ಭಗವಂತನ ಅರಿವು ಜಗತ್ತಿನ ಬಗ್ಗೆ ಒಲವನ್ನು ಹುಟ್ಟಿಸಿ, ಚೈತನ್ಯದ ಬಲವನ್ನು ಹೆಚ್ಚಿಸುತ್ತದೆ. ದಿನನಿತ್ಯ ಉಗಾ ಭೋಗಗಳ ಅಭ್ಯಾಸದಿಂದ ಎಂತಹ ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತನೆ ಮಾಡುವ ಅತೀಂದ್ರಿಯವಾದ ಶಕ್ತಿ ಇದೆ. ಸುಳಾದಿಗಳಿಗಿರುವಂತೆ ಇವುಗಳಿಗೆ ತಾಳದ ನಿರ್ಬಂಧವಿಲ್ಲ. ಪಲ್ಲವಿ, ಅನುಪಲ್ಲವಿ ಗಳಾಗಲಿ, ಭಿನ್ನ ಭಿನ್ನ ನುಡಿಗಳಾಗಲಿ ಇವುಗಳಲ್ಲಿ ಇರುವುದಿಲ್ಲ. ಮರಾಠಿಯ ಅಭಂಗಗಳು, ಓವಿಗಳು, ಸಂಸ್ಕೃತದ ಆರ್ಯಾಗಳು, ದಂಡಿಗಳು, ಉಗಾಭೋಗಕ್ಕೆ ಸ್ಫೂರ್ತಿಯಾಗಿರಬಹುದೆಂದು ಕೆಲವರ ಊಹೆ.
ಉಗಾಭೋಗ ಗಳು - ಶ್ರೀ ಪುರಂದರ ದಾಸರು
ನಿನ್ನ ಸುತ್ತಿಹುದೆಲ್ಲ ಎನ್ನ ಮಾಯೆಯಯ್ಯ
ಜಗಕೆ ಬಲ್ಲಿದ ನೀನು ನಿನಗೆ ಬಲ್ಲಿದ ನಾನು
ಮೂರು ಜಗನಿನ್ನೊಳಗೆ ನೀನು ಎನ್ನೊಳಗೆ
ಕರಿಯು ಕನ್ನಡಿಯೊಳು ಅಡಗಿಹತೆರನಂತೆ
ನೀ ಎನ್ನೊಳು ಆದಗಿರೋ ಪುರಂದರವಿಠಲ
ರವಿಕೋಟಿ ಭಾಸುರ, ಶ್ರೀಶ ಸುಗುಣವಂತ
ನಾಶರಹಿತ ನಿನ್ನ ದಾಸರ ದಾಸ್ಯವ
ಲೇಸಾಗಿ ಕೊಡುಕಂಡ್ಯ ಪುರಂದರವಿಠಲ
ಸಿಕ್ಕಿದಿಯಲ್ಲೋ ಸಿರಿ ಕೃಷ್ಣ ನೀನು
ಸಿಕ್ಕಿದಿಯಲ್ಲೋ ಕಳ್ಳರ ಗುರುವೆ
ಸಿಕ್ಕಿದಿಯಲ್ಲೋ ಸಿರಿ ಕೃಷ್ಣ ನೀನು
ಠಕ್ಕಿಸಿಕೊಂಡರೂ ಬಿಡೆ ಪುರಂದರವಿಠಲ
***
ಭಗೀರಥಗೆ ಶ್ರೀ ಗಂಗೆ ಬಂದಂತೆ
ಮುಚುಕುಂದಗೆ ಶ್ರೀ ಮುಕುಂದ ಬಂದಂತೆ
ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ
ವಿಭೀಷಣನ ಮನೆಗೆ ಶ್ರೀರಾಮ ಬಂದಂತೆ
ನಿನ್ನ ನಾಮವು ಎನ್ನ ನಾಲಿಗೆಯಲಿ ಬಂದು
ನಿಂದಿರಲಿ ಶ್ರೀಪುರಂದರವಿಠಲ
ನಿನ್ನಂಥ ಸ್ವಾಮಿ, ಎನಗುಂಟು ನಿನಗಿಲ್ಲ
ನಿನ್ನಂಥ ದೊರೆ, ಎನಗುಂಟು ನಿನಗಿಲ್ಲ
ನೀನೇ ಪರದೇಶಿ, ನಾನೇ ಸ್ವದೇಶಿ
ನಿನ್ನ ಅರಸಿ ಲಕ್ಷ್ಮೀ, ಎನಗೆ ತಾಯಿಯುಂಟು
ಎನಗಿದ್ದ ತಾಯಿ ತಂದೆ ನಿನಗ್ಯಾರು
ತೋರೋ ಪುರಂದರವಿಠಲ
ಶ್ರವಣದಿಂದ್ಹೋಯಿತು
ಬ್ರಹ್ಮಹತ್ಯೆ ಪಾಪವು.
ಸ್ಮರಣೆಯಿಂದ್ಹೋಯಿತು ಸೇರಿದ್ದ ಪಾಪವು.
ಎಲ್ಲಿದ್ದ ಅಜಮಿಳ ಎಲ್ಲಿತ್ತು ವೈಕುಂಠ
ಕೊಟ್ಟ ತಾನೇ ಬಲ್ಲ ಪುರಂದರ ವಿಠ್ಠಲ.//
ಪನ್ನ ರಕ್ಷಕನೆ ಪರಿಪಾಲಿಸು ಇನ್ನು
ಪನ್ನಂಗಶಯನ ಪುರಂದರವಿಠಲ
****
ದರಿದ್ರರೆನ್ನಬಹುದೆ ಹರಿದಾಸರ
ಸಿರಿವಂತರೆನಬಹುದೆ ಹರಿದ್ರೋಹಿಗಳ
ಹರಿದಾಸರ ಮೇಲಿದ್ದ ಕರುಣವು ಸಿರಿದೇವಿಯ
ಮೇಲಿಲ್ಲವೋ
ಪುರಂದರ ವಿಠಲನ ಆಳುಗಳಿಗೆ
ಎಲ್ಲಿಹುದು ಮಾನಾಭಿಮಾನ ಜಗದಿ//
ತಪ್ಪುರಾಶಿಗಳ ಒಪ್ಪಿ ಕಾಯೊ ಕೃಪಾಳು
ಮುಪ್ಪುರವನಳಿದಂಥ ಮುನೀಂದ್ರವಂದ್ಯ
ಅಪ್ರಮೇಯನೆ ನಿನ್ನ ಅದ್ಭುತಮಹಿಮೆಗಳ
ಅಪ್ಪುನಿಧಿಯಲ್ಲಿ ಪುಟ್ಟದವಳು ಬಲ್ಲಳೆ
ಕಪ್ಪುಮೇಘಕಾಂತಿಯೊಪ್ಪುವ ತಿಮ್ಮಪ್ಪ
ಅಪ್ರಾಕೃತರೂಪ ಪುರಂದರವಿಠಲ
****
ಅರ್ಭಕನ ತೊದಲ್ನುಡಿ ತಾಯ್ತಂದೆ ಕೇಳಿ ಮನ |
ಉಬ್ಬಿ ನಲಿವಂದದಲಿ ಉರಗಶಯನ |
ಕೊಬ್ಬಿ ನಾನಾಡಿದರು ತಾಳಿ ರಕ್ಷಿಸು ಎನ್ನ |
ಕಬ್ಬುಬಿಲ್ಲನ ಪಿತ ಪುರಂದರವಿಠಲ ||
*******
ಕ್ರಿಮಿಕೀಟವಾಗಿ ಹುಟ್ಟಿದಂದು ನಾನು
ಹರಿಶರಣೆಂದೆನಲುಂಟೆ
ಹಕ್ಕಿ ಹರಿಣಿಯಾಗೆ ಹುಟ್ಟಿದಂದು ನಾನು
ಹರಿಶರಣೆಂದೆನಲುಂಟೆ
ಹಂದಿ-ಸೊನಗನಾಗಿ ಹುಟ್ಟಿದಂದು ನಾನು
ಹರಿಶರಣೆಂದೆನಲುಂಟೆ
ಮರೆದೆ ಮಾನವ ನಿನ್ನ ಹಿಂದಿನ ಭವಗಳನಂದು
ಮಾನುಷ ದೇಹ ಬಂದಿತೊ ನಿನಗೀಗ
ನೆನೆಯಲೊ ಬೇಗ ಪುರಂದರವಿಠಲನ
****
ಹೇ ಮನುಜ ಹೊಲೆಯನಾಗಬೇಡ
ಹೊಲೆಯ ಹೊರಗಿಹನೆ ಊರೊಳಗಿಲ್ಲವೇ l
ಹೊಲೆಗೇರಿಯಲಿ ಮಾತ್ರ ಹೊಲೆಯನಿರುತಿಹನೇ ll
ಶೀಲವನು ಕೈಕೊಂಡು ನಡೆಸದಾತನೆ ಹೊಲೆಯ
ಹೇಳಿದ ಶಾಸ್ತ್ರಗಳ ತಿಳಿಯದವನೆ ಹೊಲೆಯ
ಆಳಾಗಿ ಅರಸನಿಗೆ ಮುನಿಯುವಾತನೆ ಹೊಲೆಯ
ಸೂಳೆಯನು ಹೋಗುವವ ಶುದ್ಧ ಹೊಲೆಯ
ಇದ್ದು ದಾನಗಳನು ಮಾಡದಿದ್ದವ ಹೊಲೆಯ
ಕದ್ದು ತಿಂದೂ ಒಡಲ ಹೊರೆಯುವವ ಹೊಲೆಯ
ಪದ್ಧತಿಯ ಬಿಟ್ಟು ತಾ ನುಡಿಯುವಾತನೆ ಹೊಲೆಯ
ಮದ್ದಿಕ್ಕಿ ಕೊಲ್ಲುವವ ಮರಳು ಹೊಲೆಯ ll
(ಶ್ರೀ ಪುರಂದರದಾಸರು)
***
ಇಂದಿಗೆಂಬಾ ಚಿಂತೆ ನಾಳೆಗೆಂಬಾ ಚಿಂತೆ |
ನಾಡದಿಗೆಂಬಾ ಚಿಂತೆ ತೊತ್ತಿಗೇಕಯ್ಯಾ |
ಒಡೆಯನುಳ್ಳನಕ ತೊತ್ತಿಗ್ಯಾತರ ಚಿಂತೆ |
ಅಡಿಗಡಿಗೆ ನಮ್ಮನಾಳುವ ಕಾವ ಚಿಂತೆಯವ- |
ನೊಡೆಯ ಪುರಂದರವಿಠಲರಾಯನಿರುತಿರೆ |
ಒಡೆಯನುಳ್ಳ ತೊತ್ತಿಗ್ಯಾತರ ಚಿಂತೆ ||
******
ಪುರಂದರದಾಸರ ಉಗಾಭೋಗ 2
ತೊಡೆಯ ಕೆಳಗೆ ಕೈ ಹಿಂದೆ ಮುಂದೆ ಕೈ ಚಾಚಿ
ಬಿಡುತ ಮಂತ್ರಾರ್ಥ ನೋಡದೆಲೆ
ಅಡಿಗಡಿಗೆ ಜಪವ ಮಾಡೆ
ದೈತ್ಯರಿಗೆ ಅಹುದಯ್ಯ
ಒಡೆಯ ಪುರಂದರವಿಠಲನನೊಲಿಸಬೇಕಾದರೆ
ಹಿಡಿಯೋ ಈ ಪರಿ ಹೇಳಿದ ವಚನ ತತ್ತ್ವಗಳ
ಅಮ್ಮಾ ಅಮ್ಮಾ ಎನುತ ಅಮ್ಮೆಯ ಬೇಡುತಿಹೆ
ಹೆಮ್ಮಕ್ಕಳು ನಗರೆ ಬ್ರಹ್ಮಾದಿಗಳು
ಮೊಮ್ಮಕ್ಕಳು ನಗರೆ ರುದ್ರಾದಿಗಳು
ಮರಿಮಕ್ಕಳು ನಗರೆ ಮಿಕ್ಕ ಸುರರೆಲ್ಲ
ರಮ್ಮೆಯರಸ ಸಿರಿಪುರಂದರವಿಠಲ
ಶ್ರೀಕೃಷ್ಣನಾಮ ಕಿಡಿಬಿದ್ದು, ಬೆಂದು ಹೋದದು ಕಂಡೆ
ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು
ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು
ನಿನ್ನ ಕಂಡರೆ, ಶಿರವ ಚಂಡಾಡುವನು
ಇನ್ನೊಮ್ಮೆ ಕಂಡರೆ, ಶಿಕ್ಷಿಸದೆ ಬಿಡನು
ಪುಂಡರೀಕಾಕ್ಷ ನಮ್ಮ ಪುರಂದರವಿಠಲ
ಷಣ್ಮುಖನನೊಲ್ಲೆನವ್ವ ಮೈಯೆಲ್ಲ ಕಣ್ಣಿನವನ
ಚಂದ್ರನ ನಾನೊಲ್ಲೆನವ್ವ ಕಳೆಹೀನನಾದವನ
ರವಿಯ ನಾನೊಲ್ಲೆನವ್ವ ಉಲಿದು ಮೂಡುವನ
ಹರನ ನಾನೊಲ್ಲೆನವ್ವ ಮರುಳುಗೊಂಬುವನ
ಧರೆಗತಿ ಚೆಲುವನು ಜಗಕೆಲ್ಲ ಒಡೆಯನು
ತಂದು ತೋರೆ ನಮ್ಮ ಪುರಂದರವಿಠಲ
ಹಾಲುಮಳೆಗರೆದರೂ ವಿಷ ಹೋಗಬಲ್ಲದೇ?
ಏನು ಓದಿದರೇನು, ಏನು ಕೇಳಿದರೇನು
ಮನದೊಳು, ಮದ, ಅಹಂಕಾರವು ಮಾಣದ ತನಕ
ಏನು ಓದಿದರೇನು, ಏನು ಕೇಳಿದರೇನು
ಪುರಂದರವಿಠಲನ ದಾಸರ ಒಲಿಸದೆ
ಏನು ಓದಿದರೇನು, ಏನು ಕೇಳಿದರೇನು?
ಬೇಡುವರಿಗೆ ಒಬ್ಬರೊಡೆಯರುಂಟೆ?
