Thursday, 5 August 2021

ನೋಡಿರೈ ಕಣ್ದಣಿಯಾ ಸಜ್ಜನರೆಲ್ಲ ಪಾಡಿರೈ ಮನದಣಿಯಾ ankita mahadevapuravasa

   ..

ಆಳ್ವಾರಾಚಾರ್ಯ ಸ್ತುತಿಗಳು

(1) ಆಂಜನೇಯ

ನೋಡಿರೈ ಕಣ್ದಣಿಯಾ ಸಜ್ಜನರೆಲ್ಲ

ಪಾಡಿರೈ ಮನದಣಿಯಾ ಪ


ಗಾಢಭಕುತಿಯನಾಂತು ಭಜನೆಯ

ಮಾಡುವರ ದುರಿತಗಳನೋಡಿಸಿ

ಕೂಡೆನಿರ್ಮಲರೆನಿಸಿ ಪೊರೆವಾ

ರೂಢನಹ ಮಾರುತಿಯ ಮೂರ್ತಿಯ ಅ.ಪ


ಉಡಿಯೋಳ್ ಘಂಟೆಗಳೆಸೆಯೆ ಚರಣದೊಳುಳ್ಳ

ತೊಡರುಗಗ್ಗರಮುಲಿಯೆ

ಪಿಡಿದಪಂಕಜ ಮೆರೆಯೆಕುಂಡಲಿಗಳಿ

ರ್ಕಡೆಯ ಕರ್ಣದಿ ಪೊಳೆಯೆ

ಕಡಗ ಮಣಿಮಕುಟಗಳ ಪೇರುರ

ದೆಡೆಯ ವಜ್ರದಪದಕ ಮೊದಲಹ

ತೊಡಿಗೆಗಳ ಸಡಗರದೊಳೊಪ್ಪುವ

ದೃಢತರದ ಮಾರುತಿಯ ಮೂರ್ತಿಯ 1

ಭರದಿಂದ ಶರನಿಧಿಯಾ ಲಂಘಿಸಿ ಪೊಕ್ಕಾ

ನಿರುಪಮತರ ಲಂಕೆಯ

ಗುರಿಗೊಂಡರಸಿ ಸೀತೆಯಾ ಕಂಡಾರಘು

ವರನುರುಮುದ್ರಿಕೆಯ

ಕರದೊಳಿತ್ತಾರಮಣಿಯಿಂ ವಿ

ಸ್ಫುರಿಪ ಚೂಡಾಮಣಿಯ ಕೈಕೊಂ

ಡಿರದೆ ಬಂದೊಡೆಯಂಗೆ ಸಲಿಸಿದ

ಪರಮಬಲಯುತನಮಳಮೂರ್ತಿಯ 2

ವಾದವಿದೂರನನು ಪಾವನ ಮೃದು

ಪಾದಾರವಿಂದನನು

ವೇದಾಂತವೇದ್ಯನನು-ಸನ್ನುತಪರ

ನಾದಾನುಮೋದನನು

ಸಾದರದೊಳೈತಂದು ಪ್ರಾರ್ಥಿಪ

ಸಾಧುಸಂತತಿಗೊಲಿದು ಪರಮಾ

ಮೋದದಿಂ ಪರಮಾರ್ಥವಿಷಯವ

ಬೋಧಿಸುವ ಮಾರುತಿಯ ಮೂರ್ತಿಯ 3

ರಂಗನಾಥನದೂತನ ಸತ್ಕರುಣಾಂತ

ರಂಗನಾರ್ತಪ್ರೀತನ

ಕಂಗೊಳಿಸುವ ನೂತನಪುರವರದೊಳು

ಹಿಂಗದೊಪ್ಪಿರುವಾತನ

ಮಂಗಳಾತ್ಮನ ಮೋಹದೂರನ

ಸಂಗರಹಿತನ ಸತ್ಯಚರಿತನ

ರಂಗದಾಸಪ್ರಣಿತಮಹಿಮೋ

ತ್ತುಂಗ ಶ್ರೀ ಮಾರುತಿಯ ಮೂರ್ತಿಯ 4

***


No comments:

Post a Comment