Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ
(ಮಾನವ ಜನ್ಮದಲ್ಲಿ ಭೂಸುರ ಜನ್ಮ ಬಹು ದೊಡ್ಡದು. ಈ ಪರಮ ಭೂಸುರ ಜನ್ಮದ ಇರವು ನೋಡಿ, ಇದನ್ನು ವ್ಯರ್ಥ ಮಾಡದೆ ಸಂಸಾರದಿ ಆಸಕ್ತನಾಗಬೇಡ.)
ರಾಗ ಸಾವೇರಿ
ಧ್ರುವತಾಳ
ಅಕಟಕಟಾ ಜನಿಸಿ ಭಾರಕನಾದೆ ಭೂಮಿಗೆ
ವಿಕಳ ಮತಿಯಿಂದ ಪಾಪಕ್ಕೆ ಎರಗುತ್ತ
ಸಕಲ ಕಾಲದಲ್ಲಿ ಪುಣ್ಯಕ್ಕೆ ಹಾನಿ ಬಗದು ನಿ -
ಲುಕವಿಲ್ಲದಾದ ನರಕಕ್ಕೆ ಪೋಗುವೆ
ಯುಕುತಿಯಲ್ಲಿ ಅಗ್ರ ಜನುಮಕೆ ಬಂದು
ಸುಕೃತಾರ್ಥ ಮುಕುತಾರ್ಥ ತಿಳಿಯದೆ ಹಿಂ -
ದಕ್ಕೆ ಬೀಳುವೆ ಶುಕ ಸೂಕರ ಶು -
ನಕ ಜೀವಾದಿಯ ರಾಸಿಕದೊಳಗೆ ಪೊಕ್ಕು ಹೇ -
ಸಿಕೆ ಬಡುತಲಿ ದುಃಖವೆಂಬೊ ವಿಷದ ಪಾ -
ವಕದೊಳಗೆ ಬೆಂದು ಸಾಧನ ಮಾ -
ಡಿಕೊಂಬುವುದಕೆ ಕಾಣೆನೊ
ಅಖಿಳ ಜೀವೇಶ ಮಹಾಮಖ ವಿಜಯವಿಟ್ಠಲ
ಪೋಷಕನಾಧಾರಕನುದ್ಧಾರಕನು ನೀನೆ ॥ 1 ॥
ಮಟ್ಟತಾಳ
ಈ ಜನುಮ ತಪ್ಪಲುವಾಜನುಮ ಬಪ್ಪದು
ಬೀಜ ಮಾತೇ ಇದು ಮಾಜುವದೆ ಅಲ್ಲ
ಜೂಜಾಡಿದಂತೆ ತನ್ನ ಜಯ ಅಪಜಯವು
ಮೂಜಗದೊಳಗೆ ಸಹಜವೆಂಬೋದೆ ಸಿದ್ಧ
ಬೀಜ ನಾಮ ವಿಜಯವಿಟ್ಠಲ ಮುನಿಗೇಯಾ
ವಾಜಿಗೆಟ್ಟು ಯಮರಾಜನಲ್ಲಿ ಸಿಗುವೆ ॥ 2 ॥
ತ್ರಿವಿಡಿತಾಳ
ಶಿರವೆ ಬಾಗುವದಕ್ಕೆ ನಯನಂಗಳು ನೋಡಿ
ಹರುಷವಾಗುವದಕ್ಕೆ ಕರ್ನಂಗಳು ನಿತ್ಯ
ಹರಿಕಥೆ ಕೇಳುವುದಕ್ಕೆ ನಾಸಿಕ
ನಿರ್ಮಾಲ್ಯಾಘ್ರಾಣಿಸಲು ನಾಲಿಗೆ ಕೊಂಡಾಡಲು
ವರ ವದನ ಪ್ರಸಾದ ಉದರ ತುಂಬುವದಕ್ಕೆ
ಕರಗಳು ಸೇವಿಗೆ ಚರಣ ತೀರ್ಥಯಾತ್ರಿಗೆ