ಗೂಡು ಕಿರಿದು ಮಾಡಿ, ಬಲಿಯ ದಾನವ ಬೇಡಿ
ನಾಡೊಳಗೆ, ಸ್ಥೂಲಸೂಕ್ಷ್ಮವು ನೀನಾದೆ
ಬೇಡುವ ಕಷ್ಟವನು, ನೀನೇ ಬಲ್ಲಿ ಕೃಷ್ಣ
ಬೇಡದಂತೆಲೆಮಾಡೊ ಪುರಂದರವಿಠಲ
ಸಾಗರವಾಪೋಶನಕೊಂಡಪರುಂಟೆ
ನಾಗಾಭರಣವ ಮಾಡಿದವರುಂಟೆ
ಪುರಂದರವಿಠಲನಲ್ಲದೆಲೆ
ಭಾರತಮಲ್ಲ ಕರ್ಣನೆಂತೆಂಬರು
ಭಾರತಮಲ್ಲ ಅರ್ಜುನನೆಂತೆಂಬರು
ಭಾರತಮಲ್ಲ ದುರ್ಯೋಧನನೆಂತೆಂಬರು
ಭಾರತಮಲ್ಲ ಇವರು ಅವರು ಅಲ್ಲ
ಭಾರತಮಲ್ಲ ಗದುಗಿನ ವೀರನಾರಾಯಣ
ಪುರಂದರವಿಠಲನೊಬ್ಬನೇ ಕಾಣಿರೋ
ಬದ್ಧ ಅಂಗುಟವೆಣಿಸಬೇಕು
ತಿದ್ದಿ ಅಂಗುಲಿ ಪಂಚ ಬೊಗ್ಗಿಸಿ ಇರಬೇಕು
ಭದ್ರವಾಗಿ ನಿಲಿಸಿ ನೀರು ಸೋರದೆ, ಗಾಯತ್ರಿ
ಬುದ್ಧಿಪೂರ್ವಕದಿಂದ ಗೈಯುತ್ತಲಿರಬೇಕು
ಮುದ್ದು ಮೂರುತಿ ನಮ್ಮ ಪುರಂದರವಿಠಲನ್ನ
ಎದ್ದೆದ್ದು ನೋಡುವ ಬಗೆ, ಕಾಣಲಿಬೇಕು
ಘನ ಅಜ್ಞಾನದಿ ಸತ್ಕರ್ಮಗಳು ಹತ್ತವು
ಧನಶುದ್ಧಿ ಇಲ್ಲದೆ ದಾನವು ವ್ಯರ್ಥವು
ಇನಿತಾದ್ದರಿಂದ ಈ ಯುಗದಿ ಪುರಂದರ-
ವಿಠಲನ ನಾಮಸ್ಮರಣೆಯೇ ಲೇಸು ಲೇಸು ಕಾಣ
ಅನವರತ ಶ್ರೀಹರಿಯ ಆರಾಧಿಸುವುದಕ್ಕೆ
ಮನಶುದ್ಧಿಯನೀವ ಮತಿ ಕೊಡುವ
ಮನುಜೋತ್ತಮರು ಕೇಳಿ ಮನಕೆ ಪ್ರೇರಕನವನು
ವನಜಾಕ್ಷ ಪುರಂದರವಿಠಲನ ಒಲುಮೆಗೆ
ಮನಸು ಕಾರಣವಲ್ಲದೆ ಮಿಗಿಲಾವುದು
ಮನೆಯಲ್ಲಿ ವೇದ ಶಾಸ್ತ್ರಧ್ವನಿ ಗರ್ಜಿಸದಿದ್ದರೆ ಮತ್ತೆ
ಮನೆಯಲ್ಲಿ ಸ್ವಾಹಾಕಾರ ಸ್ವಧಾಕಾರ ಮಾಡುವದಿಲ್ಲದಿದ್ದರೆ
ಆ ಮನೆ ಸ್ಮಶಾನಕೆ ಸಮವೆಂಬ ಪುರಂದರವಿಠಲ
ಜಯ ಹರಿಯೆಂಬುದೇ ತಾರಾಬಲವು
ಜಯ ಹರಿಯೆಂಬುದೆ ಚಂದ್ರಬಲವು
ಜಯ ಹರಿಯೆಂಬುದೆ ವಿದ್ಯಾಬಲವ್ಬು
ಜಯ ಹರಿಯೆಂಬುದೆ ದೈವಬಲವು
ಜಯ ಹರಿ ಪುರಂದರವಿಠಲನ ಬಲವೈಯ್ಯ ಸುಜನರಿಗೆ
ಜೀವ ಜಡ ಪರಮಾತ್ಮನಿಗೆ ಭೇದ
ಜೀವ ಜೀವ ಮುಕ್ತಾಮುಕ್ತರ ಭೇದ
ಸಂಸಾರದೊಳು ಭೇದ, ಮುಕ್ತರೊಡೆಯ
ಹರಿಭಕ್ತಾರಾಧೀನ ಜಗತ್ಕರ್ತ
ನೀ ಸಲಹಯ್ಯ ಪುರಂದರವಿಠಲ
ಚೆನ್ನ ಶ್ರೀ ಪುರಂದರವಿಠಲನ ನೆನೆಯದವನು
ಸನ್ಯಾಸಿಯಾದರೇನು
ಷಂಡನಾದರೆ ಏನು?
ಮುಪ್ಪುರವನಳಿದಂಥ ಮುನೀಂದ್ರವಂದ್ಯ
ಅಪ್ರಮೇಯನೇ ನಿನ್ನ ಅದ್ಭುತಮಹಿಮೆಗಳ
ಅಪ್ಪುನಿಧಿಯಲ್ಲಿ ಪುಟ್ಟಿದವಳು ಬಲ್ಲಳೆ?
ಕಪ್ಪು ಮೇಘಕಾಂತಿಯೊಪ್ಪುವ ತಿಮ್ಮಪ್ಪ
ಅಪ್ರಾಕೃತ ರೂಪ ಪುರಂದರವಿಠಲ
ತಂದೆ ನೀ ತಂದೆ, ನಾ ಬಂದೆ
ಕಾಮದಲಿ ತಂದೆ, ಕ್ರೋಧದಲಿ ನೀ ತಂದೆ
ತಾಮಸ ಕಡು ಯೋನಿಯಲಿ ನೀ ತಂದೆ, ನಾ ಬಂದೆ
ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ
ಎಂಭತ್ತ ನಾಲ್ಕು ಲಕ್ಷ ಯೋನಿಯಲ್ಲಿ
ನೀ ತಂದೆ, ನಾ ಬಂದೆ
ಹಿಂದಿನ ಜನ್ಮ ಹೇಗಾದರಾಗಲಿ
ಮುಂದೆನ್ನ ಸಲಹೋ ಪುರಂದರವಿಠಲ
ಗೆಜ್ಜೆಯ ಕಟ್ಟಿದವ, ಖಳರೆದೆಯ ಮೆಟ್ಟಿದವ
ತಾಳವ ತಟ್ಟಿದವ, ಸುರರೊಳು ಸೇರಿದವ
ಗಾಯನ ಪಾಡಿದವ, ವೈಕುಂಠಕೆ ಓಡಿದವ
ಪುರಂದರವಿಠಲನ್ನ ಧ್ಯಾನವ ಮಾಡಿದವ
ಹರಿ ಮೂರ್ತಿ ನೋಡಿದವ
ವಾಲಿಯಂತೆ ಎದುರು ವಾದಿಸುತಿರಲಿಲ್ಲ
ಭೃಗುಮುನಿಯಂತೆ ನಿನ್ನ ಎದೆಯ ತುಳಿಯಲಿಲ್ಲ
ಭೀಷ್ಮನಂತೆ ನಿನ್ನ ಹಣೆ ಒಡೆಯಲಿಲ್ಲ
ಕೊಂಕಣದ ಎಮ್ಮೆಗೇ ಕೊಡತಿಯೇ ಮದ್ದೆಂದು
ಅವರೇ ಮದ್ದು ನಿನಗೆ ಪುರಂದರವಿಠಲ
ಅನ್ನ ಹುಟ್ಟಿದರೆ ಬಟ್ಟೆ ದೊರಕಲಿಬೇಡ
ಬಟ್ಟೆ ದೊರಕಿದರೆ ಇಂಬು ತೋರಲಿಬೇಡ
ಇಂಬು ನಿನ್ನ ಪಾದಾರವಿಂದದಲಿ
ಸಂತೋಷ ತೋರಿಸಯ್ಯ
ಇಂದಿರಾರಾಧ್ಯ ಶ್ರೀ ಪುರಂದರವಿಠಲ
ಬಿಲ್ವಪತ್ರಿಯ ಮುತ್ತು ಬೆಡಗಿನಾಭರಣ
ತಲೆ ಬಾಗಿ ಅಡಿಗಡಿಗಡಿಗೆ ಶೃಂಗರಿಸಿ
ವಿಲಸಿತ ಪುರಂದರವಿಠಲಗರ್ಪಿಸಬೇಕು
ಭವ ವಿಮೋಕ್ಷ ಅವರವರ ಗತಿಗಳು
ಜೀವ ಜೀವರಿಗೆ ಭೇದ, ಜೀವ ಜಡರಿಗೆ ಭೇದ
ಜಡಜಡಕೆ ಭೇದ, ಜಡಪರಮಾತ್ಮಂಗೆ ಭೇದ
ಇಂತು ಜ್ಞಾನವು ನಿತ್ಯವಾಗಲೆಂದು
ಸಂತತವರದ, ಶ್ರೀಪತಿ ಪುರಂದರವಿಠಲರೇಯ
ಇಂತು ಜ್ಞಾನವು ನಿತ್ಯವಾಗಲಿ ಎನಗೆ
ದಾಸನಾಗದವನೆಲ್ಲಿ ಪೋದರಾಭಾಸ
ದಾಸನೆಂದೆನಿಸಿದ ಭಾರತಿಯ ಗಂಡ
ಸತ್ಯಲೋಕವನಾಳ್ವ ಶೌಂಡ
ದಾಸರ ಹೃದಯದಿ ಮಿನುಗುವ ಶ್ರೀಶವಾಸ್ವಾದಿವಂದ್ಯ
ದ್ವಿಸಾಶಿರಂಬಕ ಶರಣ್ಯ
ದಾಸರಿಗೊಲಿವ ಶ್ರೀಪುರಂದರವಿಠಲ
ಜನ್ಮ ವ್ಯರ್ಥವಾಯಿತು, ಒಂದೇ ಹರಿಗೋಲು ವೈಕುಂಠಕೆ
ನಿನ್ನವಧಾನವು ಕಂಡಿಲ್ಲ ಹರಿ
ಆದಿ ಮೂರುತಿ ಶ್ರೀಪುರಂದರವಿಠಲ
ನಿನ್ನವಧಾನವು ಕಂಡಿಲ್ಲ
ನಿನ್ನ ಪಾದತೀರಥದಲಿ ನಡೆಯಲಿ ಎನ್ನ ಮನ
ಹರಿ ನಾಮವೆಂಬಂಥಾ ಕಲ್ಪವೃಕ್ಷ ಹುಟ್ಟಿತಯ್ಯ
ನೆರಳು ಸೇರಲುಂಟು ಫಲವು ಮೆಲ್ಲಲುಂಟು
ಒರೆವ ನಾಲಗೆಯಲಿ ನಾಮತ್ರಯಂಗಳುಂಟು
ಇದೇ ಮುನಿಜನರ ಮನೆಯ ಕೊನೆಯ ಠಾವೊ
ಇದೇ ಬ್ರಹ್ಮಾದಿಗಳ ಸದಮಲ ಹೃದಯ ಪೀಠ
ಇದೇ ದ್ವಾರಾವತಿ ಇದೇ ಕ್ಷೀರಾಂಬುಧಿ
ಇದೇ ಪುರಂದರವಿಠಲನ ವೈಕುಂಠ ಮಂದಿರ
ನವವಿಧಭಕುತಿ, ಕಂಡ ಕಂಡವರಿಗುಂಟೆ?
ದೇವ ನಿನ್ನ ಭಕುತಿ ಸುಖಾನುಭವ ಸೂರೆ
ಕಂಡರೆ ಬಾರದು, ಕಲಿತರೆ ಬಾರದು
ಪುರಂದರವಿಠಲ ನಿನ್ನ ದಯವಾಗದನಕ
ನಾಡುಗಳೆಷ್ಟು ಕೊಟ್ಟನು ಹೇಳಯ್ಯ?
ಪ್ರಹ್ಲಾದನು ನಿನಗೆ ಏನು ಕೊಟ್ಟನು ಸ್ವಾಮಿ?
ನಾನೇನು ಕೊಡದೆ ಹೋದೆನು ಹೇಳಯ್ಯ?
ಅಂದಿನವರಿಗೆ ನೀನು ಏನಾದರೂ ಕೊಟ್ಟದ್ದಿದ್ದು
ಇಂದೇನು ದೊರಕದೆ ಹೋಯಿತೆ?
ಅಂದು ನೀ ಸಿರಿವಂತನೆ – ಇಂದು ನೀ ಬಡಾವನೇ?
ಇದು ಏನು ವಿಚಿತ್ರ ಪುರಂದರವಿಠಲ
ನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆ
ನಿನ್ನ ಛತ್ರಚಾಮರ ಪಿಡಿದೇಳುವೆ
ನೀರ ನೀವಳಿಸಿಕೊಂಡು ಕೊಬ್ಬುವೆನು
ಬಿಡೆನು ಬಿಡೆನು ನಿನ್ನ ಚರಣಕಮಲವ
ಪುರಂದರವಿಠಲ ನಿನ್ನ ಪಾದವ ಬಿಡೆನು
ಅನ್ಯ ದಾಸನಾದರೆ, ಲೋಕ ನಗರೆ?
ನಿನ್ನ ಚರಣ ಯುಗ್ಮವ ಪಿಡಿಸಿ
ಎನ್ನ ಕಾಯೋ ಪುರಂದರವಿಠಲ
ನಿನ್ನ ಭಕ್ತಿಯೆಂಬೊ ಸಂಕಲೆಯ ಹಾಕಿ
ನಿನ್ನ ದಾಸರ ಕೈಯ್ಯ ಎನ್ನ ಒಪ್ಪಿಸಿಕೊಟ್ಟು
ನಿನ್ನ ಮುದ್ರಿಕೆಯಿಂದ ಘಾಸಿ ಮಾಡಿಸೋ ಕೃಷ್ಣ
ನಿನ್ನ ವೈಕುಂಠದುರ್ಗದಲ್ಲಿ, ಎನ್ನ ಸೆರೆಯಿಟ್ಟು
ಚೆನ್ನಾಗಿ ಸಲಹೋ ಶ್ರೀಪುರಂದರವಿಠಲ
ನಿನ್ನ ಕಾಡಿದೆ ನಾನು, ನಿನ್ನ ಮುಂದೆ ಎನ್ನ ಬಡತನ ಪೇಳಿಕೊಂಡು
ಅನಂತ ಬಗೆಯಿಂದ ಕೊಂಡಾಡುವೆನು ವಿಠಲ
ಎನ್ನ ಭಾರ ನಿನ್ನದು, ಅನಂತಕ್ಷಣಕೆ
ಮುನ್ನಿ ಪೇಳುವದೆಲ್ಲ, ಉಪಚಾರವೋ ಸ್ವಾಮಿ
ಘನ್ನ ಪಂಡಾರಿರಾಯಾ, ರನ್ನ ಪ್ರಸನ್ನ
ಸಂಪನ್ನಮತಿಯ ಕೊಡು ಪುರಂದರವಿಠಲ
ಎನ್ನೊಳಿದ್ದವ ನೀನಾದೆ
ನಿನ್ನ ದಾಸ ನಾನಾದೆ
ಇನ್ನು ಸಾಕದಿರಲು ನಗರೇ ನಿನ್ನ ದಾಸರು
ಘನ್ನ ಮಹಿಮ ಪುರಂದರವಿಠಲರೇಯ
ನಿನ್ನನೆ ಬೇಡಿ ಬೇಸರಿಸುವೆನಯ್ಯ
ನಿನ್ನ ಕಾಲನು ಪಿಡಿವೆ, ನಿನ್ನ ಹಾರಯಿಸುವೆ
ನಿನ್ನ ತೊಂಡರಿಗೆ ಕೈಗೊಡುವೆ
ನಿನ್ನಂತೆ ಸಾಕಬಲ್ಲವನು ಇನ್ನುಂಟೆ
ಘನ್ನ ಪುರಂದರವಿಠಲ ದೇವರ ದೇವ
ನಿನ್ನ ರುದ್ರ ಮೂರುತಿಗೆ ನಮೋ ನಮೋ
ನಿನ್ನ ಇಂದ್ರ ಮೂರುತಿಗೆ ನಮೋ ನಮೋ
ನಿನ್ನ ಚಂದ್ರ ಮೂರುತಿಗೆ ನಮೋ ನಮೋ
ನಿನ್ನ ಸ್ಥಾವರ ಮೂರುತಿಗೆ ನಮೋ ನಮೋ
ನಿನ್ನ ಜಂಗಮ ಮೂರುತಿಗೆ ನಮೋ ನಮೋ
ನಿನ್ನ ಶ್ರೀ ಮೂರುತಿಗೆ ನಮೋ ಪುರಂದರವಿಠಲ
ದಿನಂಪ್ರತಿ ಅನ್ನ ಉದಕ ವಸ್ತುಗಳು ಕಾಣದೆ ಇರಬೇಕು
ಬೆನ್ಹತ್ತಿ ರೋಗಗಳು ಹತ್ತಿ ಇರಲು ಬೇಕು
ತನ್ನವರ ಕೈಯಿಂದ ಛೀ ಎನಿಸಿಕೊಳ್ಳಬೇಕು
ಪನ್ನಗಶಯನ ಶ್ರೀ ಪುರಂದರವಿಠಲ
ನಿನ್ನ ಉಂಗುಟವು, ಬ್ರಹ್ಮಾಂಡ ನುಂಗಿತು
ನಿನ್ನ ನಖ, ಸುರನಧಿಯ ತಂದಿತು
ನಿನ್ನ ಕರ, ಮಧುಕೈಟಭರನೊರಸಿತು
ನಿನ್ನ ಸರಿತೋಳು, ಶ್ರೀ ಲಕುಮಿಯನಪ್ಪಿತು
ನಿನ್ನ ಪಾದದ ನೆನಹೆ,
ಸಕಲ ಸಂಪದ ಪುರಂದರವಿಠಲ
ನಿತ್ಯ ಪುತ್ರಭಾವ ಬೊಮ್ಮಪ್ರಾಣರಿಗೆ
ನಿತ್ಯ ಪೌತ್ರಭಾವ ಗರುಡ ಶೇಷ ರುದ್ರರಿಗೆ
ನಿತ್ಯ ಭೃತ್ಯಭಾವ ಇಂದ್ರ ಕಾಮ ಆತ್ಮ ಜೀವರಿಗೆ
ಇಂತೆಂದ ಪುರಂದರವಿಠಲ
ನಿನಗೆ ನೀನೇ ಪ್ರೀತಿ
ನಿನಗೆ ನೀನೇ ಭಕ್ತ
ನಿನಗೆ ನೀನೇ ದ್ವೇಷಿ
ನಿನಗೆ ನೀನೇ ಜ್ಞಾನಿ
ನಿನಗೆ ನೀನೇ ಮಾಳ್ಪೆ ಪುರಂದರವಿಠಲ
ನೀನೇ ಸ್ವತಂತ್ರ, ಅಸ್ವತಂತ್ರರವರು
ನೀನೇ ಸಾರಾತ್ಮಕನಾಗಿ ಸ್ವೀಕರಿಸುವವ
ಜ್ಞಾನ ನಿನ್ನಧೀನ ಕರ್ಮ ನಿನ್ನಧೀನ
ಅನಾದಿಕಾಲದಿ ಇರುವ ಜೀವರಿಗೆ
ನೀನೇ ಸುಖವನೀವ, ನೀನೇ ದು:ಖವನೀವ
ಜೀವ, ಕರ್ಮ, ಜ್ಞಾನ ಅನಾದಿಗಳು ನಿನ್ನಧೀನವಯ್ಯ
ಅನಾದಿಕರ್ಮ ನೀನೇ ಪುರಂದರವಿಠಲ
ನೀನೇ ಸಲಹೋ ನಿನ್ನಡಿ ಪೊಂದಿದವರ
ಭಾವಿಯ ನೀರ ಕುಡಿಯುವ ಮಾನವರುಂಟೆ?
