by ಕುಂಟೋಜಿ ನರಸಿಂಹದಾಸರು
ಮಧುರೆಗೆ ಪೋಗಬ್ಯಾಡವೊ ಕೃಷ್ಣಾ ಬ್ಯಾಡವೊ
ಬೇಡಿಕೊಂಬುವೆವು ಇಲ್ಲೇ ಇರು ಪೋಗಬ್ಯಾಡವೊ ।।ಪ॥
ಜನನಿ ಜನಕರನ್ನು ಮರೆದು ನಮ್ಮ
ಮನಿಯ ಮಕ್ಕಳನೆಲ್ಲ ತೊರೆದು ಸ್ವಾಮಿ
ಮನಸಿಜ ಪಿತ ನೀನು ಅನಿಮಿತ್ತ ಬಂಧು ಎಂದು
ಕನಸಿನೊಳಗೆ ಸಹ ನೆನೆವೆವೊ ಮರೆಯಾದೆ
ಚಿನುಮಯ ಮೂರುತಿ ಅನಿಮಿಷರೊಡೆಯನೆ
ಜನುಮಜನುಮದಲಿ ನಮ್ಮನಗಲ ಬ್ಯಾಡವೊ ।।೧।।
ಉದಯದಲೆದ್ದು ನಿನ್ನ ಪಾದವ ನೋಡಿ
ಮುದದಿಂದಾಡುವೆವಲ್ಲೋ ಮಾಧವ ಆವ
ಕದನಗಡಕ ಕಂಸ ಸದನಕೆ ಬಾಯೆಂದಾ
ಮಧುವೈರಿ ನೀನೆಂಬೋದರಿಯನೊ ಮದಗರ್ವ
ಶ್ರೀಧರ ನಿನ್ನ ಪಾದಕೆ ನಮಿಪೆವೊ
ಸೋದರಮಾವನ ಊರಿಗೆ ಪೋಗಬ್ಯಾಡವೊ ।।೨।।
ಊರ ಒಳಗೆ ನಮಗೆಲ್ಲಾರು ಮಹಾ
ಜಾರರು ಇವರೆಂದು ಪೇಳ್ವರು ಸ್ವಾಮಿ
ದೂರಿದರ‍್ಯಾತಕೆ ದೂರವಲ್ಲರೊ ಕೃಷ್ಣ
ಮೋರಿಯ ನೋಡದೆ ನಾವಿರಲಾರೆವೊ
ಊರಿಗೆ ಪೋದರೆ ಬಾರದೆ ನಿಲ್ಲೆವು
ದಾರಿಯ ತೋರಿಸು ಗುರುಶ್ರೀಶವಿಥ್ಥಳ ।।೩।।
**********
No comments:
Post a Comment