Sunday, 10 January 2021

ಚಿದ್ದೇಹಾಕಾರ ಆನಂದ vijaya vittala ankita suladi ಪಂಚಕೋಶ ಸುಳಾದಿ2 CHIDDEHAAKAARA ANANDA PANCHAKOSHA SULADI2

 

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಪಂಚಕೋಶಗಳ ವಿವರ ಸುಳಾದಿ - 2 


 ರಾಗ ಶಂಕರಾಭರಣ 


 ಧ್ರುವತಾಳ 


ಚಿದ್ದೇಹಾಕಾರ ಆನಂದಮಯವಯ್ಯಾ

ಬದ್ಧ ದೇಹಾಕಾರ ವಿಜ್ಞಾನಮಯವಯ್ಯಾ ಅನಿ -

ರುದ್ಧ ದೇಹಾಕಾರ ಮನೋಮಯವಯ್ಯಾ

ಶುದ್ಧ ಪ್ರಾಕೃತಾಕಾರ ಪ್ರಾಣಮಯವಯ್ಯಾ

ಶುದ್ಧ ಭೌತಿಕಾಕಾರ ಅನ್ನಮಯವಯ್ಯ ವಾ -

ಸುದೇವಾದಿ ಮೂರುತಿ ನಾರಾಯಣಾ

ಚಿದ್ದೇಹದಲ್ಲಿ ತಿಳಿ ಆನಂದಮಯಗೆ 

ಪದ್ಧತಿವುಂಟು ಉಳಿದದಕೆ ಚತುರನಾಮ 

ವಿದ್ಯುಚ್ಛುಭ್ರ ರಕ್ತ ಪೀತ ಶಾಮವರ್ಣ

ಹೃದ್ಗತ ತತ್ತದ್ದೇಹವಾಸ ಅನಿ -

ರುದ್ಧಾದಿ ಮೂರ್ತಿಗಳ ವ್ಯುತ್ಕ್ರಮದಿಂದ ಗುಣಿಸು ಅ -

ನಾದ್ಯ ಅವಿದ್ಯಾ ಕರ್ಮ ಕಾಲ ಗುಣ ತತ್ವ 

ಹೊದ್ದಿಕೊಂಡಿಪ್ಪವಯ್ಯಾ ಆ ಲಿಂ -

ಗದಲ್ಲಿ ಅಯ್ಯಾ ಅಯ್ಯಾ ಅಯ್ಯಾ 

ಚಿದ್ದೇಹಾತ್ಮಕ ಜೀವನ ಆಕೃತಿ ಅವ್ಯಕ್ತ ಮ -

ಹದ್ದಾಹಂಕಾರ ಚೇತನ ಚಿತ್ತ 

ಬುದ್ಧಿ ಮನಸು ಸರ್ವೇಂದ್ರಿಯಗಳು ಮಾತ್ರ ಭೂತ ಈ ಅ -

ಭಿಧಾನ ಉಂಟು ನಿತ್ಯ ಕರೆಸುವವಯ್ಯಾ

ಪದ್ಮಾಲಯ ಆನಂದ ವಿಜ್ಞಾನ ಬೊಮ್ಮ ಪ್ರಾಣ 

ರುದ್ರ ಮನೋಮಯ ಇಂದ್ರಾದ್ಯಮರರೂ

ಸದ್ದೇಶ ಮಿತ್ರಾದಿಗಳು ವಿಹಿತ ತಿಳಿದು 

ತದ್ಭಕ್ತಿಯನ್ನು ಮಾಡು ತವಕದಿಂದಾ

ಪದ್ಧತಿ ಪಂಚಮೂರ್ತಿ ಪ್ರತ್ತಕ ಪ್ರತ್ತೇಕ ತ -

