Wednesday, 4 December 2019

ಎಂಜಲವನೆ ಬಳಿದ ಶ್ರೀಹರಿ ರಾಜಿಸುವ ರಂಜಿಸುವ purandara vittala ENJALAVANE BALIDAA SRIHARI RAAJISUVA RANJISUVA



ಎಂಜಲವನೆ ಬಳಿದ ಶ್ರೀಹರಿ

ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ

ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ
ಕಟ್ಟಿದ್ದ ಸರಗಳ ಹಿಂದಕೆ ಸರಿಸಿ
ಸರಸರ ಎಲೆಗಳ ತೆಗೆದು ಬಿಸಾಕಿದ
ಕಟ್ಟ ಕಡೆಗೆ ತಾನೆ ಬಳಿದು ನಿಂತ

ಪೊರಕೆಯ ಪಿಡಿದು ಕಸವನೆ ಗುಡಿಸಿ
ಹೆಂಡಿಯ ನೀರೊಳು ಕಲಸಿ ಥಳಿಯ ಹಾಕಿ
ಸಾಲು ಸಾಲಾಗಿ ಮಣೆಗಳನ್ನಿಟ್ಟು ಎಲೆ ಹಾಕಿ
ರಂಗೋಲಿ ಕೊಳವಿಯ ಎಳೆದು ತಾ ನಿಂತ

ಎನ್ನ ಕೆಲಸಾಯ್ತೆoದ ಇನ್ನೇಕೆ ತಡವೆಂದ
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ
ಘನ್ನಮಹಿಮ ಸಿರಿಪುರಂದರ ವಿಠಲನು
ಪುಣ್ಯಾತ್ಮರುಂಡ ಎಲೆಗಳನು ಬಳಿದು ನಿಂತ
****

Rajisuva ranjisuva rajasuya yagadalli | 
Enjalavane baleda shri hari || p ||

Utta pitambara tonkakke katti | kattida saragala hindake sarisi || 
sarasara elegala tegedu bisaakida | katta kadege taanu baledu ninta || 1 ||

Porakeya pididu kasavane gudisi | saganeya neerolu kalisi thaliya haaki ||
Saalu saalaagi maneyittu ele haaki | rangoli kolaviya eledu ta ninta || 2 ||

Enna kelasaaitenda inneke tadavenda | innondu panktiya kooda helenda || ghanna mahima shri purandara vithalanu | punyatmaru unda elegalanu tegedu ninta ||3||
***

ಎಂಜಲು ಎಲೆಯ ಬಳೆದಾ ಶ್ರೀಹರಿ 
ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ| ಉಟ್ಟಪೀತಾಂಬರ ಟೊಂಕಕೆ ಕಟ್ಟಿ ಕಟ್ಟಿದ ಸರಗಳ ಹಿಂದಕ್ಕೆ ಸರಿಸಿ ಸರ ಎಲೆಗಳ ತೆಗೆದು ಬಿಸಾಕಿದ 
ಕಟ್ಟ ಕಡೆಯ ಎಲೆ ಬಳೆದು ತಾನಿಂತಾ||
 ಪೊರಕೆಯ ಪಿಡಿದು ಕಸವನೆಗುಡಿಸಿ 
ಸಗಣಿಯ ನೀರಲಿ ಕಲಿಸಿ ಥಳಿಯ ಹಾಕಿ 
ಸಾಲು ಸಾಲಾಗಿ ಮಣೆಗಳ ಇಟ್ಟು ಎಲೆ ಹಾಕಿ 
ರಂಗೋಲಿ ಕೊಳವೆಯಾ ಎಳೆದು ತಾ ನಿಂತಾ
ತನ್ನ ಕೆಲಸ ಆಯಿತೆಂದ ಇನ್ನೇಕೆ ತಡವೆಂದ ಇನ್ನೊಂದು ಪಂಕ್ತಿಯ ಕೂಡ ಹೇಳಿದ
 ಘನ ಮಹಿಮೆ ಶ್ರೀ ಪುರಂದರ ವಿಠಲ ಪುಣ್ಯಾತ್ಮರು ಉಂಡ ಎಲೆ  ಬಳೆದಾ||


