Tuesday, 24 December 2019

ಮುಂಡಿಗೆಗಳು ಹಾಗೂ ಕನಕದಾಸರ ಮುಂಡಿಗೆಗಳು MUNDIGE


ಶ್ರೀ ವಿದ್ಯಾಸಿಂಧೂಮಧವತೀರ್ಥರು sri vidyasindhu madhava teertharu
nakshatra mundige of pranesha dasaru
ನಕ್ಷತ್ರ ಸುತನ ಅನುಜನು ನಕ್ಷತ್ರದೊಳಿದ್ದ ನವನೀತತಮಂ

click


ದಾಸ ಸಾಹಿತ್ಯದ ಪ್ರಕಾರಗಳಲ್ಲಿ  ಮುಂಡಿಗೆಗಳು

      ದಾಸ ಸಾಹಿತ್ಯದಲ್ಲಿ ಮುಂಡಿಗೆ ಪ್ರಕಾರದ ವೈಶಿಷ್ಟ್ಯ ಹಿರಿದಾದದ್ದು... ಮೇಲ್ನೋಟಕ್ಕೆ  ಮುಂಡಿಗೆಗಳು ಕೀರ್ತನೆ, ಪದಗಳಂತೇ ಕಾಣುತ್ತವೆ... ಆದರೂ ಅದರಲ್ಲಿ ಅಡಗಿರುವ ಗೂಢಾರ್ರ್ಥವನ್ನು ಗಮನಿಸಿಕೊಂಡು ಅದು ಮುಂಡಿಗೆ ಎಂದು ಗುರ್ತಿಸಬೇಕಾಗುತ್ತದೆ... 

     ಇದನ್ನು ಕನ್ನಡದಲ್ಲಿ ಕವಿರಾಜ ಮಾರ್ಗದಲ್ಲಿ ಹೇಳಿಕೆ ಅಂತಲೂ ಕಾವ್ಯಾವಲೋಕನದಲ್ಲಿ ಪೀಳಿಕೆ ಅಂತಲೂ ಕರೆಯಲ್ಪಡುವ ಈ ಪ್ರಕಾರ ಜನಪದ ಶೈಲಿಯಲ್ಲಿ ಒಗಟು ಎಂದು ಕರೆಯಲ್ಪಟ್ಟಿದೆ... 

     ಮುಂಡಿಗೆ ಅಂದ ತಕ್ಷಣ ನೆನಪಾಗುವುದು ಶ್ರೀ ಪುರಂದರದಾಸಾರ್ಯರ, ಕನಕದಾಸಾರ್ಯರ ಮುಂಡಿಗೆಗಳು...  ಬಹಳ ಸೊಗಸಾಗಿ ಗುಹ್ಯೆಭಾಷೆಯಿಂದ ತುಂಬಿದ ತತ್ವಗಳಿಂದ ಪರಮಾತ್ಮನ ಅದ್ಭುತ ಮಾಹಾತ್ಮ್ಯಗಳನ್ನು ಸಜ್ಜನರಿಗೆ ಮಾತ್ರ ನೀಡುವ ಅವರ ಪ್ರತಿಭೆಗೆ ಅವರೇ ಸಾಟಿ... 

   ನಂತರ ಈ ಒಗಟಿನಂತಿರುವ ಮುಂಡಿಗೆಯ ಪ್ರಕಾರವನ್ನು ಕಂತಿ ಪಂಪರ ಹಾಡುಗಳಲ್ಲಿ, ಅಲ್ಲಮನ ಬೆಡಗಿನ ವಚನಗಳಲ್ಲಿ ಸತ್ಯೇಂದ್ರ ಚೋಳನ ಸಾಂಗತ್ಯದಲ್ಲಿ, ಮುರುಳೇಶನ ಸಾಂಗತ್ಯದಲ್ಲಿಯೂ ಕಾಣಬಹುದು ಅಂತ ಹಿರಿಯರ ಉವಾಚ...