ತ್ತ ದೇಹದಲ್ಲಿ ವಾಸ ಉರಭಾಗದಲ್ಲಿದ್ದ 

ಆತ್ಮ ನಾಮಾಂತರ ಸದ್ಗುಣ ಗಣಸಾಂದ್ರ 

ತುರ್ಯ ಕೃತ್ವಾಸ ಉರದ್ದೆಶೆಯಲ್ಲಿ ಆತ್ಮ ಪ್ರಾಜ್ಞ ಮೂರ್ತಿ 

ನಿರ್ಧರ ಕೇಳಿ ಕಡಿಮೆ ನಾಲ್ಕು ಸ್ಥಾನಗಳು 

ಹೃದ್ಗುಹ ಕಂಠ ಅಕ್ಷಿ ಮೂರ್ದ್ನಿಭಾಗ 

ಇದ್ದ ರೂಪಗಳಿಗೆ ನಾರಾಯಣನೆ ತುರ್ಯ ವಾ -

ಸುದೇವ ವಿಶ್ವ ಸಂಕರುಷಣ ತೈಜಸ 

ಪ್ರದ್ಯುಮ್ನ ಉರಭಾಗದಲ್ಲಿದ್ದ ಆತ್ಮನೆನ್ನಿ ಅನಿ -

ರುದ್ಧ ಭಗವಂತನೆ ಪ್ರಾಜ್ಞನೆನ್ನಿ 

ಈ ಧರೆಯೊಳು ದೇಹ ಧಾರಿಗೆ ಸುಷುಪ್ತಿಯಾ 

ಸಿದ್ಧ ಮೂರ್ಛಾವಸ್ಥಾ ಸ್ವಪ್ನ ಜಾಗ್ರತ 

ವಿದ್ಯ ಅಪರೋಕ್ಷಿಯಿಂದ ಚತುರಾವಸ್ಥಿ ಅನಿ -

ರುದ್ಧಾದಿ ಭಗವದ್ರೂಪ ಪ್ರಾಜ್ಞಾದಿ ನಾಮ 

ಮಧ್ವವಲ್ಲಭ ನಮ್ಮ ವಿಜಯವಿಟ್ಠಲರೇಯ 

ಮೂರ್ಧ್ನಿ ಮೇಲೆಯಿಪ್ಪ ತುರ್ಯ ಮುಕ್ತಿ ನೇಮಕಾ ॥ 1 ॥ 


 ಮಟ್ಟತಾಳ 


ಲಿಂಗ ಅನಿರುದ್ಧ ಪ್ರಾಕೃತ ಭೌತಿಕ 

ಹಿಂಗದೆ ನಾಲ್ಕಕ್ಕೆ ಪೋಡಶ ಕಳೆಗಳು 

ಸಂಗವಾಗಿವೆ ನೋಡು ಕಣ್ಣಿಗೆ ಕಾಣಿಸವು ಪು -

ಷ್ಪಂಗಳಿಗೆ ಶುದ್ಧ ಗಂಧ ಲೇಪನವಾದಂತೆ 

ಇಂಗಿತವಾಗಿ ಜಡ ಪ್ರಕೃತಿ ಕಲೆ 

ಮಂಗಳ ಕಾಂತಿಯಿಂದ ನಾಮಾಂತರ ಭೇದ 

ಜಂಗಮ ಸ್ಥಾವರಕೆ ನೆಲೆಯಾಗಿಪ್ಪವಯ್ಯಾ 

ತುಂಗ ವಿಕ್ರಮ ಹರಿ ವಿಜಯವಿಟ್ಠಲರೇಯ 

ಇಂಗಡ ಮಾಡುವ ಗುಣತ್ರಯಗಳ ಬೆರಸೀ ॥ 2 ॥ 


 ತ್ರಿವಿಡಿತಾಳ 


ಪ್ರಾಣ ಶ್ರದ್ಧಾ ರುದ್ರ ಇಂದ್ರಾಗ್ನಿ ವರುಣ ಗ -

ಜಾನನ ಪ್ರವಾಹ ಪಾವಕ ಪರ್ಜನ್ಯ ಕೃ -

ಶಾನನ ಮಡದಿ ಮತ್ತೆ ಚಂದ್ರಸುತ ಉಷಾ ರವಿ -

