ನೀ ಬುದ್ಧಿ ಕೊಡದಿರಲು ಜೀವ ಪಶುವೋ ॥ ಪ ॥
ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ॥ ಅ ಪ ॥
ಸೃಷ್ಟಿಗೆ ಬರಲಿನ್ನು ಜೀವಯತ್ನವು ಉಂಟೆ ।
ಸೃಷ್ಟಿ ಸ್ಥಿತಿ ಲಯ ಕರ್ತ ತಿಳಿಯೊ ನೀನು ॥
ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾವಿರಲು ।
ಸೃಷ್ಟಿಯೊಳು ನಮ್ಮೆತ್ನ ಕಲ್ಪಿಸುವುದೆಂತೈಯ್ಯಾ ॥ 1 ॥
ಜಡಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು
ಒಡೆಯ , ನಮ್ಮೆತ್ನವೇ ಸತ್ಯ ಕೇಳೊ ॥
ಕಡುನಿದ್ರೆಯಲಿ ಜೀವ ನಿಶ್ಚೇಷ್ಟನಾಗಿರಲು ।
ಬಿಡದೆ ದಿನದಿನದಲ್ಲಿ ಎಚ್ಚರಿಕೆ ಆರಿಂದ ॥ 2 ॥
ಇಂತಿರಲು ನಿಜತತ್ವ , ಎಂಥ ಶಕ್ತಿಯೋ ನಮಗೆ ।
ಸ್ವಾಂತ ಮಂಗಳ ಸುಗುಣನಿಧಿಯೆ ಪೇಳೋ ॥
ಭ್ರಾಂತಿ ಜೀವನ ಬಿಡಿಸಿ ಜಯೇಶವಿಠ್ಠಲ ।
ಶಾಂತಿ ಪಾಲಿಸು ನಮಗೆ ಭಾರವಾಂತೂ ನೀನೆ॥ 3 ॥
***
ಇಂದಿನ ಆರಾಧ್ಯ ಪುರುಷರಾದ ಶ್ರೀ ಜಯೇಶವಿಠ್ಠಲರ ಒಂದು ಕೃತಿಯ ಒಂದು ಸಾಲನ್ನು ಅವಲೋಕಿಸಲು ಪ್ರಯತ್ನ ಮಾಡುತ್ತಿದ್ದೇನೆ . 🙏
ಇದರಲ್ಲಿ " ಸೃಷ್ಟಿಗೆ ಬರಲಿನ್ನು ಜೀವಯತ್ನವು ಉಂಟೆ "
ಎಂಬ ಸಾಲಿನಲ್ಲಿ, ದಾಸರು ಜೀವರಾಶಿಗಳ ಸೃಷ್ಟಿಯ ಬಗ್ಗೆ ತಿಳಿಸಿದ್ದಾರೆ.
ಅನಾದಿಕಾಲದಿಂದ ಅನಂತಜೀವರಾಶಿಗಳು ಅಸೃಜ್ಯಾವಸ್ಥೆಯಲ್ಲಿರುವರು.
ಆಯಾ ಕಲ್ಪಕ್ಕೆ ಅನುಗುಣವಾಗಿ ಭಗವಂತ ಅವರನ್ನು ಸೃಷ್ಟಿಗೆ ತರುವನು.
ಅದು ಹೇಗೆ ??
ಅಸೃಜ್ಯಾವಸ್ಥೆಯಲ್ಲಿ ಜೀವರಿಗೆ ಸ್ವರೂಪದೇಹ ಮತ್ತು ಲಿಂಗದೇಹ ಮಾತ್ರವಿರುತ್ತದೆ. ಯಾವ ಕರ್ಮ ಮಾಡಲೂಆಗುವದಿಲ್ಲ.
ಪರಮಾತ್ಮನೇ ಒಳಗೆ ನಿಂತು ಶ್ವಾಸೋಚ್ಛಾಸ ನಡೆಸುವನು.
ಹೀಗೆ, ಕರ್ಮ ಪಕ್ವವಾಗಿರುವ ಜೀವರನ್ನು ಆಯಾ ಕಲ್ಪದಲ್ಲಿ ಸೃಷ್ಟಿಗೆ ತರುವನು.
(ಶ್ರೀ ವಾದಿರಾಜಸ್ವಾಮಿಗಳು ಸೃಷ್ಟಿಪ್ರಕರಣ ಸುಳಾದಿಯಲ್ಲಿ ಇದನ್ನ ಹೀಗೆ ಹೇಳಿರುವರು:
"ಲಿಂಗವಿಶಿಷ್ಟರಾದ
ಇನಿತು ಜೀವರ ಹಿಡಿ ತುಂಬಿಕೊಂಡು")
ಲಿಂಗವಿಶಿಷ್ಟರು ಎಂದರೆ ಕರ್ಮ ಪಕ್ವವಾಗಿ ಈ ಕಲ್ಪಕ್ಕೆ ಸೃಷ್ಟಿಗೆ ಬರಲು ಯೋಗ್ಯರಾದವರು.
