ಪುರಂದರದಾಸರು
ನಾನೇಕೆ ಪರದೇಶಿ ನಾನೇಕೆ ಬಡವನು ||ಪ||
ಘನ್ನ ಮಾನಾಭಿಮಾನಕ್ಕೆ ವಿಠಲ ನೀನಿರಲಾಗಿ ||ಅ||
ಮೂರುಲೋಕದ ಅರಸು ಶ್ರೀಹರಿ ಎನ್ನ ತಂದೆ
ವಾರಿಜಮುಖಿ ಲಕುಮಿ ಎನ್ನ ತಾಯಿ
ಮೂರು ಅವತಾರದ ಹನುಮಂತ ಎನ್ನ ಗುರು
ಹರಿಭಕ್ತಜನರೆಲ್ಲ ಬಂಧುಬಳಗಿರಲಾಗಿ ||
ಇಪ್ಪತ್ತನಾಲ್ಕು ಅಕ್ಷರವೆಂಬೊ ಹಳೆ ನಾಣ್ಯ
ಮುಪ್ಪದಿಂದಲಿ ಕುಳಿತು ಉಣಲುಬಹುದು
ತಪ್ಪದೆ ನವವಿಧ ಭಕ್ತಿಜ್ಞಾನಗಳಿಂದ
ಮುಪ್ಪು ಇಲ್ಲದ ಭಾಗ್ಯ ಎನ್ನಲ್ಲಿ ಇರಲಾಗಿ ||
ನಿನ್ನ ನಂಬಿದವರ ಒಲಿವೆಯೋ ಶ್ರೀಹರಿ
ನಿನಗಿಂತ ಇನ್ನು ಒಲಿವರು ಇಲ್ಲವೊ
ಪನ್ನಗಶಯನ ಶ್ರೀಪುರಂದರವಿಠಲನ ಚರಣ
ಅನುಮಾನವಿಲ್ಲದೆ ಎನ್ನ ಶಿರದಲ್ಲಿರಲಾಗಿ ||
****
ನಾನೇಕೆ ಪರದೇಶಿ ನಾನೇಕೆ ಬಡವನು ||ಪ||
ಘನ್ನ ಮಾನಾಭಿಮಾನಕ್ಕೆ ವಿಠಲ ನೀನಿರಲಾಗಿ ||ಅ||
ಮೂರುಲೋಕದ ಅರಸು ಶ್ರೀಹರಿ ಎನ್ನ ತಂದೆ
ವಾರಿಜಮುಖಿ ಲಕುಮಿ ಎನ್ನ ತಾಯಿ
ಮೂರು ಅವತಾರದ ಹನುಮಂತ ಎನ್ನ ಗುರು
ಹರಿಭಕ್ತಜನರೆಲ್ಲ ಬಂಧುಬಳಗಿರಲಾಗಿ ||
ಇಪ್ಪತ್ತನಾಲ್ಕು ಅಕ್ಷರವೆಂಬೊ ಹಳೆ ನಾಣ್ಯ
ಮುಪ್ಪದಿಂದಲಿ ಕುಳಿತು ಉಣಲುಬಹುದು
ತಪ್ಪದೆ ನವವಿಧ ಭಕ್ತಿಜ್ಞಾನಗಳಿಂದ
ಮುಪ್ಪು ಇಲ್ಲದ ಭಾಗ್ಯ ಎನ್ನಲ್ಲಿ ಇರಲಾಗಿ ||
ನಿನ್ನ ನಂಬಿದವರ ಒಲಿವೆಯೋ ಶ್ರೀಹರಿ
ನಿನಗಿಂತ ಇನ್ನು ಒಲಿವರು ಇಲ್ಲವೊ
ಪನ್ನಗಶಯನ ಶ್ರೀಪುರಂದರವಿಠಲನ ಚರಣ
ಅನುಮಾನವಿಲ್ಲದೆ ಎನ್ನ ಶಿರದಲ್ಲಿರಲಾಗಿ ||
****
ರಾಗ ಕೇದಾರಗೌಳ ಛಾಪು ತಾಳ (raga, taala may differ in audio)
pallavi
nAnEke paradEshi nAnEke baDavanu
anupallavi
ghanna mAnAbhimAnakke viTTala nIniralAgi
caraNam 1
mUru lOkada arasu shrIhari enna tande vArijamukhi lakumi enna tAyi