ಹರಿಯ ಸಿರಿಚರಣವಿರಲು
ಬರಡು ದೈವಗಳನ್ನೇಕೆ ಭಜಿಸುವೆ ಮನವೇ?
ಸಿರಿರಮಣ ಬೇಲೂರ ಚೆನ್ನಿಗರಾಯ
ಪುರಂದರವಿಠಲನಿರಲು ಬರಡು ದೈವಗಳನ್ನೇಕೆ ಭಜಿಸುವೆ
ನಿಮಿಷವೋ ನಿಮಿಷಾರ್ಧವೋ ಕಾಣಬಾರದು
ಹಾರಲೇಕೆ ಪರಧನಕೆ ಪರಸತಿಗೆ?
ಹಾರುವನ ಕಟ್ಟಬೇಕು ಹಾರುವನ ಕುಟ್ಟಬೇಕು
ಹಾರುವನ ಕಂಡರೆ ಕೆನ್ನೆಯ ಮೇಲೆ ಹಾಕಬೇಕು
ಹಾರಲೇಕೆ ಪರಧನಕೆ ಪರಸತಿಗೆ
ಊರೊಳಗೆ ಐದು ಮಂದಿ ಹಾರುವರೈದಾರೆ
ನೀನೇ ವಿಚಾರಿಸಿಕೋ ಪುರಂದರವಿಠಲ
ನೆಲ್ಲಿಕಾಯಿಯಷ್ಟು ಮಣ್ಣು ನಿಲಿಸಿ ನೀರೊಳು
ತೊಳೆದು ಬಲಗೈಗೆ ಐದು ಮಣ್ಣು
ಎಡಗೈಗೆ ಏಳುಮಣ್ಣು
ಜೋಡುಪಾದಕ್ಕೆ ಐದೈದು ಮಣ್ಣು
ಐದುಕಡೆಯೊಳಿಟ್ಟು ಪುರಂದರವಿಠಲ ಎನ್ನು
ನೆನಿಯೆ ಮನವನಿತ್ತೆ ಪೊಗಳೆ ನಾಲಿಗೆ ಇತ್ತೆ
ಬೆಲೆಯಿಲ್ಲದನಂತ ನಾಮಗಳಿತ್ತೆ ನೋಡುವ ಕಂಗಳನಿತ್ತೆ
ಕೇಳೆ ಕಿವಿಗಳನಿತ್ತೆ ಪರಿಚರಿಯವ ಮಾಡಲು ತನುವನಿತ್ತೆ
ವೃದ್ಧಿ ಯೌವನವಿತ್ತೆ ಹರಿದಿನವನಿತ್ತೆ
ಇನ್ನು ನಿನ್ನ ಕರುಣಕೆ ಸರಿಯುಂಟೆ ಪುರಂದರವಿಠಲ
ಪಾಡೆದರೆನ್ನೊಡೆಯನ ಪಾಡುವೆ
ಬೇಡಿದರೆನ್ನೊಡೆಯನ ಬೇಡುವೆ
ಕಾಡಿದರೆನ್ನೊಡೆಯನ ಕಾಡುವೆ
ಒಡೆಯಗೆ ಒಡಲನು ತೋರುವೆ
ಎನ್ನ ಬಡತನವ ಬಿನ್ನಹ ಮಾಡುವೆ
ಒಡೆಯ ಶ್ರೀ ಪುರಂದರ ವಿಠಲನ
ಅಡಿಗಳ ಸಾರಿ ಬದುಕುವೆ ಸೇರಿ ಬದುಕುವೆ.
ಇರದು ಮಾಡಿದ ಶುಭಕರ್ಮ
ಎರಡು ಮೂರು ಭಾಗ ಅನ್ನವಿತ್ತವನಿಗಯ್ಯ
ಉದರದಲಿ ಉಂಡ ಅನ್ನದೊಂದು ಭಾಗವುಳಿವುದು
ಪೊಡವಿಯಲಿ ಪುರಂದರವಿಠಲನು ಬಲ್ಲಪರರ ಮನೆಯ ಬಾಗಿಲ ಕಾಯ್ದು ಪರಿತಪಿಸುವುದಕ್ಕಿಂತ
**********
ಪರರ ಮನಸು ಹಿಡಿದು ತಿರಿತಿಂಬುವುದಕ್ಕಿಂತ
ಮುರಹರನ ದಾಸರ ಮನೆಯ ಭೋಜನವೇ ಲೇಸು
ಪುರಂದರವಿಠಲ, ನಿನ್ನ ಊಳಿಗದವನ ಸುಖ ಲೇಸು
ಪ್ರಾಯಶ್ಚಿತ್ತದಲಿ ನಿನ್ನ ನಾಮ ವೆಗ್ಗಳವಯ್ಯ
ಪಾತಕವ ನಾ ಮಾಡಿದೆನು ಪ್ರಾಯಶ್ಚಿತ್ತವ ನೀಡು
ಇನ್ನೇತರ ಭಯವಯ್ಯ ಪುರಂದರವಿಠಲ
ಅಟ್ಟು ಮಾಣಿಗೆ ಮಣೆಯ ಹಾಕಿಕ್ಕಬೇಕು
ಅರ್ಜುನನಂತೆ ನಿನ್ನ ಬಂಡಿಯ ಬೋವನ
ಮಾಡಿ ಕುದುರೆ ಲಗಾಮು ಹಿಡಿಸಲಿಬೇಕು
ಅಹಾ ಅನುದಿನ ಅರ್ಚಿಸಿ ಪೂಜಿಸಿ
ಮೋಸ ಹೋದೆ ಸ್ವಾಮಿ ಪುರಂದರವಿಠಲ
ವಿಠಲನಂಘ್ರಿಯ ನೆನೆಯದವರಿಗೆ
ಪಾಪದ ಭೀತಿ, ನಿರಯದಭೀತಿ ಶ್ರೀ
ಗೋಪಾಲನ ದಾಸನಾಗದವರಿಗೆ
ಕಾಲನ ಭೀತಿ ಕರ್ಮದ ಭೀತಿ ಶ್ರೀ-
ಲೋಲನ ಒಮ್ಮೆ ನೆನೆಯದವಗೆ
ಅತಳದಲ್ಲಿರಿಸೋ, ಸುತಳದಲ್ಲಿರಿಸೋ
ತಳಾತಳ ಪಾತಾಳದಲ್ಲಿರಿಸೋ
ಮತ್ತಾವಯೋನಿಯಲ್ಲಿರಿಸೋ
ಎಲ್ಲಿರಿಸಿದರೂ ನಾ ಹೋಹೆನಯ್ಯ
ಎಂತೆಂತು ನಡೆದು ನಡೆಸಿಕೊಂಬುವೆ
ಅಂತಂತು ನಡೆಯುವೆ ಶ್ರೀ ಪುರಂದರವಿಠಲ
ಅಂಗುಟದಲ್ಲಿ ಪೆಣ್ಣ ಪೆತ್ತವರುಂಟೆ?
ಮಿಕ್ಕಾದ ದೇವರಿಗೆ ಈ ಸೊಬಗು ಉಂಟೆ?
ಮೊರೆ ಹೊಕ್ಕೆ, ಮೊರೆ ಹೊಕ್ಕೆ ಕಾಯಯ್ಯ ಪುರಂದರವಿಠಲ
ಉಪಸಾಧನವರಿಯೆನು, ಒಮ್ಮೆ ನಿನ್ನ ನೆನೆವೆನು
ಅಪರಾಧಿಗಾದಡೇನು, ಅಭಯಪ್ರದನು ನೀದು
ವಿಪರೀತ ಮಾಡದೆನ್ನನು, ಪುರಂದರವಿಠಲ ನಂಬಿದೆನೊ
ವಾಲಿಯಂತೆ ನಿನ್ನ ಮೂದಲಿಸಬೇಕು
ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು
ಪುರಂದರವಿಠಲ ನಿನ್ನ ನಂಬಿರಬೇಕು
ಸಕಲ ಶೃತಿಪುರಾಣಗಳೆಲ್ಲದಾವನ ಮಹಿಮೆ |
ಸುಖಪೂರ್ಣ ಸುರವರಾರ್ಚಿತಪಾದ |
ಶಕಟಮರ್ದನ ಶಾರದೇಂದು- |
ವಕ್ತ್ರ ರುಚಿರವರ ಕಲ್ಯಾಣರಂಗ |
ರುಕ್ಮಿಣೀರಮಣ ಪರಿಪೂರ್ಣ ನಮ್ಮ ಪುರಂದರವಿಠಲ ||
*******
ಶ್ರೀಪತಿಯ ಕಟಾಕ್ಷವೀಕ್ಷಣವು ತಪ್ಪುವಾಗ |
ಅನೇಕ ಬಂಧುಗಳು ಲಕ್ಷವೈದ್ಯರುಗಳು |
ಇರಲಾಗಿ ಕಣ್ಣ ಕಣ್ಣ ಬಿಡುವರು |
ತಾಪಸಿ ಅರಣ್ಯದೊಳಗೆ ಒಬ್ಬ ಒಂಟಿಯಾಗಿರಲು |
ಅಂಜಬೇಡೆಂದು ನಮ್ಮ ಕಂಜನಾಭನೆ ಬಂದು |
ಆಪತ್ತುಗಳ ಪರಿಹರಿಸುವ ನಮ್ಮ ಪುರಂದರವಿಠಲ ||
ಮಲಗಿ ಪಾಡಿದರೆ ಕುಳಿತು ಕೇಳುವನು
ಕುಳಿತು ಪಾಡಿದರೆ ನಿಂತು ಕೇಳುವನು
ನಿಂತು ಪಾಡಿದರೆ ನಲಿದು ಕೇಳುವನು
ನಲಿದು ಪಾಡಿದರೆ ಸ್ವರ್ಗ ಸೂರೆ ಬಿಟ್ಟೆನೆಂಬ ಪುರಂದರವಿಠಲ
******
ಶತ್ರು ವಾಗಲಿ ಜೋರ ಚಂಡಾಲ ನಾಗಲಿ
ಪಿತೃ ಘಾತಕಿಯಾಗಲಿ ಪ್ರೀತಿ ಮಾಡಲುಬೇಕು
ಅತಿಥಿಯಾಗಿ ಮಧ್ಯಾಹ್ನ ಅವ ಬಂದುಂಡರೆ
ಸದ್ಗತಿಯನೀವ ಪುರಂದರವಿಠಲ
********
following are from
Source : ಹರಿದಾಸ ಸಾಹಿತ್ಯ ಉಗಾಭೋಗ
ಪುರುಷರಿಗೆ ಪುರುಷರು ಮೋಹಿಸುವುದುಂಟೇ?
ಪುರುಷ ಬ್ರಹ್ಮಾದಿಗಳು ನಿನ್ನನ್ನು ಮೋಹಿಸುವರು
ತಿರುವೆಂಗಳಪ್ಪ ಶ್ರೀ ಪುರಂದರ ವಿಠಲ.”
ತುಳಸಿ ಇರಲು ತುರುಚಿಯನು ತರುವಿರೆ |
ಗಂಗೆಯಿರಲು ತೋಡಿದ ಕೂಪದಿ
ಪಾನವ ಮಾಡಿದೆ | ರಾಜಹಂಸವಿರಲು ಕೋಯೆಂದು
ಕೂಗುವ ಕೂಳಿಗೆ ಹಾಲೆರೆದೆ
ಬಾವನ್ನವಿರಲು ಬೇವಿನ ನೆಳಲೊಳೊರಗಿದೆ |
ತಾಯಿ ಮಾರಿ ತೊತ್ತ ತರುವ
ಮಾನವನಂತೆ | ಪುರಂದರವಿಠಲ ನೀನಿರಲನ್ಯತ್ರ
ದೈವಂಗಳಯೆಣಿಸಿದೆ ||
ಪುರಂದರದಾಸರ ಉಗಾಭೋಗಗಳು 1
ಮನಶುದ್ದಿಯಿಲ್ಲದವಗೆ ಮಂತ್ರದ ಫಲವೇನು |
ಏಳುತ ಗೋವಿಂದಗೆ ಕೈಮುಗಿವೆ
ಕಣ್ಣಿಲಿ ತೆಗೆದು ನೋಡುವೆ ಶ್ರೀಹರಿಯ
ನಾಲಿಗೆ ತೆಗೆದು
ನಾರಾಯಣ, ನರಹರಿ
ಸೋಳಸಾಸಿರ ಗೋಪಿಯರರಸ
ಎನ್ನಾಳುವ ದೊರೆ ಪುರಂದರವಿಠಲ
ಎಂದಿಗಾದರೂ ನಿನ್ನ ಪಾದಾರವಿಂದವೇ
ಗತಿಯೆಂತು ನಂಬಿದೆನೋ
ಬಂಧು ಬಳಗವ ಬಿಟ್ಟು ಬಂದೆ
ನಿನ್ನ ಮನೆಗಿಂದು
ಮಂದರಧರ ಗೋವಿಂದ
ಪುರಂದರವಿಠಲನೇ, ನೀನೇ ಬಂಧು
ಅನುಕೂಲವಿಲ್ಲದವರ ವರ್ಜಿಸಬೇಕು
ವಿನಯದಿ ಗುರುಹಿರಿಯರಲ್ಲಿ ಮನ್ನಣೆ ಬೇಕು
ಮನದಿ ತನ್ನ ತಾನೇ ತಿಳಿದುಕೊಳ್ಳಬೇಕು
ವನಜನಾಭನ ಭಕ್ತರ ಸಂಗವಿರಬೇಕು
ಜನರಪವಾದ ನಿಂದೆಗಂಜಿಕೊಳ್ಳಬೇಕು
ಪುರಂದರವಿಠಲನ್ನ ಚರಣಸ್ಮರಣೆ ಬೇಕು
ಒಂದೊಂದವತಾರದೊಳನಂತ ವ್ಯಾಪಾರ
ಒಂದೊಂದವಯವದೊಳನಂತ ವ್ಯಾಪಾರ
ಒಂದೊಂದುರೋಮದೊಳು ಅಜಭವಾದಿ ಕಾರ್ಯ
ಒಂದೊಂದೆ ನಿನ್ನ ಮಹಿಮೆ ಪುರಂದರವಿಠಲ
ಕಣ್ಣಲ್ಲಿ ನೀರಿಲ್ಲ ಮನದಲ್ಲಿ ಕರಗಿಲ್ಲ
ಅತ್ತೆ ಸತ್ತರೆ ಸೊಸೆ ಅಳುವಂತೆ
ಅತ್ತೆ ಅತ್ತೆ ಎಂತೆಂದು ನಾನತ್ತೆ
ಅತ್ತೆ ಸತ್ತರೆ ಎದೆ ಎರಡು ಪರಿಯಾಯಿತೆಂದು
ಅತ್ತೆ ಅತ್ತೆ ಎಂದು ಅತ್ತೆ ಪುರಂದರ ವಿಠಲನ
ದಾಸರೆಲ್ಲರ ಮುಂದೆ ಹಾಡಿ ಹಾಡಿ ನಾನತ್ತೆ
ಆರು ಮುನಿದು ನಮಗೇನು ಮಾಡುವರಯ್ಯ
ಊರು ಒಲಿದು ನಮಗೇನು ಮಾಡುವದಯ್ಯ
ಕೊಳಬೇಡ ನಮ್ಮೊಡಲಿಗೆ ತುಸವನು
ಇಡಬೇಡ ನಮ್ಮ ಶುನಕಗೆ ತಳಿಗೆಯ
ಆನೆಯ ಮೇಲೆ ಬಪ್ಪನ ಶ್ವಾನ ಕಚ್ಚಲು ಬಲ್ಲುದೇ?
