ದಾಸ ಸಾಹಿತ್ಯದಲ್ಲಿ ನವವಿಧ ಭಕ್ತಿ
ಭಗವದಾಜ್ಞೆ, ಭಗವದಿಚ್ಛೆಯಂತೆ ನಮ್ಮ ನಮ್ಮ ಕರ್ಮಾನುಸಾರವಾಗಿ ಸಂಸಾರಕ್ಕೆ ಬಂದಂತಹಾ ಜೀವರೆಲ್ಲರೂ ಸಂಸಾರದಿಂದ ಮುಕ್ತಿಪಡೆಯಬೇಕಾದರೆ ಪರಮಾತ್ಮನಲ್ಲಿ ಮಾಹಾತ್ಮ್ಯಾ ಜ್ಞಾನ ಪೂರ್ವಕವಾಗಿ, ನಿಶ್ಚಲವಾದ ಪರಿಶುದ್ಧವಾದ ಪ್ರೀತಿಯನ್ನು ಮಾಡಬೇಕಾಗ್ತದೆ. ಅದೂ ಸಹ ಶ್ರೀ ವಿಜಯದಾಸಾರ್ಯರು ಹೇಳಿದ ರೀತಿಯಲ್ಲಿ ತೈಲಧಾರೆಯಂತೆ ಅವಿಚ್ಛಿನ್ನವಾದ ಪ್ರೀತಿ.. ಆ ಪ್ರೀತಿಯೇ ಭಕ್ತಿ..
ಇದನ್ನೇ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ
ಮಾಹಾತ್ಮ್ಯಾ ಜ್ಞಾನ ಪೂರ್ವಸ್ತು ಸೃದೃಢಃ ಸರ್ವತೋಧಿಕಃ /
ಸ್ನೇಹೋ ಭಕ್ತಿರಿತಿಪ್ರೋಕ್ತಃ ತಯಾ ಮುಕ್ತಿರ್ನಚಾನ್ಯಥಾ// ಅಂತ ತಿಳಿಸಿದ್ದಾರೆ..
ಪರಮಾತ್ಮನ ಪರಮಶ್ರೇಷ್ಠ ಭಕ್ತಾಗ್ರಣಿಗಳಾದ ಶ್ರೀಮದಾಚಾರ್ಯರು ತೋರಿದ ಈ ಪಥದಲ್ಲಿ ವೈಷ್ಣವೋತ್ತಮರಾದ ಎಲ್ಲ ಯತಿಗಳು, ದಾಸ ಶ್ರೇಷ್ಟರೂ ನಡೆದು ಈ ಭಕ್ತಿಯಿಂದ ಪರಮಾತ್ಮನನ್ನು ಒರೆಸಿಕೊಳ್ಳುವ ವಿಧಾನವನ್ನು ತಮ್ಮ ತಮ್ಮ ರಚನೆ,ಕೃತಿಗಳಲ್ಲಿ ತೋರಿದ್ದಾರೆ..
ಯಾವುದೇ ಒಂದು ಸ್ಥಾನ ಸೇರಬೇಕಾದರೆ ಹಂತಹಂತದಲ್ಲಿ ಪಯಣ ಸಾಗಬೇಕಾಗ್ತದೆ. ಈ ಭಕ್ತಿ ಮಾರ್ಗದಲ್ಲಿ ಸಾಗಲು ನಮಗೆ ಒಂಭತ್ತು ಸೋಪಾನಗಳನ್ನು ದಾಟಬೇಕಾಗ್ತದೆ . ಈ ಒಂಭತ್ತು ಸೋಪಾನಗಳೇ ನವವಿಧ ಭಕ್ತಿ ಮಾರ್ಗಗಳು..
ಶ್ರೀಮದ್ ಭಾಗವತದ ಸಪ್ತಮಸ್ಕಂಧದಲ್ಲಿ ಪ್ರಲ್ಹಾದರಾಜರು ಈ ಭಕ್ತಿಯ ಒಂಭತ್ತು ಲಕ್ಷಣಗಳನ್ನು ತಿಳಿಸಿ ಹೇಳಿದರು..
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್/
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್// ಎನ್ನುವ ಭಕ್ತಿಯ ಒಂಭತ್ತು ಲಕ್ಷಣಗಳನ್ನು ಶ್ರೀಹರಿಯನ್ನು ಸೇರುವ ಸುಲಭ ಮಾರ್ಗವನ್ನು ಪ್ರಲ್ಹಾದ ರಾಜರು ನಮಗೆ ತಿಳಿಸಿಕೊಟ್ಟರು..
ಕೌಮಾರಾತ್ ಆಚರೇತ್ ಪ್ರಾಜ್ಞಃ ಎನ್ನುವ ಪ್ರಲ್ಹಾದರಾಜರ ಮತ್ತೊಂದು ಉಕ್ತಿಯಂತೆ
ಪರಮಾತ್ಮನಲ್ಲಿ ಭಕ್ತಿಯನ್ನು ಕೌಮಾರ ದಶದಿಂದಲೆ ಮಾಡಬೇಕು. ಭಕ್ತಿಗೆ ವಯಸ್ಸಿನ ನಿಯಮವಿಲ್ಲ. ಹಾಳು ಹರಿಟೆಯನ್ನು ಬಿಟ್ಟು ಸದಾ ಹರಿಯ ಕಥಾ ಶ್ರವಣ , ಮನನಾದಿಗಳಿಂದ ಮಾತ್ರ ಭಕ್ತಿ ಪುಟ್ಟಲು ಸಾಧ್ಯ...
ಈ ನವವಿಧ ಭಕ್ತಿಯ ಒಂದೊಂದರ ವಿಶ್ಲೇಷಣೆ ಶ್ರೀ ಪುರಂದರದಾಸಾರ್ಯರು ತಮ್ಮ ಒಂದು ಪುಟ್ಟ ಉಗಾಭೋಗದಲ್ಲಿ ತಿಳಿಸಿದ್ದಾರೆ..
ಹರಿ ಶ್ರವಣ ಕೀರ್ತನ ಹರಿನಾಮ ಸ್ಮರಣ
ಹರಿವಾದಸೇವನ ಹರಿಪೂಜಾ ವಂದನ
ಹರಿದಾಸ್ಯ ಸಖ್ಯತ್ವ ಹರಿಗಾತ್ಮಾರ್ಪಣ
ಹರಿಭಕ್ತಿಯೇ ಮುಕ್ತಿ ಪಥ ತತ್ವ
ಪುರಂದರವಿಠಲನೆ ಪರಮಾತ್ಮ ಸಿದ್ಧ
ವರಮಧ್ವಮತ ಶ್ರುತಿ ಸ್ಮೃತಿಯೊಳ್ ಪ್ರಸಿದ್ಧ ಎಂದು...
ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಜನ ಪ್ರಿಯ ಎಂದು ಮುಖ್ಯಪ್ರಾಣದೇವರಲ್ಲಿ ಬಿನ್ನಪವನ್ನು ಮಾಡುತ್ತ, ನವವಿಧ ಭಕುತಿ ಮಾರ್ಗ ಶ್ರೀಮದಾಚಾರ್ಯರ ತತ್ವಗಳನ್ನು ತಿಳಿದರೆ ಮಾತ್ರ ಸುಲಭ ಎನ್ನುವುದರ ವಿಷಯವನ್ನು ದೃಢವಾಗಿ ತಿಳಿಸಿಕೊಟ್ಟರು ನಮ್ಮ ಶ್ರೀ ವಿಜಯದಾಸಾರ್ಯರು...
ಹೀಗಾಗಿ ಈ ಒಂಭತ್ತು ಸೋಪಾನಗಳನ್ನು ವಿವರವಾಗಿ ನೋಡೋಣ...
ಶ್ರವಣ - ಶ್ರವಣ ಅಂದರೆ ಪರಮಾತ್ಮನ ಮಾಹತ್ಮ್ಯದ ಕಥೆಗಳನ್ನು, ಆತನ ಲೀಲೆಗಳನ್ನು ನಿರಂತರ ಕೇಳುವುದು..
ನಾನು ಭಾಗವತಾದಿಗಳ ಪ್ರವಚನ ಕೇಳಿಬಿಟ್ಟು ಆಗಿದೆ. ಎಲ್ಲಾ ಗೊತ್ತಿದ್ದ ವಿಷಯವೇ .. ಹೊಸ ವಿಷಯ ಏನಿದೆ ಅಂತ ಸಾಮಾನ್ಯ ಜನರು ಅಂತಿರ್ತಾರೆ. ಕೇಳಿದ್ದೆಲ್ಲಾ ಮನಸಲ್ಲಿ ನಿಂತಿತೋ ? ಇಲ್ಲ. ಕೇಳಿದ್ದು ಅನುಸಂಧಾನಕ್ಕೆ ಬಂದೀತೋ? ಇಲ್ಲ.. ಅಂದರೆ ಅವರು ಎಲ್ಲಾ ಪ್ರಶ್ನೆಗಳನ್ನು ಬರೇ ಕೇಳಿ ಬಿಟ್ಟುಬಿಟ್ಟಿರ್ತಾರೆ ಅಂತಾಯ್ತು... ಈ ತರಹದಲ್ಲಿ ಶ್ರವಣ ಮಾಡುವುದು ಸರಿಯಲ್ಲ. ನಿರಂತರ ಶ್ರವಣ ನಡಿತಾನೇ ಇರಬೇಕು.. ಈ ಶ್ರವಣ ಸರಿಯಾದ ಹಾದಿಯಲ್ಲಿ ಹೋಗಬೇಕು ಅಂದರೆ ಮೊದಲಿಗೆ ದೃಷ್ಟಿ ಸರಿಯಿರಬೇಕು..
