Sunday, 15 December 2019

ಶ್ರೀಭೂಮಿ ದುರ್ಗೆ ankita jagannatha vittala ತತ್ತ್ವಸುವ್ವಾಲಿ SRI BHUMI DURGE TATWA SUVVAALI


Audio by Mrs. Nandini Sripad

ಶ್ರೀ ಜಗನ್ನಾಥದಾಸಾರ್ಯ ವಿರಚಿತ 

 ತತ್ತ್ವಸುವ್ವಾಲಿ 

 ಶ್ರೀ ಭೂ - ದುರ್ಗಾ ಸ್ತುತಿ 

ಶ್ರೀಭೂಮಿದುರ್ಗೆ ಮತ್ತೇಭೇಂದ್ರಗಮನೆ ಸ್ವ -
ರ್ಣಾಭಗಾತ್ರೇ ಸುಚರಿತ್ರೆ । ಸುಚರಿತ್ರೆ ಶ್ರೀಪದ್ಮ-
ನಾಭನ್ನ ಜಾಯೆ ವರವೀಯೆ ॥ 1 ॥

ತ್ರಿಗುಣಾಭಿಮಾನಿ ಎನ್ನವಗುಣದ ರಾಶಿಗಳ 
ಬಗೆಯದಲೆ ಕಾಯೆ ವರವೀಯೆ । ವರವೀಯೆ ನಿನ್ನ ಪದ-
ಯುಗಳಕ್ಕೆ ನಮಿಪೆ ಜಗದಂಬೆ ॥ 2 ॥

ದರಹಸಿತವದನಸುಂದರಿ ಕಮಲಸದನೆ ನಿ-
ರ್ಜರಸಿದ್ಧಗೀತೇ ವಿಧಿಮಾತೇ । ವಿಧಿಮಾತೆ ಲೋಕಸುಂ-
ದರಿಯೆ ನೀ ನೋಡೇ ದಯಮಾಡೇ ॥ 3 ॥

ಪ್ರಳಯಕಾಲದಿ ಪತಿಯು ಮಲಗಬೇಕೆನುತ ವಟ-
ದೆಲೆಯಾಗಿ ಹರಿಯ ಒಲಿಸಿದಿ । ಒಲಿಸಿದಿ ಜಗದ ಮಂ-
ಗಳದೇವಿ ನಮಗೆ ದಯವಾಗೆ ॥ 4 ॥

ತಂತುಪಟದಂತೆ ಜಗದಂತರ್ಬಹಿರದಲ್ಲಿ
ಕಾಂತನೊಡಗೂಡಿ ನೆಲೆಸಿರ್ಪೆ । ನೆಲೆಸಿರ್ಪೆ ನೀನೆನ್ನ
ಅಂತರಂಗದಲಿ ನೆಲೆಗೊಳ್ಳೆ ॥ 5 ॥

ಈಶಕೋಟಿಪ್ರವಿಷ್ಟೆ ಈಶಭಿನ್ನಳೆ ಸರ್ವ -
ದೋಷವರ್ಜಿತಳೆ ವರದೇಶೇ । ವರದೇಶೆ ಪತಿಯೊಡನೆ
ವಾಸವಾಗೆನ್ನ ಮನದಲ್ಲಿ ॥ 6 ॥

ಆನಂದಮಯ ಹರಿಗೆ ನಾನಾಭರಣವಾದೆ
ಪಾನೀಯವಾದೆ ಪಟವಾದೆ । ಪಟವಾದೆ ಪಂಕಜ-
ಪಾಣಿ ನೀನೆಮಗೆ ದಯವಾಗೆ ॥7॥

ಮಹದಾದಿ ತತ್ತ್ವಗಳ ಧರಿಸಿ ನಿನ್ನುದರದೊಳು
ದೃಹಿಣಾಂಡ ಪಡೆದೆ ಪತಿಯಿಂದ । ಪತಿಯಿಂದ ಶ್ರೀಲಕ್ಷ್ಮಿ
ಮಹಮಹಿಮಳೆ ಎಮಗೆ ದಯವಾಗೆ ॥ 8 ॥

ಆವ ಬ್ರಹ್ಮಭವಾದಿ ದೇವರೆಲ್ಲರು ತವ ಕೃ -
ಪಾವಲೋಕನದಿ ಕೃತಕೃತ್ಯ । ಕೃತಕೃತ್ಯರಾಗಿಹರು
ದೇವಿ ನಾ ಬಯಸುವುದು ಅರಿದಲ್ಲ ॥ 9 ॥

ಪಕ್ಷೀಂದ್ರವಾಹನನ ವಕ್ಷಸ್ಥಳನಿವಾಸಿ
ಅಕ್ಷಯಜ್ಞಾನಿ ಸುಖಪೂರ್ಣೆ । ಸುಖಪೂರ್ಣೆ ಕಮಲದಳಾಯ-
ತಾಕ್ಷಿ ನೋಡು ದಯದಿಂದ ॥ 10 ॥

ಹಲವು ಮಾತೇಕೆ ಶ್ರೀಲಲನೆ ಜಗನ್ನಾಥವಿ -
 ಟ್ಠಲ ನಿಂದ ಕೂಡಿ ಮನದಲ್ಲಿ । ಮನದಲ್ಲಿ ವಾಸವಾ-
ಗ್ಹಲವು ಕಾಲದಲಿ ಅವಿಯೋಗಿ ॥ 11 ॥
**********



ವ್ಯಾಖ್ಯಾನ : 
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.

ಶ್ರೀ ಜಗನ್ನಾಥದಾಸಾರ್ಯ ವಿರಚಿತ  ತತ್ತ್ವಸುವ್ವಾಲಿ


ಶ್ರೀ ಭೂ - ದುರ್ಗಾ ಸ್ತುತಿ



ಶ್ರೀಭೂಮಿದುರ್ಗೆ ಮತ್ತೇಭೇಂದ್ರಗಮನೆ ಸ್ವ -
ರ್ಣಾಭಗಾತ್ರೇ ಸುಚರಿತ್ರೆ । ಸುಚರಿತ್ರೆ ಶ್ರೀಪದ್ಮ-
ನಾಭನ್ನ ಜಾಯೆ ವರವೀಯೆ ॥ 1 ॥



ಅರ್ಥ :- ಶ್ರೀಭೂಮಿದುರ್ಗೆ = ಶ್ರೀ, ಭೂ, ದುರ್ಗಾರೂಪಗಳುಳ್ಳ, ಮತ್ತೇಭೇಂದ್ರಗಮನೆ = ಮದಿಸಿದ ಗಜರಾಜನ ಗಮನದಂತೆ (ಗಂಭೀರ) ಗಮನವುಳ್ಳ, ಸ್ವರ್ಣಾಭಗಾತ್ರೇ = ಸುವರ್ಣಕಾಂತಿಯಂತೆ ಕಾಂತಿಯುತವಾದ ದೇಹವುಳ್ಳ, ಸುಚರಿತ್ರೆ = ಬ್ರಹ್ಮಾದಿಗಳಿಂದ ಸ್ತುತ್ಯವಾದ ಮಹಿಮೆಗಳುಳ್ಳ, ಶ್ರೀಪದ್ಮನಾಭನ್ನ ಜಾಯೆ = ಶ್ರೀಪದ್ಮನಾಭನ (ನಾರಾಯಣನ) ಭಾರ್ಯಳಾದ ಹೇ ಮಹಾಲಕ್ಷ್ಮೀದೇವಿ ! ವರವೀಯೆ = ಪ್ರಸನ್ನಳಾಗಿ ಅಭೀಷ್ಟಗಳನ್ನು ನೀಡು. 