ದೀನನಾಥ ನಮ್ಮ ಪುರಂದರವಿಠಲನುಳ್ಳತನಕ
ಆರು ಮುನಿದು ನಮಗೇನು ಮಾಡುವರಯ್ಯ |
ಒಡವೆಯನೆ ಗಳಿಸಿದರೆ, ಚೋರರ ಭಯವುಂಟು
ಸೊಬಗುಳ್ಳ ಮಡದಿಯನೆ ಗಳಿಸಿದರೆ, ಜಾರ ಭಯವುಂಟು
ಪೊಡವಿಯನು ಗಳಿಸಿದರೆ, ಪರರಾಜರ ಭಯವುಂಟು
ನಿನ್ನ ಪಾದವನೆ ಗಳಿಸಿದರೆ,
ಮತ್ಯಾರ ಭಯವಿಲ್ಲ ಪುರಂದರವಿಠಲ
ಏಕಾನೇಕ ಮೂರುತಿ ಲೋಕವೆಲ್ಲ ಮೂರುತಿ
ಸನಕಾದಿಗಳೆಲ್ಲ ಸಾನ್ನಿಧ್ಯ ಮೂರುತಿ
ನಮ್ಮ ಘನ ಮಹಿಮ ಬೊಮ್ಮ ಮೂರುತಿ
ಪುರಂದರವಿಠಲನೇ ಕಾಣಿರೋ
ಅಚ್ಯುತನ ಭಕುತರಿಗೆ ಮನಮೆಚ್ಚದವನು ಪಾಪಿ
ಆ ನರನೊಳಾಡಿ, ನೋಡಿ ನುಡಿಯೆ
ಮನುಜ ವೇಷದ ರಕ್ಕಸನೊಳಾಡಿ ನುಡಿದಂತೆ
ಸಚ್ಚಿದಾನಂದಾತ್ಮ ಪುರಂದರವಿಠಲನು
ಮೆಚ್ಚ ಮೆಚ್ಚನು ಕಾಣೋ ಎಂದೆಂದಿಗೂ
ಒಡೆಯನುಳ್ಳ ತೊತ್ತಿಗ್ಯಾತರ ಚಿಂತೆ?
ಎನ್ನೊಡೆಯ, ದ್ವಾರಕವಾಸ ಎಂಬೊ ಛತ್ರವಿರೆ
ಇಂದೆಗೆಂಬುವ ಚಿಂತೆ, ನಾಳೆಗೆಂಬೋ ಚಿಂತೆ
ನಾಡದ್ದಿಗೆಂಬೋ ಚಿಂತೆ ಯಾತಕಯ್ಯ
ಅಡಿಗಡೆಗೆ ನಮ್ಮೊಡನಿದ್ದು
ಕಾವ ಭಕ್ತರೊಡೆಯ
ಪುರಂದರವಿಠಲನಿರಲಿಕ್ಕೆ
ಒಬ್ಬರ ಭಂಟನಾಗಿ ಕಾಲ ಕಳೆವುದಕ್ಕಿಂತ
ನಿರ್ಬಂಧವಿಲ್ಲದೆ ತನ್ನಿಚ್ಚೆಯೊಳಿದ್ದು
ಲಭ್ಯವಾದೊಂದು ತಾರಕ ಸಾಕು ಎನಗೆ
ಅಬ್ಬರ ಒಲ್ಲೆನಯ್ಯ ಅಷ್ಟರಲ್ಲೆ ಸಂತುಷ್ಟಗರ್ಭಿ
ಕರುಣಾಕರ ಪುರಂದರವಿಠಲ ಲಭ್ಯ
ಒಂದು ತಾರಕ ಸಾಕು ಸಾಕು
ಅಣಕದಿಂದಲಾಗಲಿ, ಡಂಬದಿಂದಲಾಗಲಿ
ಎಡಹಿದಡಾಗಲಿ, ಬಿದ್ದಡಾಗಲಿ
ತಾಕಿದಡಾಗಲಿ, ತಾಕಿಲ್ಲದಡಾಗಲಿ
ಮರೆದು ಮೊತ್ತೊಮ್ಮೆಯಾಗಲಿ
ಹರಿಹರಿ ಅಂದವನಿಗೆ, ನರಕದ ಭಯವ್ಯಾಕೆ?
ಯಮಪಟ್ಟಣ ಕಟ್ಟಿದರೇನು,
ಯಮಪಟ್ಟಣ ಬಟ್ಟೆ ಬಯಲಾದರೇನು
ಹರಿದಾಸರಿಗೆ ಪುರಂದರವಿಠಲ.
ಅಣುವಾಗಬಲ್ಲ ಮಹತ್ತಾಗಬಲ್ಲ
ರೂಪಾಗಬಲ್ಲ ಅರೂಪಾಗಬಲ್ಲ
ರೂಪ-ಅರೂಪೆರೆಡೊಂದಾಗಬಲ್ಲ
ವ್ಯಕ್ತನಾಗಬಲ್ಲ ನಿರ್ಗುಣನಾಗಬಲ್ಲ
ಸಗುಣ ನಿರ್ಗುಣ ಎರಡೊಂದಾಗಬಲ್ಲ
ಅಘಟಿತಘಟಿತಾಚಿಂತ್ಯಾದ್ಭುತಮಹಿಮ
ಸ್ವಗತಭೇದ ವಿವರ್ಜಿತ ಪುರಂದರವಿಠಲ
ಒಂದಕ್ಷರವ ಪೇಳಿದವರ ಉರ್ವಿಯೊಳು ಅವರೇ ಗುರು
ಎಂದು ಇಳೆಯೊಳು ಬಹುಮಾನ ಮಾಡಬೇಕು ಕುಂದದೆ
ಒಂದಿಷ್ಟು ಅವಮಾನ ಮಾಡಿದರೆ ತಪ್ಪದೆ
ಒಂದುನೂರು ಶ್ವಾನಜನ್ಮ ಕೋಟಿ ಹೊಲೆ ಜನ್ಮ
ತಂದೀವನ ಪುರಂದರವಿಠಲ
ಏನ ಓದಿದರೇನು ಏನ ಕೇಳಿದರೇನು
ಹೀನಗುಣಗಳ ಹಿಂಗದಜನರು
ಮಾನಾಭಿಮಾನವ ನಿನಗೊಪ್ಪಿಸಿದ ಮೇಲೆ
ನೀನೇ ಸಲಹಬೇಕೋ ಪುರಂದರವಿಠಲ
ಅಣು-ರೇಣು-ತೃಣದಲ್ಲಿ ಪರಿಪೂರ್ಣನಾಗಿರುವ
ಗುಣವಂತನೇ ನಿನ್ನ ಮಹಿಮೆ ಗಣನೆ ಮಾಡುವರಾರು?
ಎಣಿಸಿ ನೋಡುವಳಿನ್ನು ಏಣಾಕ್ಷಿ ಸಿರಿದೇವಿ
ಜ್ಞಾನ ಸುಗುಣತತ್ವ ವೇಣುಗೋಪಾಲ ಹರೆ
ಕಾಣಿಸೋ ನಿನ್ನ ಮಹಿಮೆ ಪುರಂದರವಿಠಲ |
ಆರು ಅಕ್ಷರವುಳ್ಳ ವ್ಯಾಹೃತಿಯಿಂದ ಓಂಕಾರ
ವಿಸ್ತಾರವಾಗುವದು ಕೇಳಿ
ಈರೀತಿ ಇಪ್ಪತ್ತನಾಲ್ಕು ಅಕ್ಷರದಿಂದ
ತೋರುತಲಿ, ಗಾಯತ್ರಿ ರಚಿಸಿದ ಹರಿಯು,
ಮೆರೆವುದೈ ಪುರುಷಸೂಕ್ತಾದಿ ಅನಂತ ವೇದರಾಶಿ
ದೊರೆ ಎಂದು ಪುಗಳುವ ಓಂಕಾರ ಶ್ರೀಕಾರ
ಮೆರೆದು ದೈವತೊಂದು ಲಕ್ಷ್ಯಗಳು
ಈರೀತಿ, ಅಶೇಷಗುಣಧಾರಯೆಂದು
ನಾರಾಯಣೋದಪೂರ್ಣಗುಣಯುತ
ಭರದಿ ಜ್ಞಾನರೂಪ ಶಬ್ದನೋ
ಮೆರೆವ ದೇವೇಶ ಶತರ್ದನ
ಧರಿಸಿದ ಪುರಂದರವಿಠಲ |
ಅತಳದಲ್ಲಿರಿಸೋ ಸುತಳದಲ್ಲಿರಿಸೋ
ತಳಾತಳ ಪಾತಾಳದಲ್ಲಿರಿಸೋ
ಮತ್ತಾವ ಯೋನಿಯಲ್ಲಿರಿಸೋ
ನೀನೆಲ್ಲಿರಿಸಿದರೆ ನಾನಲ್ಲಿರದಾದೆನೆ?
ನೀನೆಂತು ನಡೆದು ನಡೆಸಿಕೊಂಬುವೆಯೋ
ನಾನಂತಂತೆ ನಡೆಯುವೆ ಪುರಂದರವಿಠಲ |
ಅನಾಮಿಕಾ ಮಧ್ಯದ ಎರಡನೇಗೆರೆ ಆದಿ
ಇನಿತು ಮಧ್ಯಾಂಗುಲಿ ಕೊನೆಗೆರೆಕೂಡಿಸಿ
ಮನುಮೂರ್ತಿ ಪರಿಮಾಣ ಅಂಗುಷ್ಟದಿಂದಲಿ
ಎಣಿಸು ತರ್ಜನಿಮೂಲ ಪರಿಯಂತರ
ಘನ ಹತ್ತುಗೆರೆ ಜಪ ಪುರಂದರವಿಠಲಗೆ
ಮನದಿ ಅರ್ಪಿಸುತ ಗಾಯತ್ರಿ ಜಪ |
ಅನ್ನ ಪಾನಾದಿಗಳೀಯೋ ಅಭ್ಯಾಗತ ಬ್ರಾಹ್ಮಣರಿಗೆ
ಅನ್ನ ಪಾನಾದಿಗಳೀಯೋ ಆ ಚಂಡಾಲ ಸಪ್ತರಿಗೆ
ಅನ್ನ ಪಾನಾದಿಗಳೀಯೋ ಅಂಧ ದೀನ ಕೃಪಣರಿಗೆ
ಹಸಿವೆಗೆ ಹಾಗವನಿಗರ್ಪಿಸೋ ಪುರಂದರವಿಠಲಗೆ |
ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ
ಆಪನ್ನ ರಕ್ಷಕನೆ ಪರಿಪಾಲಿಸು ಇನ್ನು
ಪನ್ನಂಗಶಯನ ಪುರಂದರವಿಠಲ
ಅಪರಾಧ ಹತ್ತಕೆ, ಅಭಿಷೇಕ ಉದಕ
ಅಪರಾಧ ನೂರಕೆ, ಕ್ಷೀರ ಹರಿಗೆ
ಅಪರಾಧ ಸಹಸ್ರಕೆ, ಹಾಲು ಮೊಸರು ಕಾಣೋ
ಅಪರಾಧ ಲಕ್ಷಕೆ, ಜೇನು ಘೃತ
ಅಪರಾಧ ಹತ್ತುಲಕ್ಷಕೆ, ಬಲುಪರಿ ಕ್ಷೀರ
ಅಪರಾಧ ಹೆಚ್ಚಿಗೆಗೆ, ಹತ್ತು ತೆಂಗಿನ ಹಾಲು
ಅಪರಾಧ ಕೋಟಿಗೆ, ಅಚ್ಚ ಜಲ
ಅಪರಾಧ ಅನಂತಕ್ಷಮಿಗೆ, ಗಂಧೋದಕ
ಉಪಮೆರಹಿತ ನಮ್ಮ ಪುರಂದರವಿಠಲಗೆ
ತಾಪಸೋತ್ತಮನ ಒಲುಮೆ ವಾಕ್ಯ |
ಅಪಾಯ ಕೋಟಿ ಕೋಟಿಗಳಿಗೆ ಉಪಾಯವೊಂದೇ
ಹರಿಭಕ್ತರು ತೋರಿಕೊಟ್ಟ ಉಪಾಯ ಒಂದೇ
ಪುರಂದರವಿಠಲನೆಂದು ಭೋರಿಟ್ಟು
ಕರೆವ ಉಪಾಯವೊಂದೇ
ಅರ್ಭಕನ ತೊದಲನುಡಿ ಅವರ ತಾಯಿತಂದೆ
ಉಬ್ಬಿ ಕೇಳುವರಯ್ಯ ಉರಗೇಂದ್ರಶಯನ
ಕೊಬ್ಬು ನಾನಾಡಿದರೂ ತಾಳಿ, ರಕ್ಷಿಸು ಎನ್ನ
ಕಬ್ಬುಬಿಲ್ಲನಪಿತ, ಪುರಂದರ ವಿಠಲ.
ಅಲ್ಲದ ಕರ್ಮವ ಆಚರಿಸಿದವ ಕೆಟ್ಟ
ಬಲ್ಲಿದರೊಳು ಸೆಣಸಿ ಮೆರೆದವ ಕೆಟ್ಟ
ಲಲ್ಲೆ ಮಾತಿನ ಸತಿಯರ ನಂಬಿದವ ಕೆಟ್ಟ
ಪುಲ್ಲನಾಭ ಸಿರಿಪುರಂದರವಿಠಲನ
ಮೆಲ್ಲಡಿಗಳ ನಂಬದವ ಕೆಟ್ಟ
ನರಗೇಡಿ ಬಲ್ಲಿದರೊಳು ಸೆಣೆಸಿದವ ಕೆಟ್ಟ |
ಅಲ್ಲಿ ವನಗಳುಂಟು ಆ ಪ್ರಾಕೃತವಾದ
ಫಲ ಪುಷ್ಪಗಳಿಂದೊಪ್ಪುತಲಿಹುದು
ಪಕ್ಷಿ ಜಾತಿಗಳುಂಟು ಅತಿವಿಲಕ್ಷಣವಾದ
ಕಿಲ ಕಿಲ ಶಬ್ಧವು ರಂಜಿಸುವ ನುಡಿಗಳು
ಮುಕುತರು ಬಂದು ಜಲಕೀಡೆಗಳ ಮಾಡಿ
ಕುಳಿತು ಸುಖಿಪರು ಇಂಥ ಸುಖ ಬೇಕಾದರೆ
ನೀಚ ವೃತ್ತಿಯ ಬಿಟ್ಟು ಪರಲೋಕ ಸುಖವನೀವ
ಪುರಂದರವಿಠಲನ ಭಜಿಸು ಜೀವ |
ಆಕಳ ಕಿವಿಗೆ ಯೆಣ್ಣೆ ಅಂಗೈ ಹಳ್ಳವಾಗಿರಬೇಕು
ಉದ್ದು ಮುಣಗುವಂತೆ ಇರಬೇಕು
ನೀರ ಸಾಕಾಗದೆ ಹೆಚ್ಚು ಕಡಿಮೆ ಸಾಕೆಂಬಷ್ಟು ಕುಡಿದರೆ
ಸಾಕಾರ ಪುರಂದರವಿಠಲ ಮದ್ಯಸಮ ಮಾಡುವ
ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು
ಮೋದದಿಂ ಸಲ್ಲಿಸುವ ಮನೋಭೀಷ್ಟವ
ಸಾಧುಜನರೆಲ್ಲ ಕೇಳಿ ಸಕಲ ನಿರ್ಜರರಿಗೆಲ್ಲ
ಮಾದವನೇ ನೇಮಿಸಿಪ್ಪನಧಿಕಾರವ
ಆದರಿಂದಲವರೊಳಗೆ ತಾ ನಿಂದು ಕಾರ್ಯಗಳ
ಬೇಧಗೋಳಿಸದೆ ಮಾಳ್ಪ ಪುರಂದರ ವಿಠಲ
ಅಂಬರದಾಳವನು ರವಿ ಶಶಿ ಬಲ್ಲರು
ಅಂತರಲಾಡುವ ಪಕ್ಷಿ ತಾ ಬಲ್ಲುದೇ ?