ಶ್ರೀ ತಿರುಪತಿ ಪಾಂಡುರಂಗೀ ಹುಚ್ಚಾಚಾರ್ಯರು ಎಂಬಂತೆ ಹೊಸಕಣ್ಣು ಬೇಕು ಅದೇ ಒಳಗಣ್ಣು... ಆ ಒಳಗಣ್ಣಿನಿಂದ ಸರಿಯಾದ ರೀತಿಯಲ್ಲಿ ದೃಷ್ಟಿ ಸಾರಿದರೆ ಆ ಕಣ್ಣು ಒಳ್ಳೆಯದನ್ನೇ ನೋಡಿ, ಚಂಚಲವಾದ ಮನಸಿನಲಿ ನಿಶ್ಚಲವಾಗಿರಬೇಕೆಂದರೆ ಏನು ಮಾಡಬೇಕು ಎನ್ನುವ ಕಿರೀಟಯ ಪ್ರಶ್ನೆ ಗೆ ಶ್ರೀ ಕೃಷ್ಣ ಪರಮಾತ್ಮನು ಅಂತಾನೆ
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೆ ಅಂತ. ಅರ್ಥಾತ್ ಚಂಚಲವಾದ ಮನಸು ದೃಢವಾಗಬೇಕಾದರೆ ಸರ್ವ ಶಬ್ದ ವಾಚ್ಯನಾದ ಪರಮಾತ್ಮನ ಗುಣಗಾನವನ್ನು , ಹರಿಯ ಕಥೆಯನ್ನು ಸದಾ ಶ್ರವಣ ಮಾಡುತ್ತಿರಬೇಕು..
ಅಚ್ಯುತ ಕಥೆಗಳ ಕೇಳದ ಕಿವಿಗಳು
ಬಚ್ಚಲಲಿರುವೊ ಮಚ್ಚದ ಕಿವಿಗಳು ಅಂತಾರೆ ಶ್ರೀ ಪುರಂದರದಾಸಾರ್ಯರು..
ಕಥಾ ಶ್ರವಣ ಮಾಡೋ ಹರಿಕಥಾ ಶ್ರವಣಮಾಡೊ ಎನ್ನುವ ದಾಸಾರ್ಯರ ಮಾತನ್ನು ಪಾಲಿಸಿ ಸದಾ ಹರಿ ಕಥೆಗಳನ್ನು ಕೇಳುವುದಕ್ಕೆ ಕಿವಿಗಳನ್ನು ಉಪಯೋಗಿಸಬೇಕೆ ಹೊರತು ಹಾಳು ವಿಷಂಗಳಲಿ ರುಚಿಗಾಗಿಯಲ್ಲ...
ಶ್ರೀ ಕಾಖಂಡಕಿ ಕೃಷ್ಣ ದಾಸರು
ಅವನೆವೆ ಧನ್ಯ ನೋಡಿ
ಅವನ ದರುಶನ ಮಾಡಿ
ಹರಿಧ್ಯಾನ ಹೃದಯದಲ್ಲಿ
ಹರಿನಾಮ ಜಿಹ್ವದಲ್ಲಿ
ಹರಿಕಥೆ ಶ್ರವಣದಲ್ಲಿ
ಹರಿಯಾ ಸೇವೆ ಅಂಗದಲ್ಲಿ
ಹರಿಭಕ್ತಿಯೊಳು ಕೂಡಿ
ಹರಿ ಕೀರ್ತನೆಯ ಮಾಡಿ
ಹರಿ ಪ್ರೇಮ ತುಳುಕಾಡಿ
ಹೊರಳುವ ನಲಿದಾಡಿ
ತಂದೆ ಮಹಿಪತಿ ದಯಾ-
-ದಿಂದ ಪಡೆದು ವಿಜಯಾ
ಹೊಂದುವ ತಿಳಿದು ನಲಿಯಾ
ಛಂದವಾದಾ ಪುಣ್ಯಕಾಯಾ
ಎಂಬ ಕೃತಿಯಲ್ಲಿ ಪರಮಾತ್ಮನ ದರುಶನ ಮಾಡಿದವರು, ಆತನ ಕಥೆಯ ಶ್ರವಣಾದಿಗಳು ಮಾಡಿದವರು ಮಾತ್ರ ಧನ್ಯರು ಎಂದು ಹೇಳ್ತಾರೆ..
ಇದೇ ಶ್ರವಣದ ವಿಷಯವನ್ನು ಮುಂದೆವರಿಸಿ
ಶ್ರೀಮದ್ ಹರಿಕಥಾಮೃತಸಾರದ ಕರುಣಾಸಂಧಿಯಲ್ಲಿ...
ಶ್ರವಣ ಮನಕಾನಂದವೀವುದು
ಭವ ಜನಿತ ದುಃಖಗಳ ಕಳೆವುದು
ಅಂತಾರೆ.. ಒಟ್ಟಿನಲ್ಲಿ ಪರಮಾತ್ಮನ ಕಥಾ ಶ್ರವಣ ಮನಸಿಗೆ ಆನಂದವೂ, ಎಲ್ಲ ರೀತಿಯ ಕಷ್ಟಗಳು ದೂರಮಾಡುವುದೂ ಸರಿ.. ಹೀಗಾಗಿ ಸದಾ ಹರಿಯ ಮಾಹತ್ಮ್ಯ , ಲೇಲಿಗಳ, ಕಥೆಗಳ ಶ್ರವಣ ಮಾಡೋಣ..
ಮುಸಲ್ಮಾನರಾದರೂ ನಮ್ಮ ಮಧ್ವಶಾಸ್ತ್ರದ ತತ್ವಗಳನ್ನು ಅರಿತು ಭಕ್ತಿಯಿಂದ ದಾಸರಾದಂತಹ ಶ್ರೀ ಜೋಳದಹಡಗಿ ರಾಮದಾಸರು
ಇಂದಿರೇಶನ ಭಜಿಸೊ ಹೇ ಮನುಜಾ ಎನ್ನುವ ಅವರ ಕೃತಿಯಲ್ಲಿ
ಹರಿಶರಣರ ವಚನ ಶ್ರವಣ ಮಾಡುತ ನೀ ಎನ್ನುವ ಸಾಲಿನಿಂದ ಸಜ್ಜನರಾದ, ಜ್ಞಾನಿಗಳ ವಚನಗಳನ್ನು ಅರ್ಥಾತ್ ಅವರಿಂದ ಪರಮಾತ್ಮನ ಕಥೆಗಳ ಶ್ರವಣ ಮಾಡು ಎನ್ನುವ ವಿಷಯವನ್ನು ಒಕ್ಕಾಣಿಸಿ ತಿಳಿಸುತ್ತಾರೆ....
ಕೀರ್ತನಂ
ಭಕ್ತಿಯ ಪಥದಲ್ಲಿನ ಎರಡನೆ ಸೋಪಾನವೆಂದರೆ ಕೀರ್ತನ
ಭಗವಂತನ ಗುಣಗಾನ ಮಾಡುವುದೇ ಕೀರ್ತನ . ಏಕಾಂಗಿಯಾಗಿದ್ದಾಗ ಕುಳಿತು ಹಾಡುವುದು, ಜನರಲ್ಲಿ ಬಂದಾಗ ಹಾಡದಿರುವುದೂ ತಪ್ಪು, ಹಾಗೆಯೆ ಜನರ ಮೆಚ್ಚುಗೆಗಾಗಿ ಹಾಡಿ, ಮನೆಯಲ್ಲಿ ಹಾಡದಿರುವುದೂ ತಪ್ಪು.. ಇವೆರಡರಂತಲ್ಲದೆ ಗಟ್ಟಿಯಾಗಿ, ಸದಾಕಾಲ ಭಗವಂತನ ಪ್ರೀತಿಗಾಗಿ ಹಾಡಿ ಕುಣಿಯುವುದೇ ಸರಿಯಾದ ಕೀರ್ತನದ ಅರ್ಥ .
ಈ ಕೀರ್ತನೆಯನ್ನು ಶ್ರೀಮದ್ ಭಾಗವತದಲ್ಲಿ ಯಜ್ಞ ಎಂದು ಕರೆದರು.. ಹವಿಸ್ಸನ್ನು ಸ್ವೀಕಾರ ಮಾಡುವುದಂತರ್ಥವಲ್ಲದೆ.. ತನ್ನೊಳಗಿದದ್ದದ್ದನ್ನು ತನ್ನದಲ್ಲ ಎಂದು ತಿಳಿದು, ಅಹಂಕಾರಾದಿಗಳನ್ನು ಬಿಟ್ಟು ಭಖವಂತನದೆ ಇದು, ಆತನಿಗೆ ಸಮರ್ಪಣೆ ಎಂದು ಹಾಡುವುದೆ ಸರಿಯಾದ ಕಿರ್ತನೆಯಜ್ಞ..
ಹರಿನಾಮ ಜಿಹ್ವೆಯೊಳಿರಬೇಕು ನರನಾದಮೇಲೆ ಅಂತಾರೆ ಶ್ರೀ ಚಂದ್ರಿಕಾಚಾರ್ಯರು.. ಜೀವನು ಈ ದೇಹದಲ್ಲಿ ಬಂದದ್ದು ಹರಿಯನಾಮಸ್ಮರಣಕ್ಕೆ ಹೊರತು ಆಡಂಬರದ ಬದುಕಿಗಲ್ಲ ಎನ್ನುವುದು ತಿಳಿದು ಬದುಕಬೇಕು...