ವಿಶೇಷಾಂಶ :- ರಮಾ, ಮಹಾಲಕ್ಷ್ಮೀ ಇವು ಮೂಲರೂಪದ ನಾಮಗಳು . ಜಗತ್ತಿನ ಸೃಷ್ಟಿ, ಸ್ಥಿತಿ, ಲಯಾದಿ ಕಾರ್ಯಗಳನ್ನು , ನಿಜರಮಣನಾದ ಶ್ರೀಮನ್ನಾರಾಯಣನ ಆಜ್ಞಾನುಸಾರವಾಗಿ ನಿರ್ವಹಿಸಲಿಕ್ಕಾಗಿ , ಸತ್ತ್ವಗುಣ, ರಜೋಗುಣ, ತಮೋಗುಣಗಳೆಂಬ ತ್ರಿಗುಣಗಳಿಗೆ ಕ್ರಮದಿಂದ ನಿಯಾಮಕಳಾದ ಶ್ರೀ, ಭೂ, ದುರ್ಗಾನಾಮವುಳ್ಳ ರೂಪಗಳನ್ನು, ಮಹಾಲಕ್ಷ್ಮಿಯೇ ಸ್ವೀಕರಿಸುವಳು. ಶ್ರೀನಾರಾಯಣನು ಪದ್ಮನಾಭನಾಗುವನು. ನಾಭಿಪದ್ಮದಲ್ಲಿ ಭೂರೂಪಳಾದ ಲಕ್ಷ್ಮೀದೇವಿಯೇ ಇದ್ದು ಚತುರ್ಮುಖನ ಉತ್ಪತ್ತಿಗೆ ಕಾರಣಳಾಗುವಳು. 


ತ್ರಿಗುಣಾಭಿಮಾನಿ ಎನ್ನವಗುಣದ ರಾಶಿಗಳ 
ಬಗೆಯದಲೆ ಕಾಯೆ ವರವೀಯೆ । ವರವೀಯೆ ನಿನ್ನ ಪದ-
ಯುಗಳಕ್ಕೆ ನಮಿಪೆ ಜಗದಂಬೆ ॥ 2 ॥


ಅರ್ಥ :- ತ್ರಿಗುಣಾಭಿಮಾನಿ = ತ್ರಿಗುಣಗಳಿಗೆ ನಿಯಾಮಕಳಾದ ಮಹಾಲಕ್ಷ್ಮಿ ! ಎನ್ನ = ನನ್ನ , ಅವಗುಣದ ರಾಶಿಗಳ = ದೋಷರಾಶಿಗಳನ್ನು , ಬಗೆಯದಲೆ = ಮನಸ್ಸಿಗೆ ತಂದುಕೊಳ್ಳದೆ , ಕಾಯೆ = ರಕ್ಷಿಸು , ವರವೀಯೆ = ನನ್ನ ಇಷ್ಟಾರ್ಥವನ್ನು ಸಲ್ಲಿಸು , ಜಗದಂಬೆ = ಹೇ ಜಗಜ್ಜನನಿ ! ನಿನ್ನ ಪದಯುಗಳಕ್ಕೆ = ನೆನ್ನ ಚರಣದ್ವಂದಕ್ಕೆ , ನಮಿಪೆ = ನಮಸ್ಕರಿಸುವೆನು.


ವಿಶೇಷಾಂಶ :- 
(1) ' ಶ್ರೀಮೂಲಸತ್ತ್ವಂ ವಿಜ್ಞೇಯಾ ಭೂರ್ಮೂಲಂ ರಜ ಉಚ್ಯತೇ ।
ಮೂಲಂ ತಮಸ್ತಥಾ ದುರ್ಗಾ ಮಹಾಲಕ್ಷ್ಮೀಸ್ತ್ರೀಮೂಲಿಕಾ ॥ ' - (ಭಾಗ. ತಾ. )
- ಎಂಬ ಮುಂತಾದ ವಾಕ್ಯಗಳು ಸತ್ತ್ವ , ರಜಸ್ತಮೋಗುಣಗಳು ಶ್ರೀ , ಭೂ , ದುರ್ಗಾರೂಪಳಾದ ಲಕ್ಷ್ಮೀದೇವಿಯ ಅಧೀನಗಳೆಂದೂ, ಆಕೆಯ ಶಕ್ತಿಯಿಂದಲೇ ಕಾರ್ಯಗಳಲ್ಲಿ ಪ್ರವೃತ್ತಿಸುವುವೆಂದೂ ಸಾಧಿಸುತ್ತವೆ.
(2) ಮಮಯೋನಿರ್ಮಹದ್ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ ।
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ ॥
ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ ।
ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃಪಿತಾ ॥
- ಎಂದು ಗೀತೆಯಲ್ಲಿ ಶ್ರೀಕೃಷ್ಣನು , ತನ್ನ ಭಾರ್ಯಳಾದ ಮಹಾಲಕ್ಷ್ಮಿಯೇ ಜಗನ್ಮಾತೆಯೆಂದು ಹೇಳಿರುವನು. 'ಮಹದ್ಬ್ರಹ್ಮ'ವೆಂದು ಕರೆಯಲ್ಪಡುವ ನನ್ನ ಭಾರ್ಯಳಲ್ಲಿ ನಾನು ಗರ್ಭವನ್ನು ಸ್ಥಾಪಿಸುತ್ತೇನೆ. ಆಗ ಸರ್ವ ಪ್ರಾಣಿಗಳು ಹುಟ್ಟುವರು. ಸೃಷ್ಟಿಯ ಪ್ರಾರಂಭದಲ್ಲಿ ಮಾತ್ರ ನಾವು (ನಾನು ಮತ್ತು ನನ್ನ ಭಾರ್ಯಳು) ಕಾರಣರೆಂದಲ್ಲ. ಮುಂದೆಯೂ , ಎಲ್ಲ ಕಾಲದಲ್ಲಿ ದೇವ , ಮನುಷ್ಯ , ಪಶು ಮೊದಲಾದ ದೇಹಗಳಿಂದ ಹುಟ್ಟುವ ಎಲ್ಲರಿಗೂ ಲಕ್ಷ್ಮಿಯೇ ಕ್ಷೇತ್ರರೂಪದ ಕಾರಣಳು; ನಾನೇ ಗರ್ಭಾದಾನ ಮಾಡುವ ತಂದೆಯು - ಬೀಜಪ್ರದನು - ಮೂಲಕಾರಣನು '. ಹೀಗೆಂಬ ಅರ್ಥವನ್ನು ಹೇಳುವ ಮೇಲಿನ ಉದಾಹೃತ ವಾಕ್ಯಗಳಿಂದ ಮಹಾಲಕ್ಷ್ಮಿಯೇ 'ಜಗದಂಬೆ' ಎಂದು ಸಿದ್ಧವಾಗುತ್ತದೆ. ಬ್ರಹ್ಮದೇವನಿಗಿಂತ ಅನಂತಗುಣಪೂರ್ಣಳಾದ್ದರಿಂದ ಮಹಾಲಕ್ಷ್ಮಿಯು 'ಮಹದ್ಬ್ರಹ್ಮ' ವೆಂದು ಕರೆಯಲ್ಪಡುವಳು. ಯೋನಿ = ಭಾರ್ಯಳು = ಕ್ಷೇತ್ರವು = ಉತ್ಪತ್ತಿಸ್ಥಾನವು.