     ಮೊದಲಿಗೆ ಮುಂಡಿಗೆ ಎನ್ನುವುದು ಮುಂಡಾಸು ಎನ್ನುವ ಪದದಿಂದ ಉತ್ಪನ್ನವಾದದ್ದೆಂದು ಕಂಡು ಬರ್ತದೆ.. ಮುಂಡಾಸು ಅಂದರೇ  ತಲೆಗೆ ಸುತ್ತಿಕೊಳ್ಳುವ, ವ್ಯಕ್ತಿಯ ಗೌರವವನ್ನು ಹೆಚ್ಚಿಸುವ ವಸ್ತ್ರ... ಇದೇ ಅರ್ಥವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು  ತಲೆಗೆ ಕಸರತ್ತು ಕೊಡುವ ಈ ಪ್ರಕಾರವನ್ನು ಮುಂಡಿಗೆ ಎಂದು ಎಂದು ಕರೆದಿರಬಹುದು ಅಂತ ತಿಳಿತದೆ...

     ಆರಂಭದಲ್ಲಿ ಈ ಪ್ರಕ್ರಿಯೆ ಮನೋರಂಜನೆಯನ್ನು ಪ್ರಧಾನ ಉದ್ದೇಶ್ಯವಾಗಿಟ್ಟುಕೊಂಡು ರಚಿತವಾಗಿದೆ ಆದರೂ ನಂತರದಲಿ ಇದನ್ನು ಮಹಾ ಮಹಾ ರಾಜರು ಶತ್ರುಗಳಿಂದ ಸುರಕ್ಷಿತವಾಗಿ ಇರುವುದಕ್ಕಾಗಿ ತಮ್ಮ  ಸಂದೇಶಗಳನ್ನು ಈ ತರಹದ ಗುಪ್ತ ಭಾಷೆಯ ಮುಖಾಂತರ  ಬರೆದು ಗೂಢಚಾರಿಗಳಿಗೆ ಕಳಿಸುತ್ತಿದ್ದರಂತೆ... ಇದು ಒಂದು ಆದರೇ....
         
ದಾಸ ಸಾಹಿತ್ಯದ ಹಿರಿಯ ದಾಸರು ಪರಮಾತ್ಮನ ಗುಣಗಾನವನ್ನು ಜೀವ-ಪರಮಾತ್ಮನ ಭೇದದ ತತ್ವವನ್ನು ಅಯೋಗ್ಯರಿಗೆ ಅರ್ಥವಾಗದಿರುವಂತೆ ಗುಹ್ಯಭಾಷೆಯ ಮುಖಾಂತರ ರಚಿಸಿ ಮಹದುಪಕಾರವನ್ನು ಮಾಡಿದ್ದಾರೆ... 

      ಹಿಂದೆ  ನಾವು ನಮ್ಮ ಸಮೂಹದಲಿ ನೋಡಿದ ಪಗಡಿಯ ಪದ ಕೇಳಿದ ಸಾಮಾನ್ಯ ಜನರಿಗೆ ಅಸಹ್ಯದಂತಾಗಿರಬಹುದು.. ಆದರೇ ಅದರ ಅರ್ಥ ತಿಳಿದರೇ ಮಾತ್ರ ಆ ಪದದಿಂದ ದಾಸಾರ್ಯರ ಆಂತರ್ಯ ಗೊತ್ತಾಗುವುದು... ಹಾಗೆಯೇ ಶ್ರೀ ಪುರಂದರದಾಸರು  ಭಾಗವತದ ಸಾರವನ್ನು ತಿಳಿಸಿದ ಬುಡುಬುಡುಕಿಯ ಮುಂಡಿಗೆ, ರಾಮಾಯಣದ ಕುರಿತು ಬರೆದ ಮುಂಡಿಗೆ ಇನ್ನೂ  ಬಹಳ  ನಮಗೆ ಗೊತ್ತಿರುವ ಅದ್ಭುತ ಮುಂಡಿಗೆಗಳು...

ಒಟ್ಟಿನಲ್ಲಿ ಶ್ರೀ ವೇದವ್ಯಾಸದೇವರು ರಚಿಸಿದ ಬ್ರಹ್ಮಸೂತ್ರ ಮಾಯಿಗಳಿಗೆ  ಮೇಲ್ನೋಟಕ್ಕೆ  ಹೇಗೆ ತಪ್ಪಾಗಿ ಕಾಣುತ್ತವೆಯೋ ಹಾಗೆಯೆ ಈ ಮುಂಡಿಗೆಯಲ್ಲಿನ ಪದ ಪ್ರಯೋಗಗಳು,  ಅದರ ತತ್ವ, ಆಂತರ್ಯ ಯೋಗ್ಯರಿಗೆ ಮಾತ್ರ ಅರ್ಥವಾಗಲಿ ಎನ್ನುವುದಕ್ಕಾಗಿಯೆ ರಚಿತವಾಗಿದ್ದವೆ ಅಂತಲೂ ಹೇಳಬಹುದು... 