ಇದರಲ್ಲಿ ಜೀವರ ಯತ್ನವೇನಿದೆ??... ಏನು ಇಲ್ಲ..
ಕರ್ಮಮಾಡಲು ಸ್ಥೂಲದೇಹವಿಲ್ಲ.
ಭಗವಂತ, ತಾನೇ ಮಾಡಿಸಿ, ಕರ್ಮಪಕ್ವವಾಗಿರುವ ನೆಪಮಾತ್ರದಿಂದ ನಮ್ಮನು ಸೃಷ್ಟಿಗೆ ತರುವನು.
(ಇಲ್ಲವಾದಲ್ಲಿ ವೈಷಮ್ಯ-ನೈರ್ಘಣ್ಯದೋಷಬಂದೀತು)
ಇದರಲ್ಲಿ ಒಂದು ಸಂದೇಹ ಬರುವದು.
ಎಲ್ಲರ ಕರ್ಮವು ಒಂದೇಕಾಲಕ್ಕೆ ಪಕ್ವವಾದರೆ ಹೇಗೆ ??
ಇದರ ಉತ್ತರಕ್ಕೆಒಂದು ಲೌಕಿಕ ಉದಾಹರಣೆ ನೀಡಬಹುದು.
ಮೊಳಕೆ ಒಡೆಯಲು ಕಾಳನ್ನು ಒದ್ದೆಬಟ್ಟೆಯಲ್ಲಿ ಹಿಂದಿನ ದಿನರಾತ್ರಿ ನೆನೆಸಿ ಒಂದೇಕಾಲಕ್ಕೆ ಇಟ್ಟರೂ, ಮರುದಿನ ಕೆಲವು ಮೊಳಕೆ ಬಂದಿರುತ್ತವೆ, ಕೆಲವಕ್ಕೆ ಇಲ್ಲ.. ಇದು ಸ್ವಭಾವಕ್ಕೆ ಸಂಬಂಧಪಟ್ಟದ್ದು..
ಹಾಗೆ ಜೀವರ ಕರ್ಮಪಕ್ವವಾಗುವರೀತಿ.
ಹೀಗೆ ಇಂತಹ ಸೂಕ್ಷ್ಮವಿಚಾರವನ್ನು ಸುಲಭವಾಗಿ ತಿಳಿಸಲು ದಾಸರು "ಸೃಷ್ಟಿಗೆ ಬರಲಿನ್ನು ಜೀವಯತ್ನವು ಉಂಟೆ" ಎಂದು ತಿಳಿಸಿದ್ದಾರೆ.
ಶ್ರೀ ಮಧ್ವೇಶಾರ್ಪಣಮಸ್ತು
(received in WhatsApp)
***
another version
ನೀ ಬುದ್ಧಿ ಕೊಡದಿರಲು ಮನುಜ ಪಶುವೊ ಜೀವ ಪಶುವೊ ಪ
ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ಅ.ಪ
ಜಡಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು
ಒಡೆಯಾ ನಮ್ಮೆತ್ನವೇ ಸತ್ಯ ಪೇಳೊ
ಕಡುನಿದ್ರೆಯಲಿ ಜೀವ ನಿಶ್ಚೇತನಾಗಿರಲು
ಬಿಡದೆ ದಿನದಿನದಲ್ಲಿ ಎಚ್ಚರಿಕೆ ಯಾರಿಂದ 1
ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆ
ಸೃಷ್ಟಿ ಸ್ಥಿತಿ ಲಯ ಕರ್ತ ನೀನೆ ತಿಳಿಯೊ
ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾನಿರಲು
ಸೃಷ್ಟಿಯಲಿ ನಮ್ಮೆತ್ನ ಕಲ್ಪಿಸುವುದುಂಟೆ 2
ಇಂತಿರಲು ನಿಜತತ್ವ ಎಂಥ ಶಕ್ತಿಯು ನಮಗೆ
ಸ್ವಾಂತ ಮಂಗಳ ಸುಗುಣ ನಿಧಿಯೆ ಪೇಳೊ
ಭ್ರಾಂತಿ ಜೀವನ ಬಿಡಿಸಿ ಜಯೇಶವಿಠಲ
ಶಾಂತಿ ಪಾಲಿಸು ನಮಗೆ ಅಂತರಾತ್ಮಕ ದೇವ3
***
No comments:
Post a Comment