ನೆನೆವೆನನ್ನುದಿನ ನೀಲನೀರದ ವರ್ಣನಾ ಗುಣರನ್ನನಾ ಎನ್ನುವ ಪದದ ಮುಖಾಂತರ ರಾಜರು ಕೃಷ್ಣಲೀಲಾಮೃತವನ್ನು ಗಾನಮಾಡಿದ್ದಾರೆ... ಹಾಗೆಯೆ
ಮಾತು ಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ
ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದು ಪ್ರೀತಿಲಿ ನೆನೆದು ಸುಪ್ರೀತನಾಗುವದಕ್ಕೆ ಎನ್ನುವ ತಮ್ಮ ಅದ್ಭುತವಾದ ಕೃತಿಯಲ್ಲಿ, ಬೇರೆ ಮಾತುಗಳನ್ನು ಹೊರತರದೆ , ಪರಮಾತ್ಮನ ಕೀರ್ತನೆಯನ್ನು ಮಾತ್ರ ಗಟ್ಯಾಗಿ ಹಾಡಿ ಎಂದು ಹೇಳಿದರು..
ಆತನ ಪಾಡುವೆ ಅನವರತ
ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ಎನ್ನುವ ಕೃತಿಯಲ್ಲಿ, ಹಾಗೆ
ನರಜನ್ಮ ಬಂದಾಗ ನಾಲಿಗೆಯಿದ್ದಾಗ ಕೃಷ್ಣಾ ಎನಬಾರದೆ ಎನ್ನುವ ಕೃತಿಯಲ್ಲಿ, ಇನ್ನೂ ತಮ್ಮ ಅನೇಕ ಕೃತಿಗಳಲ್ಲಿ...
ಶ್ರೀ ಪುರಂದರದಾಸಾರ್ಯರು ಭಕ್ತರ ಸಲಹುವ ಪರಮಾತ್ಮನ ಗುಣಗಾನವನ್ನು ಅನವರತ ಹಾಡುವೆ, ಹಾಡಬೇಕು ಎನ್ನುವ ವಿಷಯವನ್ನು ಉದ್ಘೋಷಣೆ ಮಾಡಿ ತಿಳಿಸಿದ್ದಾರೆ..
ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವು ಇದು ಶ್ರೀಮತ್ಪುರಂದರದಾಸಾರ್ಯರದೇ ಹಿತೋಕ್ತಿಯಾಗಿದೆ....
ನೋಡುವುದೆ ಕಣ್ಣು ಕೇಳುವುದೆ ಕಿವಿ ಪಾಡುವುದೆ ವದನಾ ಎನ್ನುವ ಕೃತಿಯಲ್ಲಿಯೂ ಇದೇ ವಿಷಯ ಉಲ್ಲೇಖ ಮಾಡಿದ್ದಾರೆ....
ಏನೆಂದು ಕೂಂಡಾಡಿ ಸ್ತುತಿಸಲು ದೇವಾ
ನಾನೇನು ಬಲ್ಲೆ ನಿಮ್ಮ ಮಹಿಮೆ ಮಾಧವಾ ಈ ಕೃತಿಯಲ್ಲಿ ಶ್ರೀ ಕನಕದಾಸಾರ್ಯರ ಮಾತೂ ಇದಾಗಿದೆ... ಹರಿಯ ಗುಣಗಾನಮಾಡುವುದೇ ಜೀವನದ ಸಾಫಲ್ಯ ಅಂತಾರೆ.. ಶ್ರೀ ಕನಕದಾಸಾರ್ಯರು..
ಗಾನಕ್ಕೆ ಸುಲಭವು ರಾಮನಾಮ ಅಂತಾರೆ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರು...
ಸ್ಮರಣೆ
ಶ್ರವಣ ಮಾಡಿದ್ದನ್ನು ಕೀರ್ತನೆ ಮಾಡಬೇಕು , ಶ್ರವಣ ಕೀರ್ತನೆ ಮಾಡಿದ್ದನ್ನು ಪುನಃ ಪುನಃ ಸ್ಮರಣೆ ಮಾಡ್ತಲೆ ಇರಬೇಕು. ಸ್ಮರಣೆ ಎನ್ನುವ ಆಗ್ನಿ ಮನಸಿನಲ್ಲಿನ ಕಷ್ಮಲಗಳನ್ನು ಸುಟ್ಟು ಹಾಕುವ ದೊಡ್ಡ ಸಾಧನೆಯ ಅಂಗ..
ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದಲಿ
ಈ ವಿಷಯವನ್ನು .. ಸಂತತಂ ಚಿಂತಯೇSನಂತಂ ಅಂತಕಾಲೇ ವಿಶೇಷತಃ ಎಂಬುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ . ಸತತ ಹರಿಯ ಸ್ಮರಣೆ ಮಾಡುತ್ತಲೆ ಇರಬೇಕು. ಅದರಲ್ಲಿಯೂ ನಮ್ಮ ಅವಸಾನ ದಶದಲ್ಲಿ ವಿಶೇಷವಾಗಿ ಮಾಡಬೇಕು ಅಂತ ಶ್ರೀಮದಾಚಾರ್ಯರು ತಿಳಿಸಿ ಹೇಳಿದರು....
ಪರಮಾತ್ಮನ ಸ್ಮರಣೆ ಗಾನದಿಂದಲೆ ಅಲ್ಲದೆ ಆತನ ಚಿಂತನೆಯೂ ಎಂದರ್ಥ.. ಪ್ರತಿಯೊಂದು ಜಡಚೇತನ ಪದಾರ್ಥಗಳಲ್ಲಿ ಪರಮಾತ್ಮನ ವಿಭೂತಿರೂಪಗಳ ಚಿಂತನೆ. ಪ್ರತಿಯೊಂದು ವಸ್ತುವಿಗೆ ಅದರ ಗುಣ ಪರಮಾತ್ಮನಿಂದಲೇ ಎನ್ನುವ ಚಿಂತೆ ಇತ್ಯಾದಿಗಳು ಸಹ ಸ್ಮರಣೆಯ ಅಂಗಗಳೇ ಆಗಿವೆ....
ಅನಂತ ಕಾಲದಲ್ಲಿ ಯಾವ ಪುಣ್ಯದಲ್ಲಿ
ಎನ್ನಮನ ನಿನ್ನಲ್ಲಿ ಎರಗಿಸೋ
ಎನ್ನ ಮನ ನಿನ್ನ ಚರಣದೊಳೊಮ್ಮೆ ಇಟ್ಟು
ಸಲಹು ರಂಗವಿಠಲ
ನಿನ್ನ ಸ್ಮರಣೆಗೆ ನನ್ನನ್ನು ಎಂದಿಗೂ ದೂರಮಾಡಬೇಡ ಎಂದು ನಾವು ದೃಢ ಭಕ್ತಿಯಿಂದ ಪರಮಾತ್ಮನನ್ನು ಬೇಡುವ ಮಾರ್ಗವನ್ನು ಶ್ರೀ ಶ್ರೀಪಾದರಾಜರು ತಿಳಿಸಿದರು
ಶ್ರೀ ಚಂದ್ರಿಕಾಚಾರ್ಯರು
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ ಎಂದು ಜೀವನ ಮೊದಲ, ಮಧ್ಯ, ಅಂತ್ಯ ಕಾಲಗಳಲ್ಲಿ, ಬೆಳಿಗ್ಗೆ, ಮಧ್ಯಾಹ್ನ, ಸಂಜೆಯಲ್ಲಿ , ಸತತವಾಗಿ ಹರಿಯ ಸ್ಮರಣೆ ಬಿಡದೆ ಮಾಡಬೇಕು ಎಂದು ಸ್ಫುಟವಾಗಿ ಹೇಳಿದರು...
ಹರಿ ಸ್ಮರಣೆ ಮಾಡೋ ನಿರಂತರ ಪರಗತಿಗೆ ಇದು ನಿರ್ಧಾರ ನೋಡೋ ಎನ್ನುವ ಕೃತಿಯ ಮೂಲಕ ಪರಗತಿಗೆ ಅರ್ಥಾತ್ ಮೋಕ್ಷಕ್ಕೆ ಸಾಧನವೆಂದರೆ ಸದಾ ಮಾಡುವ ಹರಿಯ ಸ್ಮರಣೆ ಅಂತಾರೆ ಶ್ರೀ ಪುರಂದರದಾಸಾರ್ಯರು...
ಶರಣ ಪೊಕ್ಕೆನಯ್ಯ ಎನ್ನ ಮರಣಸಮಯದಲ್ಲಿ ನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣಾ ಅಂತ್ಯಕಾಲೆ ವಿಶೇಷತಃ ಎನ್ನುವುದನ್ನೇ ಇಲ್ಲಿ ತಿಳಿಸಿ ಹೇಳ್ತಾರೆ ಕನಕದಾಸಾರ್ಯರು ....
ಅಬಲೆಯ ಮಾತಿಗೆ ಮನಸು ಕರಗಿತು, ನಿನ್ನ
ಅಂಬುಜಪಾದಕೆ ಬಿಡದೆ ಬಿನ್ನೈಸಿದೆ
ಪ್ರಬಲ ನೀನಾದಕಾರಣದಿಂದ ಚನ್ನಾಗಿ
ವಿಭುದೇಶ ನಾನಾರೋಗವಿನಾಶನೇ
ಶುಭವೇ ಕೊಡು ಜೀಯ್ಯಾ ನಿನಗಲ್ಲದೆ ಅನ್ಯ
ವಿಭುಗಳಿಗೆ ಶರಣೆನ್ನೆ ಸರ್ವಕಾಲ
ಶಬದಮಾತುರವಲ್ಲ ಅಂತರಂಗದ ಸ್ತೋತ್ರ
ಕುಬುಜೆಯ ತಿದ್ದಿದ ವಿಜಯವಿಠ್ಠಲರೇಯ
ನಿಬಿಡಕರುಣಾಂಬುಧಿ ಮಹದುರಿತಾರಿ ಎನ್ನುವದರ ಮುಖಾಂತರ ಅಂತರಂಗದಲ್ಲಿ ಸುತ್ತಿ, ಸ್ಮರಣೆ ಮಾಡುವುದನ್ನು ಹೇಗೆ ಮಾಡಬೇಕೆನ್ನುವುದನ್ನು, ಹರಿಯ ವಿಸ್ಮರಣೆ ಮಾಡಿ ಬೇರೆಯವರಿಗೆ ಶರಣಾಗಬಾರದು ಎನ್ನುವ ಮಧ್ವ ಸಿದ್ಧಾಂತವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಶ್ರೀ ವಿಜಯದಾಸಾರ್ಯರು ...