ದರಹಸಿತವದನಸುಂದರಿ ಕಮಲಸದನೆ ನಿ-
ರ್ಜರಸಿದ್ಧಗೀತೇ ವಿಧಿಮಾತೇ । ವಿಧಿಮಾತೆ ಲೋಕಸುಂ-
ದರಿಯೆ ನೀ ನೋಡೇ ದಯಮಾಡೇ ॥ 3 ॥


ಅರ್ಥ :- ದರಹಸಿತವದನಸುಂದರಿ = ಮಂದಹಾಸದಿಂದ ಯುಕ್ತವಾದ ಮುಖಚೆಲುವುಳ್ಳ , ಕಮಲಸದನೆ = ಕಮಲದಲ್ಲಿ ನೆಲೆಯುಳ್ಳ , ಲೋಕಸುಂದರಿ = (ಹದಿನಾಲ್ಕು) ಲೋಕಗಳಲ್ಲಿ ಪರಮ ಸುಂದರಿಯಾದ ಮಹಾಲಕ್ಷ್ಮೀದೇವಿಯೇ ! ನೀ = ನೀನು , ನಿರ್ಜರಸಿದ್ಧಗೀತೆ = ದೇವತೆಗಳಿಂದಲೂ ಮುಕ್ತರಿಂದಲೂ ಸ್ತುತ್ಯಳು ; ವಿಧಿಮಾತೆ = ಬ್ರಹ್ಮದೇವನ ಜನನಿಯಾಗಿರುವಿ ; ನೋಡೇ = ಕೃಪಾಕಟಾಕ್ಷವನ್ನು ಬೀರು ; ದಯಮಾಡೇ = ಅನುಗ್ರಹಿಸಮ್ಮ.


ವಿಶೇಷಾಂಶ :- ದರ = ಸ್ವಲ್ಪ , ಮಂದ ; ಕಮಲಸದನೆ = ' ಪದ್ಮಪ್ರಿಯೇ ಪದ್ಮಿನಿ ಪದ್ಮಹಸ್ತೇ ಪದ್ಮಾಲಯೇ ಪದ್ಮದಳಾಯತಾಕ್ಷೀ ' ಇತ್ಯಾದಿ ಶ್ರುತಿಗಳು ' ಪದ್ಮ 'ದಲ್ಲಿ ಮಹಾಲಕ್ಷ್ಮಿಯ ವಿಶೇಷ ಸನ್ನಿಧಾನವನ್ನು ಹೇಳುತ್ತವೆ.


ಪ್ರಳಯಕಾಲದಿ ಪತಿಯು ಮಲಗಬೇಕೆನುತ ವಟ-
ದೆಲೆಯಾಗಿ ಹರಿಯ ಒಲಿಸಿದಿ । ಒಲಿಸಿದಿ ಜಗದ ಮಂ-
ಗಳದೇವಿ ನಮಗೆ ದಯವಾಗೆ ॥ 4 ॥


ಅರ್ಥ :- ಪ್ರಳಯಕಾಲದಿ = ಮಹಾಪ್ರಳಯಕಾಲದಲ್ಲಿ , (ಎಲ್ಲೆಲ್ಲೂ ಜಲ ತುಂಬಿರಲು) , ಪತಿಯು = ನಿನ್ನ ವಲ್ಲಭನಾದ ನಾರಾಯಣನು , ಮಲಗಬೇಕೆನುತ = ಮಲಗಿಕೊಳ್ಳುವ ಅಭಿಪ್ರಾಯದಿಂದ , ವಟದೆಲೆಯಾಗಿ = ವಟಪತ್ರ (ಆಲದೆಲೆ) ರೂಪವನ್ನು ತಾಳಿ (ಹೊಂದಿ) , ಹರಿಯ = ಶ್ರೀಹರಿಯನ್ನು , ಒಲಿಸಿದಿ = ಮೆಚ್ಚಿಸಿದಿ , ಜಗದ = ವಿಶ್ವದ , ಮಂಗಳದೇವಿ = ಮಂಗಳ (ಪ್ರದ)ದೇವತೆಯಾದ ನೀನು , ನಮಗೆ = (ನಿನ್ನ ಭಕ್ತರಾದ) ನಮ್ಮ ಮೇಲೆ , ದಯವಾಗೆ = ಕೃಪೆ ಮಾಡಮ್ಮ.


ವಿಶೇಷಾಂಶ :- ಪ್ರಳಯೋದಕದಲ್ಲಿ ಶ್ರೀಹರಿಯು ವಟಪತ್ರದಲ್ಲಿ ಪವಡಿಸಿದನೆಂಬುದು ಶ್ರುತಿಪ್ರಸಿದ್ಧವು. ಆ ವಟಪತ್ರವು ಮಹಾಲಕ್ಷ್ಮಿಯ ಒಂದು ರೂಪವೆಂಬುದನ್ನು ಇಲ್ಲಿ ತಿಳಿಸುತ್ತಾರೆ. ' ದೇವೋ ನಾರಾಯಣಃ ಶ್ರೀಶಃ ದೇವೀ ಮಂಗಳದೇವತಾ ' ಎಂದಂತೆ ದೇವ , ದೇವೀ ಶಬ್ದಮುಖ್ಯವಾಚ್ಯರು ನಾರಾಯಣ ಮತ್ತು ರಮೆಯರೇ. ದೇವಿಯು ಮಂಗಳಸ್ವರೂಪಳು ; ದೋಷರಹಿತಳಾದ ನಿತ್ಯಮುಕ್ತಳು - ಪ್ರಾಕೃತದೇಹರಹಿತಳು ; ಅವತಾರಗಳಲ್ಲಿ ಸಹ ಪ್ರಾಕೃತದೇಹವಿಲ್ಲದ ಅಪ್ರಾಕೃತಸ್ವರೂಪಳು ; ಸದ್ಗುಣಪೂರ್ಣಳು - ಸರ್ವಜ್ಞಳು ; ತನ್ನ ಹಾಗೂ ತನ್ನ ಪತಿಯ ಭಕ್ತರಿಗೆ ಸಕಲ ಪುರುಷಾರ್ಥಗಳನ್ನು ಕರುಣಿಸುವ ದಯಾಸಮುದ್ರಳು. ಅತ ಏವ ' ಸರ್ವಮಂಗಳೆ ' ಎಂದೂ ಕರೆಯಲ್ಪಡುವಳು.