ಸೂನು ಪುಷ್ಕರ ಸೋಮ ಹದಿನಾರು ಜನರಾಂಭಿಸಿ 

ಮಾನಿಗಳಾಗಿಹರು ಗುಣಗಳಲ್ಲಿ 

ಈ ನಾಲ್ಕು ಸ್ಥಳಗಳಲ್ಲಿ ವಿಚಾರಾಂಶವೆ ಉಂಟು 

ಜ್ಞಾನಿಗಳು ತಿಳಿದು ನಿತ್ಯದಲ್ಲಿ 

ಧ್ಯಾನವನ್ನೆ ಮಾಡಿ ಭೂತ ಪ್ರಾಕೃತ ಸಂ -

ಧಾನಾನಿರುದ್ಧ ಲಿಂಗವಿಡಿದು 

ನಾನಾ ಪ್ರಕಾರ ಉಪಚಾರಣೆ ಉಪಾಸನ 

ಪ್ರಾಣಾಪ್ರಾಣರ ತನಕ ಅಪರೋಕ್ಷದಿ 

ಮಾಣದೆ ಸಾಮಾನ್ಯ ಜ್ಞಾನ ಭಕುತಿ ಇನಿತು ಪೂಜಿಸಬೇಕು 

ಶ್ರೀನಾಥನ ಪ್ರತಿಮೆ ಬಹುವಿಧ ವುಂಟು ನಿ -

ಧಾನಿಸು ಪರಮಾತ್ಮ ಪ್ರೇರಣೆಯಂತೆ 

ಮೇಣಾವತಾರ ಅಂತರ ಬಾಹಿರ ಸರ್ವ 

ಕಾಣಿಸುವ ಬಗೆ ಸಿದ್ಧ ಸಾಧನ ಭೇದ 

ಆನಂದಮೂರುತಿ ವಿಜಯವಿಟ್ಠಲರೇಯ 

ನೀನೇ ಎಂದವನಿಗೆ ನಿಶ್ಚಯ ಮತಿ ಕೊಡುವಾ ॥ 3 ॥ 


 ಅಟ್ಟತಾಳ 


ಮುಕ್ತಿ ಜಾಗ್ರತ ಸ್ವಪ್ನ ಮೂರ್ಛೆ ಸುಷುಪ್ತಿಯು 

ಉಕ್ತ ಕ್ರಮದಿಂದ ನಿಯಾಮಕನಾಗಿ 

ನಕ್ತ ಹಗಲು ಬಿಡದೆ ಆವಾವ ಕಾಲಕ್ಕೆ 

ವ್ಯಕ್ತ ಮಾಡಿಕೊಡುವ ವೈಚಿತ್ರ ಸಂಪೂರ್ಣ 

ಶಕ್ತ ಸಾರ್ವಭೌಮ ಸತತ ಪ್ರಾಕೃತ ನಿತ್ಯ 

ಮುಕ್ತಳು ಮುಕ್ತರು ತುರಿಯನ್ನ ಧ್ಯಾನವ 

ಮುಕ್ತ ಪ್ರಾಯರು ಬ್ರಹ್ಮ ರುದ್ರ ಇಂದ್ರಾದ್ಯರು 

ತ್ಯಕ್ತ ದೋಷರಾಗಿ ದೇಹದೊಳಿಪ್ಪರು 

ಉಕ್ತಿಯ ಕೇಳೋದು ಇವೆ ಮೂರ್ತಿಗಳೆಲ್ಲ 

ಭಕ್ತಿಯಿಂದಲಿ ತಮ್ಮ ಸ್ವದೇಹದಲ್ಲಿ ಆ -

ಸಕ್ತರಾಗಿ ಧ್ಯಾನವ ಮಾಡಿ ಕೇವಲ 

ಭಕ್ತ ಜನರು ಸ್ವಪ್ನದಲಿ ಸಾರಿ ಸಾರಿದರು ವಿ -

ರಕ್ತಿ ಮಾರ್ಗದಿಂದ ರುದ್ರೇಂದ್ರ ಗಣಪರು 

ಭುಕ್ತಶೇಷರು ಕಾಣೊ ಆ ತರುವಾಯ ಅ -