ಜಲದ ಪ್ರಮಾಣ, ತಾವರೆಗಲ್ಲದೆ
ಮ್ಯಾಲಿರುವ ಗಿಡಗಳು ತಾವು ಬಲ್ಲವೇ?
ಸುರತ ಸುಖವನೆಲ್ಲ, ಯುವಕನಲ್ಲದೆ
ಬಾಲಕತನದವರು ತಾವು ಬಲ್ಲರೇ?
ದೇವ ನಿನ್ನ ಮಹಿಮೆಯ ಜ್ಞಾನಿಗಳ
ಭಕುತಿಯ ನೀನೆ ಬಲ್ಲಯ್ಯ ಪುರಂದರವಿಠಲ
ಆದಿಸೃಷ್ಟಿಯಲಾರು ಮೊದಲೆ ಉದಿಸಿದರೇನು
ಅವರವರೆ ಅಧಿಕರಧಿಕರಯ್ಯ
ಕಾಲಾಜಯಾದಿಗಳು ಮೊದಲೆ ಉದಿಸಿದರೇನು
ಅವರವರೆ ಅಧಿಕಕರಯ್ಯ
ಅವರಂತರಂತರ ಅವರ ನೋಡಯ್ಯ
ಅವರವರೆ ಅಧಿಕರಧಿಕರಯ್ಯ
ಪುರಂದರವಿಠಲನ ಸಂತತಿ ನೋಡಯ್ಯ
ಅವರವರೆ ಅಧಿಕರಧಿಕರಯ್ಯ |
ಆದಿವಾರ, ಸಂಜೆ, ರಾತ್ರಿಲಿ
ಅಂಗಾರಕ, ಶುಕ್ರವಾರದಿ,
ಆದಿತ್ಯ, ಸೋಮಗ್ರಹಣದಿ,
ಅಮವಾಸಿ, ಹುಣ್ಣಿಮಿ, ದ್ವಾದಶಿಲಿ,
ವೈಧೃತಿ, ವ್ಯತೀಪಾತ ಸಂಕ್ರಮಣಗಳಲಿ
ತುಳಸಿ ತೆಗೆದರೆ, ಪುರಂದರವಿಠಲನು
ಮುನಿವನು ಕಾಣಿರೋ
ಆನೆಯ ಕಾಯ್ದಾಗ ಜ್ಞಾನವಿದ್ದದ್ದೇನೋ ?
ನಾನು ಒರರಲು ಈಗ ಕೇಳದಿದ್ದದ್ದೇನು ?
ದಾನವಾಂತಕ, ದೀನರಕ್ಷಕನೆಂಬೋ
ಮಾನ ಉಳಿಹಿಕೊಳ್ಳೊ ಶ್ರೀಪುರಂದರವಿಠಲ
ಆಯಸ್ಸು ಇದ್ದರೆ, ಅನ್ನಕೆ ಕೊರತಿಲ್ಲ
ಜೀವಕ್ಕೆ ಎಂದೆಂದಿಗೆ ತನುಗಳ ಕೊರತಿಲ್ಲ
ಸಾವು, ಹುಟ್ಟು ಎಂಬೋದು ಸಹಜ ಲೋಕದೊಳಗೆ
ಕಾಲಕಾಲದಿ ಹರಿಯ ಕಲ್ಯಾಣಗುಣಗಳ
ಕೇಳದವನ ಜನ್ಮ ವ್ಯರ್ಥ, ಪುರಂದರವಿಠಲ
ಆವಿನ ಕೊಂಬಿನ ತುದಿಯಲಿ
ಸಾಸಿವೆ ನಿಂತಿದ್ದ ಕಾಲವೆ
ನಿನ್ನ ನೆನೆದವ, ಜೀವನ್ಮುಕ್ತನಲ್ಲವೆ
ಸರ್ವಕಾಲದಲಿ ಒರಲುತ ನರಳುತ
ಹರಿಹರಿಯೆಂದವ ಜೀವನ್ಮುಕ್ತನೆಂಬುವುದು
ಏನು ಆಶ್ಚರ್ಯವಯ್ಯಾ ಪುರಂದರವಿಠಲ
ಆವಾವ ಯುಗದಲಿ ವಿಷ್ಣು ವ್ಯಾಪಕನಾಗಿ
ವಿಷ್ಣು ಇದ್ದಲ್ಲಿ ವಿಷ್ಣುಲೋಕಾಗಿಪ್ಪುದಾಗಿ
ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಸಾಯುಜ್ಯ
ಸಾದೃಶ್ಯಂಗಳು ಪಂಚವಿಧ ಮುಕುತಿ ದಾಯಕ
ಭರಿತ ನಮ್ಮ ಪುರಂದರವಿಠಲ
ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭ ಯೋಗ
ಇಂದಿನ ಕರಣ ಶುಭಕರಣ
ಇಂದು ಶ್ರಿ ಪುರಂದರವಿಠಲನ
ಸಂದರುಶನ ಫಲವೆನಗಾಯಿತು
ಇಂದಿಗೆಂಬ ಚಿಂತೆ ನಾಳಿಗೆಂಬಾ ಚಿಂತೆ ತೊತ್ತಿಗೇಕಯ್ಯ
ಒಡೆಯನುಳ್ಳನಕ ತೊತ್ತಿಗೇತರ ಚಿಂತೆ
ಅಡಿಗಡಿಗೆ ನಮ್ಮನಾಳುವ ಕಾವ ಚಿಂತೆಯವ-
ನೊಡೆಯ ಪುರಂದರವಿಠಲರಾಯನು ಇರುತಿರೆ
ಒಡೆಯನುಳ್ಳ ತೊತ್ತಿಗೇತರ ಚಿಂತೆ
ಇದೇ ಮುನಿಗಳ ಮನದ ಕೊನೆ ಠಾವು
ಇದೇ ಬ್ರಹ್ಮಾದಿಗಳ ಹೃತ್ಕಮಲದ ಠಾವು
ಇದೇ ಅರಿವ ಸುಜ್ಞಾನಿಗಳಿಗೆ, ವೈಕುಂಠವು
ಇದೇ ದ್ವಾರಕವು, ಇದೇ ಕ್ಷೀರಾಂಬುಧಿ
ಇದೇ ಪುರಂದರವಿಠಲನ ಮನ ಮಂದಿರ
ಇಕೋ ನಮ್ಮ ಸ್ವಾಮಿಸರ್ವರಂತರ್ಯಾಮಿ
ಪ್ರಕಟ ಸಹಸ್ರನೇಮಿ ಭಕ್ತಜನ ಪ್ರೇಮಿ
ಒಳನೋಡಿ ನಮ್ಮ ಹೊಳೆವ ಪರಬ್ರಹ್ಮ-
ನರಿಯಬೇಕು ಮರ್ಮ
ವಸ್ತುವಿನ ನೋಡಿ ಸಮಸ್ತ ಮನಮಾಡಿ
ಅಸ್ತ ವಸ್ತು ಬೇಡಿ ಸಮಸ್ತ ನಿಚಗೂಡಿ
ಮಾಡು ಗುರು ಧ್ಯಾನ
ಮುದ್ದು ಪುರಂದರವಿಠಲನ ಚರಣವ
ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ
ಹರಿದಾಸನೆಂದೆನ್ನ ಕರೆವರು ಸಜ್ಜನರು
ಹರಿದಾಸರನು ಯಮನೆಳೆವನೆಂಬಪಕೀರ್ತಿಯ
ಪರಿಹರಿಸಿಕೊಳ್ಳೋ ಶ್ರೀ ಪುರಂದರವಿಠಲ
ಇರುವುದಾದರೆ ಮುಗುಳುತೆನೆ
ಅದಿಲ್ಲದಿರೆ ಚಿಗುರೆಲೆ
ಅದೂ ಇಲ್ಲದಿರೆ ಬರಲು ಕಟ್ಟಿಗೆ
ಇಲ್ಲದಿದ್ದರೆ ಬೇರು ಮಣ್ಣು
ಅದೊಂದು ಇರದಿರೆ
ತುಳದಿ ತುಳಸಿ ಎಂದೊರಲಿದರೆ ಸಾಕು
ಎಲ್ಲ ವಸ್ತುಗಳಾನೀಡಾಡುವ ಪುರಂದರವಿಠಲ
ಇಲ್ಲೆಂಥಾ ಸುಖಗಳುಂಟೋ ಅಲ್ಲಂಥ ಸುಖಗಳುಂಟು
ದು:ಖ ಮಿಶ್ರವಾದ ಸುಖ ಇಹಲೋಕದಲ್ಲಿಪ್ಪುದು
ನಾಶವುಂಟು ದಿನಕ್ಕೊಂದು ಬಗೆ ಬಗೆಯಾದಂಥ ಸುಖವಾಗಿ
ನಾಶವಿಲ್ಲದ ಅಪ್ರಾಕೃತವಾದ ಸುಖವನನುಭವಿಸುತ್ತಾ
ಕ್ರಮದಿ ತಿರುಗುವರು ಅಂದೋಳಿಕ ಛತ್ರಚಾಮರ
ಸದಾ ಪೀತಾಂಬರ ಶಂಖಚಕ್ರಗಳಿಂದೊಪ್ಪುತ
ಪುರಂದರ ವಿಠಲನ ಭಜಿಸೆಲೋ ಜೀವ
ಈ ಮರ್ತ್ಯದೊಳಗೆಲ್ಲ ಅರಸಿ ನೋಡಲುದೇವ
ಅರಸು ಮೆಚ್ಚನು, ಪ್ರಜೆ ದ್ವೇಷಿಸುವರು
ಆಳುಗಳು ಒಲಿದಲ್ಲಿ, ಅರಸು ಮೆಚ್ಚನು ಒಮ್ಮೆ
ಈ ಮರ್ತ್ಯಜನರ ಚರಿತ್ರೆ ವಿಚಿತ್ರವೋ ಎಲೋ ರಂಗ
ಭೂಲೋಕದರಸ, ನಿನ್ನ ಭಕ್ತಜನರುಗಳು
ನೀ ಕರುಣಿಸಲು, ತಾವು ಕರುಣಿಸುವರು
ನೀನೊಲಿದು, ಒಮ್ಮೆ ತಿರುಗಿನೋಡೊ ಹರಿಯೆ
ಈ ಪರಿಯಲ್ಲಿ ನಿನ್ನ ದಯೆಯಲಿ ಮಹವಿಘವದೊಳು
ಅರಮೊರೆ ಆಗುತಿದೆ ಎನಗೆ ಆರು ರಕ್ಷಿಪರೋ
ಅಂಜದಿರು ನೀನೆಂದು ಅಭಯನೀವರ ಕಾಣೆ
ಶ್ರೀನಾಥ, ಅನಿಮಿತ್ತದಯಾಸಿಂಧು
ನಿನ್ನ ದಾಸರೊಲುಮೆ ಪಾಲಿಸೆಲೋ ಗುಣನಿಧಿಯೇ
ನಿನ್ನ ಚರಿತಾಮೃತವು, ತೋರಿ ಸಲಹಯ್ಯ
ಪ್ರಸನ್ನ ಮೂರುತಿ, ಅಹೋಬಲ ಪುರಂದರವಿಠಲರೇಯ
ಉಗುರು – ಬ್ರಹ್ಮಾಂಡಖರ್ಪರ ಒಡೆದಿತು
ಅಂಗುಟ – ದುರ್ಯೋಧನನ ಕೆಡಹಿತು
ಬಾಹು – ಕೂಸಿನ್ನ ಎತ್ತಿ ಕೆಡಹಿ ಬಿಸಾಟಿತು
ದೃಷ್ಟಿ – ಕೌರವೇಶನ ನಸುಗುಂದಿಸಿತು
ಜಗಜಟ್ಟಿ – ಪುರಂದರವಿಠಲಗೆದಿರುಂಟೆ ?
ಉದಕ ಧಾವತಿಯುಂಟು ಶಿವನ ಪೂಜೆಗೆ ನಿತ್ಯ
ಪದುಮಸಂಭವನಿಗೆ ಹೃದಯ ದಂಡನೆ ಬೇಕು
ಮಧುರ ನುಡಿಯೇ ಸಾಕು ಚೆಲುವ ಶ್ರೀಕೃಷ್ಣನಿಗೆ
ಒದಗಿ ಪೊರೆವ ನಮ್ಮ ಪುರಂದರವಿಠಲ
ಗಾಯತ್ರಿ ಜಪ ವಿಧಾನ :
ಉದಯ ಕಾಲದ ಜಪ ನಾಭಿಗೆ ಸರಿ
ಹೃದಯಕೆ ಸರಿಯಾಗಿ ಮಧ್ಯಾಹ್ನದಿ
ವದನಕೆ ಸಮನಾಗಿ ಸಾಯಂಕಾಲಕೆ ನಿತ್ಯ
ಪದುಮನಾಭನ ತಂದೆ ಪುರಂದರವಿಠಲಗೆ
ಇದೇ ಗಾಯತ್ರಿಯಿಂದ ಜಪಿಸಬೇಕು
ಉದಯಾಸ್ತಮಾನವೆಂಬೆರಡು ಕೊಳಗವನಿಟ್ಟು
ಆಯಸ್ಸು ಎಂಬೊ ರಾಶಿ ಅಳದು ಹೋಗುವ ಮುನ್ನ
ಹರಿಯ ಭಜಿಸಬೇಕು, ಮನ ಮುಟ್ಟಿ ಭಜಿಸಿದರೆ
ತನ್ನ ಕಾರ್ಯವು ಘಟ್ಟಿ, ಹಾಗಲ್ಲದಿದ್ದರೆ
ತಾಪತ್ರಯ ಬೆನ್ನಟ್ಟಿ ವಿಧಿಯೊಳುಗೈವ
ದಿಟ್ಟ ಪುರಂದರ ವಿಠಲನ ಕರುಣದ
ದೃಷ್ತಿ ಅವನ ಮೇಲಿದ್ದರೆ, ಆಗ ಜಗಜಟ್ಟಿ
ಎಡಕೆ ಭಾವಿಯುಂಟು, ಬಲಕೆ ಕೆರೆ ನೋಡು
ಮುಂದೆ ಕಾಡ್ಗಿಚ್ಚು ಹತ್ತಿತು ಎಲೊ ದೇವ
ಹಿಂದೆ ಹುಲಿ ಬೆನ್ನಟ್ಟಿ ಬರುತಲಿದೆ
ಯಾರಿಗೆ ಯಾರೋ ಪುರಂದರವಿಠಲ
ಎಡಗೈಯಿಂದಲಿ ನೀರು ಅಭ್ಯಂಗನಾಚಮನ
ಪೊಡವಿಯೊಳಗೆ ದಾನ ಮಾಡಿದ ಮನುಜಗೆ
ಎಡೆ ಮೃತ್ಯು ದಾರಿದ್ರ್ಯ ತಾಕೆ, ಕಟ್ಟುವುದು ಎಂದು
ಒಡನೆ ಶೃತಿ ಸ್ಮೃತಿ ಪೇಳುವದೋ
ಬಡವರಾಧಾರಿ ಶ್ರೀ ಪುರಂದರವಿಠಲನ್ನ ಸರಿ
ಅಡಿಗ್ಳರ್ಚಿಸಿ ಬಾಳೋ ಅಬ್ಜದಂತೆ
ಎದೆಯನಾಡಿನಲೊಂದು ಸೋಜಿಗ ಹುಟ್ಟಿ
ಮಿಡಿದು ಮಾಡಿದಂಥ ಕಣಕದ ರೊಟ್ಟಿ
ಅದಕೆ ಸಾಧನ ತೊವ್ವೆ ತುಪ್ಪವನೊಟ್ಟಿ
ಅದರ ಮೇಲೆ ಸಕ್ಕರೆಯನು ಒಟ್ಟಿ
ಅವನು ಮೆಲಬಲ್ಲ ಅವ ಜಗಜಟ್ಟಿ
ಪುರಂದರವಿಠಲ ಸುಲಭವು ಗಟ್ಟಿ
ಎನ್ನ ಕಡೆ ಹಾಯಿಸುವುದು ನಿನ್ನ ಭಾರ
ನಿನ್ನ ನೆನೆಯುತಲಿಹುದು ಎನ್ನ ವ್ಯಾಪಾರ
ಎನ್ನ ಸತಿಸುತರಿಗೆ ನೀನೇ ಗತಿ
ನಿನ್ನೊಪ್ಪುಸುವುದು ನನ್ನ ನೀತಿ
ಎನ್ನ ಪಡಿ ಇಕ್ಕಿ ಸಲಹುವುದು ನಿನ್ನ ಧರ್ಮ
ನಿನ್ನ ಅಡಿಗೆರಗುವುದು ಎನ್ನ ಕರ್ಮ
ಎನ್ನ ತಪ್ಪುಗಳನೆಣೆಸುವುದು ನಿನ್ನದಲ್ಲ
ನಿನ್ನ ಮರೆತು ಬದುಕುವುದು ಎನ್ನದಲ್ಲ
ನೀನಲ್ಲದಿನ್ನಾರಿಗೆ ಮೊರೆದಿಡುವೆ ನಾನು ಪುರಂದರವಿಠಲ
ಎನ್ನಮ್ಮ ಸಿರಿದೇವಿ, ಇನ್ನೂ ಅರಿಯಳು ಮಹಿಮೆ
ಕುನ್ನಿ ಮಾನವನು, ನಾನೇನು ಬಲ್ಲೆನು?