ತಂತುಪಟದಂತೆ ಜಗದಂತರ್ಬಹಿರದಲ್ಲಿ
ಕಾಂತನೊಡಗೂಡಿ ನೆಲೆಸಿರ್ಪೆ । ನೆಲೆಸಿರ್ಪೆ ನೀನೆನ್ನ
ಅಂತರಂಗದಲಿ ನೆಲೆಗೊಳ್ಳೆ ॥ 5 ॥


ಅರ್ಥ :- ತಂತುಪಟದಂತೆ = ತಂತುಗಳು (ನೂಲೆಳೆಗಳು) ಪಟದ (ವಸ್ತ್ರದ) ಒಳಹೊರಗೆ ಅಡ್ಡ ಉದ್ದವಾಗಿ ವ್ಯಾಪಿಸಿ ಪಟವನ್ನು ಧರಿಸುವಂತೆ (ವಸ್ತ್ರಕ್ಕೆ ಆಧಾರವಾಗಿರುವಂತೆ) , ಜಗದಂತರ್ಬಹಿರದಲ್ಲಿ = ಜಗತ್ತಿನ ಒಳಹೊರಗೆ , ಕಾಂತನೊಡಗೂಡಿ = ಪತಿಸಮೇತಳಾಗಿ , ನೆಲೆಸಿರ್ಪೆ = ವ್ಯಾಪಿಸಿರುವಿ ; ನೀನು ಎನ್ನ = ನನ್ನ , ಅಂತರಂಗದಲಿ = ಮನಸ್ಸಿನಲ್ಲಿ , ನೆಲೆಗೊಳ್ಳೆ = ಸದಾ (ಪ್ರಸನ್ನಳಾಗಿ) ಇರುವಳಾಗಮ್ಮ.


ವಿಶೇಷಾಂಶ :- ದೇಶ, ಕಾಲಗಳಲ್ಲಿ ಶ್ರೀಹರಿಗೆ ಸಮಾನವಾದ ವ್ಯಾಪ್ತಿಯುಳ್ಳವಳು ರಮಾದೇವಿ. ಗುಣಗಳಿಂದ ಮಾತ್ರ ನ್ಯೂನಳು (ಅವರಳು). ಮುಖ್ಯಪ್ರಾಣನೂ ಜಗತ್ತಿನಲ್ಲಿ ಓತಪ್ರೋತನಾಗಿದ್ದು ಜಗತ್ತನ್ನು ಧರಿಸಿರುವನು. ಆದರೆ ಸರ್ವದೇಶಕಾಲಗಳಲ್ಲಿ ರಮಾನಾರಾಯಣರೊಡನೆ ಇರತಕ್ಕವನಲ್ಲ. ಮುಖ್ಯಪ್ರಾಣ ಮತ್ತು ರಮಾದೇವಿ ಉಭಯರೂ ಸ್ವತಂತ್ರಧಾರಕನಾದ ಶ್ರೀಹರಿಯ ವಿಶೇಷಾನುಗ್ರಹದಿಂದ ಆತನೊಂದಿಗೆ ಜಗದ್ಧಾರಕರಾಗಿದ್ದಾರೆ. ಇಲ್ಲಿ ೭೦ನೇ ನುಡಿಯ ವಿಶೇಷಾಂಶವನ್ನು ಓದಿಕೊಳ್ಳಬೇಕು. 


ಈಶಕೋಟಿಪ್ರವಿಷ್ಟೆ ಈಶಭಿನ್ನಳೆ ಸರ್ವ -
ದೋಷವರ್ಜಿತಳೆ ವರದೇಶೇ । ವರದೇಶೆ ಪತಿಯೊಡನೆ
ವಾಸವಾಗೆನ್ನ ಮನದಲ್ಲಿ ॥ 6 ॥


ಅರ್ಥ :- ಈಶಭಿನ್ನಳೆ = ಶ್ರೀಹರಿಯಿಂದ ಅತ್ಯಂತಭಿನ್ನಳಾದ ನೀನು , ಈಶಕೋಟಿಪ್ರವಿಷ್ಟೆ = (ನಿಯಮ್ಯವಾದ ಚೇತನಾಚೇತನವಸ್ತು ಸಮುದಾಯವನ್ನಾಳುವ ) ಈಶನೊಂದಿಗೆ ನಿಯಾಮಕವರ್ಗದಲ್ಲಿರುವಿ ; ಸರ್ವದೋಷವರ್ಜಿತಳೆ = ಸಕಲದೋಷದೂರಳಾದ , ವರದೇಶೇ = ವರದಾನ ಮಾಡುವ ಬ್ರಹ್ಮಾದಿಗಳಿಗೂ ನಿಯಾಮಕಳಾದ ಲಕ್ಷ್ಮಿ ! ಎನ್ನ = ನನ್ನ , ಮನದಲ್ಲಿ = ಮನಸ್ಸಿನಲ್ಲಿ , ಪತಿಯೊಡನೆ = ಶ್ರೀಹರಿಯೊಂದಿಗೆ , ವಾಸವಾಗು = (ಅನುಗ್ರಹೋನ್ಮುಖಳಾಗಿ) ನೆಲೆಸಮ್ಮ.


ವಿಶೇಷಾಂಶ :- (1) ' ನಿತ್ಯಾದುಃಖಾ ರಮಾನ್ಯೇ ತು ಸ್ಪೃಷ್ಟದುಃಖಾ ಸಮಸ್ತಶಃ । ' (ತತ್ತ್ವಸಂ) - ರಮಾದೇವಿಯು ಸದಾ ದುಃಖಸ್ಪರ್ಶವಿಲ್ಲದವಳು . ಇತರರಾದ ಸರ್ವರೂ ದುಃಖಸ್ಪರ್ಶವುಳ್ಳವರೇ. ಮುಕ್ತರೂ ಸಹ ಸಾಧನಾವಸ್ಥೆಯಲ್ಲಿ ದುಃಖವನ್ನು ಅನುಭವಿಸಿದವರೇ. ದುಃಖಶಬ್ದದಿಂದ , ಭಯ, ಅಜ್ಞಾನಾದಿಗಳೂ ಸೂಚಿತವೆಂದು ತಿಳಿಯಬೇಕು.