ಶ್ರೀಹರಿಯಲ್ಲಿ ಉಕ್ಕಿ ಬರುವ ಭಕ್ತ ವಾತ್ಸಲ್ಯ, ಭಕ್ತಪರಾಧೀನತೆ ಇಲ್ಲಿ ವರ್ಣಿತ. ಅದು ದಾಸ ವರೇಣ್ಯ ಪುರಂದರ ದಾಸರ ಮಾತಿನ ಸೊಬಗಿನಲ್ಲಿ!
ಅದು ಕೃಷ್ಣನ ಆಜ್ಞೆಯಂತೆ ದೈತ್ಯ ಶಿಲ್ಪಿ ಮಯ ನಿರ್ಮಿತ ದಿವ್ಯ ಭವನ. ವಿಚಿತ್ರ ರತ್ನಗಳಿಂದ ನಿರ್ಮಿತ. ಸೂರ್ಯಕಾಂತಿ ಸಮಪ್ರಭ ಸಭೆಯನ್ನು ತುಂಬಿತ್ತು.
 ಶ್ರೀ ಕೃಷ್ಣನ ನಾಯಕತ್ವ. ಕೃಷ್ಣನ ಭಕ್ತರಾದ ಪಾಂಡವರ ಸಿರಿಸಂಪದದ, ಭಕ್ತಿ  ಶ್ರದ್ಧೆಯ, ಧರ್ಮದ ಉನ್ನತಿಯ ವೈಭವದ ಮೆರವಣಿಗೆ.
ಕೌರವರನ್ನು ಸೇರಿಸಿ ಜಗದ ಸಕಲ ರಾಜರ, ರಾಜರಾಜರ ಉಪಸ್ಥಿತಿ ಅಲ್ಲಿಯ ಸಂಭ್ರಮ ಸಡಗರ ವೈಭವ ವರ್ಣನಾತೀತ. 
ಯಾಕೆ?
ಜಗದೊಡೆಯ ಸಿರಿ ರಮಣ ಶ್ರೀ ಕೃಷ್ಣ ನಿದ್ದಾನಲ್ಲವೇ!
ಮೂರು ಲೋಕದಿ ಬರುವ ಸುರ ನರ ಜನಸಾಗರ.  ಎಲ್ಲವೂ ಸುವ್ಯವಸ್ಥಿತ. ಯಾವುದರ ಕೊರತೆ ಅಲ್ಲಿಲ್ಲ.
ಅದಕ್ಕಾಗಿ ದಾಸರ ಮಾತು ರಂಜಿಸುವ ರಾರಾಜಿಸುವ ರಾಜಸೂಯ ಯಾಗ.
ಲಕ್ಷೋಪಲಕ್ಷ ಜನರ ಭೂರಿ ಭೋಜನ. ಪಂಕ್ತಿಯ ಮೇಲೆ ಪಂಕ್ತಿ. ಅದರ ಮೇಲೆ ಮತ್ತೊಂದು ಪಂಕ್ತಿ. ಅದರ ಮೇಲೆ ಮಗದೊಂದು.  ಇಂತು ಬೆಳೆಯುತ್ತಿತ್ತು. ಮುಗಿಯುತ್ತಿರಲಿಲ್ಲ.
ಇಷ್ಟು ಜನ ಸಮುದ್ರದ ಎಂಜಲ ಎಲೆ ಬಳೆದು ಮತ್ತೆ ಮುಂದಿನವರಿಗೆ ಹೊಸ ಬಾಳೆ ಎಲೆ ಹಾಕಿ ಊಟಕ್ಕೆ ಕೂಡಿಸಬೇಕು. ಬಹು ಕ್ಲಿಷ್ಟಕರ ಕಾರ್ಯ. ಎಲ್ಲಿ ಕಷ್ಟವೋ ಅಲ್ಲಿ ಇಷ್ಟ ದೈವ ಶ್ರೀ ಕೃಷ್ಣ.