ಕನಕದಾಸಾರ್ಯರ ಮುಂಡಿಗೆಗಳಂತೂ ಭೂರಿಭೋಜನದಂತೆ ಇರ್ತವೆ...  ಅಲ್ಲವೇ... ನಂತರದಲಿ ಬಂದ ಎಲ್ಲಾ ದಾಸರು ಮುಂಡಿಗೆಗಳ ರಚನೆ ಮಾಡಿದ್ದಾರೆ.. ಶ್ರೀ ಮಹಿಪತಿದಾಸರ, ಶ್ರೀ ಪ್ರಸನ್ನವೇಂಕಟ ದಾಸರ, ವಿಜಯದಾಸಾರ್ಯರ, ಗೋಪಾಲದಾಸರ, ಅವರ ಅನುಜರ, ಅವರ ಶಿಷ್ಯರ, ಶ್ರೀ ಪ್ರಾಣೇಶದಾಸಾರ್ಯರ ಹೀಗೆ ಎಲ್ಲಾ ಹರಿದಾಸರ ರಚನೆಗಳಲ್ಲಿ ಮುಂಡಿಗೆಗಳು ಇದ್ದವೆ...

ಹೀಗಾಗಿ ಇಂಥಹಾ ಅದ್ಭುತವಾದ ಪ್ರಕಾರದ ಮುಖಾಂತರ ಪರಮಾತ್ಮನ ಸ್ಮರಣೆಯನ್ನು ಮಾಡಿಸಲು ಪದರಚನೆ ಮಾಡಿ ನಮಗೆ ನೀಡಿದ ಹರಿದಾಸರೆಲ್ಲರಿಗೂ ಶಿರಬಾಗಿ ಕೋಟಿ ಕೋಟಿ ನಮಸ್ಕಾರಗಳು ಸಲ್ಲಿಸುತ್ತಾ....

ನಾದನೀರಾಜನದಿಂ ದಾಸಸುರಭಿ 🙏🏽
****

ಶ್ರೀಕೃಷ್ಣನ ಬಾಲಲೀಲೆಯ ತಿಳಿಸುವ ಒಂದು ಮುಂಡಿಗೆ ಇದು. ಪ್ರಾಣೇಶದಾಸರು ಬರೆದಿರುವ ಈ ಮುಂಡಿಗೆಯು ನಕ್ಷತ್ರ ಮುಂಡಿಗೆ ಎಂದೇ ಖ್ಯಾತಿ. ಶ್ರೀಕೃಷ್ಣನು ಬೆಣ್ಣೆ ಕಳ್ಳತನ ಮಾಡಿ ಬಚ್ಚಿಟ್ಟುಕೊಂಡ ಕಥೆಯನ್ನು ಆಧಾರಿಸಿದ್ದಾರೆ.
(check video on top of this page)

ನಕ್ಷತ್ರ ಸುತನ ಅನುಜನು
ನಕ್ಷತ್ರದೊಳಿದ್ದ ನವನೀತತಮಂ 
ನಕ್ಷತ್ರದಿಂದ ತೆಗೆದು
ನಕ್ಷತ್ರ ಬಂದಂತೆ ಯೆಸೆಯುತ್ತಿರಳ್ ಆ ಸಪ್ಪಳಂ

ನಕ್ಷತ್ರ  ಪಿಡಿದಿದ್ದ ನಕ್ಷತ್ರಾಖ್ಯ ನಕ್ಷತ್ರರಾಜ ಮುಖಿಯೋರ್ವಳ್ 
ನಕ್ಷತ್ರದಿಂ ಕೇಳಿ ನಕ್ಷತ್ರತಮಂ ಹಾರಿಸಿ ಕುಪಿಸಲ್ 
ನಕ್ಷತ್ರ ಶಯನಂ ನಕ್ಷತ್ರತಮಂ ಕೊಡದೆ ತನ್ನ ನಿಜ ಮಂದಿರದೋಳ್ 
ಬೇರೊಂದು ನಕ್ಷತ್ರದೊಳ್ ಪೋಗಿ ನಿಂದಂ
***