ಮನಾ ಮರೆಯದನುದಿನಾ ಶ್ರೀನಾಥನ ನೆನೆದು ಸೈ ಸೈ ಅನಿಸೆನ್ನ - ಶ್ರೀಶವಿಠಲರು...
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ಎನು ಮನೆವೆ
ವಿಠ್ಠಲ ಎನೆ ಆಗ ಸುಟ್ಟು ಹೋಗುವುದು ದುಷ್ಟ ಫಲವು ಹಿಮ್ಮೆಟ್ಟುವುದು ಅಂತಾರೆ -
ತಂದೆವೆಂಕಟೇಶವಿಠಲರು.
ಮಾತುಮಾತಿಗೆ ಮರೆಯಬೇಡ ಸೀತಾರಾಮನ - ರಂಗೇಶವಿಠಲರು
ಹರಿಯ ಸ್ಮರಣೆ ಮಾಡುವ ವಿಧಾನ, ಅದು ಹೇಗೆ ಸಾಧನೆಗೆ ಪಥತೋರುವುದು ಎನ್ನುವ ವಿಷಯವನ್ನು
ಇನ್ನೂ ಸಾಕಷ್ಟು ಉದಾಹರಣೆಗಳು, ನಾವು ದಾಸ ಸಾಹಿತ್ಯದ ಮುಖಾಂತರ ಎಲ್ಲಾ ಶ್ರೇಷ್ಠ ಹರಿದಾಸರ ಹಾಡುಗಳಲ್ಲಿ ಕಾಣಬಹುದು.....
ಪಾದ ಸೇವನಂ
ಶ್ರವಣ, ಕೀರ್ತನ, ಸ್ಮರಣೆಯ ಮಾಡಿ ಪರಮಾತ್ಮನ ಪಾದಗಳನ್ನು ಗಟ್ಯಾಗಿ ಹಿಡಿಯಬೇಕೆಂಬುದು ಸೂಕ್ಷ್ಮ.
ಪರಮಾತ್ಮನ ಪಾದಗಳಲ್ಲಿ ಮೋಕ್ಷವಿರ್ತದೆ.. ಹೀಗಾಗಿ ಮೋಕ್ಷ ಸಾಧನೆಗಾಗಿ ಬಿಡದೆ ಹರಿಪಾದವನ್ನು ಹಿಡಿಯಬೇಕು.
ಮಹಾಭಾರತ ಶಾಂತಿ ಪರ್ವದಲ್ಲಿ -
ಶ್ರೀ ಕೃಷ್ಣ ಪರಮಾತ್ಮನ ಪಾದಗಳಿಗೆ ನಮಸ್ಕಾರ ಮಾಡಿದ್ದಲ್ಲಿ ಅಶ್ವಮೇಧಾದಿಗಳು ಮಾಡಿದಾಗ ಬರುವ ಪುಣ್ಯಕ್ಕಿಂತಲೂ ಮಿಗಿಲಾದ ಪುಣ್ಯ ಎಂದು ತಿಳಿಸಲಾಗಿದೆ ..
ಪಾದವ ತೋರೋ ಶ್ರೀರಾಮಾ ಎನ್ನುವ ಶ್ರೀಪಾದರಾಜರ ಕೃತಿಯೇ ಮೊದಲು
ಬೆಳಗು ಝಾವದಿ ಬಾರೊ ಹರಿಯೆ ಕೃತಿಯಲ್ಲಿ ನಿನ್ನ ಚರಣಕಮಲವ ತೊಳೆದು ಪಾನವ ಮಾಡುವೆ ಅಂತಾರೆ..
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ಎನ್ನುವ ಕೃತಿಯಲ್ಲಿ ಶ್ರೀ ಕನಕದಾಸಾರ್ಯರು
ತಾಯಿ ತಂದೆ, ದಾಯಾದಿ, ಬಂಧುಗಳ, ಇದ್ದ ಊರನ್ನು ಎಲ್ಲವನ್ನೂ ಬಿಡಬಹುದು ಆದರೆ ಕಾಯಜ ಪಿತ ನಿನ್ನಡಿಯ ಬಿಡಲಾಗದು ಅಂತ ಅತ್ಯಂತ ಸುಂದರವಾಗಿ ತಿಳಿಸಿರುವರು..
ಮನವೇ ನೀ ದೃಢವಾದರೆ ಮನಸಿಜನಯ್ಯನ ಚರಣ ಕಾಂಬೆನೊ ನಾನು ಅಂತಾರೆ ಶ್ರೀ ವಿಜಯದಾಸಾರ್ಯರು..
ಅರ್ಥಾತ್ ಮನಸನ್ನು ನಿಶ್ಚಲವಾಗಿ ಇರಿಸಿದಲ್ಲಿ ಪರಮಾತ್ಮನ ಚರಣಕಮಲ ಕಾಂಬುವೆ (ಕಾಣುವೆ) ಅಂದರೆ ಮೋಕ್ಷಪಡೆಯಲು ಸಾಧ್ಯ ಅಂತಾರೆ ....
ಪರಮಾತ್ಮನ ಪಾದ ಸೇವೆ ಮಾಡುವವರು ಶ್ರೀ ಮಹಾಲಕ್ಷ್ಮಿ ದೇವಿಯರು ಮಾತ್ರ. ದಾಸ ಸಾಹಿತ್ಯದಲ್ಲಿ ಪರಮಾತ್ಮನ ಅಂತರಂಗ ಭಕ್ತರಿಗೆ, ಆತನ ಪ್ರಸನ್ನತೆ ಪೊಂದಿದವರಿಗೆ ಮಾಡುವ ಅನುಸಂಧಾನ ಎಂದೂ ಸಹ ಹೇಳುತ್ತಾರೆ...
ಅರ್ಥಾತ್ ಗುರುಗಳನ್ನು ಸ್ಮರಿಸುವಾಗ ಆಪಾದಮೌಳಿ ಪರ್ಯಂತಂ ಅಂತಾರೆ..
ವಿಜಯದಾಸಾರ್ಯರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕಾದರೆ ...
ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ ಅಂತಾರೆ.. ಅರ್ಥಾತ್ ಸಜ್ಜನರ ಪಾದ ಸೇವೆಯೇ ಪರಮಾತ್ಮನನ್ನು ಸೇರುವ ಹಾದಿ ಅಂತಲೂ ಅರ್ಥ....
ಗುರುಪ್ರಸಾದೋ ಬಲವಾನ್ ಎಂಬ ಉಕ್ತಿಯಂತೆ ಪರಮಾತ್ಮನನ್ನು ಸೇರಲು ಉತ್ತಮರಾದ ಗುರುಗಳ ಪದಗಳನ್ನು ಆಶ್ರಯಿಸಬೇಕು ಅಂತಲೂ ಅರ್ಥ...
ಹೀಗಾಗಿ ನವವಿಧ ಭಕುತಿಯಲ್ಲಿನ ಪಾದಸೇವನ ಎನ್ನುವ ಮೆಟ್ಟಿಲು ಮೋಕ್ಷಗಾಮಿಯೂ ಆಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ...
ಮುಂದಿನ ಮೆಟ್ಟಿಲುಗಳನ್ನು ಮುಂದಿನ ಲೇಖನದಲ್ಲಿ ನೋಡೋಣ
ಅಸ್ಮದ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ
ಶ್ರೀ ಕೃಷ್ಣಾರ್ಪಣಮಸ್ತು
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
ಹರಯೇನಮಃ
ಹಿಂದೆ ನಾವು ನವವಿಧ ಭಕ್ತಿಯಲ್ಲಿನ ಮೊದಲ ನಾಲ್ಕು ಮೆಟ್ಟಿಲುಗಳ ಕುರಿತು ನೋಡಿದ್ದಿವಿ..... ಈಗ ಮುಂದಿನ ಸೋಪಾನಗಳನ್ನು ನೋಡೋಣ ಹರಿವಾಯುಗುರುಗಳ ಅನುಗ್ರಹದಂತೆ....
ಅರ್ಚನ ಭಕ್ತಿ
ಶ್ರವಣ, ಮನನಾದಿಗಳಿಂದ ಪರಮಾತ್ಮನನ್ನು ಹೇಗೆ ಮನಃಪೂರ್ವಕವಾಗಿ ಪೂಜಿಸಬೇಕು, ಆರಾಧಿಸಬೇಕು ಎಂದು ತಿಳಿದಿದ್ದೇವು.. ನಂತರದ ನವವಿಧ ಭಕ್ತಿಯಲ್ಲಿನ ಮತ್ತೊಂದು ಮೆಟ್ಟಿಲು ಅರ್ಚನ ಭಕ್ತಿ
ಎಲ್ಲೆಡ ವ್ಯಾಪ್ತನಾದ ಶ್ರೀಹರಿಯನ್ನು ಭಕ್ತಿಪೂರ್ವಕವಾಗಿ, ಅನುಸಂಧಾನದಿಂದ ಷೋಡಶೋಪಚಾರಗಳಿಂದ ಪೂಜಿಸುವುದನ್ನೇ ಅರ್ಚಿಸುವುದು ಅಥವಾ ಅರ್ಚನ ಭಕ್ತಿ ಅಂತಾರೆ.. ಆದರೆ ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿದ ನಂತರ ಮಾಡುವ ದೇವತಾರ್ಚನೆ ಬಾಹ್ಯೇಂದ್ರಿಯಗಳಿಂದ ಮಾಡುವ ಪೂಜೆಯಾಗಿದೆ..