ಅಸಾಧ್ಯ ಸಾಧ್ಯ ಮಾಡುವ ಅಚಿಂತ್ಯ ಅದ್ಭುತ ಶಕ್ತಿಯ ದೊರೆ ಶ್ರೀ ಕೃಷ್ಣ. ಅದು ಆತನಿಗೆ ಲೀಲೆ ಆತ ಭಕ್ತ ವತ್ಸಲ ಭಕ್ತರ ಕೆಲಸ ಯಾವುದೇ ಇರಲಿ ಅದು ಎಂಜಲು ಎಲೆ ಬಳೆಯುವುದಾಗಲಿ ಕುದುರೆಗಳ ಮೈ ತೊಳೆಯುವುದಾಗಲಿ ಕೃಷ್ಣ ಸದಾ ಸಿದ್ಧ.
ಕೃಷ್ಣ ಜನಸಾಗರವ ಆಕರ್ಷಿಸಿದ. ಒಳಗೆ ಕರೆದೊಯ್ದ. ಅಕ್ಷಯ ಭೋಜನ ಶಾಲೆ ಮಣೆ ಹಾಕಿದ ಎಲೆ ಹಾಕಿದ ರಂಗೋಲಿ ಕೊಳವೆ ಎಳೆದ  ಮಣೆಯ ಮೇಲೆ ಕೂಡಿಸಿದ ದಿವ್ಯ ಭೋಜನ ಉಂಡವರು ಸಂತೃಪ್ತರು. ಪುಣ್ಯವಂತರು. ಉಂಡರು. ಹರಸಿದರು. ನೆನೆಸಿದರು. ಹೊರಟರು. ಕೊನೆ ಕಾಣದ ಸಾಲು ಸಾಲು ಎಂಜಲು‌ಎಲೆಗಳು.
ಕೃಷ್ಣ ನೋಡಿದ ಮುಗುಳು ನಕ್ಕ ಪೀತಾಂಬರ ಮೇಲೆತ್ತಿ ಸೊಂಟಕ್ಕೆ ಕಟ್ಟಿದ ಕೊರಳ ಅಲಂಕರಿಸಿದ ಸರಗಳ ಹಿಂದೆ ಸರಿಸಿದ ತನ್ನ ಮುಂದಿನ ಕಾರ್ಯಕ್ಕೆ ಕಿರಿಕಿರಿ ಬೇಡ ಎಂದ ಬಗ್ಗಿದಾ ತಗ್ಗಿದ ಬಾಗಿದ. ಎರಡೂ ಅಂಗೈಗಳ ನೆಲಕ್ಕೆ ಹಚ್ಚಿದ. ಎಂಜಲು  ಬಳೆದ. ಎಂಜಲ ಎಲೆಗಳ ಬಳಿದ.
ದೇವಲೋಕಕ್ಕೆ ಅಚ್ಚರಿ. ಏನಿದು ವಿಚಿತ್ರ! ಕೋಟಿ ಕೋಟಿ ಭೃತ್ಯರು ಇರಲು  ಸಾಟಿ ಇಲ್ಲದ ಶ್ರೀಹರಿ ತಾನೇ ಎಂಜಲ ಎಲೆ ಬಳಿದ. ಮತ್ತೆ ಪೊರಕೆ ಹೊರಕ್ಕೆ ಹಿಡಿದ ಕಸವು ಬಳೆದ ಸಗಣಿಯ ನೀರಲ್ಲಿ ಕಲಿಸಿದ  ಥಳಿಯ  ಹೊಡೆದ.  ದೋಷ ದೂರ ಎಲ್ಲ ಶುದ್ಧ ಮಾಡಿದ. ಗುಣಪರಿಪೂರ್ಣ ಮತ್ತೆ ಮಣೆ ಹಾಕಿದ. ಎಲೆ ಹಾಕಿದ. ರಂಗೋಲಿ ಕೊಳವೆ ಎಳೆದ. ಟೊಂಕದ ಮೇಲೆ ಕೈ ಇಟ್ಟ. ನಿಂತ. ಮುಂದಿನ ಪಂಕ್ತಿಯ ಜನರ ಕಳಿಸು ಬೇಗ ಎಂದಾ. 
