ರಾಗ: ಮೋಹನ ತಾಳ: ತ್ರಿಪುಟ
ಮುನ್ನಮಾಡಿದ ಪಾಪಕಾರ್ಯಕ್ಕೆ
ಇನ್ನು ಪಶ್ಚಾತ್ತಾಪವ ಹೊಂದಯ್ಯ ಪ
ಇನ್ನಾದರು ಗುರು ರಾಘವೇಂದ್ರರಪಾದ
ಚೆನ್ನಾಗಿ ನೀನು ಭಜಿಸಯ್ಯ ಅ.ಪ
ಸುಳ್ಳುಹೇಳಿದ ಪಾಪ ಕಳ್ಳತನದ ಪಾಪ
ಒಳ್ಳೆಯವರ ಬೈದು ಘಳಿಸಿದ ಪಾಪ
ಬಾಳುವಜನಗಳ ಹಾಳುಮಾಡಿದ ಪಾಪ
ಕೀಳುಜನರಸೇವೆಗೈದಂಥ ಪಾಪ 1
ಕೇಳದೆ ಹರಿಕಥೆಯ ತೆಗಳಿದ ಪಾಪ
ಒಲವಿನಿಂ ಗುರುವನು ಭಜಿಸದ ಪಾಪ
ಆಳುವಧಣಿಗೆ ದ್ರೋಹಗೈದಂಥ ಪಾಪ
ಅಳಲಹರಿಸುವ ಗುರುವ ನೆನೆಯದ ಪಾಪ 2
ಪರಧನ ಪರಸತಿಗಾಶಿಸಿದ ಪಾಪ
ಪರಮಾತ್ಮನಂಘ್ರಿಯ ಸೇವಿಸದ ಪಾಪ
ಪರರಸೊತ್ತಿಗೆ ಆಸೆಗೈದಂಥ ಪಾಪ
ಪರಿಪರಿವಿಧದಲ್ಲಿ ಗಳಿಸಿದ ಪಾಪ 3
ಉರುತರ ಗರ್ವದಿ ಮೆರೆದಂಥ ಪಾಪ
ಊರ್ವಿಸುರರನು ತೆಗಳಿದ ಪಾಪ
ಗುರುರಾಘವೇಂದ್ರರ ಚರಣಕಮಲಗಳ
ನೆರೆನಂಬಿಭಜಿಪರ ನಿಂದಿಪ ಪಾಪ 4
ಮದಮಾತ್ಸರ್ಯವೆಂಬುವ ಪಾಪ
ಕ್ರೋಧದಿ ಸುಜನರ ಬೈದಂಥ ಪಾಪ
ಮೋದದಿಂದಲಿ ಪರರ ಹಿಂಸಿಸಿದ ಪಾಪ
ಸದಮಲ ಗುರುವನು ಸೇವಿಸದ ಪಾಪ 5
ಉದರ ಪೋಷಣೆಗಾಗಿ ಮೋಸಗೈದಂಥ ಪಾಪ
ಶ್ರದ್ದೆಯಿಂ ಸುಜನರ ಸೇವೆಗೈಯ್ಯದ ಪಾಪ
ಯದುಕುಲನಂದನ ಸಿರಿಕೃಷ್ಣವಿಠಲನ
ಪಾದಕಮಲಗಳ ಭಜಿಸದ ಪಾಪ 6
?? 7
***
No comments:
Post a Comment