(2) ' ಮನಸೈವ ಸ್ವಭಕ್ತಾನಾಂ ದೃಶ್ಯೋऽಸೌ ರಮಯಾ ಸಹ । ' (ಸ.ರ.ಮಾ) - ಶ್ರೀಹರಿಯು ತನ್ನ ಭಕ್ತರಿಗೆ ಅವರವರ ಮನಸ್ಸಿನಲ್ಲಿ ರಮಾಸಹಿಥನಾಗಿಯೇ ದರ್ಶನವೀಯುತ್ತಾನೆ. ದರ್ಶನವೂ ಧ್ಯಾನಾನುಸಾರವಾದ್ದರಿಂದ , ರಮಾಸಹಿತನಾದ ನಾರಾಯಣನನ್ನೇ ಧ್ಯಾನಿಸತಕ್ಕದ್ದೆಂದು ಸಿದ್ಧವಾಗುತ್ತದೆ. ಅತ ಏವ ಪತಿಯೊಡನೆ ಮನಸ್ಸಿನಲ್ಲಿ ನಿಲ್ಲೆಂದು ಪ್ರಾರ್ಥನೆ.


(3) 'ಕೋಟಿ' ಎಂದರೆ 'ವರ್ಗ' . ಬ್ರಹ್ಮದೇವನೇ ಮೊದಲಾದ ಸಕಲ ಚೇತನರು ಜೀವಕೋಟಿಯಲ್ಲಿರುವರು. ಯದ್ಯಪಿ ರಮಾದೇವಿಯೂ ಶ್ರೀಹರಿಯಿಂದ ನಿಯಮ್ಯಳೇ. ಆದರೂ , ಬ್ರಹ್ಮಾದಿ ಸಕಲ ಜೀವರ ನಿಯಾಮಕಳೂ ಆಗಿದ್ದಾಳೆ.
' ವಿಶ್ವಸ್ಥಿತಿಪ್ರಳಯಸರ್ಗಮಹಾವಿಭೂತಿವೃತ್ತಿ ಪ್ರಕಾಶನಿಯಮಾವೃತಿಬಂಧಮೋಕ್ಷಾಃ ।
ಯಸ್ಯಾ ಅಪಾಂಗಲವ ಮಾತ್ರತ ಊರ್ಜಿತಾ ಸಾ ಶ್ರೀರ್ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥'
ಮತ್ತು ' ಆಶ್ರಿತ್ಯ ವಿಶ್ವಮಖಿಲಂ ವಿದಧಾತಿ ಧಾತಾ ಶ್ರೀರ್ಯತ್ಕಟಾಕ್ಷಬಲವತೀ ' ಇತ್ಯಾದಿ ದ್ವಾದಶಸ್ತೋತ್ರವಾಕ್ಯಗಳು, ವಿಶ್ವದ ಸೃಷ್ಟಿಸ್ಥಿತಿಲಯಾದಿ ಸರ್ವವನ್ನೂ ಲೀಲೆಯಿಂದ ನಿರ್ವಹಿಸಬಲ್ಲ ಅಚಿಂತ್ಯಶಕ್ತಿಯುಳ್ಳವಳೆಂದು , ಮಹಾಲಕ್ಷ್ಮಿಯ ಮಹಿಮೆಯನ್ನು ಸಾರುತ್ತವೆ.ಆದ್ದರಿಂದ , ಬ್ರಹ್ಮಾದಿಗಳ ವಿವಕ್ಷೆಯಿಂದ , ಈಶಕೋಟಿಗೆ ಸೇರಿದವಳೇ ಸರಿ.


ಆನಂದಮಯ ಹರಿಗೆ ನಾನಾಭರಣವಾದೆ
ಪಾನೀಯವಾದೆ ಪಟವಾದೆ । ಪಟವಾದೆ ಪಂಕಜ-
ಪಾಣಿ ನೀನೆಮಗೆ ದಯವಾಗೆ ॥7॥


ಅರ್ಥ :- ಆನಂದಮಯ ಹರಿಗೆ = ಪೂರ್ಣಾನಂದಸ್ವರೂಪನಾದ ಶ್ರೀಹರಿಗೆ , ನಾನಾಭರಣವಾದೆ = ಅನಂತಾಭರಣರೂಪಳಾಗಿರುವಿ (ಕಿರೀಟಕುಂಡಲಾದಿ ಭೂಷಣಗಳ ರೂಪಗಳನ್ನು ಧರಿಸಿ ಸೇವಿಸುತ್ತಿರುವಿ); ಪಾನೀಯವಾದೆ = ಪಾನರೂಪಳೂ ಆಗಿರುವಿ (ಜಲಾದಿಪಾನಗಳೂ , ಉಪಲಕ್ಷಣದಿಂದ ಸಕಲ ಆಹಾರರೂಪಳೂ ಆಗಿರುವಿ); ಪಟವಾದೆ = (ಪೀತಾಂಬರ ಮೊದಲಾದ) ವಸ್ತ್ರಾದಿರೂಪಳೂ ನೀನೇ ಆಗಿರುವಿ; ಪಂಕಜಪಾಣಿ = (ಪೂಜಾರ್ಥವಾಗಿ) ಸದಾ ಪದ್ಮಹಸ್ತಳಾಗಿರುವ ಹೇ ಮಹಾಲಕ್ಷ್ಮೀ ! ನೀನು , ಎಮಗೆ = ನಮಗೆ , ದಯವಾಗೆ = ಕೃಪೆಮಾಡು ತಾಯಿ.


ವಿಶೇಷಾಂಶ :- (1) ನಾನಾಭರಣಗಳಿಂದ ಶ್ರೀಹರಿಗೆ ಸುಖವಿಶೇಷವೇನೂ ಇಲ್ಲವೆಂಬುದು 'ಆನಂದಮಯಹರಿಗೆ' ಎಂಬುದರಿಂದ ಸೂಚಿತವೆಂದು ತಿಳಿಯಬೇಕು. ಕಿಂತು ಆಭರಣರೂಪಳಾಗಿ ಸೇವಿಸುವ ರಮಾದೇವಿಗೇ ಅದರಿಂದ ಸುಖವಿಶೇಷವು.


(2) ' ಯತ್ರ ವಾಯೂದಪದ್ಮಾದಿರೂಪೇಣ ಪ್ರಕೃತಿಃ ಸ್ಥಿತಾ । ' - (ಭಾಗ. ತಾ) ಪ್ರಳಯಕಾಲದಲ್ಲಿ ಶಯನಮಾಡಿದ ಶ್ರೀಹರಿಗೆ ವಾಯು, ಉದಕ, ಶಯ್ಯಾದಿರೂಪಗಳಿಂದ ಶ್ರೀಲಕ್ಷ್ಮೀದೇವಿಯೇ ಇರುತ್ತಿದ್ದಳು.