ಅರ್ಚಿತಃ ಸಂಸ್ಮೃತೋ ಧ್ಯಾತಃ ಕೀರ್ತಿತಃ ಕಥಿತಃ ಶ್ರುತಃ /
ಯೋ ದದಾತ್ಯಮೃತತ್ವಂ ಹಿ ಸ ಮಾಂ ರಕ್ಷತು ಕೇಶವಃ //
ಅರ್ಥ: ಅಂತಃಕರಣ ಶುದ್ಧ್ಯಾದಿಗಳಿಗಾಗಿ ಪೂಜೆಗೊಂಡ,ರಾಮಕೃಷ್ಣಾದಿ ನಾಮಗಳಿಂದ ಸಂಕೀರ್ತಿತನೂ,ಉಪದೇಶಿಸಲ್ಪಟ್ಟವನೂ,ಸ್ಮರಣೆಗೆ ವಿಷಯನೂ,ಧ್ಯಾನಿಸಲ್ಪಟ್ಟವನೂ,ಸಚ್ಛಾಸ್ತ್ರಶ್ರವಣವಿಷಯನೂ ಆದ ಯಾವ ಹರಿಯು ಮೋಕ್ಷವನ್ನು ಕೊಡುವನೋ,ಆ ಬ್ರಹ್ಮರುದ್ರಾದಿಗಳ ನಿಯಾಮಕನಾದ ಹರಿಯು ನನ್ನನ್ನು ರಕ್ಷಿಸಲಿ. ಅಂತ ಶ್ರೀಮದಾಚಾರ್ಯರು ನಮಗೆ ತಿಳಿಸಿ ಹೇಳಿದ್ದಾರೆ..
ಅಲ್ಲದೇ ಎಂಭತ್ನಾಲ್ಕು ಲಕ್ಷ ಯೋನಿಗಳನ್ನ ದಾಟಿ ಬಂದು ಈ ಬ್ರಾಹ್ಮಣ ಜನ್ಮದಲ್ಲಿ ಅದರಲ್ಲಿಯೂ ಶ್ರೇಷ್ಠವಾದ ವೈಷ್ಣವ ಜನ್ಮದಲ್ಲಿ ಹುಟ್ಟಿ ಬಂದರೂ , ಆ ಪಾವಿತ್ರ್ಯವನ್ನು ತಿಳಿಯದೇ, ಸಂಧ್ಯಾವಂದನೆ, ಸಾಲಿಗ್ರಾಮ ಪೂಜೆ ಇತ್ಯಾದಿಗಳನ್ನು ಮಾಡದೆ ಇರುವವನನ್ನು ಪಶು ಎಂದಿದ್ದಾರೆ ಶ್ರೀಮದಾಚಾರ್ಯರು..
ತೇ ನರಾಃ ಪಶವೋ ಲೋಕೇ ಕಿಂ ತೇಷಾಂ ಜೀವನೇ ಫಲಂ ಅಂತ
ಭಾಗವತದಲ್ಲಿ ಬ್ರಹ್ಮ ದೇವರು ಒಂದು ಮಾತು ಹೇಳ್ತಾರೆ. ಮರದ ಬುಡಕ್ಕೆ ನೀರನ್ನು ಹಾಕಿದರೆ , ಅದು ಎಲ್ಲ ಕೊಂಬೆ ರೆಂಬೆಗಳಿಗೆ ಪಸರಿಸುವಂತೆ, ಜಗತ್ ಎನ್ನುವ ವೃಕ್ಷದ ಆಧಾರವಾದ ಪರಮಾತ್ಮನ ಅರ್ಚನ ಮಾಡಿದರೆ ಎಲ್ಲ ದೇವತೆಗಳಿಗೂ ಮಾಡಿದಂತೆ ಆಗ್ತದೆ.. ಆದರೆ ಆಯಾ ತತ್ವಾಭಿಮಾನಿಗಳ, ಕರ್ಮಾಭಿಮಾನಿಗಳ, ಕಲಾಭಿಮಾನಿಗಳ , ಎಲ್ಲ ದೇವತೆಗಳ ಪೂಜೆ ಮಾಡಿದರೂ ಅಂತರ್ಗತ ಪರಮಾತ್ಮನಿಗೆ ಸೇರುವುದು ಎನ್ನುವ ಅನುಸಂಧಾನದಿಂದ ಅರ್ಚಿಸಬೇಕು.. ಉದಾಹರಣೆಗೆ ಗಣೇಶನ ಪೂಜೆ ಮಾಡುವಾಗ ಅಂತರ್ಗತ ವಿಶ್ವಂಭರ ನಾಮಕ ಪರಮಾತ್ಮನ ಅರ್ಚನೆ ಆಗಬೇಕು.. ಆಗ ಮಾತ್ರ ಗಣಪತಿಯೂ ಸಂತೃಪ್ತನಾಗ್ತಾನೆ..
ಆ ಅರ್ಚನೆ ಹೇಗಿರಬೇಕು ಅಂದರೆ ಬಾಹ್ಯೇಂದ್ರಿಯಗಳಾದ ಕೈಗಳಿಂದ ಅರ್ಚಿಸುತ್ತಿದ್ದರೂ, ಪೂಜೆ ಮಾಡ್ತಿದ್ದರೂ, ಮನಸು ಮಾತ್ರ ಪರಮಾತ್ಮನ ಪದಗಳಲ್ಲಿ ಮನಸು ಲಗ್ನವಾಗಿರಬೇಕು...
ಇದನ್ನೇ...
ಶ್ರೀ ವಿಜಯ ಪ್ರಭುಗಳು ತಮ್ಮ
ಅರ್ಚನೆಯ ಬಗೆ ಕೇಳಿ ಲೋಕ-
ಕಣ್ಣು ಮುಚ್ಚಿ ಕುಳಿತರೆ ಕೊಡ ಹರಿ ಮುಕ್ತಿಲೋಕಾ ಎನ್ನುವ
ಕೃತಿಯ ಮೊದಲ ನುಡಿಯಲ್ಲಿ
ಜಡವ ಪೂಜಿಸಿದರಲ್ಲೇನೋ ತಾನು
ಜಡ ತುಲ್ಯನಾಗಿದ್ದಕೆ ಸಮವೇನು
ಕೆಡದಿರು ಇದರಲಿ ತಿಳಿ ನೀನು
ಒಡನೆ ಕರ್ಮಗಳಲ್ಲೇನುಂಟು ಕಾಣೋ ಅಂತೂನೇ ಎರಡನೇ ನುಡಿಯಲ್ಲಿ ಅಂತಾರೆ..
ಏಕಾಂತದಲಿ ನಿನ್ನ ಮನಸು ಅ-
ನೇಕವಾಗುವುದು ನಿರಂತರ ಗುಣಿಸು
ನೀ ಕೇಳು ಯೋಚಿಸಿ ಗಣಿಸು
ಸರ್ವ ಆಕಾರದಲ್ಲಿ ಶ್ರೀಹರಿಯನ್ನೇ ನೆನೆಸು ಅಂತ..
ಹೀಗೆ ಪ್ರತಿಯೊಂದು ಪದಾರ್ಥದಲ್ಲಿ ನಿಂತು ಆ ಪದಾರ್ಥಕ್ಕೆ ಆ ವಿಶೇಷವನ್ನು ನೀಡುವ ಪರಮಾತ್ಮನೇ ಎನ್ನುವ ಅನುಸಂಧಾನದಿಂದ ಅರ್ಚನೆಯನ್ನು ಮಾಡಬೇಕು. ಗಜೇಂದ್ರನು ಹೂವುಗಳಿಂದ, ಶಬರಿ ಹಣ್ಣಿನಿಂದ, ಸುದಾಮ ಅವಲಕ್ಕಿ ನೀಡಿ ಪರಮಾತ್ಮನನ್ನು ಸಂತೋಷ ಪಡಿಸಿದಂತೆ ನಮ್ಮ ಅರ್ಚನೆ, ಪೂಜಾದಿಗಳೂ ಮಾನಸ ಪೂಜೆಯಿಂದಲೂ ಒಡಗೂಡಿ ಹರಿಗೆ ಸಮರ್ಪಿತವಾಗಬೇಕು.. ಮಾನಸ ಪೂಜಾ ಪದ್ಥತಿಯನ್ನು ಶ್ರೀ ಮಾದಿನೂರು ವಿಷ್ಣುತೀರ್ಥರು, ಹಾಗೆ ಶ್ರೀಮತ್ಪುರಂದರದಾಸಾರ್ಯರು, ಶ್ರೀ ತಿರುಪತಿ ಪಾಂಡುರಂಗಿ ಹುಚ್ಚಾಚಾರ್ಯರೂ ಸಹ ತಮ್ಮ ಕೃತಿಗಳಲ್ಲಿ ವಿವರಿಸಿದ್ದಾರೆ..
ನಂತರದ ಮೆಟ್ಟಿಲು ವಂದನಂ
ನವವಿಧ ಭಕ್ತಿಯಲ್ಲಿನ ಆರನೆಯ ಪ್ರಕಾರ ವಂದನಂ . ಈ ಶಬ್ದದ ಸಂಸ್ಕೃತದಲ್ಲಿನ ಮೂಲ ರೂಪ ವಧಿ ಅಂತ.. ಈ ಪದದ ಅರ್ಥ ಅಭಿವಾದನ, ಸ್ತುತಿ ಎನ್ನುವ ಎರಡರ್ಥಗಳೂ ಸಹ ಇವೆ..