mUru avatArada hanumanta enna guru hari bhakta janarella bandhu baLagiralAgi
caraNam 2
ippatta nAlgu akSaravembo haLe nANya muppadindali kuLitu uNalu bahudu
tappade navavidha bhakti jnAgaLinda muppu illada bhAgya ennalli iralAgi
caraNam 3
ninna nambidavarigoliveyO shrIhari ninaginta innu olivaru illavo
pannaga shayana shrI purandara viTTalana caraNa anumAnavillade enna shiradalliralAgi
***
meaning by ಡಾ ವಿಜಯೇಂದ್ರ ದೇಸಾಯಿ
ನಾನೇಕೆ ಪರದೇಶಿ ನಾನೇಕೆ ಬಡವನು ಶ್ರೀನಿಧಿ ಹರಿ ಎನಗೆ ನೀ ನಿರುವ ತನಕ | ಪ`|
ನವಕೋಟಿ ಸಂಪತ್ತಿನ ಶೀನಪ್ಪ ನಾಯಕರು. ಹರಿಯ ಸೂಚನೆ ಕಂಡರು. ಮರು ಕ್ಷಣ ಸಕಲ ಸಂಪತ್ತಿನ ಮೇಲೆ ತುಳಸಿ ದಳ ಇಟ್ಟರು. ದಾನ ಮಾಡಿ ಹರಿಗೆ ಸಮರ್ಪಿಸಿದರು. ಬರಿಗೈಯಿಂದ ಗುರುವನ್ನು ಅರಸುತ್ತ ಹೊರಟರು. ಅಪರೂಪದ ಜ್ಞಾನಿ ವರೇಣ್ಯ ಗುರು ವ್ಯಾಸರಾಯರು ಸಿಕ್ಕರು ಶೀನಪ್ಪ ನಾಯಕರು ಪುರಂದರ ದಾಸರಾದರು.
ಹರಿಮಹಿಮೆಯ ಹಾಡನ್ನೇ ಅವರು ಮಾತನಾಡಿದರು.
ಮುಂದೆ ಅವರು ಮಾತನಾಡಿದ್ದೆಲ್ಲ ಹರಿ ಮಹಿಮೆಯ ಹಾಡೇ ಆಯಿತು.
ಗೋಪಾಳ ಬುಟ್ಟಿ ತಂಬೂರಿ ಕೈಯಲ್ಲಿ. ಕಾಲಿಗೆ ಗೆಜ್ಜೆ ಕಟ್ಟಿದರು ಲಜ್ಜೆಬಿಟ್ಟರು. ಗ್ರಾಮ ಪ್ರದಕ್ಷಿಣೆ ಮಾಡಿದರು. ಸಿಕ್ಕಿದ್ದು ಹರಿ ಕೊಟ್ಟಿದ್ದು. ಅದರಲ್ಲೇ ಹೆಚ್ಚಾಯಿತು ಎಂಬಷ್ಟು ಸಂತೃಪ್ತಿ ದಾಸರಿಗೆ.
. ನೋಡಿ ನವ ಕೋಟಿ ಸಂಪತ್ತಿನ ಶೀನಪ್ಪ ದಟ್ಟ ಬಡವನಾಗಿದ್ದಾನೆ. ಭಿಕ್ಷೆ ಬೇಡುತ್ತಿದ್ದಾನೆ. ತನ್ನ ದೇಶ ಬಳಗ ಬಿಟ್ಟು ಬಂದು ಪರದೇಶಿಯಾಗಿದ್ದಾನೆ.
ಯಾರೋ ಮಾತನಾಡಿ ಕೊಂಡರು.