ಪನ್ನಗಾದ್ರಿ ನಿಲಯನೇ,ಪರಮಪಾವನ್ನ ಕೃಷ್ಣ
ಎನ್ನನುದ್ಧರಿಸಯ್ಯಾ ಪುರಂದರವಿಠಲ
ಎರಗಿ ಭಜಿಪೆನೊ ನಿನ್ನ ಚರಣ ಸನ್ನಿಧಿಗೆ
ಕರುಣದಿಂದಲಿ ನಿನ್ನ ಸ್ಮರಣೆಯ ಎನಗಿತ್ತು
ಮರೆಯದೆ ಸಲಹೋ ಶ್ರೀ ಪುರಂದರವಿಠಲ
ಎಲ್ಲಾ ಒಂದೇ ಎಂಬುವರ ಎರಡು ದಾಡಿಯಲ್ಲಿದ್ದ
ಹಲ್ಲುದುರೆ ಬಡಿಯಬೇಕು ಹರಿಭಕ್ತರಾದವರು
ಸಲ್ಲದು ಸಲ್ಲದು ಈ ಆತು ಇದಕೆ ಸಂಶಯಬೇಡ
ಕಲ್ಲ ನಾರಿಯ ಮಾಡಿದ ಪುರಂದರವಿಠಲನ
ಪಲ್ಲವಾಂಘ್ರಿಯ ನೆನೆದು ಪರಗತಿಯ ಪಡೆಯಿರೊ
ಎಲ್ಲಿ ಹರಿಕಥಾ ಪ್ರಸಂಗವೋ ಅಲ್ಲಿ
ಯಮುನಾ, ಗಂಗಾ, ಗೋದಾವರಿ, ಸರಸ್ವತಿ
ಎಲ್ಲ ತೀರ್ಥರು ಬಂದು ಎಣೆಯಾಗಿ ನಿಲ್ಲುವುವು
ಸಿರಿ ವಲ್ಲಭ ಪುರಂದರವಿಠಲ ಮೆಚ್ಚುವನು
ಎಲೆ ಜಿಹ್ವೆ ಕೇಶವನ ನಾಮವನೆ ಸ್ತುತಿಸು
ಎಲೆ ಕರಗಳಿರಾ, ಶ್ರೀ ಹರಿಯ ಪೂಜೆಯ ಮಾಡಿ
ಎಲೆ ನೇತ್ರಗಳಿರ, ಶ್ರೀಕೃಷ್ಣ ಮೂರ್ತಿಯ ನೋಡಿ
ಎಲೆ ಕಾಲುಗಳಿರ, ಶ್ರೀ ಹರಿಯ ಯಾತ್ರೆಯ ಮಾಡಿ
ಎಲೆ ನಾಸಿಕವೆ, ಮುಕುಂದನ ಚರಣ ಪರಿಮಳವನಾಘ್ರಾಣಿಸುತಿರು
ಎಲೆ ಶಿರವೆ, ನೀನಧೋಕ್ಷಜನ ಪಾದ ಜಲರುಹದಲ್ಲಿ ಎರಗಿರು
ಎಲೆ ಮನವೆ, ನೀ ವರದ ಕೇಶವ ಪುರಂದರವಿಠಲನ
ಭಕುತಿ ವಿಷಯಗಳಲ್ಲಿ ಅನುದಿನವು ಕಳೆಯುತ್ತಿರು
ಒಂದೇ ಒಂದು ಬೆರಳ ಜಪ
ಒಂದೇ ಆಇದು ಗೆರೆಯ ಜಪ
ಒಂದೇ ಹತ್ತು ಪುತ್ರಜೀವಿಮಣಿಯ ಜಪ
ಒಂದೇ ನೂರು ಶಂಖಮಣಿಯ ಜಪ
ಒಂದೇ ಸಾವಿರ ಹವಳದ ಜಪ
ಒಂದೇ ಹತ್ತುಸಾವಿರ ಮುತ್ತಿನಮಣಿಯ ಜಪ
ಒಂದೇ ಹತ್ತು ಲಕ್ಷ ಸುವರ್ಣಮಣಿಯ ಜಪ
ಒಂದು ಕೋಟಿ ದರ್ಭೆ ಬೆಟ್ಟಿನ ಜಪ
ಒಂದೇ ಅನಂತ ಶ್ರೀತುಲಸಿಮಣಿಯ
ಜಪವೆಂದು ಪುರಂದರವಿಠಲ ಪೇಳ್ದ
ಕತ್ತೆ ಕುದುರೆಯಾಗಿ ಹರಿಗೆ ಶರಣೆನಲುಂಟೆ?
ಹಂದಿ ನಾಯಿಯಾಗಿ ಹರಿಗೆ ಶರಣೆನಲುಂಟೆ?
ಕ್ರಿಮಿ ಕೀಟನಾಗಿ ಹರಿಗೆ ಶರಣೆನಲುಂಟೆ?
ಮರೆತೆಯಾ ಮಾನವ ಹಿಂದಿನನುಭವಗಳನು
ನಿನಗೆ ಮಾನುಷ ಜನ್ಮವು ಬರಲಾಗಿ
ಪುರಂದರವಿಠಲನ್ನ ನೆನೆ ಕಂಡ್ಯ ಎರಗು ಕಂಡ್ಯ
ಕಮಲಜನು ನಿನ್ನ ಪಾದಕಮಲವನು ತೊಳೆದಿಹನು
ಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು
ಯಮಜ ಮಾಡುವ ರಾಜಸೂಯಯಾಗದಲ್ಲಿ
ಮಮಕರಿಸಿದೆ ಎಂತೊ ಕಾಲ ತೊಳೆವ ಊಳಿಗವ?
ಮಮ ಪ್ರಾಣಾ ಹಿ ಪಾಂಡವಾ ಎಂದು ಬಿರುದಿಗಾಗಿ
ನಮೋ ನಮೋ ಎಂದೆ ಪುರಂದರವಿಠಲ
ಕಂಡಕಂಡವರಿಗೆ ಅಲ್ಪರಿವ ಬಾಳುವೆಗಿಂತ
ಕೊಂಡವನೆ ಧುಮುಕಲಿಬಹುದು
ತಂಡತಂಡದ ನರರ ಕೊಂಡಾಡುವುದಕ್ಕಿಂತ
ತುಂಡರೀಸಲಿಬಹುದು ಈ ಜಿಹ್ವೆಯನ್ನು
ಮಂಡೆಬಾಗಿ ಪರರಿಗೆ ನಮಿಸುವುದಕ್ಕಿಂತ
ಗಂಡುಗತ್ತರಿ ಕೊರಳೊಳಿಟ್ಟರೆ ಘನವು
ಪಂಡಿತನೆನೆಸಾಲೊಲ್ಲೆನೋ ಪರಮಾತ್ಮ ನಿನ್ನ
ತೊಂಡರವನೆನಿಸುವ, ಬಾಗ್ಯವೀಯೋ ಪುರಂದರವಿಠಲ
ಕಂಡ ಸೂರ್ಯಗೆ ಸಂಧ್ಯಾಕಾಣದ ಸೂರ್ಯಗೆ
ಸಂಧ್ಯಾ ಭೂಮಂಡಲದಿ ಮಾಡದಿರಲು
ಮಾರ್ತಾಂಡ ನೂರು ಹತ್ಯಾ ಮಾಡಿದ
ಪಾಪ ಶೃತಿ ಸಾರುತಿದೆ
ಪುಂಡುಗಾರ ನರಗೆ ನರಕ ತಪ್ಪದೆಂದು
ಅಂಡಜಪತಿ ಪುರಂದರವಿಠಲ ಪೇಳ್ವ
ಕಾಲ ಮೇಲೆ ಮಲಗಿ ಸಿಂಪಿಯಲಿ
ಹಾಲ ಕುಡಿದು ಬೆಳೆದ
ಮೂರು ಲೋಕ ನಿನ್ನುದರದಲ್ಲಿರಲು
ಈರೇಳು ಲೋಕದ ನೀರಡಿ ಮಾಡಲು
ಮೂರು ಲೋಕದೊಡೆಯ ಶ್ರೀ ಪುರಂದರವಿಠಲ
ನಿನ್ನ ಬಾಲಕ ತನದ ಲೀಲೆಗೆ ನಮೋ ನಮೋ
ಕಾಲ ದೈವವು ನೀನೆ, ಕೈಮುಗುಯುವವ ನಾನು
ಕೈವಲ್ಯ ಫಲದಾತ ಕೇಶವನ ರಘುನಾಥ
ಯಾವ ದೈವಕ್ಕಿನ್ನು ಈ ವೈಭವಗಳ ಕಾಣೆ
ರಾವಣಾಂತಕ ಶ್ರೀ ಪುರಂದರವಿಠಲ
ಕಾಳಿಯನಂತೆ ಕಟ್ಟಿ ಬಿಗಿಯಬೇಕು
ಬಲಿಯಂತೆ ನಿನ್ನ ಬಾಗಿಲ ಕಾಯಿಸಲಿಬೇಕು
ಕುಬ್ಜೆಯಂತೆ ನಿನ್ನ ರಟ್ಟು ಬುತ್ತು ಮಾಡಿ
ಮುಂಜೆರಗ ಪಿಡಿದು ಗುಂಬೆ ಹಾಕಿಸಬೇಕು
ಪುರಂದರವಿಠಲ ನಿನ್ನ ಆಟಿ ಮುಟ್ಟಿ ಹಾಕೆಂದರೆ
ಪುಟ್ಟದು ರವಿ ತಿರಿತಿಂಬಂತೆ ಮಾಡುವೇ
ಕಿಚ್ಚಿನೊಳಗೆ ಬಿದ್ದ ಕೀಟಕ ನಾನಯ್ಯ
ಅಚ್ಯುತ ತೆಗೆಯೋ, ಅನಂತ ಕಾಯೋ
ಗೋವಿಂದ ರಕ್ಷಿಸೋ, ಘೋರಪಾತಕ ನಾನು
ಕರುಣಾಳು ಕಾಯಯ್ಯ ಪುರಂದರವಿಠಲ
ಕೀರ್ತಿ ಕಿಂಕರಗೆ, ಅಪಕೀರ್ತಿ ಮಂಕುಗಳಿಗೆ
ನಷ್ಟ ಕಷ್ಟರಿಗೆ, ಲಾಭ ಮಹಾತ್ಮರಿಗೆ
ದಾರಿದ್ರ್ಯ ದ್ರೋಹಿಗಳಿಗೆ
ವಚನ ಭ್ರಷ್ಟರಿಗೆ ಅಂಧಂತಮಸು
ಸಂದೇಹವಿಲ್ಲದಕೆ ಪುರಂದರವಿಠಲ
ಕುಂದದ ದೀಪವ ನಂದಿಪನಿಗೆ
ಕೂಷ್ಮಾಂಡ ಒಡೆವಳಿಗೆ
ಎಂದೋ ಆಪೋಶನವ ತನ್ನ ಕೈ-
ಯಿಂಡ ತಾನೇ ಎರೆದುಕೊಂಡು ಕುಡಿವಂಗೆ
ಇವರು ಮೂವರಿಗೆ ಕುಲನಾಶನವೆಂದು
ಅಂದೆ ಪುರಂದರವಿಠಲ ನಿರೂಪಿಸಿದನರಿಯ
ಕುಟುಂಬ ಭರಣ ಎರಡರಷ್ಟು ಬ್ರಾಹ್ಮಣರಿಗೆ
ವಿಧಿ ಗಡಗಡಿಸಿತು ಮೂರು ಮಾನಸ್ಥರಿಗೆ ವಿಧಿಸಿತು
ಜಡಮತಿಯ ಬಿಟ್ಟು ಯತಿಗಳಿಗೆ ನಾಲ್ಕರಷ್ಟು
ಕುಂಡಲೀಶಯನ ಪುರಂದರವಿಠಲ ಈಪರಿ
ಪೊಡವಿ ಜನರಿಗೆ ವಿಧಿಕರ್ಮ ನಿರ್ಮಿಸಿದ
ಕುಡಿಕೊಟ್ಟ ಅಮೃತವೆಂಬ ನೊರೆಹಾಲನೊಲ್ಲದೆ
ಬಟ್ಟಲೊಳಗೆ ತಿರಿತಿಂಬುವರು ಕೆಲರು
ಪಟ್ಟವಾಳಿಯ ಮುಂದೆ ಅರವಿಯ ಬಯಸುವರು
ಭ್ರಷ್ಟರಿಗೇನೆಂಬೆ ಪುರಂದರವಿಠಲ
ಕುಲಪತಿಯಾದರೂ ಸಂಧ್ಯಾವಂದನಗೈಯ್ಯದ
ಪಾಪಿಯಾದರೂ ಪರದ್ರೋಹಿಯಾದರೂ
ಪಾಪಗೈಯುತಾ ಪರಪತ್ನಿಯ ನೆರೆದರೂ ಶ್ರೀಪತಿ
ಗೋಪೀಚಂದನಲಿಪ್ತಾಂಗಗೆ ಭೂಪತಿ
ಪುರಂದರವಿಠಲ ಪಾದವ ತೋರ್ವ
ಕೂಪದಲ್ಲಿಯಾದರೂ ಕೊಳದಲ್ಲಿಯಾದರೂ
ವಾಪಿಯಲಿಯಾದರೂ ಆ ಪತ್ನಿಯ
ನೆರೆದಿದ್ದರೂ ಗೋಪೀಚಂದನದ
ಸಂಪರ್ಕವಿದ್ದರೆ ಅದೇ ಸಂಧ್ಯಾಕಾಲವೆಂದು
ಪುರಂದರವಿಠಲ ಪೇಳ್ದ
ಕ್ರಿಮಿಕೀಟಕನಾಗಿ ಹುಟ್ಟಿದಂದು ನಾನು
ಹರಿಶರಣೆಂದನಲುಂಟೆ
ಹಕ್ಕಿ ಹರಿಣಿಯಾಗೆ ಹುಟ್ಟಿದಂದು ನಾನು
ಹರಿಶರಣೆಂಡೆನಲುಂಟೆ
ಹಂದಿ ಸೊನಗನಾಗಿ ಹುಟ್ಟಿದಂದು ನಾನು
ಹರಿಶರಣೆಂಡೆನಲುಂಟೆ
ಮರೆದೆ ಮಾನವ ನಿನ್ನ ಹಿಂದಿನ ಭವಗಳನಂದು
ಮಾನುಷ ದೇಹ ಬಂದಿತೋ ನಿನಗೀಗ
ನೆನೆಯಲೋ ಬೇಗ ಪುರಂದರವಿಠಲನ
ಕೆಟ್ಟನೆಂದೆನಲೇಕೆ ಕ್ಲೇಶಪಡುವುದೇಕೆ
ಹೊಟ್ಟೆಗೋಸುಗ ಪರರ ಕಷ್ಟಪಡಿಸಲೇಕೆ
ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು
ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರುವನೇ?
ಗಟ್ಟಿಯಾಗಿ ನೆರೆ ನಂಬು ಪುರಂದರವಿಠಲನ
ಸೃಷ್ಟಿಮಾಡಿದ ಬ್ರಹ್ಮ ಸ್ಥಿತಿ ಮಾಡಲರಿಯನೇ?
