ಶ್ರೀ ವೆಂಕಟೇಶ ಎನ್ನ ಸಲಹಲ್ಯಾಕೆ ಬಳಲುವೆ ಪ
ಬಂದ ದುರಿತ ಪರಿಹರಿಸೊ ಬಂದು ತಾಪವನ್ನು ಬಿಡಿಸೊ
ಮಂದ ಬುದ್ದಿಯನ್ನೆ ಕೆಡಿಸೊ ಮದನನಯ್ಯ ಮಮತೆ -
ಯಿಂದ ಇಂದು ಎನ್ನ ಮಾತ ಲಾಲಿಸೊ
ತಂದೆ ಕುಂದು ಎಣಿಸದೆನ್ನ ಪಾಲಿಸೊ 1
ನಕ್ರನ ಬಾಧೆಯೊಳಗೆ ಸಿಳುಕಿ ಗಜವು ನರಳುತಿರಲು ತ್ರಿ-
ವಿಕ್ರಮನೆ ಸಲಹೊಯೆಂದು ಕರೆಯಲಾಗ ನಕ್ರನ
ಚಕ್ರದಿಂದ ಹೊಡೆದು ಕೆಡಹಿದೆ ಆ ಗಜಕೆ ಬಂದ
ವಕ್ರವನ್ನು ಬಿಡಿಸಿ ಸಲಹಿದೆ ಎನ್ನ ಮನದ ವಕ್ರವನ್ನು ಬಿಡಿಸಲಾಗದೆ 2
ತರಳ ಧ್ರುವನು ತನ್ನ ಪಿತನ ತೊಡೆಯ ಮ್ಯಾಲೆ ಬಂದು ಕುಳ್ಳಿರೆ
ತರವೆ ನಿನಗೆ ಎಂದು ಸುರುಚಿ ತವಕದಿಂದ ಎಳೆಯಲವನ
ಭರದಿ ಬಂದು ನಿನ್ನ ಚರಣವ ಭಜಿಸಲವಗೆ
ಸ್ಥಿರಪದವಿಯಿತ್ತೆ ಕರುಣದಿ ನಾನು ನಿನ್ನ ಸ್ಮರಣೆಗೈವೆದಿವ್ಯನಾಮವ 3
ಆರು ಸಲಹುವರು ಎನ್ನ ಪಾರುಗಾಣಿಸುವರ ಕಾಣೆ
ಸೇರಿದೆನೊ ಶೇಷಶಯನ ಶ್ರೀನಿವಾಸ ಎನ್ನನು
ದ್ಧಾರ ಮಾಡಲಾಗದೆ ಸಕಲ ಆರಭಾರ ನಿನ್ನ
ಸೇರಿತಲ್ಲವೆ ಬೇರೆ ವಿಚಾರವಿಲ್ಲದೆ ನಿನ್ನ ನಂಬಿದೆ 4
ದುಷ್ಟ ದನುಜರನ್ನು ಮುರಿದು ಧಾರುಣಿಯೊಳು ಇರುವೆ ಎನ್ನ
ಕಷ್ಟವ ಬಿಡಿಸಿ ಕಾಯೊ ಕಮಲನಾಭ ಹೆಳವನ
ಕಟ್ಟೆವಾಸ ವೆಂಕಟೇಶನೆ ಸಕಲ ಭಾರ
ದೃಷ್ಟಿಯಿಂದ ಪೊರೆವೊ ದೇವನೆ ಕೃಷ್ಣಾ ಸೃಷ್ಟಿಗೊಡೆಯ
ಸುಜನಪಾಲನೆ 5
***
No comments:
Post a Comment