ಮಾತು ದಾಸರ ಕಿವಿಗೆ ಬಿತ್ತು. ಹುಚ್ಚಪ್ಪ ಗಳಿರಾ! ಎಂದರು. ನಸುನಕ್ಕರು. ಹಾಡಿ ಹರಿ ಮಹಿಮೆ ಕೊಂಡಾಡಿದರು ಇಂತು -
ಯಾಕೆ ಬಡವ ನಾನು? ಯಾಕೆ ಅನಾಥ ನಾನು? ಯಾಕೆ ಪರದೇಶಿ ನಾನು? ಎಲ್ಲಿದೆ ಬಡತನ! ಪ್ರಪಂಚದ ಸಂಪತ್ತಿಗೆ ಒಡತಿ ಲಕ್ಷ್ಮಿ.
ಅವಳ ಒಡೆಯ ಶ್ರೀಮನ್ನಾರಾಯಣ. ಆತ ನನ್ನ ಈಶ. ನಾನು ಅವನ ದಾಸ. ಅಸಮಾನ ಸಿರಿ ಸಂಪತ್ತಿನ ಒಡೆಯನ ದಾಸ ನಾನೇಕೆ ಬಡವ!
ಜ್ಞಾನವೇ ಸಿರಿ. ಆತ
ಸಿರಿ ರಮಣ. ಸರ್ವಜ್ಞ. ಜಗದ ಜ್ಞಾನದಾತಾ.
ಸಕಲ ಜ್ಞಾನ ಸಂಪತ್ತಿನ ಈಶನ ದಾಸ ನಾನು! ನಾನೇಕೆ ಬಡವ!
ಸಂಪತ್ತು ಎಂದರೆ ಸುಖ. ಆನಂದ. ನನ್ನ ಒಡೆಯ ಸುಖಮಯ ಆನಂದಮಯ.
ಅನಂತ ಪರಿಪೂರ್ಣ ಕಲ್ಯಾಣ ಗುಣಗಳ ನಿಧಿ. ಆಂಥವನ ದಾಸ ನನಗೇನು ಕಡಿಮೆ? ನಾನೇಕೆ ಬಡವ!
ಒಂದು ಬಡತನ ಉಂಟು. ಚಿಂತಾ- ಸಂತಾಪಗಳ ಬಡತನ ನನಗುಂಟು.
ಆದರೆ ಹರಿಯ ನಂಟು. ದೂರ ಚಿಂತೆ ತಾಪತ್ರಯ ಅಂಟು.
ಚಿಂತೆ ಯಾಕೆ ಮಾಡಲಿ? ಆತ ನನ್ನ ಚಿನ್ಮಯ ದೊರೆ. ನಾನು ನಿಶ್ಚಿಂತ. ನಿಶ್ಚಿಂತತೆಯ ಸಿರಿವಂತ ನಾನು. ನಾನೇಕೆ ಬಡವ?
ಈಶ ಸರ್ವತ್ರ ವ್ಯಾಪ್ತ ಸದಾ ನನ್ನ ಹೃದಯದಲ್ಲಿಯೂ ವಾಸ. ನನಗೆ ಅತ್ಯಂತ ಸನಿಹ. ಎಲ್ಲರಕ್ಕಿಂತ ಎಲ್ಲದರಕ್ಕಿಂತ ಆತ ಸನಿಹ. ಜಗದ ಕರ್ತಾ, ಭರ್ತಾ, ಸರ್ವ ಸಮರ್ಥ ನನ್ನ ಸನಿಹದ ಅಪ್ಪನಾಗಿರಲು ನಾನೇಕೆ ಪರದೇಶಿ?
ಬ್ರಹ್ಮಾಂಡದ ತುಂಬೆಲ್ಲ ಆತ. ಇಡೀ ಬ್ರಹ್ಮಾಂಡ ಆತನ ಉದರದೊಳು. ಬ್ರಹ್ಮಾಂಡಗಳು ನಾವು ಎಲ್ಲಿ ಹೋದರು ಅವನನ್ನು ಬಿಟ್ಟಿಲ್ಲ ಎಲ್ಲೂ ನಾವು ವಿದೇಶಿಗಳಾಗುವುದಿಲ್ಲ ಪರದೇಶಿಗಳಾಗುವುದಿಲ್ಲ ಸ್ವದೇಶಿಗಳೇ.
