Audio by Mrs. Nandini Sripad
ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತ ಶ್ರೀನಿವಾಸನ ಸ್ತೋತ್ರ ಸುಳಾದಿ
ರಾಗ ಪೂರ್ವಿಕಲ್ಯಾಣಿ
ಧ್ರುವತಾಳ
ಶ್ರೀನಿವಾಸನೆ ನಿನಗೇನು ಬಿನ್ನೈಸಲೋ
ಧೇನಿಸಿದರೆ ಎನಗಾಶ್ಚರ್ಯ ತೋರುತಿದೆ
ಅನಾದಿ ಕಾಲದಿಂದ ಸೃಷ್ಟ್ಯಾದಿ ವ್ಯಾಪಾರ
ನೀನೆ ಮಾಡಿಸುವೆಂದು ಶಾಸ್ತ್ರಸಿದ್ಧ
ಜ್ಞಾನಿಗಳು ಹೀಗೆ ತಿಳಿದು ಪೇಳುವರಯ್ಯಾ
ಈ ನೀತಿ ನೋಡಿದರೆ ಪುಶಿಗಾಣದು
ಹೀನ ಜ್ಞಾನಗಳಿಂದನೇಕ ಭವಣಿ ಬಡುತ
ನಾನಾ ಯೋನಿಗಳಲ್ಲಿ ಸಂಚರಿಸುವ
ಈ ನಡತೆಯ ನೋಡೆದಾರಿಂದಲಾಗುವದು
ಶ್ರೀನಾಥ ನೀನೆ ದಯದಿ ತಿಳಿಸಬೇಕು
ತಾನೆ ಮಾಡುವ ಜೀವನೆಂದು ಯೋಚನೆ ಮಾಡೆ
ಅನಾದಿಯಿಂದ ಶಕ್ತಿಶೂನ್ಯ ಅಲ್ಪಾ
ಕಾಣ ತನ್ನ ಸ್ವರೂಪ ಇನ್ನಾವದು ಬಲ್ಲನೋ
ಜ್ಞಾನಪೂರ್ಣ ಸರ್ವಜ್ಞ ನೀನೇನರಿಯಾ
ಜ್ಞಾನ ಕರ್ಮೇಂದ್ರಿ ಮೊದಲಾದ ತತ್ವಗಳನ್ನೆ
ಮಾನಿಗಳಿವಕೆ ಬ್ರಹ್ಮರುದ್ರೇಂದ್ರರೂ
ನಾನಾ ವ್ಯಾಪಾರವ ಮಾಡಿಸಿ ಇವರಿಂದ
ಹೀನ ಸುಖವು ಉಣಿಸುವರೆಂಬೆನೇ
ಜ್ಞಾನಿಗಳರಸೇ ನಿನ್ನಾಜ್ಞಧಾರಕರವ -
ರೇನು ಮಾಡುವದೆಲ್ಲ ನಿನ್ನ ಸೇವೆ
ಜಾನಕಿ ಪತಿಯೆ ತ್ರಿಗುಣ ಕಾರ್ಯವೆನಲಿಬೇಕು
ಶ್ರೀನಾರಿ ಇವಕಭಿಮಾನಿ ಸ್ವಾಮೀ
ನೀನೆ ಸರ್ವರಿಗೆ ನಿಯಾಮಕನಾಗಿ ಇದ್ದು
ಅನೇಕ ವಿಹಾರ ಮಾಡುತಿಪ್ಪೆ
ನಾನು ನನ್ನದು ಎಂಬೊದೆಲ್ಲಿಂದ ಪುಟ್ಟಿತಯ್ಯಾ
ಈ ನುಡಿ ಬಿಡಿಸಿ ಕಾವೋರನ್ನ ತೋರೋ
ದೀನವತ್ಸಲ ಗುರುಶ್ರೀಶವಿಟ್ಠಲ ನಿನ್ನಾ -
ಧೀನದವನೊ ನಾನು ಆನಂದಮೂರುತಿಯೆ ॥ 1 ॥
ಮಟ್ಟತಾಳ