(3) ಸೃಷ್ಟಿಕಾಲ ಪ್ರಾಪ್ತವಾಗಲು ಪರಮಾತ್ಮನ ನಾಭಿಯಿಂದ ಲೋಕಗಳಿಗೆ ಆಶ್ರಯವಾದ ಸುವರ್ಣಾತ್ಮಕ ಪದ್ಮವು ಉದ್ಭವಿಸಿತು; ಆ ಪದ್ಮವು ಪ್ರಾಕೃತವಾದುದು. ಭೂರೂಪಳಾದ ಲಕ್ಷ್ಮೀದೇವಿಯೇ ಅದರ ಅಭಿಮಾನಿಯು ಎಂದೂ ಹೇಳಲಾಗಿದೆ.
ಶ್ರೀಹರಿಗೆ ಕಿರೀಟಾದಿ ಭೂಷಣಗಳು ಎರಡು ಪ್ರಕಾರವಾಗಿವೆ. ಸ್ವಸ್ವರೂಪಭೂತವಾದವುಗಳು (ಜ್ಞಾನಾನಂದಾತ್ಮಕ) ಮತ್ತು ತದ್ಭಿನ್ನವಾದವುಗಳು. ವೈಕುಂಠಾದಿ ಮುಕ್ತಲೋಕಗಳಲ್ಲಿರುವ ಶ್ರೀಹರಿಯು ತನ್ನ ಸ್ವರೂಪದಿಂದ ಅಭಿನ್ನಗಳಾದ ಕಿರೀಟಾದಿಗಳೊಂದಿಗೆ , ಕಿರೀಟಾದಿ ಭೂಷಣಗಳ ರೂಪದಿಂದ ಸೇವಿಸಲು ಉತ್ಸುಕಳಾದ ಲಕ್ಷ್ಮೀದೇವಿಯ ಪ್ರೀತ್ಯರ್ಥವಾಗಿ ಲಕ್ಷ್ಮ್ಯಾತ್ಮಕಭೂಷಣಗಳನ್ನು ಧರಿಸುವನು. ಅನ್ಯತ್ರ ಎಂದರೆ ಪ್ರಳಯಕಾಲದ ಮತ್ತು ಸೃಷ್ಟಿಕಾಲದ ನಾಭಿಪದ್ಮ ಮೊದಲಾದ ವಸ್ತುಗಳನ್ನು ಲಕ್ಷ್ಮೀರೂಪಗಳೆಂದು ನಿರೂಪಿಸುವ ವಾಕ್ಯಗಳಿಗೆ , 'ಭೂದೇವೀಹ್ಯಭಿಮಾನಿನೀ ' ಎಂಬ ನಿರವಕಾಶ ವಾಕ್ಯಗಳಿಂದ ,ಅವುಗಳಿಗೆ ಲಕ್ಷ್ಮೀದೇವಿಯೇ ಏಕಮಾತ್ರ ಅಭಿಮಾನಿಯೆಂದೂ , ಅವಾಂತರಾಭಿಮಾನಿಗಳು ಯಾರೂ ಇಲ್ಲವೆಂದೂ ತಿಳಿಯಬೇಕು. ಮಂಗಳಸ್ವರೂಪಳಾದ ಲಕ್ಷ್ಮೀದೇವಿಯೇ ರತ್ನ , ಸುವರ್ಣ ಮೊದಲಾದ ಸರ್ವವಸ್ತುರೂಪಳೆಂದು ವೈಕುಂಠವರ್ಣನೆಯಲ್ಲಿ ಹೇಳಲಾಗಿದೆ.


ಮಹದಾದಿ ತತ್ತ್ವಗಳ ಧರಿಸಿ ನಿನ್ನುದರದೊಳು
ದೃಹಿಣಾಂಡ ಪಡೆದೆ ಪತಿಯಿಂದ । ಪತಿಯಿಂದ ಶ್ರೀಲಕ್ಷ್ಮಿ
ಮಹಮಹಿಮಳೆ ಎಮಗೆ ದಯವಾಗೆ ॥ 8 ॥


ಅರ್ಥ :- ಪತಿಯಿಂದ = ನಿನ್ನ ಪತಿಯಾದ ಶ್ರೀಹರಿಯಿಂದ , ಮಹದಾದಿ ತತ್ತ್ವಗಳ = ಮಹತ್ತತ್ತ್ವ ಮೊದಲಾದ ತತ್ತ್ವಗಳನ್ನು , ನಿನ್ನುದರದೊಳು = ನಿನ್ನ ಗರ್ಭದಲ್ಲಿ , ಧರಿಸಿ = ಧಾರಣೆಮಾಡಿ (ಹೊತ್ತು) , ದೃಹಿಣಾಂಡ = ಬ್ರಹ್ಮಾಂಡವನ್ನು , ಪಡೆದೆ = ಹೊಂದಿದಿ(ಪ್ರಸವಿಸಿದಿ); ಮಹಮಹಿಮಳೆ = ಅದ್ಭುತ ಮಹಿಮೆಗಳುಳ್ಳ , ಶ್ರೀಲಕ್ಷ್ಮಿ = ಹೇ ಮಹಾಲಕ್ಷ್ಮಿ ! ಎಮಗೆ = ನಮಗೆ , ದಯವಾಗೆ = ಕೃಪೆ ಮಾಡಮ್ಮ (ಅನುಗ್ರಹಿಸು).