' ಸ್ವ' ಎಂದರೆ ಸ್ವತಂತ್ರನಾದ ಶ್ರೀಹರಿ.
ಸ್ವ ಎಂಬ ಹರಿಯ ದೇಶದಲ್ಲಿಯೇ ವಾಸಿಗಳು ನಾವು. ದೇಶ ಬಿಡಲು ಸಾಧ್ಯವಿಲ್ಲ. ಬಿಟ್ಟು ಬೇರೆಡೆ ಹೋಗಲು ಸಾಧ್ಯವಿಲ್ಲ.
ಎಲ್ಲಿ ಹೋದರೂ ಅವನ ದೇಶವೇ. ಸರ್ವಂ ಈಶಾವಾಸ್ಯಂ. ಹೀಗಾಗಿ ಪರದೇಶಿ ಹೇಗೆ!
ಇನ್ನು ಅನಾಥನೂ ನಾನಲ್ಲ.
ಸನಾತನ ಶ್ರೀನಾಥ ಸದಾ ನನ್ನ ನಾಥ. ಅಂತೆಯೂ ಪರದೇಶಿ ನಾನಲ್ಲ.
ಇನ್ನು ಹರಿ ನೀನಿರುವ ತನಕ ಎಂದರಲ್ಲ.
ಹರಿ ಇಂದು ಇದ್ದಾನೆ ನಾಳೆ ಇರಲಿಕ್ಕಿಲ್ಲ ಎಂಬ ಹೆದರಿಕೆ ಬೇಡ.
ಹರಿ ಅನಾದಿ ಅನಂತ ತ್ರಿಕಾಲ ಸತ್ಯ. ತ್ರಿಕಾಲ ನಿತ್ಯ.
ಹಿಂದೂ ಇಂದೂ ಮುಂದೂ ಎಂದೆಂದೂ ನಮ್ಮ ಜೊತೆಗಾರ. ಆತ ಇಲ್ಲ ಎಂಬುದೇ ಇಲ್ಲ. ಆದ್ದರಿಂದ ನಾನೇಕೆ ಬಡವ? ನಾನೇಕೆ ಪರದೇಶಿ?
ಪುಟ್ಟಿಸಿದ ತಾಯಿ ತಂದೆ ಇಷ್ಟಮಿತ್ರನು ನೀನೇ ಅಷ್ಟು ಬಂಧು ಬಳಗ ಸರ್ವ ನೀನೆ ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರ್ತಿ ಕೃಷ್ಣ ನೀನಿರುವ ತನಕ |೧|
ಎಲ್ಲ ರೀತಿಯಿಂದ ಲಕ್ಷ್ಮಿ ನಾರಾಯಣರ ಮಕ್ಕಳು ನಾವು.
1 ಬ್ರಹ್ಮ ಮಗ. ದೇವತೆಗಳು ಮರಿ ಮೊಮ್ಮಕ್ಕಳು.
ಹೀಗೆ ಹರಿವಂಶಸ್ಥ ಸ್ವಯಂಭೂ ಮನು. ಮನುವಿನ ಮಕ್ಕಳೇ ಮಾನವರು ನಾವೆಲ್ಲ.
ಹೀಗೆ ಹುಟ್ಟಿಸಿದ ತಾಯಿ ತಂದೆ ಶ್ರೀಹರಿ.
2 ಇನ್ನುಆಸೃಜ ಅವಸ್ಥೆಯಿಂದ ಕರುಣೆಯಿಂದ, ನಮ್ಮನ್ನು ಸೃಷ್ಟಿಗೆ ತಂದವನೂ ಅವನೇ. ಆದ್ದರಿಂದ ಆತನೇ ತಂದೆ ತಾಯಿ.
3 ಹೊಟ್ಟೆ ಬಟ್ಟೆಗೆ ಕೊಟ್ಟು ಕಾಪಾಡುವವನೇ ತಂದೆ ಜಗದ ಜೀವರ ಪಾಲನೆ ಮಾಡುವವನೂ ಆತನೇ. ಹೀಗಾಗಿ ಶ್ರೀಹರಿಯೇ ತಂದೆ ತಾಯಿ.
