ಭಕ್ತವತ್ಸಲನೆಂಬ ಬಿರುದು ಬಿಡದಿರು ದೇವ
ಬಹು ಪರಾಕೆಲೊ ಮುರಾರಿ ಪ.
ಶಕ್ತ ನೀನೆಂದು ನಂಬಿರುವೆ ಕೃಪಾಸಿಂಧು
ರಾಕ್ಷಸಾಂತಕ ಸಲಹೊ ರಾಜೀವದಳನೇತ್ರ ಅ.ಪ.
ಮತ್ತಗಜ ಮೈಮರೆದು ಸುತ್ತಿ ಕೆಸರೊಳು ಬಿದ್ದು
ಶಕ್ತಿ ಹೀನನಾಗಿ ಏಳದಂತಾಗಿದೆ
ಮತ್ತಾರಿಗಳವಲ್ಲ ಮಂದರಾದ್ರಿಧರನೆ
ಎತ್ತಿ ಕಡೆಹಾಯಿಸೊ ಎನ್ನೊಡೆಯ ಶ್ರೀ ಹರಿಯೆ 1
ನಿಂದ ನೆಲ ಮುನಿಯುತಿದೆ ನಿಪುಣತನವಡಗಿತು
ಮಂದಮತಿ ವೆಗ್ಗಳಿಸಿ ನೆಲೆಗಾಣೆ ಮುಂದೆ
ತಂದೆ ನೀನಲ್ಲದಿನ್ಯಾರು ರಕ್ಷಿಪರಯ್ಯ
ಬಂಧನವ ಪರಿಹರಿಸೊ ಭಯನಿವಾರಣ ಹರಿಯೆ 2
ಕೊಂಡೆಯರ ಕೆಡಮೆಟ್ಟಿ ಕುಹಕಿಗಳ ಮಸ್ತಕವ
ಚೆಂಡಾಡಿದ ಚಿನ್ಮಯರೂಪ ನೀನು
ದಿಂಡರಿದು ದುರಳರನು ದುರಿತಗಳ ಪರಿಹರಿಸಿ
ಪಾಂಡವರಿಗೊಲಿದು ಪಾಲಿಸಿದೆ ಪುಂಡರೀಕಾಕ್ಷ 3
ನಾಲ್ಕು ದಿಕ್ಕಿಗೆ ನಾಲ್ಕು ಪರಿಯ ಬಂಧÀನದಿಂದ
ವ್ಯಾಕುಲದಿ ಕೃಷ್ಣಮೃಗವು ಎದೆಗುಂದಿರೆ
ನೀ ಕರುಣಿ ಸಮಯದಲಿ ವೃಷ್ಟಿಯ ಕರೆದು
ಜೋಕೆಯಲಿ ಪಥÀವೆನೇರಿಸಿದ್ಯೊ ಜಗದೀಶ 4
ನಿನ್ನನೆ ಪೂಜಿಪೆನು ನಿನ್ನನೆ ಪಾಡಿ ಪೊಗಳುವೆನು
ನಿನ್ನನೆ ನಂಬಿದವಳಿಗಿಂತ
ಉನ್ನತವಾದ ಕಂಟಕವು ಬಂದಿದೆ ಕಾಯೊ
ಪನ್ನಗಶಯನ ಹೆಳವನಕಟ್ಟೆ ರಂಗಯ್ಯ 5
****
No comments:
Post a Comment