ಅಭಿವಾದನ ಅಂದರೆ ಸಾಷ್ಟಾಂಗ ನಮಸ್ಕಾರ ಅಂತಲೂ ಅರ್ಥವಿದೆ. ಎಂಟು ಅಂಗಗಳಿಂದ ದೈಹಿಕವಾಗಿ ನಾವು ಮಾಡುವ ನಮಸ್ಕಾರ,
ಹಾಗೆಯೇ ಮಾನಸಿಕವಾಗಿ ಸಹಾ ವಂದನೆ ಎನ್ನುವುದು ಮಾಡಬೇಕು..
ಗುರುಗಳಿಗೆ, ಹಿರಿಯರಿಗೆ ನಮಸ್ಕಾರ ಮಾಡುವಾಗ ನಮ್ಮ ಬಲಗೈಯಿಂದ ಬಲಕೈಯನ್ನು, ನಮ್ಮ ಎಡಕೈಯಿಂದ ಎಡ ಕಿವಿಯನ್ನು ಮುಟ್ಚಿ, ನಮ್ಮ ಗೋತ್ರ ನಾಮಗಳ ಉಚ್ಚಾರಣೆ ಮಾಡಿ ನಂತರ, ಅವರ ಪಾದಗಳನ್ನು ನಮ್ಮ ಬಲಗೈಯಿಂದ ಅವರ ಬಲಗಾಲನ್ನು, ನಮ್ಮ ಎಡಗೈಯಿಂದ ಅವರ ಎಡಗಾಲನ್ನೂ ಮುಟ್ಟಿ ನಮಸ್ಕಾರ ಮಾಡಬೇಕು, ಆದರೆ ಪರಮಾತ್ಮನಿಗೆ ಶಿರಬಾಗಿ ,ನಮಸ್ಕಾರ ಮಾಡಿ ಮಾಡುವ ವಂದನೆಗಳೊಂದಿಗೆ
ಸಾಷ್ಟಾಂಗ ನಮಸ್ಕಾರ ಮಾಡಲೇಬೇಕು....
ಈ ಅಷ್ಟ ಅಂಗಗಳಿಂದ - ಶಿರಸಾ, ಉರಸಾ, ದೃಷ್ಟ್ಯಾ, ಮನಸಾ, ವಚಸಾ, ತಥಾ ಪದ್ಭ್ಯಾಂ, ಕರಾಭ್ಯಾಂ ,ಜಾನುಭ್ಯಾಂ ಪ್ರಣಾಮಃ ಅಷ್ಟಾಂಗ ಉಚ್ಯತಿ ಇದನ್ನು ಅಷ್ಟಾಂಗ ನಮಸ್ಕಾರ ಅಂತಾರೆ.. ಹೀಗೆ
ಮಾಡುವ ಸಾಷ್ಟಾಂಗ ನಮಸ್ಕಾರದಲ್ಲಿನ ವಚಸಾ ದಿಂದ ನಮಸ್ಕಾರ ಮಾಡುವ ಸಮಯದಲ್ಲಿ ಪರಮಾತ್ಮನ ಸ್ಮರಣೆ, ಸ್ತೋತ್ರಗಳ ಪಠಣೆ ಮಾಡುವ ಮುಖಾಂತರ ಬಾಹ್ಯೇಂದ್ರಿಯಗಳಿಂದಲೂ ಜೊತೆಗೆ ಮಾನಸಿಕವಾಗಿಯೂ ನಮಸ್ಕಾರ ಮಾಡುವ ಪ್ರಕ್ರಿಯೆ ವಂದನಮ್
ಪ್ರದಕ್ಷಿಣೆ ನಮಸ್ಕಾರ, ಹೆಜ್ಜೆ ನಮಸ್ಕಾರ ಹೀಗೆ ಅನೇಕ ವಿಧಾನಗಳಲ್ಲಿ ನಾವು ಪರಮಾತ್ಮನಿಗೆ ವಂದನೆ ಅಥವಾ ನಮಸ್ಕಾರಗಳು ಮಾಡ್ತೇವೆ ಅಲ್ಲವೇ? ಆಯಾ ರೀತಿಯ ಪ್ರದಕ್ಷಿಣೆ ನಮಸ್ಕಾರಗಳು ಮಾಡುವಾಗ ಬಿಡದೆ ನಮ್ಮ ಬಾಯಿ, ನಾಲಿಗೆ ಪರಮಾತ್ಮನ ಸ್ತೋತ್ರಾದಿಗಳನ್ನು ಮಾಡಲೇಬೇಕು ಎನ್ನುವುದು ಮುಖ್ಯವಾದ ವಿಷಯವಾಗಿದೆ..
ಈ ರೀತಿಯ ಸ್ಮರಣೆ ಮಾಡುವಾಗ ನಮ್ಮ ಮನಸ್ಸಿನಲ್ಲಿ ಸ್ವಾಪಕರ್ಷ ಬೋಧಾನುಕೂಲಃ ವ್ಯಾಪಾರಃ ಎನ್ನುವುದು ಶಾರೀರಿಕ ವಂದನಾ ವ್ಯಾಪಾರವಾಗಿದೆ , ಈ ತರಹದ ವಂದನೆ ಮಾಡುವಾಗ ಹರಿ ಸರ್ವೋತ್ತಮ ಎನ್ನುವ ಮುಖ್ಯ ವಿಷಯದ ಅರಿವು ನಮಗಾಗ್ತಿರಬೇಕು.. ನಾನು ಕಿರಿಯನು ಸ್ವಾಮೀ, ನೀನು ಪರಮ ದೈವ ಅಂತ..
ಅದಕ್ಕೆ ದಾಸಾರ್ಯರು ಎಲ್ಲರೂ ಸಹ ನಾಥನು ನೀನು ಅನಾಥನು ನಾನು ಎಂದೇ ಹೇಳಿಕೊಂಡಿದ್ದಾರೆ.. ಸದಾ ಪರಮಾತ್ಮನ ಮುಂದೆ ನಾವು ಬಹಳ ಸಣ್ಣವರಲ್ಲಿಯೂ ಸಣ್ಣವರು ಎನ್ನುವ ಭಾವನೆಯಿಂದ, ಈ ಚರಾಚರ ಸೃಷ್ಟಿ ಆತನ ಅಧೀನ, ಎನ್ನುವ ವಿಷಯವನ್ನೇ ಧ್ಯಾನಿಸಬೇಕು..
ವಂದಿಸುವುದಾದಿಯಲಿ ಗಣನಾಥನ ಅಂತಾರೆ ಶ್ರೀಮತ್ಪುರಂದರದಾಸಾರ್ಯರು.
ಈ ಕೃತಿಯಲ್ಲಿ ಗಣಪತಿಯನ್ನು ವಂದಿಸದೇ ಇರುವ ಕಾರಣದಲಿ ಯಾರ್ಯಾರು ಏನು ಕಷ್ಟಗಳು ಪಟ್ಟರೆನ್ನುವುದು, ವಂದನೆ ಮಾಡಿದರೆ ಬರುವ ಸುಖವನ್ನೂ ತಿಳಿಸಿದ್ದಾರೆ ಶ್ರೀ ದಾಸಾರ್ಯರು..
ರಾಯರ ಸ್ತುತಿಯಲ್ಲಿ ಸಹಾ ಶ್ರೀ ಗುರುಜಗನ್ನಾಥವಿಠಲರು ಅಂತಾರೆ
ಇಂದು ನೋಡಿದೆ ನಂದಕರ ಯೋಗೀಂದ್ರ ವಂದಿತ ಚರಣನಾ ಅಂತ.. ವಂದನೆಗೆ ಇರುವ ಮಾಹತ್ಮ್ಯ ಅಷ್ಟು ಗಾತ್ರವಾಗಿದೆ ಎನ್ನುವುದು ನಮ್ಮ ದಾಸಾರ್ಯರು ತಮ್ಮ ತಮ್ಮ ಪದಗಳಲ್ಲಿ ತಿಳಿಸಿ ಹೇಳುವುದನ್ನು ಗಮನಿಸಬಹುದು..
ನವವಿಧ ಭಕ್ತಿಯಲ್ಲಿನ ಮತ್ತೊಂದು ಮೆಟ್ಟಿಲು ದಾಸ್ಯಂ
ಇದು ಪರಮ ಮುಖ್ಯವಾದ ಮೆಟ್ಟಿಲು... ಪರಮಾತ್ಮನಿಗೆ ದಾಸಾನುದಾಸನಾಗುವುದು ನಮ್ಮ ಮೋಕ್ಷಕ್ಕೆ ಕಾರಣವೂ ಆಗಿದೆ ಅಂದರೂ ಅತಿಶಯೋಕ್ತಿಯಲ್ಲ..
ಮಮ ಸ್ವಾಮೀ ಹರಿಃ ನಿತ್ಯಂ ಸರ್ವಸ್ಯ ಪತಿರೇವ ಚ ಎನ್ನುವುದು ದಾಸ್ಯ ಭಾವದ ಮುಖ್ಯ ಉದ್ದೇಶವಾಗಿದೆ. ಪರಮಾತ್ಮನೇ ನನಗೆ ಸ್ವಾಮಿ, ನಾನು ಆತನ ದಾಸಾನುದಾಸ ಎನ್ನುವುದೇ ಇದರ ಅರ್ಥವಾಗಿದೆ..