ಮಿತಾತ್ ತ್ರಾಯತೇ - ಮಿತ್ರಃ.
ಆಪತ್ತಿಗೆ ಒದಗುವನೇ ಮಿತ್ರ.
ಶ್ರೀಹರಿ ಬರಿ ಆಪತ್ತಿಗೆ ಒದಗುವುದು ಅಷ್ಟೇ ಅಲ್ಲ, ಪ್ರತಿ ಆಪತ್ತಿಗೆ ಒದಗಿ ನಿವಾರಿಸುವವ, ಮತ್ತೆ ತಾಪತ್ರಯ ಶಾಶ್ವತವಾಗಿ ದೂರ ಮಾಡುವ ಮಹಾನ್ ಮಿತ್ರ ಹರಿ.
ಆದ್ದರಿಂದ ಇಷ್ಟ ಮಿತ್ರ ಶ್ರೀಹರಿ.
ಲೌಕಿಕ ಬಂಧು ಬಳಗ ತಾತ್ಕಾಲಿಕ ಸುಖ ಇದ್ದಾಗ ಇರುವವರು ದುಃಖದಲ್ಲಿ ಬಿಟ್ಟು ಹೋಗುವವರು ಆದರೆ ನಿಜವಾದ ಬಂಧು ಬಳಗ ಶ್ರೀಹರಿಯೇ ಸುಖ ದುಃಖದಲ್ಲಿ ಸಖನಾಗಿರುವವ ಹರಿ, ಪಾರು ಮಾಡಲಿಲ್ಲವೇ ಗಜೇಂದ್ರನು ನನ್ನು ಮೊಸಳೆಯ ಬಾಯಿಯಿಂದ.
ಬಂಧು ಬಳಗ ಬಿಟ್ಟು ಓಡಿ ಹೋಗಿತ್ತಲ್ಲ.
ಇಂತು ನಿಜ ಬಂದು ಬಳಗ ಶ್ರೀಹರಿಯೇ.
ಒಟ್ಟು ಅದಕ್ಕಾಗಿಯೇ ದಾಸರು ಹಾಡಿದರು - ತಂದೆ ವಿಠ್ಠಲ. ತಾಯಿ ವಿಠ್ಠಲ. ಬಂದು ಬಳಗ ವಿಠ್ಠಲ.|
ಸುಖವಾಗಲಿ ಬಹು ದುಃಖವಾಗಲಿ ಸಖ ನೀನಾಗಿರು ಪಾಂಡುರಂಗ ಎಂದರು.
ಪೆಟ್ಟಿಗೆಯೊಳಗಿನ ಆಭರಣ ಅಮೂಲ್ಯ. ನಮ್ಮ ಹೃದಯವೇ ಪೆಟ್ಟಿಗೆ. ಅಷ್ಟ ಕರ್ತತ್ವದ ಬಿಂಬರೂಪದ ಹರಿಯೇ ಅಮೂಲ್ಯ ಆಭರಣ. ಬಿಂಬ ರೂಪದ ಶ್ರೀಹರಿಯೇ ನಮ್ಮ ಸ್ವರೂಪ ಉದ್ಧಾರಕ.
ಇಂತು -
ಬಿಂಬರೂಪಿ ಶ್ರೀಹರಿ ನಮ್ಮ ತಾಯಿ ತಂದೆ. ಬಂದು ಬಳಗ. ಆಪ್ತಮಿತ್ರ. ಕಾಯುವವ. ಸಾಧನೆ ಮಾಡಿಸುವವ. ಸದ್ಗತಿ ಕೊಡುವವ ಸರ್ವೋತ್ತಮ, ಸರ್ವ ಕರ್ತಾ, ಸರ್ವವ್ಯಾಪ್ತ ಸರ್ವಜ್ಞ ಎಂದು ಹರಿ ಮಹಿಮೆ ತಿಳಿಯುವುದೇ ತಾರಕ ಇಂತಹ ಶ್ರೀ ಕೃಷ್ಣ ನೀ ನನ್ನ ಈಶಾನಾಗಿರಲು ನಾ ನಿನ್ನ ದಾಸನಾಗಿರಲು ನಾನೇಕೆ ಬಡವ ನಾನೇಕೆ ಪರದೇಶಿ?
