ ಪ್ರಾರ್ಥಿಸಿದ್ದಾರೆ.

****


No comments:

Post a Comment