ಶರೀರವು ನಿನ್ನ ಚರಣಕ್ಕೆರಗುವದಕ್ಕೆ
ಕರುಣಿಸಿರಲು ಸರ್ವ ದಯದಿಂದ ಒಲಿದು
ಮರೆದು ನಿನ್ನಯ ಲೀಲೆ ಮರನಾಗಿ ಬೆಳೆದೂ ಭೂ -
ಸುರ ದೇಹ ಕೆಡಿಸಿದೆ ಶರಣ್ಯ ವಿಜಯವಿಟ್ಠಲಾ ॥ 3 ॥
ಅಟ್ಟತಾಳ
ಚರಿಸಿ ಬರುವದಕ್ಕೆ ಪರಿಪರಿ ದೇಶಗಳ
ತಿರು ತಿರುಗಬೇಕಾದರೆ ಮಾರ್ಗವು
ಹರಿ ಹರಿದಾಗೆ ಒಂದೊಂದು ಪುರಗಳು
ವಿರಚಿಸಿ ತಪ್ಪಿ ಪೋಗದಂತೆ ದಶದಿಕ್ಕು
ವರ ತೃಷಿ ಹಸಿವಿಗೆ ಕೆರೆ ತೊರೆ ಫಲಗಳು
ಇರಬೇಕಾದರೆ ಗಿರಿ ಗಹ್ವರ ಚಂದ
ನೆರವ ಬರುವದಕ್ಕೆ ತತ್ವಾಭಿಮಾನ್ಯನು
ಧರಿಯಂಬರ ಹಾಸಿಕೆ ಹೊದಿಕೆ ಮಾಡೆ
ಪೊರೆವನುದಿನ ಒಡನೊಡನೆ ಇದ್ದು
ಉರಿಮಾರಿಗಳು ಬಂದಡರದಂತೆ ಮಹಾ -
ವರಾಹ ವಿಜಯವಿಟ್ಠಲ ನೀನೇ ಗತಿ ಎನಲು
ಮರಣ ಕಾಲಕೆ ತನ್ನ ಸ್ಮರಣೆ ಪಾಲಿಸುವನು ॥ 4 ॥
ಆದಿತಾಳ
ಇಂತು ಹರಿ ಕರುಣಿಸಿರಲು ಚಿಂತೆ ಮಾಡಿ ವ್ಯರ್ಥ ನಾನು
ಸಂತಾಪವ ಹಚ್ಚಿಕೊಂಡು ಭ್ರಾಂತಿಯಲ್ಲಿ ಕೆಡುವುದು
ಸಂತೆಕೂಟ ನೆರೆದ ತೆರನಂತೆ ಸಂಸಾರದ ಮಾಯಾ
ತಂತ್ರದಲ್ಲಿ ಸಿಗಬಿದ್ದು ಅಂತಿಗೆ ಭಂಗವಾಗೋದು
ಎಂತು ಪೇಳಲಯ್ಯಾ ಏಕಾಂತ ಹರಿಯ ಪಾದಾ -
ಕ್ರಾಂತನಾಗಿ ಕಷ್ಟವಿಲ್ಲದ ಪಂಥವ ಪಿಡಿಯಲೊಲ್ಲದು
ಶಾಂತಿದ ವಿಜಯವಿಟ್ಠಲಾನಂತ ಮಹಿಮ ಬಲು ದಯಾಳು
ಚಿಂತೆಯನು ಕಳೆದು ತನ್ನವರಂತೆ ಮಾಡಿ ಸಾಕುವನು ॥ 5 ॥
ಜತೆ
"ಪರಮಿತ್ರೇತಿ ಸ್ವಸ್ತಯೇ ಪರಿಪೂರ್ಣಾಯ ಕಾಮಾಯಾ"
ಹಿರಣ್ಯಗರ್ಭ ನಾಮಾ ವಿಜಯವಿಟ್ಠಲ ಧೊರಿಯೇ ॥
****
No comments:
Post a Comment