ಒಡಹುಟ್ಟಿದವ ನೀನೆ ಒಡಲಿಗೆ ಹಾಕುವ ನೀನೇ ಉಡಲು ಹೊದೆಯಲು ವಸ್ತ್ರ ಕೊಡುವ ನೀನೆ ಮಡದಿ ಮಕ್ಕಳನೆಲ್ಲ ಕಡೆ ಹಾಯಿಸುವ ನೀನೇ ಬಿಡದೆ ಸಲಹುವ ಒಡೆಯ ನೀನಿರುವ ತನಕ. | ೨|
ಒಡಹುಟ್ಟಿದವ ನೀನೆ - ಒಡಹುಟ್ಟಿದವರು ರಕ್ಷಿಸಬೇಕು. ಆದರೆ ಹಾಗೆ ಆಗುವುದಿಲ್ಲ. ಸೋದರರು ದಾಯಾದಿಗಳಾಗುತ್ತಾರೆ. ಕಲಹಕ್ಕೆ ನಿಲ್ಲುತ್ತಾರೆ.
ಅಂತೇಯೇ ರಕ್ಷಿಸುವವನೇ ಒಡಹುಟ್ಟಿದವ. ನಿಜ ಸೋದರ.
ಆಗಲಿಲ್ಲವೇ ದ್ರೌಪದಿಯ ಮಾನಪಹರಣ ಪ್ರಸಂಗದಲ್ಲಿ.
ಪತಿಗಳ ಐವರಿದ್ದರೇನು ಸತಿಯ ಸಮಯಕ್ಕೊದಗಲಿಲ್ಲ.
ಕೃಷ್ಣ ಅಕ್ಷಯ ವಸ್ತ್ರ ಇತ್ತ. ಮಾನ ಕಾಯ್ದ. ದ್ರೌಪದಿಯ ರಕ್ಷಿಸಿದ. ಅವಳಿಗೆ ನಿಜ ಸೋದರನಾದ. ಇಂತೂ ಉಡಲು ಹೊದೆಯಲು ಕೊಟ್ಟು ರಕ್ಷಿಸುವವ ಶ್ರೀ ಕೃಷ್ಣ.
ಮಡದಿ ಮಕ್ಕಳನೆಲ್ಲ ಕಡೆ ಹಾಯಿಸುವ ನೀನೇ -
ಒಳ್ಳೆಯ ಮಡದಿ, ಮಕ್ಕಳನ್ನು ಕೊಟ್ಟು ಸಂಸಾರಕ್ಕೆ ಹಚ್ಚುವನು ನೀನೆ ಕಾಯುವವನು ನೀನೆ. ಸಂಸಾರ ದಾಟಿಸುವವನು ನೀನೇ.
ತಥ್ಯ- ನಿಜವಾದ ರಕ್ಷಣೆ ಯಾವುದು?
ಸಾಧನೆಗೆ ಸಂಪತ್ತಾದ ಹರಿ ಮಹಿಮೆಯ ಜ್ಞಾನ ಹರಿ ಭಕ್ತಿ ಕೊಟ್ಟು ಉದ್ದರಿಸಿ ಸದ್ಗತಿಯತ್ತ ಕೊಂಡೊಯ್ಯುವವನೇ ನಿಜ ರಕ್ಷಕ. ನಿಜ ಸೋದರ. ಆತನೇ ತಂದೆ ತಾಯಿ ಬಂಧು ಬಳಗ ಸಖ ಎಲ್ಲ ಅವನೇ.
ಹೊದೆಯಲು ಅಂದರೆ ಲೌಕಿಕ ಬಾಹ್ಯ ಬಟ್ಟೆ ಬರೆ ಅಷ್ಟೇ ಅಲ್ಲ, ಅಲೌಕಿಕ ಜ್ಞಾನದ ರಕ್ಷಾ ಕವಚ ಜೀವಗೆ.