ಇಂದಿರೇಶನೆ ನಿನ್ನಾನಂದ ಮೂರುತಿಗಳು
ಒಂದರಲ್ಲಿ ಬಿಡದೆ ಸಂದಣಿಸಿಹವಯ್ಯಾ
ಒಂದಾದರು ಕೃತ್ಯದರಿಂದಲಾಗದು ಧೊರಿಯೆ
ಮಂದರೋದ್ಧರ ನಿನ್ನ ಬಂಧಕ ಶಕುತಿಗೆ
ವಂದಿಪೆ ಮೂಜಗದ ತಂದೆ ನಿನ್ನಯ ಪಾದ -
ದ್ವಂದ್ವದಿ ಎನ್ನ ಮನಸು ಪೊಂದಿಸೊ ಕ್ಷಣಬಿಡದೆ
ನಂದ ನಂದನನೆ ಎನ್ನಿಂದಲಾಗುವ ದೋಷ
ಒಂದು ನೋಡದೆ ದಯಾಸಿಂಧು ಎನ್ನ ಹೃದಯ -
ಮಂದಿರದಲಿ ನಿಂತು ಸುಂದರ ಮೂರುತಿಯೆ ಗುರುಶ್ರೀಶವಿಟ್ಠಲ
ಸಂದರುಶನವೀಯೋ ಸರ್ವಸ್ಥಳಗಳಲಿ ॥ 2 ॥
ತ್ರಿವಿಡಿತಾಳ
ಶ್ರೀಶ ಸ್ವಾತಂತ್ರ ನೀನೇಸು ಬಗೆಯಲಿ ನೋಡೆ
ಸಾಸಿವಿಗಳನಿತು ಸಂಶಯವಿಲ್ಲ
ಲೇಸೆ ಎನಗೆ ನೀನು ಏಸು ಜನ್ಮಗಳೀಯ್ಯಾ
ಈಶಾ ಎಂದಿಗೂ ನೀನು ದಾಸ ನಾನೂ
ಈ ಸುಜ್ಞಾನವೆ ಕೊಟ್ಟು , ನೀ ಸಲಹಲಿ ಬೇಕು
ವಾಸುದೇವನೆ ಭಕ್ತ ಪೋಷಕನೆ
ಭಾಸುರ ಮೂರುತಿ ಈ ಸಚರಾಚರ -
ವಾಸ ಸರ್ವದ ಎನ್ನ ಮನಸಿನಲ್ಲೀ
ಬೇಸರದಲೆ ನೀ ಪ್ರಕಾಶನಾಗಿ ವಿಷಯ -
ದಾಸಿ ಬಿಡಿಸೋ ಗುರುಶ್ರೀಶವಿಟ್ಠಲಾ ॥ 3 ॥
ಅಟ್ಟತಾಳ
ಕಂತುಪಿತನೆ ನಿನ್ನಚಿಂತ್ಯಾದ್ಭುತ ಶಕ್ತಿ
ಅಂತುಗಾಣಳೊ ರಮೆ ಎಂತು ಬಲ್ಲೆನೊ ನಾನು
ಜಂತುಗಳೊಳು ನೀಚ ಇಂಥ ಅಲ್ಪನ ಮನ
ನಿಂತಲ್ಲಿ ನಿಲಿಸದೆ ಭ್ರಾಂತನ್ನ ಮಾಡೆನ್ಯ -
ನಂತೆ ನೋಡುವರೆ ಮಹಂತರೊಡಿಯ ಭಗ -
ವಂತ ನಿನ್ನವರವನಂತ ತಿಳಿದು ಸ್ವಾಮಿ
ಸಂತತ ಹರಿ ನಿನ್ನ ಚಿಂತನೆ ಬಿಡನೆನ್ನ
ಅಂತರಂಗದೊಳಿಟ್ಠು ಸಂತರ ಸೇವಿಸಿ -
ರಂತರ ಸೇವಿ ನಿರಂತರಯಿತ್ತು ಸ -
ತ್ಪಂಥವ ತೋರೆನ್ನ ಚಿಂತಿಯ ಬಿಡಿಸಯ್ಯಾ
ಸಂತೋಷ ಮೂರುತಿ ಗುರುಶ್ರೀಶವಿಟ್ಠಲ
ಇಂತು ಪಾಲಿಸೋ ಜಗದಂತರ್ಯಾಮಿ ॥ 4 ॥