ಇದೆಲ್ಲಾ ಅನಾಯಾಸದ ಲೀಲೆ ಕೃಷ್ಣನಿಗೆ.
ಇದು ದಾಸರ ಹಾಡಿನ ಒಂದು ಸಾಮಾನ್ಯ ಅರ್ಥ ದಾಸರಾದರು ಅಸಮಾನ್ಯರು ಅವರ ಮಾತಿನ ತಥ್ಯ ತಿಳಿಯಬೇಕು. 
ಹೀಗೂ ಇರಬಹುದೇ ಎಂದು ಒಂದು ಪ್ರಯತ್ನ-
ಜೀವನವೇ ಒಂದು ಯಜ್ಞ. ಮರಣ ಅವಭೃತ ಸ್ನಾನ.  ಶಾಸ್ತ್ರದ ಮಾತು.
ರಾಜಿಸುವ ರಂಜಿಸುವ ರಾಜಸೂಯಾಗ = ಜೀವನ ಸಂಸಾರ.
ರಾಜಸೂಯಯಾಗದಲ್ಲಿ ಎಲ್ಲರನ್ನೂ ಗೆಲ್ಲುವ ಕಷ್ಟವಿದೆ. ವೈಭವವಿದೆ. ಸುಖ ಸಂತೋಷವಿದೆ.
ಸಂಸಾರವೂ ಹಾಗೇ. ಸುಖ ದುಃಖಗಳ ಮಿಶ್ರಣ.
ಎಂಜಲು ಎಲೆಗಳನ್ನು ತೆಗೆಯುವುದು,ಬಿಸಾಕು ವುದು = ಪ್ರಳಯ.
ಊಟ ಆಯಿತು. ಎಲೆ ಕೆಲಸ ಮುಗಿಯಿತು. ಬಾಳೆಲೆ ಹಾಸಿ ಉಂಡು ಬೀಸಿ ಒಗೆದಾಂಗ ಜೀವನ.
ಜೀವ ಸೃಷ್ಟಿಗೆ ಬಂದ ಶರೀರ ತಂದ ಸಾಧನೆ ಮುಗಿಸಿದ. ಮತ್ತೇಕೆ ಶರೀರ? 
 ಹರಿ ಪ್ರಳಯ ತಂದ. ಸಕಲ ಪ್ರಕೃತಿ ನಿರ್ಮಿತ ಬಾಳೆ ಎಲೆಗಳ, ಶರೀರಗಲ ಎಂಜಲಯಗಳ ತೆಗೆದ, ಕೆಲಸ ಮುಗಿದ ಶರೀರಗಳ ಕಿತ್ತಿ ಎತ್ತಿ ಬಿಸಾಕಿದ. ಪಡೆ ದೇಹವನ್ನೂ ಬಿಡಲಿಲ್ಲ. ಅವರವರ ಗತಿ ಅವರವರಿಗೆ ಕೊಟ್ಟ. ಇದೇ ಪ್ರಳಯದ ಉದ್ದೇಶ.
ಎಂಜಲು ಬಳಿದ ಮೇಲೆ ಗೋಮಯದಿಂದ ನೆಲವ ಶುದ್ಧಿ ಮಾಡಿದ.
ಪ್ರಳಯದಲ್ಲಿ ಎಲ್ಲವನ್ನು ನುಂಗಿ ನೀರು ಕುಡಿದ.