ವ್ಯಕ್ತಾವರಣವೆ ಪಂಚಕೋಶದಲ್ಲಿದ್ದ 

ಭಕ್ತವತ್ಸಲನೈದು ರೂಪವ ಭಜಿಸಿ ಅಭಿ -

ವ್ಯಕ್ತ ಗುಣಗಳಿಂದ ಅಧಿಕಾರಿಗಳಾಗಿ 

ಮುಕ್ತಿ ಸಾಧಿಸುವರು ಬಹುರೂಪಗಳಿಂದ 

ರಕ್ತ ರಮಣ ನಮ್ಮ ವಿಜಯವಿಟ್ಠಲರೇಯ 

ಮುಕ್ತರ ಮಾಡುವ ಧೇನಿಪ ಭಕ್ತರ ಭಕ್ತಿಯ ಕೈಕೊಂಡು ॥ 4 ॥ 


 ಆದಿತಾಳ 


ಪಂಚ ಪ್ರಾಜ್ಞ ಮೂರ್ತಿಗಳ ಉಪಾಸನೆ ಮಾಡು 

ಪಂಚ ಸ್ಥಾನದಲ್ಲಿ ಭೂತಾದಿಯಲ್ಲಿ ತಿಳಿದು 

ಪಂಚಸೂತ್ರ ರೂಪಗಳು ಅನುದಿನ ದೇಹದೊಳು 

ಸಂಚಾರವನ್ನೆ ಮಾಳ್ಪ ಸಾಕಲ್ಲ್ಯವನ್ನೆ ಗ್ರಹಿಸು 

ಕಿಂಚಿತ್ಕಾಲವಾದರು ಆತ್ಮನ್ನ ಮರಿಯದೆ ಸ -

ಕಿಂಚನನಾಗು ಮಹ ಜ್ಞಾನದಿ ವಿತ್ತದಿಂದ 

ಮುಂಚಿನ ಸಂಸ್ಕಾರ ಕೆಡದಂತೆ ಪ್ರವರ್ತಿಸು 

ಪಂಚ ಮುಖಾದ್ಯರು ಸರ್ವ ಪ್ರಾಜ್ಞನ ಭಜಿಸಿ 

ಅಂಚ ಜ್ಞಾನದಿಂದ ತತ್ತ ತತ್ವಾದಲ್ಲಿ ಪ್ರ -

ಪಂಚ ಹಿಂದುಗೈಸಿ ಸುಖಿಸುವರು ಚನ್ನಾಗಿ 

ಚಂಚಲ ಬುದ್ಧಿಯ ಬಿಡು ದೇಹದೊಳಗೆ ನಿತ್ಯ 

ಮಿಂಚುವ ದೇವನ್ನ ಸಕಲ ಠಾವಿಲಿ ನೋಡು 

ಕೊಂಚವಲ್ಲವು ಕಾಣೊ ಸುಮ್ಮನೆ ದೊರೆವದಲ್ಲಾ

ಹಿಂಚಿನ ಪುಣ್ಯದಿಂದ ಸಿದ್ಧಿಸುವದು ಇಂದು 

ವಂಚಕರೊಡನಾಡಿ ವಾರ್ಧಿಕನಾಗದಿರು 

ಸಂಚಿತಾಗಾಮಿ ಬಿಡದು ಈ ಪರಿ ನೆಸಗದಿರೆ 

ಪಂಚವರ್ಣವಾಹನ್ನ ವಿಜಯವಿಟ್ಠಲನ್ನ ವಿ -

ರಂಚಿ ಪದಸ್ಥನೊಳು ಧ್ಯಾನಿಸು ಮುನಿಯಾಗಿ  ॥ 5 ॥ 


 ಜತೆ 


ಅತೀಂದ್ರಿಯಾತಿ ಜ್ಞಾನದಲಿ ದೇಹದೊಳಗೆ ಇದ್ದ

ಚತುರಮೂರುತಿ ಪ್ರಾಜ್ಞ ವಿಜಯವಿಟ್ಠಲನ ನೋಡು ॥

******* 

No comments:

Post a Comment