ಒಡಲಿಗೆ ಆಹಾರ ಅಷ್ಟೇ ಅಲ್ಲ. ನಮ್ಮ ಮನ, ಮಿದುಳಿಗೆ ಹರಿ ಮಹಿಮೆ ಜ್ಞಾನದ ಆಹಾರ ಕೊಟ್ಟು, ಉದ್ದರಿಸುವುದು ಅವನೇ.
ಮಡದಿ ಮಕ್ಕಳ ಮೇಲೆ, ಸ್ವಂತ ತಮ್ಮ ಮೇಲೆ, ಬಹು ಅಭಿಮಾನ ನಮಗೆ ಇದು ಬಿಡದ ಅಭಿಮಾನ. ಕಳೆದುಕೊಳ್ಳಲಾಗದ ಅಭಿಮಾನ. ಇದನ್ನು ಕಳೆದುಕೊಳ್ಳುವುದು ನಮ್ಮಿಂದ ನಮಗೇ ಅಸಾಧ್ಯ.
ಬಂಧನ ಹಾಕಿದ ಶ್ರೀ ಹರಿಯೇ ಈ ಅಭಿಮಾನ ಬಂಧನ ಬಿಡಿಸಬೇಕು. ಅದಕ್ಕಾಗಿ ಮಡದಿ ಮಕ್ಕಳ ಕಡೆ ಹಾಯಿಸುವವನು ನೀನೆ ಎಂದರೆ - ನಮಗೆ ನಮ್ಮ ಇಂದ್ರಿಯ ಅಭಿಮಾನ ಸ್ವಾಮಿತ್ವ ಅಭಿಮಾನ, ಕರ್ತೃತ್ವ ಅಭಿಮಾನ, ಎಲ್ಲಾ ಅಭಿಮಾನಗಳನ್ನು, ಅಹಂ, ಮಮಕಾರಗಳನ್ನು ಬಿಡಿಸುವವ ಶ್ರೀಹರಿಯೇ. ಉದ್ಧರಿಸುವವ ಶ್ರೀಹರಿಯೇ.
ಬಿಡದೆ ಸಲಹುವವ ನೀನೇ - ಶ್ರೀ ಹರಿ ಅನಾದಿಯಿಂದ ಅನಂತದ ಜೀವನ ಜೊತೆಗೇ ಇದ್ದು ರಕ್ಷಿಸುವವ. ಉದ್ಧಾರಕ ಎಲ್ಲಾ ಆತನೇ.
ವಿದ್ಯೆ ಹೇಳುವ ನೀನೇ ಬುದ್ದಿ ಕಲಿಸುವ ನೀನೆ ಉದ್ಧಾರ ಕರ್ತ ನೀನೆ ಮುದ್ದು ಶ್ರೀ ಪುರಂದರ ವಿಠಲ ನಿನ್ನ ಡಿ ಮೇಲೆ ಬಿದ್ದುಕೊಂಡಿರುವನಿಗೆ ಏತರ ಭಯವೋ |೩|
ಯೋಗ್ಯ ಗುರುಗಳನ್ನು ಕೊಟ್ಟು ನಾನು ಅವರಲ್ಲಿ ನಿಂತು, ಸತ್ ವಿದ್ಯೆ ಸದ್ ಬುದ್ಧಿ ಅವರ ಮುಖಾಂತರ ಕೊಡಿಸುವವ ಶ್ರೀಹರಿ. ನಮ್ಮಲ್ಲಿ ನಿಂತು ಅದನ್ನು ನಮಗೆ ತಿಳಿಸುವವನೂ ಅವನೇ.
ಸಾಧನ ಕೊಟ್ಟು ಸಾಧನೆ ಮಾಡಿಸುವವನು ಅವನೇ.