 ಪೊರಕೆ‌ ಪಿಡಿದ. ಕಸಗೂಡಿಸಿದ. ತೃಣ ಬಿಡದೆ ಪ್ರಕೃತಿಯ 24 ತತ್ವಗಳನ್ನೂ ಮೂಲತತ್ವದಲ್ಲಿ ಲೀನ ಮಾಡಿದ. ತನ್ನ ರಮಣೀಯ ಕೈಯಲ್ಲಿ ಕೊಟ್ಟ.
 ನಿರ್ಮಲ ಮಾಡಿದ.
ರಾತ್ರಿ ಕಳೆಯಿತು. 
ಬೆಳಗು ಆರಂಭ. 
ಹರಿಯ ಸೃಷ್ಟಿಯ ಪ್ರಾರಂಭ.
ಮಣೆ ಹಾಕಿ ಜೀವಿಗಳ ಕರೆತಂದ.  ಜೀವಿಗಳಿಗೆ ಹುಟ್ಟಿನ ಹಿನ್ನೆಲೆ ಕೊಟ್ಟ. ಎಲೆ ಹಾಕಿದ. 
ಸ್ಥೂಲ ದೇಹ ಕೊಟ್ಟ. 
ರಂಗೋಲಿ ಕೊಳವೆ ಎಳೆದ. 
ಹಣೆಬರಹ ಬರೆದ. ಭೋಜನ ಉಣಿಸಿದ.
 ಮೂರು ರೀತಿಯ ಹಿಂದಿನ ಇಂದಿನ ಮುಂದಿನ ಕರ್ಮಗಳ ಉಣಬಡಿಸಿದ. 
ರುಚಿ, ಅರುಚಿ, ಸಿಹಿ ಕಹಿ ಹುಳಿ ಮಧುರ ಎಲ್ಲ ರೀತಿಯ ಕರ್ಮಗಳ ಉಣಿಸಿದ. 
ಅವರವರ ಸಾಧನೆ ಅವರವರಿಗೆ ಎಂದ. ಮಹಾಯುಗಾಂತ. ಸಾಧನೆ ಅಂತ. 
ಸಾಧನೆಗೆ ತಕ್ಕಂತೆ ಗತಿ ಕೊಟ್ಟ. ಅವರ ಸ್ಥಿರವಾಗಿ ಇಟ್ಟ.
ಆಯಿತಲ್ಲ. ತಿಂದಾಯಿತು. ಉಂಡಾಯಿತು. ಸಾಧನೆ ಮುಗಿಯಿತು. ಸ್ವಚ್ಛವಾಯಿತು ಜಗ. ಖಾಲಿಯಾಯಿತು. ಮತ್ತೇಕೆ ತಡ? 
ಮುಂದಿನ ಫ್ರೆಶ್ ಬ್ಯಾಚ್ ಬರಲಿ‌ಎಂದ. 
ಇದು ಸೃಷ್ಟಿ, ಸ್ತಿಥಿ, ಲಯ. ಅನಾಯಸವಾಗಿ ಅನಾಯಾಸವಾಗಿ ಲೀಲಯಾ ಮುಗಿಸಿದ. ಟೊಂಕದ ಮೇಲೆ ಕೈ ಇಟ್ಟ. ನಿಂತ. ಅಷ್ಟ ಕರ್ತೃತ್ವದ  ಪ್ರಭು ಶ್ರೀಹರಿ ಜಗದ ದೊರಿ. 
ಡಾ ವಿಜಯೇಂದ್ರ ದೇಸಾಯಿ.
ಶ್ರೀ ಕೃಷ್ಣಾರ್ಪಣಮಸ್ತು
***


just scroll down for other devaranama 


No comments:

Post a Comment