ಕೆಲಕಾಲ ದಂಡ ಪಿಡಿದು ಕಾಲರಾತ್ರಿಯು
ಬೀಳೆ ಕತ್ತಲು ನೀ ಮುನ್ನೆ ಪರಿಹರಿಸು
ಅಚಿಂತ್ಯಮಹಿಮ, ನಿರ್ಗುಣಧಾಮನು ನೀನೆ
ನಿರ್ವಿಕಲ್ಪನೂ ನೀನೆ, ಎನ್ನೊಳಗಿಹ ಪುರಂದರವಿಠಲ
ಏನನಬಹುದು ಅಯ್ಯಯ್ಯ, ಜಗದಾಧಾರನು ನೀನೆ
ಕಲಿಕಾಲಕೆ ಸಮಯುಗವು ಇಲ್ಲವಿಲ್ಲಯ್ಯ
ಕಲುಷಹರ ಕೈವಲ್ಯವು ಕರಸ್ಥವಯ್ಯ
ಜಲಜಲೋಚನ ನಮ್ಮ ಪುರಂದರವಿಠಲನ್ನ
ಬಲಗೊಂದು ಸುಖಿಸಿ ಬಾಳುವುದಕೆ
ಕೋಳಿಗೆ ಯಾತಕ್ಕೆ ಹೊನ್ನಿನ ಪಂಜರವು
ಬೋಳಿಗೆ ಯಾತಕ್ಕೆ ಜಾಜಿ ಮಲ್ಲಿಗೆ ದಂಡೆ
ಆಳಿಲ್ಲದವನಿಗೆ ಅರಸುತನವ್ಯಾತಕ್ಕೆ
ಮಾಳಿಗೆ ಮನೆಯು ಬಡವನಿಗ್ಯಾತಕೆ
ಕೇಳಯ್ಯ ದೇವ ಪುರಂದರವಿಠಲ
ಕ್ಷೀರಸಾಗರಕ್ಕೆ ಶ್ರೀರಮಣಬಂದಂತೆ
ಪ್ರಹ್ಲಾದಗೆ ಒಲಿದು ನರಸಿಂಹ ಬಂದಂತೆ
ಭಗೀರಥನ ಮನೆಗೆ ಶ್ರೀಗಂಗೆ ಬಂದಂತೆ
ಮುಚುಕುಂದನ ಮನೆಗೆ ಶ್ರೀಕೃಷ್ಣ ಬಂದಂತೆ
ಲಕ್ಷ್ಮೀಕಾಂತ ಪುರಂದರವಿಠಲ ಬರೆ
ನನ್ನ ನಾಲಿಗೆ ತುದಿಯಲಿ
ಗಾಯನ ಮಾಡುತನಾ ಧನ್ಯನಾದೆ
ಗಜ ತುರಗ ಸಹಸ್ರ ದಾನ
ಗೋಕುಲ ಕೋಟಿ ದಾನ
ಭೂದಾನ ಸಮುದ್ರ ಪರ್ಯಂತರ ಧನಿ
ಪುರಂದರವಿಠಲನ ಧ್ಯಾನಕ್ಕೆ ಸಮವಿಲ್ಲ
ಗರ್ಭವಾಸ, ಗಿರ್ಭವಾಸ,ಜನನ ಗಿನನ
ಮರಣ ಗಿರಣ ದು:ಖ ಗಿಖ್ಕ
ಪ್ರಾರಬ್ಧ ಗೀರಬ್ಧ, ಆಗಾಮಿ ಗೀಗಾಮಿ
ಸಂಚಿತ ಗಿಂಚಿತ, ಎಲ್ಲ ಪುರಂದರವಿಠಲ
ಗಂಡ ಮಾಡಿದ ಪಾಪ ಹೆಂಡತಿಗಿಲ್ಲ
ಹೆಂಡತಿ ಮಾಡಿದ ಪಾಪ, ಗಂಡಗುಂಟು
ಹೆಂಡತಿ ಮಾಡಿದ ಪುಣ್ಯ ಗಂಡಗಿಲ್ಲ
ಗಂಡ ಮಾಡಿದ ಪುಣ್ಯ ಹೆಂಡತಿಗುಂಟು
ಜೀವ ಜೀವರು ಭೇದ
ನೀನೇ ಉದ್ಧರಿಸಯ್ಯಾ ಪುರಂದರವಿಠಲ
ಗುರಿಯ ನೆಚ್ಚವನೆ ಬಿಲ್ಲಾಳು
ಹರಿಯ ಭಜಿಸಲು ಅರಿಯದವ ಮಾಸಾಳು
ಹರಿಯೆಂದು ಓದದ ಓದೆಲ್ಲ ಹಾಳು
ಪುರಂದರವಿಠಲ ಪಾರ್ಥನ ಮನೆಯಾಳು
ಗುರುಕರುಣ ಹೊಂದುವುದು, ಪರಮ ದುರ್ಲಭವಯ್ಯ
ಪರಿಪರಿಯ ವ್ರತಗಳನು ಆಚರಿಸಲು ಫಲವೇನು?
ಶರೀರದಿ, ಪುತ್ರ, ಮಿತ್ರ, ಕಳತ್ರಾದಿ ಬಾಂಧವರು
ಇರಿಸೋರೆ ಸದ್ಗತಿಗೆ ಸಾಧನದಿ
ನಿರುತವು, ಗುರುಪಾದ ನಿಜವಾಗಿ ಮನದಲರಿತು
ಭಜಿಸಲು, ಅಖಿಲ ಸಂಪದವಕ್ಕು ಪುರಂದರವಿಠಲ
ಚಂದಿರಗಿಂತಿನ್ನು ನಿಂದಿರೆ ತೆರಪಿಲ್ಲ
ಸೂರ್ಯನಿಗಿಂತಿನ್ನು ತಿರುಗಿ ಹೋಯಿತು ಹೊತ್ತು
ಬೊಮ್ಮಾದಿಗಳಿಗೆಲ್ಲಾ ರುದ್ರಾದಿಗಳಿಗೆಲ್ಲಾ
ಒಂದು ಉತ್ತರನಾಡಲು ತೆರಪಿಲ್ಲ
ಈ ದೇವರನೆಲ್ಲ ಒತ್ತಿ ಆಳುವ ನಮ್ಮ
ಪುರಂದರವಿಠಲ ಕಟ್ಟರಸು ಕಾಣಿರೋ
ಚೋರನಾದರೂ ಚಂಡಾಲನಾದರೂ
ಬ್ರಹ್ಮಘ್ನ ಪಿತೃ ಘಾತಕನಾದರೂ
ಅವನಾದರೂ ಮಧ್ಯಾಹ್ನ ಕಾಲಕೆ
ಅತಿಥಿಯಾಗಿ ಮನೆಗೆ ಬಂದರೆ
ತುತಿಸಿ ಅನ್ನವನಿಟ್ಟು ಸ್ವಾಮಿ
ಪುರಂದರವಿಠಲಗರ್ಪಿಸಬೇಕು
ಚೋರಗೆ ಚಂದ್ರೋದಯ ಸೊಗಸುವುದೇ ?
ಜಾರಗೆ ಸೂರ್ಯೋದಯ ಸೊಗಸುವುದೇ ?
ಶ್ರೀರಮಣನ ಕಥೆಯು ಕಳ್ಳಗೆ ಮೆಚ್ಚುವುದೆ ?
ನಾರಿಗೆ ನಯನವಿಲ್ಲದೆ ಚಲುವಿಕೆಯೆ ?
ಹರಿಸ್ಮರಣೆಯಿಲ್ಲದ ಹಾಡಿಕೆಯು
ಅರಣ್ಯರೋದನ ಪುರಂದರವಿಠಲ
ಜಗದಂತರ್ಯಾಮಿ ನಿನ್ನ ಬಟ್ಟಬಯಲೆಂದು
ಬಗೆವವನೆ ಜಗದೊಳಗೆ ಬ್ರಹ್ಮಹತ್ಯಕಾರ
ಅಗಣಿತಗುಣ ನೀನು, ನಿನ್ನ ಗುಣಗಳೆಂಟೆಂದು
ಬಗೆವವನು ಜಗದೊಳಗೆ ಸುವರ್ಣಸ್ತೇಯ
ಜಗದೊಡೆಯ ನೀನಿರಲು, ಅನ್ಯದೇವರೊಡೆಯರೆಂದು
ಬಗೆವವನೇ ಜಗದೊಳಗೆ ಮದ್ಯಪಾನಿ
ಜಗದ ತಂದೆ ನೀನು, ನೀನೇ ತಾನೆಂದು ಬಗೆವವನು
ಜಗದೊಳಗೆ ಗುರುತಲ್ಪಗ
ಇವರ ಸಂಸರ್ಗಿಯೇ ತತ್ಸಂಯೋಗಿ
ಇವರೇ ಮುಖ್ಯ ಪಂಚಮಹಾಪತಕಿಗಳು
ಆ ಕಾರಣದಿಂದ ನೀ ನಿತ್ಯ, ನೀ ಸತ್ಯ
ನೀ ಸೇವ್ಯ, ಅಗಣಿತಗುಣನಿಲಯನೇ
ನಿನ್ನ ದಾಸರ ಸಂಗ ಸಕಲಾರ್ಥ ಸಾಧನವು
ಮನ್ನಿಸೆನ್ನ ಪುರಂದರವಿಠಲರೇಯ
Source : ಹರಿದಾಸ ಸಾಹಿತ್ಯ ಉಗಾಭೋಗ ಸಂಪುಟ –
– ಸಂಪಾದಕರು Dr Aralumallige Parthasarathi
**********
ಹಾಡಿದರೆ ಎನ್ನೊಡೆಯನ ಹಾಡುವೆ |
ಬೇಡಿದರೆ ಎನ್ನೊಡೆಯನ ಬೇಡುವೆ |
ಒಡೆಯಗೆ ಒಡಲನು ತೋರುತ ಎನ್ನಯ |
ಬಡತನ ಬಿನ್ನಹ ಮಾಡುವೆ ಕಾಡುವೆ |
ಒಡೆಯ ಪುರಂದರವಿಠಲರಾಯನ |
ಅಡಿಗಳನು ಸಾರಿ ಬದುಕುವೆ ಸೇರಿ ಬದುಕುವೆ ||
******
ಅತ್ತೆ ಅತ್ತೆ ಅತ್ತೆ ಎಂದತ್ತೆ |
ಅತ್ತೆ ಸತ್ತರೆ ಸೊಸೆ ಅಳುವಂತೆ ಆಯಿತು ಅತ್ತೆ |
ಅತ್ತೆ ಸತ್ತರೆ ಸೊಸೆಗೆ ಬುದ್ಧಿಯಾಯಿತು |
ಅತ್ತೆ ಸತ್ತರೆ ಸೊಸೆಯರಿಗೆದೆಗಿಚ್ಚು ಹೋಯಿತೆಂದು |
ಅತ್ತೆ ಪುರಂದರವಿಠಲನ್ನ ಪಾದದಲ್ಲಿ |
ಭಕ್ತಿಯಿಲ್ಲದವರ ಮುಂದೆ ಪಾಡಿ ನಾನತ್ತೆ ||
***********
ಮರವಿದ್ದರೇನಯ್ಯ ನೆರಳಿಲ್ಲದನಕ |
ನೆರಳಿದ್ದರೇನಯ್ಯ ನೀರಿಲ್ಲದನಕ |
ನೀರಿದ್ದು ಫಲವೇನು ಒರೆತಿಲ್ಲದನಕ |
ಧನವಿದ್ದು ಫಲವೇನು ಕೊಡುವ ಮನವಿಲ್ಲದನಕ |
ಮನವಿದ್ದು ಫಲವೇನು ಜ್ಞಾನವಿಲ್ಲದನಕ |
ತನುವಿದ್ದು ಫಲವೇನು ಪುರಂದರವಿಠಲನ |
ನೆನೆನೆನೆದು ಊಳಿಗವ ಮಾಡದನಕ ||
****
(received in WhatsApp)
ಕಣ್ಣಲ್ಲಿ ನೀರಿಲ್ಲ ಮನದೊಳಕ್ಕರವಿಲ್ಲ |
ಅತ್ತೆ ಸತ್ತರೆ ಸೊಸೆ ಅಳುವಂತೆ ನಾ ಅತ್ತೆ |
ಅತ್ತೆ ಅತ್ತೆ ಎಂತೆಂದು ನಾನತ್ತೆ |
ಅತ್ತೆ ಸತ್ತರೆ ಎದೆ ಎರಡು ಪರಿಯಾಯಿತೆಂದು |
ಅತ್ತೆ ಅತ್ತೆ ಎಂದು ಅತ್ತೆ ಪುರಂದರವಿಠಲನ |
ದಾಸರೆಲ್ಲರ ಮುಂದೆ ಹಾಡಿ ಹಾಡಿ ನಾನತ್ತೆ ||
ಉಗಾಭೋಗ :
ಕಣ್ಣಲ್ಲಿ ನೀರಿಲ್ಲ ಮನದೊಳಕ್ಕರವಿಲ್ಲ
ಅತ್ತೆ ಸತ್ತರೆ ಸೊಸೆ ಅಳುವಂತೆ ನಾ ಅತ್ತೆ
ಅತ್ತೆ ಅತ್ತೆ ಎಂತೆಂದು ನಾನತ್ತೆ
ಅತ್ತೆ ಸತ್ತರೆ ಎದೆ ಎರಡೂ ಪರಿಯಾಯಿತೆಂದು
ಅತ್ತೆ ಅತ್ತೆ ಎಂದು ಅತ್ತೆ ಪುರಂದರ ವಿಠಲನ
ದಾಸರೆಲ್ಲರ ಮುಂದೆ ಹಾಡಿ ಹಾಡಿ ನಾನತ್ತೆ
ಲೌಕಿಕ ಅರ್ಥ :
ಈ ಉಗಾಭೋಗವು ಸಮಾಜದಲ್ಲಿಯ ಅತ್ತೆ ಮತ್ತು ಸೊಸೆಯರ ಮನಸ್ಸಿನ ಭೇದ ತೋರಿಸುವದು. ಹಳೆಯ ಗಾದೆಯಂತೆ ಎರಡೂ ಜುಟ್ಟು ಕೂಡಿ ಇರುತ್ತವೆ ಆದರೆ ಎರಡೂ ಜಡೆ ಕೂಡಿ ಇರುವದು ಬಹಳ ವಿರಳ. ಸ್ತ್ರೀಯು ಯಾವದೇ ವಿಷಯವನ್ನು ಆಳವಾಗಿ ವಿಚಾರಿಸುತ್ತಾಳೆ. ತಾನೇ ಶ್ರೇಷ್ಠ ಎಂಬ ಅಹಂಕಾರ ಮೊದಲಿನಿಂದಲೂ ಇದೆ. ದಾಸರು ಈ ಉಗಾಭೋಗದಲ್ಲಿ ಅತ್ತೆ ಸೊಸೆಯರ ಸಂಬಂಧದ ಬಗ್ಗೆ ಹೇಳುವರು. ಮನೆಯಲ್ಲಿ ಎಲ್ಲವನ್ನು ಅತ್ತೆಯೇ ನಿಭಾಯಿಸುತ್ತಿದ್ದರೆ ಸೊಸೆಗೆ ತನಗೆ ಯಾವ ವಿಷಯ ನಿರ್ಧಾರಕ್ಕೆ ಅವಕಾಶ ಇಲ್ಲ ಎಂದು ಕೋಪಗೊಳ್ಳುವ ಪ್ರಸಂಗ ಬರುತ್ತವೆ. ಹೀಗೆ ಬಹಳ ದಿನ ಕಳೆದಾಗ ಸೊಸೆಗೆ ಅತ್ತೆಯ ಮೇಲಿನ ಗೌರವ ಪ್ರೀತಿ ಕಡಿಮೆಯಾಗಿ ಕ್ರಮೇಣ ಇಲ್ಲದಂತಾಗುವದು. ಕೊನೆಗೊಂದು ದಿನ ಅತ್ತೆ ಸತ್ತಾಗ ಸೊಸೆಯೂ ಸಮಾಜದ ಜನರಿಗೆ ತೋರಿಸಲು ಅತ್ತೆ ಅತ್ತೆ ಎಂದುಗೋಳು ತೋಡಿ ಅಳುವಳು. ಆದರೆ ಅವಳಿಗೆ ಅಂತರಂಗದಲ್ಲಿ ಅತ್ತೆಯ ಬಗ್ಗೆ ಪ್ರೀತಿ ಇರುವದಿಲ್ಲ. ಜನ ನೋಡಿ ಪಾಪ ಅನ್ನುವರು. ಅತ್ತೆ ಸತ್ತಾಗ ಸೊಸೆಯ ಎದೆ ಎರಡು ಬಗೆ ಆಯಿತು ಎಂದು ದಾಸರು ಹೇಳಿದ್ದಾರೆ. ಒಂದೆಡೆ ದುಃಖ ಇನ್ನೊಂದೆಡೆ ಸಂತೋಷ. ಹೀಗೆ ಅತ್ತೆ ಅತ್ತೆ ಎಂದು ಒದರುತ್ತಾ ಅತ್ತು ಪುರಂದರ ವಿಠಲನ ದಾಸರ ಮುಂದೆಯೂ ಅಳುತ್ತ ಅಳುವಳು ಅದನ್ನು ನೋಡಿ ನಾ ಎಂಬ ವ್ಯಕ್ತಿಯೂ ಅತ್ತನು.