ಪರಮಾತ್ಮನ ದಾಸರಲ್ಲಿ ಪರಮ ಶ್ರೇಷ್ಠನಾದವರು ಮುಖ್ಯಪ್ರಾಣದೇವರು. ರಾವಣ ನೀನು ಯಾರೆಂದು ಪ್ರಶ್ನೆ ಮಾಡಿದಾಗ ಹನುಮಪ್ಪನ ಉತ್ತರ ದಾಸೋಹಂ ಕೋಸಲೇಂದ್ರಸ್ಯ ಅಂತ . ನಾನು ರಾಮನ ದಾಸ, ಅಲ್ಲಿಗೆ ಮಾತನ್ನು ನಿಲ್ಲಿಸದೇ ಹನುಮಪ್ಪ ಅಂತಾನೆ ಸುಗ್ರೀವನ ಗುಂಪಿನಲ್ಲಿ ನನ್ನಂತ ಚಿಕ್ಕವನಾದ ದಾಸ ಮತ್ತೊಬ್ಬರಿಲ್ಲ ಅಂತ.. ರಾಮನ ಬಂಟರಲ್ಲೇ ಅಗ್ರಗಣ್ಯರಾದ ಹನುಮಪ್ಪ ತಾನು ರಾಮನ ಎಲ್ಲಾ ದಾಸರಲ್ಲಿಯೂ ಸಣ್ಣವನು ಎಂದು ಹೇಳಿಕೊಂಡಿದ್ದಾರೆ ಅಂದರೆ ಅದೆಷ್ಟು ಭಕ್ತಿ ಅವರಲ್ಲಿ ಇರಲಿಕ್ಕಿಲ್ಲ..
ತಾವು ಭೀಮಸೇನದೇವರಾಗಿ ಬಂದಾಗಲೂ, ಶ್ರೀಮದಾಚಾರ್ಯರಾಗಿ ಅವತರಿಸಿದಾಗಲೂ ಪರಮಾತ್ಮನ ದಾಸತ್ವವನ್ನು ಮಾಡಿದ್ದಾರೆ.. ಜಿತಂತೆ ಸ್ತೋತ್ರದಲ್ಲಿ ಸಹ ಶ್ರೀ ಬ್ರಹ್ಮ ದೇವರು ತಾನು ಸಣ್ಣವನು ಪರಮಾತ್ಮನ ಮುಂದೆ ಎಂದೇ ಹೇಳಿಕೊಂಡಿದ್ದಾರೆ..
ಹಾಗೆಯೆ ದಾಸ ಸಾಹಿತ್ಯದ ಪದದಲ್ಲಿಯೇ ದಾಸ ಭಾವ ಅಡಕವಾಗಿದೆ.. ಪರಮಾತ್ಮನ ದಾಸರು ಪರಮಾತ್ಮನಿಗಾಗಿ ಮಾಡಿದ ಸ್ತೋತ್ರಪದದ ಸಾಹಿತ್ಯವೇ ದಾಸ ಸಾಹಿತ್ಯ ಅಲ್ಲವೇ?
ಹಾಗೆಯೇ ಇನ್ನೂ ಕೃತಿಗಳ ವಿಷಯ ನೋಡಿದಾಗ ಪ್ರತಿಯೊಬ್ಬರೂ ಭಜನಾ ಸಂದರ್ಭದಲ್ಲಿ ಹಾಡುವ ಪದಗಳಲ್ಲಿನ ಮುಖ್ಯವಾದ ಪದ ಶ್ರೀಮತ್ಪುರಂದರದಾಸಾರ್ಯರ ದಾಸನ ಮಾಡಿಕೋ ಎನ್ನ ಸ್ವಾಮಿ ಸಾಸಿರ ನಾಮದ ವೇಂಕಟರಮಣ ಅಂತಾರೆ.. ನಿನ್ನ ದಾಸನಾಗಿ ಮಾಡಿಕೊಂಡರೇ ಮಾತ್ರ ನಿನ್ನ ಪ್ರಸನ್ನತೆ ಸ್ವಾಮೀ ಎಂದು..
ಹಾಗೆಯೇ ಕನಕದಾಸಾರ್ಯರ ಕೃತಿ ದಾಸ ದಾಸರ ಮನೆಯ ದಾಸಾನುದಾಸ ನಾನು ಇದರಲ್ಲಿ ಸಹ ಪರಮಾತ್ಮನ ದಾಸರ ಮನೆಯಲ್ಲಿ ಅರ್ಥಾತ್ ಪರಮಭಕ್ತರ ದಾಸನು ಅಂತ ತಮ್ಮ ದಾಸ್ಯ ಭಾವವನ್ನು ವಿನಮ್ರತೆಯಿಂದ ಹೇಳಿಕೊಂಡಿದ್ದಾರೆ ಶ್ರೀ ಕನಕಪ್ಪ.. ಈ ರೀತಿಯಲ್ಲಿನ ಅನೇಕ ಪದ,ಪದ್ಯ ಸುಳಾದಿಗಳು ನಾವು ದಾಸ ಸಾಹಿತ್ಯದಲ್ಲಿ ಹಂತ ಹಂತದಲ್ಲಿಯೂ ಕಾಣಬಹುದು..
ನಂತರದ್ದು ಸಖ್ಯಮ್
ತ್ವಮೇವ ಮಾತಾ ಚ ಪೀತ ತ್ವಮೇವ
ತ್ವಮೇವ ಬಂಧುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವಾ ಎಂದು ಪರಮಾತ್ಮನನ್ನು ಸರ್ವವೂ ನೀನೇ ಎಂದು ಪೂಜಿಸಬೇಕು,
ತನ್ನ ಮಗನಾದ ವಾಯುದೇವರಿಗೂ ಸಖ್ಯವನ್ನು ನೀಡಿದ್ದಾನೆ, ಮೊಮ್ಮಗನಾದ ರುದ್ರದೇವರಿಗೂ ಸಖನಾಗಿದ್ದಾನೆ, ಇಂದ್ರಾವತಾರಿಯಾದ ಅರ್ಜುನನಿಗೆ ಸಖನಾಗಿ, ಸಾರಥಿಯೂ ಆಗಿದ್ದಾನೆ..
ಸದಾ ಕಾಲದಲ್ಲಿ ತಂದೆ, ತಾಯಿಯಂತೆ ಕಾಯುವ ಪರಮಾತ್ಮ ಸಖನಾಗಿಯೂ ಜೊತೆಗಿದ್ದಾನೆ.
ಅದಕ್ಕೆ ಶ್ರೀ ವ್ಯಾಸವಿಠಲರು ಅಂತಾರೆ- ಸುಖವಾಗಲಿ ಬಹು ದುಃಖವಾಗಲಿ ಸಖನೀನಾಗಿರು ಪಾಂಡುರಂಗ ಅಂತ..
ಅರ್ಥಾತ್ ಪರಮಾತ್ಮನಲ್ಲಿ ಪ್ರೇಮಪೂರ್ವಕವಾದ ಭಕ್ತಿಭಾವವೇನಿದೆಯೋ ಅದೇ ಸಖ್ಯ ಭಕ್ತಿ ಎನಿಸಿಕೊಳ್ತದೆ.
ಶ್ರೀ ವೈಕುಂಠ ದಾಸಾರ್ಯರಿಗಂತೂ ಕೇಶವ ಬಿಡದೆ ಅವರೊಂದಿಗೆ ನಿಂತು ಸಖನಾಗಿ ಕಾಯ್ದನಲ್ಲವೇ? ಹೀಗೆ ಕರೆದವರ ಬಳಿ ಆತ್ಮೀಯ ಸ್ನೇಹಿತನಂತೆ ಸಖ್ಯವನ್ನು ನೀಡುವ ಪರಮಾತ್ಮನ ಕಾರುಣ್ಯಕ್ಕೆ ಎಣೆಯೂ ಇಲ್ಲ.
ದಾಸರು ತಮ್ಮ ಕೃತಿಗಳಲ್ಲಿ ಮುದ್ದಾಗಿ ಬಾರೋ, ಕೂಡೋ, ನೀಡೋ ಎಂದು ಸಖನನ್ನು ಕರೆದಂತೆ ಕರೆಯುತ್ತಾರೆ. ಸದಾ ಬಿಡದೆ ಇರುವ ಪ್ರಾಣ ಸ್ನೇಹಿತನೇ ಶ್ರೀಹರಿ ಎನ್ನುವ ಭಾವವನ್ನು ನಮಗೆ ಅರಿವಾಗುವಂತೆ..
ಇಂದಿರೇಶ ದಾಸರಿಗೂ ಪುಟ್ಟ ಕೃಷ್ಣ ಸದಾ ಬಂದು ಪೂಜೆ, ನೈವೇದ್ಯಗಳನ್ನು ಸ್ವೀಕಾರ ಮಾಡ್ತಿರ್ತಾನೆ. ಹೀಗೊಮ್ಮೆ ದೇವಸ್ಥಾನದ ಗಂಟೆ ಬಾರಿಸಿದಾಗ , ಹೋಗಿ ಗುಡಿಯೊಳಗುಂಡು ಬೇಗಬಾರೋ ಅಂತ ಕೃಷ್ಣನಿಗೆ ಹೇಳ್ತಾರೆ - ಅಲ್ಲಿ ಜನರ ಪೂಜೆ ಸ್ವೀಕರಿಸಿ ಬೇಗ ಬಾಪ್ಪ ಅಂತ..
ಹೀಗೆ ಅಪರೋಕ್ಷಜ್ಞಾನಿಗಳಾದ ಯತಿಗಳಿಗೂ, ದಾಸಾರ್ಯರಿಗೂ ಪರಮಾತ್ಮನು ಸದಾ ಸಖನಾಗಿದ್ದಾನೆ..