ವಿಶೇಷಾಂಶ :- ಸೃಷ್ಟಿಕಾಲ ಪ್ರಾಪ್ತವಾಗಲು , ಅಚಿಂತ್ಯಾದ್ಭುತ ಶಕ್ತಿಯುಳ್ಳ ಶ್ರೀಹರಿಯು , ಮೂಲ ಜಡಪ್ರಕೃತಿಗೆ ಅಭಿಮಾನಿಯಾದ ಮಹಾಲಕ್ಷ್ಮಿಯಲ್ಲಿ , ಪ್ರಕೃತಿಯಲ್ಲಿರುವ ಸತ್ತ್ವರಜಸ್ತಮೋಗುಣಗಳು ವಿಷಮಾವಸ್ಥೆಯನ್ನು ಹೊಂದಿ , ಮಹದಾದಿ ತತ್ತ್ವಗಳ ರೂಪದಿಂದ ವಿಕಾರ ಹೊಂದಲು ಅವಶ್ಯಕವಾದ ತನ್ನ ಶಕ್ತಿಯನ್ನು ಸ್ಥಾಪಿಸಿದನು. ನಂತರ ಮಹದಾದಿ ತತ್ತ್ವಗಳೂ , ತದಭಿಮಾನಿಗಳಾದ ದೇವತೆಗಳೂ ಸೂಕ್ಷ್ಮರೂಪದಿಂದ ಸೃಷ್ಟರಾದರು. ಈ ವಿಷಯವು - ' ಪುರುಷೇಣಾತ್ಮಭೂತೇನ ವೀರ್ಯಮಾಧತ್ತ ವೀರ್ಯವಾನ್ ತತೋऽಭವನ್ಮಹತ್ತತ್ತ್ವಂ.....' ಇತ್ಯಾದಿಯಾಗಿ ಶ್ರೀಮದ್ಭಾಗವತದಲ್ಲಿ ವರ್ಣಿತವಾಗಿದೆ. ಇದು ಸೂಕ್ಷ್ಮಸೃಷ್ಟಿಯೆಂದು ಕರೆಯಲ್ಪಡುತ್ತದೆ. ಈ ರೀತಿ ಸೃಷ್ಟರಾದ ತತ್ತ್ವಾಭಿಮಾನಿ ದೇವತೆಗಳು , ತಮ್ಮಿಂದ ಅಭಿಮನ್ಯಮಾನಗಳಾದ ತತ್ತ್ವಗಳಿಂದ , ಬ್ರಹ್ಮಾಂಡವನ್ನು ನಿರ್ಮಿಸಲು ಸಮರ್ಥರಾಗದೇ ಶ್ರೀಹರಿಯನ್ನೇ ಶರಣುಹೊಂದಿ ಪ್ರಾರ್ಥಿಸಲು , ಲಕ್ಷ್ಮೀದ್ವಾರಾ ಸ್ವಶಕ್ತಿಯಿಂದ ಬ್ರಹ್ಮಾಂಡವನ್ನು ಸೃಜಿಸಿ , ತತ್ತ್ವಗಳು ಮತ್ತು ಅಭಿಮಾನಿ ದೇವತೆಗಳನ್ನು ಹಿಡಿದುಕೊಂಡು ಪ್ರವೇಶಿಸಿದನು. ಲಕ್ಷ್ಮೀಸಮೇತನಾಗಿ ವಿರಾಟ್ (ಎಂಬ ನಾಮವುಳ್ಳ) ದೇಹವನ್ನು ಪುರುಷರೂಪದಿಂದ ಪ್ರವೇಶಿಸಿ , ಮುಂದೆ ದೇವತೆಗಳಿಗೆ ಆಶ್ರಯಸ್ಥಾನಗಳನ್ನು ಕಲ್ಪಿಸಿಕೊಟ್ಟನು. 
ಹೀಗೆ ಪರಮಾತ್ಮನೊಂದಿಗೆ ಜಗತ್ಸೃಷ್ಟಿಯಲ್ಲಿ ಅಂಗಭೂತಳಾಗಿ , ಅದ್ಭುತ ಕಾರ್ಯಗಳನ್ನೆಸಗುವ ಮಹಾಲಕ್ಷ್ಮಿಯ ಮಹಿಮೆಯನ್ನು ಈ ಪದ್ಯವು ಸಂಗ್ರಹವಾಗಿ ನಿರೂಪಿಸುತ್ತದೆ. 


ಆವ ಬ್ರಹ್ಮಭವಾದಿ ದೇವರೆಲ್ಲರು ತವ ಕೃ -
ಪಾವಲೋಕನದಿ ಕೃತಕೃತ್ಯ । ಕೃತಕೃತ್ಯರಾಗಿಹರು
ದೇವಿ ನಾ ಬಯಸುವುದು ಅರಿದಲ್ಲ ॥ 9 ॥


ಅರ್ಥ :- ಆವ = ಯಾವ (ಪ್ರಸಿದ್ಧರಾದ) , ಬ್ರಹ್ಮಭವಾದಿ ದೇವರೆಲ್ಲರು = ಬ್ರಹ್ಮರುದ್ರಾದಿ ದೇವತೆಗಳೆಲ್ಲರೂ , ತವ = ನಿನ್ನ , ಕೃಪಾವಲೋಕನದಿ = ಕೃಪಾದೃಷ್ಟಿಯ ಬಲದಿಂದ , ಕೃತಕೃತ್ಯರಾಗಿಹರು = (ಸ್ವಗತಿಗಳನ್ನು ಹೊಂದಿ) ಧನ್ಯರಾಗಿರುವರೋ , ನಾ = ನಾನು , ಬಯಸುವುದು = (ಮಹಿಮೋಪೇತವಾದ ನಿನ್ನ ಕೃಪಾದೃಷ್ಟಿಯ ಲೇಶವನ್ನು) ಕೋರುವುದು (ಇಚ್ಛಿಸುವುದು) , ದೇವಿ = ಹೇ ಶ್ರೀದೇವಿ! ಅರಿದಲ್ಲ = ಆಶ್ಚರ್ಯವಲ್ಲ.


ವಿಶೇಷಾಂಶ :- ಬ್ರಹ್ಮ , ಈರ (ವಾಯುದೇವ) , ವೀಶ (ಗರುಡ), ಶೇಷ, ಈಶ(ರುದ್ರ), ಶಕ್ರ(ಇಂದ್ರ), ಅರ್ಕ (ಸೂರ್ಯ), ಇಂದು(ಚಂದ್ರ) ಇವರೇ ಮೊದಲಾದ ದೇವತೆಗಳು - ಈಗಿರುವವರು ಮಾತ್ರವಲ್ಲ , ಹಿಂದೆ ಆ ಪದವಿಗಳಲ್ಲಿದ್ದು ಹೋದವರು ಮತ್ತು ಮುಂದೆ ಬರುವವರು ಸಹ ಹಾಗೂ ವೇದಗಳಲ್ಲಿ ಉಕ್ತರಾದ ಎಲ್ಲ ದೇವತೆಗಳೂ , ತಮ್ಮ ಪದವಿಗಳನ್ನೂ , ಸೃಷ್ಟಿ ಸ್ಥಿತಿ ಮೊದಲಾದ ಕತೃತ್ವಶಕ್ತಿಯನ್ನೂ , ಅನಂತಾಂಶಗಳಿಂದ ಅನಂತ ಶರೀರಗಳಲ್ಲಿ ನಿಯಾಮಕರಾಗಿ ನಿಲ್ಲುವ ಸಾಮರ್ಥ್ಯವನ್ನೂ , ಪ್ರಕೃತಿ ಮೊದಲಾದ ತತ್ತ್ವಗಳಿಗೆ ಅಭಿಮಾನಿಗಳಾಗಿರುವ ಮಹಿಮೆಯನ್ನೂ , ಜ್ಞಾನ ಭಕ್ತಿ ಮೊದಲಾದ ಗುಣಗಳನ್ನೂ , ಮುಕ್ತಿಯನ್ನೂ , ಮುಕ್ತಿಯಲ್ಲಿ ಆನಂದಾತಿಶಯವನ್ನೂ , ಶ್ರೀಮಹಾಲಕ್ಷ್ಮಿಯ ಕಟಾಕ್ಷಲೇಶದಿಂದ ಹೊಂದುವರೆಂದು ನಿರೂಪಿಸಲಾಗಿದೆ