ಆಧ್ಯಾತ್ಮಿಕ ಅರ್ಥ :
ಮೇಲಿನ ಲೌಕಿಕ ಅರ್ಥದಿಂದ ನಾಸ್ತಿಕ ಜನರಿಗೆ ಹಾಸ್ಯ ವೆನಿಸುವದು ಸಹಜ. ಆದರೆ ದಾಸರು ಹೇಳಿದ ದೃಷ್ಟಿಯನ್ನು ವಿಶ್ಲೇಷಿಸಿ ನೋಡಿದರೆ ಅಸ್ತಿಕ ಮನೋಭಾವ ಇದ್ದವರಿಗೆ ನಿಜವಾಗಿ ಆಶ್ಚರ್ಯ ಆಗುವದು.
ಇಲ್ಲಿ ಮನೆ ಎಂದರೆ ನಮ್ಮ ಜಡದೇಹ. ಅದರಲ್ಲಿ ಮನಸ್ಸು ರಾಜ, ಅಧಿಕಾರಿ ಅಥವಾ ಹಳೆಯ ಅವಿಭಕ್ತ ಕುಟುಂಬದ ಹಿರಿಯಳಾದ ಅತ್ತೆ. ಈ ಮನಸ್ಸು ಎಂಬ ಅತ್ತೆಯು, ಇಂದ್ರಿಯಗಳೆಂಬ ಸೊಸೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು, ಇಂದ್ರಿಯ ನಿಗ್ರಹ ಮಾಡಿರುತ್ತಾರೆ. ಹೀಗಾಗಿ ಇಂದ್ರಿಯಗಳಿಗೆ ಈ ಮನಸ್ಸು ತಮ್ಮ ಮಾತೂ ಕೇಳುವದಿಲ್ಲ ವೆಂದು ಅವಳೂ ಇದ್ದರೂ ಸತ್ತಂತೆ ಎಂಬ ಭಾವನೆ ಮುದಿರುತ್ತದೆ. ಮನಸ್ಸಿನ ಬಗ್ಗೆ ಪ್ರೀತಿ ಇರುವದಿಲ್ಲ. ಇದ್ದರೂ ಸತ್ತಂತೆ ಇದ್ದ ಮನಸ್ಸಿನ ಬಗ್ಗೆ ಇಂದ್ರಿಯಗಳು ರೋದಿಸುತ್ತವೆ. ಇಲ್ಲಿ ದಾಸರು ನಾ ಎಂಬ ಶಬ್ದವನ್ನು ಅಹಂಕಾರ, ಮಮಕಾರಕ್ಕೆ ಸಂಭೋಧಿಸಿದ್ದಾರೆ. ಅವೆರಡು ಇಂದ್ರಿಯಗಳು ಒಂದೇ ತತ್ವ ಹೊಂದಿರುತ್ತವೆ. ಇಂಥ ಇಂದ್ರಿಯ ನಿಗ್ರಹಿ ಅತ್ತೆ ಎಂಬ ಮನಸ್ಸು ಯಾವಾಗಲೂ ಇಂದ್ರಿಯಗಳನ್ನು ಪರಮಾತ್ಮನ ನಾಮಸ್ಮರಣೆ, ಭಜನೆ, ಕೀರ್ತನೆ, ದಾನ, ಧರ್ಮಕ್ಕೆ ಉಪಯೋಗಿಸುತ್ತದೆ. ಇದರಿಂದಾಗಿ ಇಂದ್ರಿಯಗಳು ಉಪಾಯವಿಲ್ಲದೆ ಲೌಕಿಕದ ಕಡೆಗೆ ಮನಸ್ಸನ್ನು ಜಗ್ಗಬೇಕೋ, ಅಥವಾ ಮನಸ್ಸೇ ಹೇಳಿದಂತೆ ಕೇಳಬೇಕೋ ಎಂದು ಎರಡು ದಿಕ್ಕಿನಲ್ಲಿ ವಿಚಾರಿಸಿಕೊಳ್ಳುತ್ತವೆ. ಧಾರ್ಮಿಕ ದಿಕ್ಕಿನತ್ತ ತಿರುಗಿದ ಮನಸ್ಸು ತಮ್ಮ ಪಾಲಿಗೆ ಸತ್ತಿದೆ ಎಂದು ಇಂದ್ರಿಯಗಳು ಅತ್ತು ಪುರಂದರ ವಿಠಲ ನಾಮಕ ಪರಮಾತ್ಮನ ದಾಸರಾದ ಸಜ್ಜನರ ಮುಂದೆಯೂ ಅತ್ತೆಯಾದ ಮನಸ್ಸು ಹೇಳಿದಂತೆ ಹಾಡು ಹಾಡುತ್ತವೆ
***
ಗಾಣದೆತ್ತಿನಂತೆ ತಿರುಗಾಡಲಾರೆ
ಬಂಡಿಯ ನೊಗದಂತೆ ಬೀಳಲಾರೆ
ಗಿಳಿಯಂತೆ ನಾ ನಿನ್ನ ಕೂಗಾಡಲಾರೆ
ನವಿಲಿನಂತೆ ನಾ ನಿನ್ನ ನಲಿದಾಡಲಾರೆ
ಪುರಂದರವಿಠಲ, ನೀನೇ ಕರುಣಾಳು ಕಾಯೋ
***
ಗಾಣದೆತ್ತಿನಂತೆ ತಿರುಗಾಡಲಾರೆ
ಬಂಡಿಯ ನೊಗದಂತೆ ಬೀಳಲಾರೆ
ಗಿಳಿಯಂತೆ ನಾ ನಿನ್ನ ಕೂಗಾಡಲಾರೆ
ನವಿಲಿನಂತೆ ನಾ ನಲಿದಾಡಲಾರೆ
ಪುರಂದರವಿಠಲ, ನೀನೇ ಕರುಣಾಳು ಕಾಯೋ
**
Bhavartha
ಶ್ರೀ ಪುರಂದರದಾಸಾರ್ಯ ಗುರುಭ್ಯೋ ನಮ :
ಗಾಣದೆತ್ತಿನಂತೆ ತಿರುಗಾಡಲಾರೆ
ಬೆಳಿಗ್ಗೆ ಎದ್ದಾಗಿನಿಂದ ನಿಲ್ಲದೆ ಅತ್ತಿತ್ತ ಅಲೆದಾಡದೆ ತಿರುಗುತ್ತಲೇ ಇರುವಂತಹುದು..
ಎರಡು ರೀತಿಯಲ್ಲಿ ಚಿಂತಿಸಬಹುದು..
1)ಗಾಣದೆತ್ತು ಸುಮ್ಮನೆ ತಿರುಗುವುದಷ್ಟೆ.. ಭಗವಂತನಿಗೆ ಪ್ರದಕ್ಷಿಣೆ ಬರುವಾಗ ಗರ್ಭಿಣಿಯು ತುಂಬಿದ ಕೊಡ ಹೊತ್ತುಕೊಂಡು ನಡೆಯುವ ಹಾಗೆ ಪ್ರದಕ್ಷಿಣೆ ಮಾಡಬೇಕು.. ಭಗವಂತನ ಸ್ಮರಣೆ ಮಾಡುತ್ತಾ ನಾಮಗಳನ್ನು ಹೇಳುತ್ತ ಪ್ರದಕ್ಷಿಣೆ ಮಾಡಬೇಕು..
2)ಗಾಣದೆತ್ತು ತಿರುಗುತ್ತಲೇ ಇರುವಂತೆ ನಿತ್ಯ ಸಂಸಾರದಲ್ಲೂ ತಿರುಗುತ್ತ ಇರಲಾರೆ.. ಸಂಸಾರಕ್ಕೆ ತಂದವನು ನೀನು.. ನೀನೇ ಬಿಡಿಸಬೇಕು.
ಬಂಡಿಯ ನೊಗದಂತೆ ಬೀಳಲಾರೆ..
ನೊಗವು ಸಾಮಾನ್ಯವಾಗಿ ಭಾರವನ್ನು ಒಟ್ಟಾಗಿ ಎಳೆಯುವುದನ್ನು ಸಾಧ್ಯವಾಗಿಸಲು ಎತ್ತುಗಳು ಅಥವಾ ಇತರ ಪ್ರಾಣಿಗಳ ಜೋಡಿಗಳ ನಡುವೆ ಬಳಸಲಾದ ಒಂದು ಮರದ ತೊಲೆ, ಎತ್ತುಗಳಿಗೆ ನೊಗ ಹೂಡುವುದು ಅತ್ಯಂತ ಸಾಮಾನ್ಯವಾಗಿದೆ; ಕೆಲವು ನೊಗಗಳನ್ನು ಪ್ರತ್ಯೇಕ ಪ್ರಾಣಿಗಳಿಗೆ ಹೂಡಲಾಗುತ್ತದೆ.
ಈಸಬೇಕು ಇದ್ದು ಜೈಸಬೇಕು.. ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣ ನಿನ್ನ ನಂಬಿದೆ. ಬಂಡಿ.. ಸಂಸಾರ ಸಾಗರ.. ದಾಟಬೇಕಾದದ್ದು ಇದೆ.. ಮತ್ತೆ ಮತ್ತೆ ಬೀಳುವಂತೆ ಬೇಡ
ಗಿಳಿಯಂತೆ ನಾ ನಿನ್ನ ಕೂಗಾಡಲಾರೆ...
ಗಿಳಿ ನಾವು ಹೇಳಿದಂತೆ ಕೇಳಿ ಅದನ್ನೇ ಹೇಳುವುದು.. ಕಲಿಸಿದಂತೆ ಕಲಿಯುವುದು.. ರಾಮ ರಾಮ ರಾಮ ಅಂದರೆ ತಾನೂ ಕಲಿತು ರಾಮ ರಾಮ ಎನ್ನುವುದು..
ಜ್ಞಾನಿಗಳ ಮಾತು ಕೇಳಲಾರೆ.. ಹೇಳಿಕೊಟ್ಟ ಮಾರ್ಗದಲ್ಲಿ ನಡೆಯಲಾರೆ
ನವಿಲಿನಂತೆ ನಾ ನಲಿದಾಡಲಾರೆ
ಮಳೆಯ ಸೂಚನೆ ಬಂದಾಗ ತನ್ನತ್ತ ಸೆಳೆಯಲು ಗರಿಗೆದರಿ ಕುಣಿಯುವುದುಂಟು
ಗರಿಗೆದರುವುದು ಅಂದರೆ.. ಶಾಸ್ತ್ರಾಧ್ಯಯನೋತ್ತರ ಗುರೂಪದೇಶ.. ಸಾಧನೆ.. ಅನಿಷ್ಟ ನಿವೃತ್ತಿ ಅಪರೋಕ್ಷ ಜ್ಞಾನ... ನರ್ತನ ಅಂದರೆ ಲಿಂಗದೇಹಭಂಗ.. ನಲಿಯುವುದು ನರ್ತನ ಮಾಡುವುದು ಅಂದರೆ ಭಗವಂತನ ಅನುಗ್ರಹ ಪ್ರಾಪ್ತಿ ಆಗಿ ಸ್ವಸ್ವರೂಪಾನಂದದ ಆವಿರ್ಭಾವ..
ಮುಕ್ತಿರ್ನೈಜಸುಖಾನುಭೂತಿ..
ಈ ಉದಾಹರಣೆಗಳಿಂದ.. ಸಾಧನೆಯ ಮೆಟ್ಟಿಲು ಹೇಳುತ್ತಾರೆ..
ಗಾಣದೆತ್ತಿನಂತೆ ಅತ್ತಿತ್ತ ನೋಡದೆ ಮಧ್ವಮತದಲ್ಲಿ ನಿರಂತರ ಇರಬೇಕು.. ಸಂಸಾರದಲ್ಲಿ ಮತ್ತೆ ಬೀಳದಂತೆ ಬಿಂಬನ ಅನುಗ್ರಹ ಪಡೆಯುತ್ತಾ ಬಂಡಿಗೆ ಎರಡೆತ್ತು ಇರುವಂತೆ.. ದೇಹ ಎಂಬ ವೃಕ್ಷದಲ್ಲಿ ಎರಡು ಪಕ್ಷಿ ಇರುವಂತೆ... ಬಿಂಬ ಪ್ರತಿಬಿಂಬ ದಂತೆ ಈ ಬಂಡಿಯ ನೊಗ..
ವೈರಾಗ್ಯದಿಂದ ಬೀಳದಂತೆ ಸಂಸಾರ ಸಾಗರ ಅಂಬಿಗನ ನಂಬಬೇಕು.
ವೇದ ವಿಧಿಸಿದಂತೆ ಶಾಸ್ತ್ರ ಹೇಳಿದಂತೆ.. ಜ್ಞಾನಿಗಳು ಹೇಳುವಂತೆ.. ಅಪರೋಕ್ಷ ಜ್ಞಾನಿಗಳ ಮಾತಿನಂತೆ.. ನಡೆಯಬೇಕು.. ಗಿಳಿ ರಾಮ ರಾಮ ಅನುವಂತೆ..
ಸಾಧನೆ ಪಕ್ವತೆ ಬಂದಾಗ.. ಕರ್ಮಕ್ಷಯಫಲ.. ಅನಿಷ್ಟ ನಿವೃತ್ತಿ ಅಪರೋಕ್ಷ ಜ್ಞಾನ ಉತ್ಕ್ರಮಣ.. ಅರ್ಚಿರಾದಿ ಮಾರ್ಗ.. ಮಹರ್ಲೋಕಾದಿ ಊರ್ಧ್ವ ಲೋಕ ವಾಸ... ಬ್ರಹ್ಮೋಪದೇಶ.. ಲಿಂಗದೇಹಭಂಗೋತ್ತರ ಭಗವಂತನ ಇಚ್ಛಾ ಆವರಣ ಕಳಚುವುದು.. ಸ್ವರೂಪಾನಂದದ ಆವಿರ್ಭಾವ ಎಂಬ ನವಿಲಿನ ನಲಿವಿನ ನಿತ್ಯ ಸುಖ..
ಇದಕ್ಕೆಲ್ಲ ನಿನ್ನ ಕಾರುಣ್ಯ ಕಾರಣ ಅಂತ ಶ್ರೀ ಪುರಂದರ ವಿಠಲ ನಲ್ಲಿ ಪ್ರಾರ್ಥಿಸುತ್ತ ಇದ್ದಾರೆ..
ಈ ತೊದಲು ನುಡಿಗಳ ಸೇವೆ.. ಸಮಸ್ತ ಹರಿದಾಸ.. ಶ್ರೀ ಪುರಂದರ ದಾಸಾರ್ಯ ಗುರ್ವಂತರ್ಗತ ಸಮಸ್ತ ಗುರು ದೇವತಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ ದೇವರ ಚರಣ ಕಮಲಗಳಲ್ಲಿ ಅರ್ಪಣೆ
(received in WhatsApp)
***
Hamir Kalyani - Ugabhoga
Deenanu Naanu samastha lokake Daani neen
Vicharisalu matiheena naanu mahamahima kaivalya pati neenu
Eenu ballenu naanu neletu jnanamooruti needu
Ninna samaanarunte deva deva rakshisu namma anavarata.
**
Meaning: I (nnanu) am downtrodden(deena), you (neenu) are the giver (daani) to the whole world
If you ask me (vicharisalu), I am stupid (mati heena), you are the great kaivalya pati
What do I know, you are the embodiment of all knowledge
Is there anyone equal to you? God of Gods protech us at all times (anavarata)
***
No comments:
Post a Comment