ಪರಮಾತ್ಮನಲ್ಲಿ ಸದಾ ಪ್ರೇಮಪೂರ್ವಕವಾದ ಭಕ್ತಿ ಇರಬೇಕು ಅದೇ ಸಖ್ಯ ಭಕ್ತಿ ಎನ್ನುವುದು ಸೂಕ್ಷ್ಮ- ಸೂಕ್ತವೂ..
ನವವಿಧ ಭಕ್ತಿಯಲ್ಲಿನ ಕೊನೆಯ ಮೆಟ್ಟಿಲು ಅನ್ನೋಕ್ಕಿಂತ ಪರಮಾತ್ಮನ ಪ್ರಸನ್ನತೆಗೆ ಇರಬೇಕಾದ ಮುಖ್ಯವಾದ ಪ್ರಕರಣ ಅಂದರೆ ಆತ್ಮನಿವೇದನೆ
ಶ್ರವಣ, ಮನನ , ಧ್ಯಾನ ಇವೆಲ್ಲವೂ ಮಾಡುವ ನಾವು ಪರಮಾತ್ಮನ ದಾಸರೆಂದು ಆತನಿಗೆ ಮನಸಾ ವಾಚಾ ಕರ್ಮಣಾ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳುವುದೇ ಆತ್ಮನಿವೇದನೆ ಎನಿಸಿಕೊಳ್ತದೆ..
ಪರಮಾತ್ಮನ ಮುಂದೆ ಸರ್ವಾತ್ಮನಾ ಬಾಗುವುದು, ನೀನಲ್ಲದೆ ಬೇರೆ ಗತಿಯಿಲ್ಲ ಎನ್ನುವ ಭಾವವೇ ಈ ಆತ್ಮನಿವೀದನೆ. ಹಿಂದೆ ಹೇಳಿದ ಮಾತಿನಂತೆ ತ್ವಮೇವ ಸರ್ವಂ ಮಮ ದೇವದೇವ ಎನ್ನುವ ಪೂರ್ಣ ಅರ್ಥವನ್ನು ಅನುಸಂಧಾನದಲ್ಲಿ ತಂದುಕೊಂಡರೆ ಮಾತ್ರ ನಮ್ಮನ್ನು ನಾವು ಆತನ ಅಡಿದಾವರೆಗಳಲ್ಲಿ ಅರ್ಪಿಸಲು ಸಾಧ್ಯ..
ಶ್ರವಣ, ಕೀರ್ತನ, ಸ್ಮರಣೆ, ಇತ್ಯಾದಿ ಏನೆಲ್ಲ ಎಂಟು ಮೆಟ್ಟಿಲು ನಾವು ನೋಡಿದ್ದೇವೆ ಅವೆಲ್ಲವನ್ನೂ ಮಾಡುವ ಮೂಲಕ ಸಮರ್ಪಣಾ ಭಾವವನ್ನು ತೋರುವುದೇ ಮೋಕ್ಷಕ್ಕೆ ಕಾರಣ. ಅಲ್ಲದೇ ಮೋಕ್ಷದನಂತರವೂ ಪರಮಾತ್ಮನ ಅಧೀನವೆನ್ನುವ ಮಾತನ್ನು ಮರಿಯತಕ್ಕದ್ದಲ್ಲ.
ಹರಿದಾಸ ಸಾಹಿತ್ಯದ ಅನೇಕ ಪದಗಳಲ್ಲಿ ಈ ಆತ್ಮನಿವೇದನಾ ಭಾವವನ್ನು , ದಾಸರು ತಮ್ಮನ್ನು ತಾವು ಭಖವಂತನಿಗೆ ನಿವೇದಿಸಿಕೊಂಡದ್ದು ಕಾಣ್ತೇವೆ ನಾವು...
ಇದು ದಾಸ್ಯ ಭಾವದ ಲಕ್ಷಣವಾಗಿದ್ದರೂ ಸಹ ಅದಕ್ಕಿಂದ ಮುಂದಿನ ಪ್ರಕ್ರಿಯಯೂ ಆಗಿದೆ.
ಶ್ರೀ ಶ್ರೀಪಾದರಾಜರ ಮಾತಿನಂತೆ
ಇಟ್ಟಾಂಗೆ ಇರುವೇನೋ ಹರಿಯೇ ಎನ್ನ ಧೊರೆಯೆ ಎಂದು ಪೂರ್ಣ ಭಕ್ತಿಯಿಂದ, ಶ್ರೀಹರಿಯೇ ಎಲ್ಲವನ್ನೂ ಮಾಡುವ, ಎಲ್ಲರಲ್ಲಿದ್ದು ಸಲಹುವನು ಎನ್ನುವ ಭಾವದಿಂದಿರಬೇಕು..
ನೀನೇ ಗತಿ ನೀನೇ ಮತಿ ಸ್ವಾಮೀ
ನೀನಿಲ್ಲದನ್ಯತ್ರ ದೈವಗಳ ನಾನರಿಯೆ ಅಂತಾರೆ ಶ್ರೀಮತ್ಪುರಂದರದಾಸಾರ್ಯರು..
ಇದನ್ನೇ
ತನುನಿನ್ನದು ಜೀವನ ನಿನ್ನದು ರಂಗಾ
ಅನುದಿನದಲಿ ಬಾಹ ಸುಖದುಃಖ ನಿನ್ನದು ರಂಗ ಅಂತಾರೆ ಶ್ರೀ ಕನಕದಾಸಾರ್ಯರು.. ಅವರೇ ಮತ್ತೊಂದು ಪದದಲ್ಲಿ ನನ್ನಿಂದ ನಾನೇ ಹುಟ್ಟಿದೆನೇನೋ ದೇವಾ? ಅಂತಲೂ ಜೀವರ ಅಸ್ವಾತಂತ್ರ್ಯವನ್ನು ಹೇಳುತ್ತಲೇ, ಪರಮಾತ್ಮನ ಅಧೀನ ಎನ್ನುವ ಭಾವವನ್ನು ತೋರಿಸಿದ್ದಾರೆ..
ನಿನ್ನ ಚಿತ್ತಕ್ಕೆ ಬಂದುದದು ಮಾಡು ಸರ್ವೇಶ
ಎನ್ನ ಸ್ವಾತಂತ್ರ್ಯ ಲವಮಾತ್ರ ಉಂಟೇ ಸ್ವಾಮೀ ಎನ್ನುವುದು ಶ್ರೀ ವಿಜಯ ಪ್ರಭುಗಳ ಮಾತಾಗಿದೆ..
ಶ್ರೀ ಗೋಪಾಲದಾಸಾರ್ಯರು ತಮ್ಮ ಕೃತಿಯಲ್ಲಿ
ಭಾರ ನಿನ್ನದು ಎನ್ನ ಎಲ್ಲಿ ನೀನಿರಿಸಿದರು
ಸಾರಿ ಮೊರೆ ಇಡುವೆ ಲಾಲಿಸು ಬಿನ್ನಹ ಅಂತ ಪರಮಾತ್ಮನೇ ಎಲ್ಲದರ ಕಾರಣ ಎನ್ನುವುದು ತಿಳಿಸಿ ನಿವೇದಿಸಿಕೊಳ್ತಾರೆ..
ಹಾಗೆಯೇ ಮಾನವಿ ಪ್ರಭುಗಳ ಅತ್ಯಂತ ಸುಂದರ ಕೃತಿಯಾದ
ದಾಸೋಹಂ ತವ ದಾಸೋಹಂ ಈ ಕೃತಿಯಲ್ಲಿ ದಾಸತ್ವ ಭಾವವನ್ನು ತೋರಿಸುತ್ತಲೇ ತಮ್ಮನ್ನು ತಾವು ಭಗವತ್ಪಾದಕ್ಕೆ ಅರ್ಪಿಸಿಕೊಳ್ಳುವುದನ್ನು ಮನಮುಟ್ಟಿ ವಿವರಿಸಿದ್ದಾರೆ..
ಹೀಗೆ ದಾಸ್ಯಭಾವವನ್ನು ಪೂರ್ಣವಾಗಿ ತೋರಿಸುತ್ತಲೇ ಸರ್ವಾತ್ಮನಾ ಭಗವಂತನಿಗೆ ಕಾಯಾ, ಮನಸಾ, ವಾಚಾ, ಕರ್ಮಣಾ ಎಲ್ಲವನ್ನೂ ನಿವೇದಿಸಿಕೊಳ್ಳುವುದೇ ಆತ್ಮನಿವೇದನೆ ಎನಿಸಿಕೊಳ್ತದೆ..
ಈ ವಿಧವಾದ ನವವಿಧ ಭಕ್ತಿಯ ಹೂಮಾಲೆಯನ್ನು ಹಂತಹಂತದಲ್ಲಿ ಪೋಣಿಸಿ , ಪರಮಾತ್ಮನಿಗೆ ಸಮರ್ಪಿಸಿದ ಎಲ್ಲ ಸಜ್ಜನರೂ ನಮಗೆ ಮಾರ್ಗದರ್ಶಕರೆಂದು ತಿಳಿದು, ಅವರು ತೋರಿದ ಹಾದಿಯಲ್ಲಿ ಸದಾ ನಡಿಯೋಣ, ಸಾಧನೆಯ ಹಾದಿಯನ್ನು ಬಿಡದೆ , ಇಂದ್ರಿಯ ನಿಗ್ರಹದಿಂದ , ಸರ್ವೋತ್ತಮನಾದ ಶ್ರೀ ಲಕ್ಷ್ಮೀ ನಾರಾಯಣನನ್ನು ಭಾರತೀರಮಣ ಮುಖ್ಯಪ್ರಾಣಾಂತರ್ಗತನಾಗಿ ಅರ್ಚಿಸಿ, ಪೂಜಿಸಿ, ವಂದಿಸಿ, ಸ್ತುತಿಸಿ, ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ..
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
No comments:
Post a Comment