ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೊ
ಘನ್ನ ಗುರು ಶ್ರೀರಾಘವೇಂದ್ರ ಸಂಪನ್ನಾ ಪ
ವರುಷವರುಷಕೆ ನಿನ್ನ ದರುಶನವ ದಯಮಾಡೊ
ದುರಿತನಾಶನಗೈದು ಪರಿಶುದ್ಧಗೊಳಿಸೊ
ಅರಿತುಅರಿಯದೆಗೈದ ಪಾಪಕರ್ಮವ ಕಳೆದು
ನಿರುತ ಶ್ರೀಹರಿಕೃಪೆಗೆಪಾತ್ರನಾಗಿರಿಸೊ 1
ನಿನ್ನ ಭಕುತರ ಪಾದರಜದೊಳೀಡಾಡಿಸೊ
ನಿನ್ನ ಗುಣಕೀರ್ತನೆಯ ಕಿವಿಗಳಲಿ ನಿಲಿಸೊ
ನಿನ್ನ ಪಾದೋದಕದಿ ಪಾವನ್ನ ಮಾಡೆನ್ನ
ನಿನ್ನ ರಘುಪತಿ ದಿವ್ಯದರುಶನವ ಕೊಡಿಸೊ 2
ಮಂತ್ರಸದನ ನಿನ್ನ ಸಂತಸ ಮಹೋತ್ಸವದಿ
ಶಾಂತಿ ಸುಖ ಸಂಭ್ರಮದ ಸನ್ನಿಧಿಯೊಳಿರಿಸೊ
ಸಂತ ಶರಣರ ಭಕುತಿ ನೃತ್ಯಗೀತೆಗಳಲ್ಲಿ
ನಿಂತು ನಲಿಯುವ ಭಾಗ್ಯ ಕೊಡು ಎನಗೆ ಪ್ರಭುವೆ 3
ಪ್ರಹ್ಲಾದರಾಜ ನೀ ಬಲ್ಲಿದನು ಜಗದೊಳಗೆ
ನಿಲ್ಲದೇ ಕಾಯ್ವ ನರಹರಿ ದೂತನಹುದೊ
ಎಲ್ಲ ರಾಜರರಾಜ ವ್ಯಾಸರಾಜನೆ ಸತ್ಯ
ಇಲ್ಲಿ ಶ್ರೀ ಪರಿಮಳಾರ್ಯರ ಮಹಿಮೆ ಸ್ತುತ್ಯ 4
ಏನು ಬೇಡಲಿ ನಾನು ದಾನಿ ಕರ್ಣನೆ ನಿನ್ನ
ಜ್ಞಾನಿಸದ್ಗುರು ಕಲ್ಪವೃಕ್ಷ ಸುರಧೇನು
ದೀನರಕ್ಷಕ ವಿಠಲೇಶ ಕರುಣಾಭರಣ
ಸಾನುರಾಗದಿ ನಿನ್ನ ಸೇವಕರೊಳಿರಿಸೊ 5
***
ankita ವಿಠಲೇಶ
ರಾಗ: ಸಾರಂಗ ತಾಳ: ಝಂಪೆ (raga tala may differ in audio)
No comments:
Post a Comment