Friday, 27 December 2019

ರಥವೋಗದ ಮುನ್ನ ಗೋಕುಲಕೆ ಮನ್‍ಮನೋ ankita shreeda vittala

ರಾಗ : ಧನಶ್ರೀ  ತಾಳ : ಝಂಪೆ

ರಥವೋಗದ ಮುನ್ನ ಗೋಕುಲಕೆ ಮನ್‍ಮನೋ |
ರಥ ಪೋಗಿರುವುದೇನೆಂಬೆ ||ಪ||

ಅತಿಕೌತುಕವದಾಯ್ತು ಖಳರಾಯನೊಲಿದು ಯದು |
ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ||ಅನು||

ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ |
ಪತಿ ಸೇವೆ ತಾನಾಗಿ ದೊರೆತು |
ಶತಸಹಸ್ರಾನಂತಾನಂತ ಜನುಮಗಳ ಸು|
ಕೃತಕ್ಕೆ ಫಲವಾಯಿತೆಂದರಿದು|
ಗತಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ |
ಪಥದೊಳಗೆ ತಾವೆ ಮುಂದರಿದು ||
ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ|
ಪ್ರತಿಯಿಲ್ಲವೀ ಶುಭೋದಯಕೆ-ಸೂರ್ಯೋದಯಕೆ ||೧||

ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು |
ನಾಪುಳಿನದಲಿ ಮೆರೆವ ಚರಣ |
ಗೋಪಿಯರ ಪೀನ ಕುಚಕುಂಕುಮಾಂಕಿತ ಚರಣ |
ತಾಪತ್ರಯವಳಿವ ಚರಣ |
ಗೋಪುರದ ಶಿಲ ತೃಣಾಂಕುರವ ತೋರುವ ಚರಣ |
ಆಪದ್ಬಾಂಧವ ಚರಣ ||
ನಾ ಪೇಳಲೇನು ಭಕುತರ ವತ್ಸಲನು
ಕರುಣಾಪೂರ್ಣ ಎನಗಭಯ ಕೊಡುವ-ಕರಪಿಡಿವ ||೨||

ನೋಡುವೆನು ನೀರದಶ್ಯಾಮ ಸುಂದರನ ಕೊಂ |
ಡಾಡುವೆನು ಕವಿಗೇಯನೆಂದು |
ಮಾಡುವೆನು ಸಾಷ್ಟಾಂಗ – ದಂಡಪ್ರಣಾಮ 
ಮಾತಾಡುವೆನು ಮೈಮರೆದು ನಿಂದು |
ಬೇಡುವೆನು ಭುವನೈಕ ದಾತನೆದುರಲಿ 
ಕರವ ಜೋಡಿಸಿ ದಾಸ್ಯಬೇಕೆಂದು |
ಈಡಿಲ್ಲದಿಂದಿನ ಮನಕೆನ್ನ
ಬಯಕೆ ಕೈ-ಗೂಡುವುದು ನಿಸ್ಸಂದೇಹ-ದೈವ ಸಹಾಯ ||೩||

ಇರುವನೋ ಏಕಾಂತದಲಿ ಬರವ ಕೇಳಿದಿರು |
ಬರುವನೋ ಬಂದವನ ಕಂಡು |
ತರುವನೋ ತನುಪುಳಕವಾನಂದ ಭಾಷ್ಪದಿಂ-| 
ದೆರೆವನೋ ಬಿಗಿದಪ್ಪಿಕೊಂಡು |
ಕರೆವನೋ ಕಿರಿಯಯ್ಯ ಬಾರೆಂದು ಬಣ್ಣಿಸುತ |
ಬೆರೆವನೋ ಬೆರೆಸಿ ತಾನುಂಡು |
ಒರೆವನೋ ಒಡಲಮರ್ಮವನೆಲ್ಲ ಒರಗಿಸಿ|
ಜರಿಯನೋ ಜಗದೀಶ ಹಗೆತನ ನೆನೆಯ-ಬಗೆಯ ||೪||

ಗೋಧೂಳಿ ಲಗ್ನಕ್ಕೆ ಗೋಕುಲಕೆ ಬಂದು ಬೆರ |
ಗಾದೆ ಹರಿ ಹೆಜ್ಜೆಗಳ ಕಂಡು | ಭೂದೇವಿಗಾಭರಣವೆನುತ
ತೇರಿಳಿದು ಶ್ರೀ ಪಾದರಜದೊಳಗೆ ಹೊರಳಾಡಿ |
ಗೋದೋಹನದೊಳಿದ್ದ ರಾಮಕೃಷ್ಣರ ಕಂಡು |
ನಾ ಧನ್ಯಧನ್ಯನೆಂದಾಡಿ ||
ಶ್ರೀದವಿಠಲಗೆರಗುವನಿತರೊಳು ಬಿಗಿದಪ್ಪಿ |
ಸಾದರಿಸಿದನು ಇದೇ ಸದನದಲಿ-ಸ್ವಪ್ನದಲಿ ||೫||
*********

No comments:

Post a Comment