ಎಂದು ನಿನ್ನ ದಯವು ಆಗೋದೋ ಇಂದಿರೇಶ
ಬಂದ ದುರಿತ ಹಿಂದಕ್ಕ್ಹೋಗೋದೊ
ಮಂದಬುದ್ಧಿಯಿಂದ ನಾಲಿಗೆ ಹಿಂದೆ ಮುಂದೆ ನೋಡುತಿಹುದು
ಸಂದೇಹ ಬಿಟ್ಟು ಗೋವಿಂದನ್ನ ನೆನೆಯಲಿಕ್ಕೆ ಪ
ಹರಿಯ ತನಯ ಹರಿಯು ಹರಿಯೆಂದು ಒರೆಯುತಿರಲು
ಗಿರಿಯನ್ಹತ್ತಿಸಿ ಉರಿಗೆ ಕೆಡುಹಿದ
ಕರುಣವಿಲ್ಲದ ಹಿರಣ್ಯಕನು ಪರಮ ಬಾಧೆ ಬಡಿಸುತಿರಲು
ಕರೆಯೆ ಕಂಬದಿ ಬಂದು ನರ-
ಹರಿಯ ನಾಮ ಕಾಯ್ತು ಅವನ 1
ಕಂತುಪಿತನೆ ನಿನ್ನ ಭಜಿಸದೆ ದ್ವಿಜನು ಕೆಟ್ಟು
ಅಂತ್ಯಜ ಸ್ತ್ರೀಯಳ ಕೂಡಿ ಮೆರೆಯಲು
ಅಂತ್ಯಕಾಲದಲ್ಲಿ ಏಕಾಂತದಿಂದ ಮಗನ ಕರೆಯೆ
ಕಂತುನಯ್ಯ ನಿನ್ನ ನಾಮ
ಎಂಥಗತಿಯ ಕೊಟ್ಟಿತವಗೆ2
ದುಷ್ಟಪತ್ನಿ ನುಡಿಗೆ ಉತ್ತಾನಪಾದ ತನ್ನ
ಪುತ್ರನಿಂದ ರಹಿತನಾಗಲು
ಅಚ್ಚುತನ ಧ್ಯಾನದಲಾಸಕ್ತನಾಗೆ ಉಗ್ರತಪಕೆ
ಮೆಚ್ಚಿಕೊಟ್ಟ ನಮ್ಮ ಸ್ವಾಮಿ
ಹೆಚ್ಚಿನ ಲೋಕ ಪದವಿ ಧ್ರುವಗೆ 3
ಬಂದು ಭರದಿ ಮಡುವ ಕಲಕುವೋ ಮದಡಗಜವ
ಕಂಡು ಮಕರಿ ಕಾಲು ಹಿಡಿಯಲು
ಬಂಧುಗಳಿಂದ ರಹಿತವಾಗಿ
ಒಂದು ಸಾವಿರ್ವರುಷ ಬಾಳಲು
ಇಂದಿರೇಶ ನಿನ್ನ ಸ್ಮರಣೆಯಿಂದ ಶಾಪ ವಿಮೋಚಿತನಾದ 4
ಸೃಷ್ಟಿಗಧಿಕ ನಿನ್ನ ದಯವಿರೆ ಪಾಂಡುಸುತರ
ಪಟ್ಟದ ರಾಣಿ ಸಭೆಗೆ ಎಳೆಯಲು
ವಸ್ತ್ರಹರಣ ಕಾಲದಲ್ಲಿ ಭಕ್ತಿಯಲ್ಲಿ ಭೀಮೇಶ-
ಕೃಷ್ಣನ ಮುಟ್ಟಿ ಭಜಿಸೆ
ಕೃಷ್ಣೆಗಾಕ್ಷಣ ತೃಪ್ತನಾಗಿ ಕೊಟ್ಟೆಯೊ ವಸನ 5
****
No comments:
Post a Comment