ಕನಕದಾಸರ ಮುಂಡಿಗೆಗಳು
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲು ವಚನ ಸಾಹಿತ್ಯ, ನಂತರ ಹರಿದಾಸ ಸಾಹಿತ್ಯ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದವು. ಭಕ್ತಿ, ಜ್ಞಾನ ವೈರಾಗ್ಯಗಳನ್ನು ಜನರಲ್ಲಿ ಬಿತ್ತುತ್ತಾ ಸಮಾಜದ ಓರೆಕೋರೆಗಳನ್ನು ಸರಿಪಡಿಸುತ್ತಾ, ತಮ್ಮನ್ನೂ ಆತ್ಮ ವಿಮರ್ಶೆಗೆ ಗುರಿಪಡಿಸಿಕೊಳ್ಳುತ್ತಾ ವಚನಕಾರರು ಹಾಗೂ ಹರಿದಾಸರೂ ಸಾಹಿತ್ಯ ನಿರ್ಮಾಣ ಮಾಡಿದರು.
ಬುದ್ಧಿಶಕ್ತಿಯ ಪ್ರದರ್ಶನ ಮನುಷ್ಯನ ಸಹಜ ಪ್ರವೃತ್ತಿಗಳಲ್ಲೊಂದು. ಹೆಚ್ಚು ಚುರುಕು ಬುದ್ಧಿಯವರೆಲ್ಲಾ ಈ ಬಗೆಯ ಅಭಿವ್ಯಕ್ತಿಗೆ ಹೊಸ ಹೊಸ ಮಾಧ್ಯಮಗಳನ್ನು ಕಂಡುಕೊಂಡರು. ಜನಪದ ಒಗಟುಗಳು ಇದಕ್ಕೆ ಉದಾಹರಣೆ. ಈ ದಿಕ್ಕಿನಲ್ಲಿ ಜನಪದದಿಂದ ಪ್ರೇರಿತರಾಗಿ ಶಿಷ್ಟ ಕವಿಗಳು ತಮ್ಮ ಕಾವ್ಯಗಳಲ್ಲಿ ಈ ಬಗೆಯ ವಿನ್ಯಾಸಗಳನ್ನು ಬಳಸಿದರು. ಇದೇ ರೀತಿಯಲ್ಲಿ ಕನಕದಾಸರ ಮುಂಡಿಗೆಗಳು ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ. ದಾಸಸಾಹಿತ್ಯದಲ್ಲಿ ಕನಕದಾಸರಲ್ಲದೇ ಪುರಂದರದಾಸರು, ಭಾಗಣ್ಣದಾಸರು ಮುಂತಾದವರೂ ಮುಂಡಿಗೆಗಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕನಕದಾಸರ ಮುಂಡಿಗೆಗಳಿಗೆ ವಿಶಿಷ್ಟ ಸ್ಥಾನವಿದೆ.
ಮುಂಡಿಗೆಗಳು ಎಂದರೇನು? ವಿವಿಧ ವಿದ್ವಾಂಸರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
“ಮುಂಡಿಗೆ ಎಂಬ ಶಬ್ದಕ್ಕೆ ಅರ್ಥ ತೊಲೆ ಅಥವಾ ಮರದ ದಿಮ್ಮಿ ಎಂಬುದಾಗಿದೆ. ಸಾಹಸ ಪ್ರದರ್ಶನಕ್ಕೆ ಸವಾಲು ರೂಪದಲ್ಲಿ ಇದನ್ನು ಎತ್ತಿ ಎಸೆಯುವ ಪದ್ಧತಿ ಇತ್ತೆಂದು ತೋರುತ್ತದೆ. ಹೀಗಾಗಿ ಕನಕರ ಈರೀತಿಯ ರಚನೆಗಳಿಗೆ ಮುಂಡಿಗೆಗಳು ಎಂದು ಹೆಸರಿಸಿರಬೇಕು.” ಎನ್ನುತ್ತಾರೆ ಪ್ರೊ. ಶ್ರೀ ಸುಧಾಕರ್ ಅವರು.