ಆದಿತಾಳ
ನೀನೆ ಎನಗೆ ತಾಯಿ ನೀನೆ ಎನಗೆ ತಂದಿ
ನೀನೆ ಎನಗೆ ಬಂಧು ನೀನೆ ಎನಗೆ ಸಖಾ
ನೀನೆ ಎನಗೆ ವಿದ್ಯಾ ನೀನೆ ಎನಗೆ ದ್ರವ್ಯ
ನೀನೆ ಎನಗೆ ಧೊರಿ ನೀನೆ ಎನಗೆ ದಾತಾ
ನೀನೆ ಎನಗೆ ಸರ್ವ ಸಂಪತ್ತು ಕೃಷ್ಣಯ್ಯ
ನೀನೆ ಎನಗೆ ಗುರುಶ್ರೀಶವಿಟ್ಠಲರೇಯ
ನೀನೆ ಸ್ವಾಮಿ ಸರ್ವಾಭೀಷ್ಟದಾಯಕನೋ ॥ 5 ॥
ಜತೆ
ಈರೇಳು ಲೋಕಕ್ಕೆ ಕಾರಣ ನೀನಯ್ಯಾ
ಪಾರುಗಾಣಿಸೊ ಎನ್ನ ಗುರುಶ್ರೀಶವಿಟ್ಠಲ ॥
ಶ್ರೀ ಗುರುಶ್ರೀಶವಿಟ್ಠಲದಾಸರ ಕಿರುಪರಿಚಯ :
ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ಜನಿಸಿದ ಶ್ರೀನರಸಿಂಹದಾಸರು , ಶ್ರೀಜಗನ್ನಾಥದಾಸರಲ್ಲಿ 12 ವರ್ಷ ಶಿಷ್ಯತ್ವ ವಹಿಸಿ ಅವರನ್ನು ಸೇವಿಸಿದರು. ಗುರುಗಳು ಅನುಗ್ರಹಿಸಿ , ಅವರ ಆಜ್ಞೆಯ ಪ್ರಕಾರ ಶ್ರೀ ಶ್ರೀಶವಿಠಲಾಂಕಿತ ಹುಂಡೇಕಾರ ದಾಸರಿಂದ " ಗುರುಶ್ರೀಶವಿಠಲ " ಎಂಬ ಅಂಕಿತ ಪಡೆದರು. ಗಂಗಾವತಿ ತಾಲೂಕಿನ ಕುಂಟೋಜಿ ಎಂಬ ಗ್ರಾಮದಲ್ಲಿ ಇದ್ದುದರಿಂದ ಇವರಿಗೆ ಕುಂಟೋಜಿ ದಾಸರೆಂದೂ ಕರೆಯುವರು . ಇವರು 6 ಸುಳಾದಿಗಳನ್ನು ರಚಿಸಿದ್ದಾರೆ. ಸಂಖ್ಯೆ ಕಡಿಮೆಯಾದರೂ ಅಸಂಖ್ಯ ಅಂತಃಶಕ್ತಿ ಈ ಸುಳಾದಿಗಳಲ್ಲಿ ಅಡಗಿದೆ.
ಶ್ರೀ ಗುರುಶ್ರೀಶವಿಟ್ಠಲದಾಸರಿಂದ ರಚಿತವಾದ ಶ್ರೀಗುರುರಾಜರ ಸ್ತೋತ್ರಪದ " ಬಾರೊ ಗುರುರಾಘವೇಂದ್ರ " ಮತ್ತು ಶ್ರೀಶ್ರೀನಿವಾಸ ದೇವರ ನಕ್ಷತ್ರಮಾಲಿಕಾ " ಸ್ತುತಿರತ್ನಮಾಲಾ - ಶ್ರೀನಿವಾಸ ದಯಾನಿಧೆ " ಎಂಬ ಪದ ಅಬಾಲ ವೃದ್ಧರಿಗೂ ಪರಿಚಿತವಾದುದು.
********
No comments:
Post a Comment