ಪಕ್ಷೀಂದ್ರವಾಹನನ ವಕ್ಷಸ್ಥಳನಿವಾಸಿ
ಅಕ್ಷಯಜ್ಞಾನಿ ಸುಖಪೂರ್ಣೆ । ಸುಖಪೂರ್ಣೆ ಕಮಲದಳಾಯ-
ತಾಕ್ಷಿ ನೋಡು ದಯದಿಂದ ॥ 10 ॥


ಅರ್ಥ :- ಪಕ್ಷೀಂದ್ರವಾಹನನ = ಗರುಡವಾಹನನಾದ ಶ್ರೀಹರಿಯ , ವಕ್ಷಸ್ಥಳನಿವಾಸಿ = ವಕ್ಷಸ್ಥಳದಲ್ಲಿ ನಿತ್ಯ ವಾಸಿಸುವ , ಅಕ್ಷಯಜ್ಞಾನಿ = ನಿತ್ಯಜ್ಞಾನಪೂರ್ಣಳಾದ , ಸುಖಪೂರ್ಣೆ = ಪೂರ್ಣಾನಂದಸ್ವರೂಪಳಾದ , ಕಮಲದಳಾಯತಾಕ್ಷಿ = ಕಮಲದಳದಂತೆ ವಿಶಾಲನೇತ್ರಗಳುಳ್ಳ ಹೇ ದೇವಿ ! ದಯದಿಂದ = ಕೃಪೆಯಿಂದ , ನೋಡು = ನೋಡಮ್ಮ.


ವಿಶೇಷಾಂಶ :- ಆನಂದಸ್ವರೂಪನಾದ ಶ್ರೀಹರಿಯ ವಕ್ಷಸ್ಥಳದಲ್ಲಿ ನಿತ್ಯ ವಾಸಿಸುವ ಶ್ರೀಮಹಾಲಕ್ಷ್ಮಿಯು ಸುಖಪೂರ್ಣಳೆಂದು ಹೇಳಬೇಕೇ ! ಸಮುದ್ರಮಥನಕಾಲದಲ್ಲಿ ಕ್ಷೀರಸಮುದ್ರದಿಂದ ಅವತರಿಸಿ , ಅಜಿತನಾಮಕ ಶ್ರೀಹರಿಯನ್ನು ವರಿಸಿ , ಪದ್ಮಮಾಲೆಯನ್ನು ಕಂಠದಲ್ಲಿ ಅರ್ಪಿಸಿ , ಪಕ್ಕದಲ್ಲಿ ನಿಂತಿರಲು , ಶ್ರೀಹರಿಯು , ಜಗಜ್ಜನನಿಯಾದ ಆಕೆಯನ್ನು , ಆಕೆಯ ನಿಜವಾಸಸ್ಥಾನವಾದ ತನ್ನ ವಕ್ಷಸ್ಥಳದಲ್ಲಿ ಧರಿಸಿದನೆಂದು ಶ್ರೀಮದ್ಭಾಗವತವು ಈ ನುಡಿಯಲ್ಲಿ ಪ್ರಸಕ್ತವಾದ ಮಹಿಮೆಯನ್ನೇ ನಿರೂಪಿಸುತ್ತದೆ. ' ತಸ್ಯಾಃಶ್ರೀಯಸ್ತ್ರಿಜಗತೋ ಜನನ್ಯಾ ವಕ್ಷೋನಿವಾಸಮಕರೋತ್ ಪರಮಂ ವಿಭೂತೇಃ ' ಇತ್ಯಾದಿ. 



ಹಲವು ಮಾತೇಕೆ ಶ್ರೀಲಲನೆ ಜಗನ್ನಾಥವಿ-
ಟ್ಠಲನಿಂದ ಕೂಡಿ ಮನದಲ್ಲಿ । ಮನದಲ್ಲಿ ವಾಸವಾ-
ಗ್ಹಲವು ಕಾಲದಲಿ ಅವಿಯೋಗಿ ॥ 11 ॥



ಅರ್ಥ :- ಹಲವು ಮಾತೇಕೆ = ಬಹುಮಾತುಗಳಿಂದೇನಮ್ಮ (ಬಹು ಕೋರಿಕೆಗಳನ್ನೇಕೆ ಮಾಡಲಿ) , ಅವಿಯೋಗಿ = ಪತಿವಿಯೋಗರಹಿತಳಾದ (ಸದಾ ಕೂಡಿಕೊಂಡೇ ಇರುವ) , ಶ್ರೀಲಲನೆ = ಹೇ ಮಹಾಲಕ್ಷ್ಮಿ ! ಜಗನ್ನಾಥವಿಟ್ಠಲನಿಂದ ಕೂಡಿ = ಜಗದೊಡೆಯನಾದ (ನಿನ್ನ ಒಡೆಯನೂ ಆದ) ವಿಟ್ಠಲನೊಂದಿಗೆ , ಹಲವು ಕಾಲದಿ = ಬಹುಕಾಲ (ನಿತ್ಯವೂ) , ಮನದಲ್ಲಿ = ನನ್ನ ಮನಸ್ಸಿನಲ್ಲಿ , ವಾಸವಾಗು = ನೆಲೆಸು .



ವಿಶೇಷಾಂಶ :- 
ನಾರಾಯಣೋ ನಾಮ ಹರಿಃ ಸ್ವತಂತ್ರಃ ಶ್ರೀಯಂ ವಿನಾ ನಾಸ್ತಿ ಕದಾಪಿ ಕಾಲೇ ।
ಹರಿಂ ವಿನಾ ಶ್ರೀರಪಿ ದೇಶಕಾಲೇ ನಾಸ್ತೀತಿ ಮೋಕ್ಷೇಚ್ಛುಭಿರ್ವೇದಿತವ್ಯಮ್ ॥ (ಬ್ರಹ್ಮಕಾಂಡ)
- ಇತ್ಯಾದಿ ಪ್ರಮಾಣಗಳು ಶ್ರೀದೇವಿಯು , ದೇಶಕಾಲಗಳಿಂದ ಸಮಾನವ್ಯಾಪ್ತಿಯುಳ್ಳ ಶ್ರೀನಾರಾಯಣನ ನಿತ್ಯಾವಿಯೋಗಿನಿಯಾದ ಭಾರ್ಯಳೆಂದು ಹೇಳುತ್ತವೆ.
ವ್ಯಾಖ್ಯಾನ : 

ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.

**************

No comments:

Post a Comment