ಜೀವ ಸಾಧನೆಯ ಮಾರ್ಗದಲ್ಲಿ ತಪ್ಪುತ್ತಾನೆ. ಎಡವುತ್ತಾನೆ. ಬೀಳುತ್ತಾನೆ. ಏಳುತ್ತಾನೆ. ಇವೆಲ್ಲವನ್ನು ಕ್ಷಮಿಸಿ ಕರುಣಾಸಾಗರ ಶ್ರೀಹರಿ ತಾಯಿ ತಂದೆ ತಮ್ಮ ಮಕ್ಕಳನ್ನು ಪೊರೆವಂತೆ ಜೀವರನ್ನು ಸಾಕಿ ಸಲುಹಿ ಉದ್ದರಿಸುತ್ತಾನೆ. ಅವನ ಪಾದ ಕಮಲಗಳ ಮೇಲೆ ನಾವು ಶರಣಾಗತಿ ಹೊಂದಿದ್ದರೆ ಸಾಕು. ನಮಗೇನು ಕಡಿಮೆ?
ಕೈ ಹಿಡಿದು ಎತ್ತಿ ಉದ್ಧರಿಸುವ ದೊರೆ ಹರಿ. ಅವನ ಪಾದದ ಮೇಲೆ ನಾನು ಇರಲು ನಾನೇಕೆ ಬಡವ? ನಾನು ಏಕೆ ಪರದೇಸಿ? ನನಗೇಕೆ ಚಿಂತೆ ಎಂದು ಶ್ರೀಹರಿ ವಿಠ್ಠಲ ದೇವರಲ್ಲಿ ಜ್ಞಾನಭಕ್ತಿಯಿಂದ ಸಂಪೂರ್ಣ ಶರಣಾಗತಿ ಹೊಂದಿದವರು ದಾಸ ವರೇಣ್ಯ ಪುರಂದರದಾಸರು. ಎಂದು ಶ್ರೀಹರಿಯ ಮಹಿಮೆಯನ್ನು ಜಗತ್ತಿಗೆ ಸಾರುತ್ತಾರೆ.
ಏನೇನೋ ಅಂದವರಿಗೆ ತಾನು ಬಡವನಲ್ಲ ಪರದೇಶಿ ಅಲ್ಲ ತನ್ನಂತ ಶ್ರೀಮಂತ ಮತ್ತಿಲ್ಲ ಎಂಬುದು ವಿದಿತಗೊಳಿಸುತ್ತಾರೆ
ಡಾ ವಿಜಯೇಂದ್ರ ದೇಸಾಯಿ
ಶ್ರೀ ಕೃಷ್ಣಾರ್ಪಣಮಸ್ತು.
***
ಮಾನಾಭಿಮಾನದೊಡೆಯ ವಿಠಲ ಎನಗಿರಲು ಪ
ಮೂರುಲೋಕದ ಒಡೆಯ ಶ್ರೀಹರಿಯು ಎನ್ನ ತಂದೆವಾರಿಜಾಂಬಕೆ ಲಕ್ಷ್ಮೀ ಎನ್ನ ತಾಯಿ ||ಮೂರು ಅವತಾರದವರೆನ್ನಗುರುಕಾಣಿರೊಸಾರಹೃದಯರು ಎನ್ನ ಬಂಧು ಬಳಗ1
ಇಪ್ಪತ್ತುನಾಲ್ಕು ನಾಮಗಳೆಂಬ ಹಳನಾಣ್ಯಒಪ್ಪದಲಿ ಉಣಲುಂಟು ಉಡಲುಂಟು ತೆಗೆದು ||ತಪ್ಪದಲೆ ನವಭಕ್ತಿಯೆಂಬ ನವರತ್ನಗಳುಮುಪ್ಪು ಇಲ್ಲದ ಭಾಗ್ಯ ಎನಗೆ ಸಿದ್ಧವಿರಲಿಕ್ಕೆ 2
ಎನಗೆ ಎಂಬವನ ಹೆಸರೇನೆಂಬೆ ಶ್ರೀನಿವಾಸತನಗೆಂದರೆಂದು ಬಗೆವನು ಕಾಣಿರೊ ||ಘನಮಹಿಮನಾದಸಿರಿಪುರಂದರವಿಠಲನುಅನುಮಾನವಿರದೆನ್ನ ಶಿರದ ಮೇಲಿರಲಿಕ್ಕೆ 3
********
No comments:
Post a Comment