ಶ್ರೀ ಬಿಂದು ಮಾಧವ ಬುರ್ಲಿಯವರು, “ಕಟ್ಟಿಗೆಯ ದೊಡ್ಡ ತೊಲೆಯು ಎತ್ತಲು ಹೇಗೆ ಸುಲಭಸಾಧ್ಯವಲ್ಲವೋ ಹಾಗೆಯೇ ಕನಕರ ಈರೀತಿಯ ಹಾಡುಗಳನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿಲ್ಲವೆಂದೇ ಇವುಗಳಿಗೆ ಮುಂಡಿಗೆಗಳು ಎಂದು ಕರೆದಿರುವರು” ಎಂದಿದ್ದಾರೆ.
ಹೀಗೆ ಹಲವು ವಿದ್ವಾಂಸರು ಹಲವಾರು ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಕನಕದಾಸರು ಗೂಢಾರ್ಥದ ಮುಂಡಿಗೆಗಳನ್ನು ರಚಿಸಲು ಏನು ಕಾರಣ ಎಂದು ಯೋಚಸಿದಾಗ ಶ್ರೀ ಬುರ್ಲಿಯವರು ಕೆಲವು ಉತ್ತರಗಳನ್ನು ನೀಡಿದ್ದಾರೆ.
1. ಕೆಲವು ಪಾಂಡಿತ್ಯ ಪ್ರದರ್ಶನಕ್ಕಾಗಿ ಇರಬೇಕು.
2. ಇನ್ನು ಕೆಲವು ಪಾಂಡಿತ್ಯ ಪರೀಕ್ಷೆಗಾಗಿ ಇದ್ದಂತೆ ಕಾಣುತ್ತದೆ.
3. ಮತ್ತೆ ಕೆಲವು ಬುದ್ಧಿಪೂರ್ವಕವಾಗಿ ಗುಹ್ಯ ಭಾಷೆಯಲ್ಲಿ ಹೇಳಿರಬಹುದು.
4. ಕೆಲವೊಮ್ಮೆ ಜ್ಞಾನಿ ಜ್ಞಾನಿಗಳ ಆಂತರಿಕ ಭಾಷೆಯಾಗಿ ಹೊರಹೊಮ್ಮಿರಬಹುದು.
5. ಆತ್ಮಾನುಭವ ಹಾಗೂ ತತ್ವಜ್ಞಾನವನ್ನು ವಿವರಿಸಿರಬಹುದು.
6. ಪಂಡಿತರನ್ನೂ ಪೌರಾಣಿಕರನ್ನೂ ಕೆಣಕಿದ ಕೆಲವು ಹಾಡುಗಳನ್ನೂ ಕಾಣಬಹುದು.
ಡಾ. ಸಿದ್ದಣ್ಣ ಜಕಬಾಳರು, “ವ್ಯಾಸರಾಯರ ಶಿಷ್ಯ ವರ್ಗದವರಲ್ಲಿ ಕೆಲ ಒಣಪಾಂಡಿತ್ಯದಿಂದ ಕೂಡಿದ ಅಹಂಕಾರದಿಂದ ಮೆರೆಯುವ ವ್ಯಕ್ತಿಗಳು ಕನಕದಾಸರನ್ನು ನಿಂದಿಸಿರಬೇಕು. ಅವರನ್ನು ಸರಿ ಮಾರ್ಗಕ್ಕೆ ತರಲು ಕನಕದಾಸರು ಇಂತಹ ಮುಂಡಿಗೆಗಳನ್ನು ರಚಿಸಿರಬೇಕು.” ಎನ್ನುತ್ತಾರೆ.
ಸ್ವತಃ ಕನಕದಾಸರೇ,
“ವೇದವಾದಗಳಲ್ಲಿ| ಕಾದುವ ಜನರಲ್ಲಿ|
ಓದು ವಿದ್ಯೆಗಳಲ್ಲಿ| ವಾದವ ಗೆಲಿಸಯ್ಯ|
ಎಂದು ಹಾಡಿದ್ದಾರೆ.
ಪ್ರೊ. ಸುಧಾಕರ್ ಅವರು ಕನಕದಾಸರ ಮುಂಡಿಗೆಗಳನ್ನು ಎರಡುವಿಧವಾಗಿ ವಿಂಗಡಿಸಿದ್ದಾರೆ.
1. ಪೌರಾಣಿಕ ವಾವೆ ವರಸೆಯ ಮುಂಡಿಗೆಗಳು,
2. ಅನುಭಾವದ ನಿಗೂಢ ಮುಂಡಿಗೆಗಳು.
ಮೊದಲನೆಯದರಲ್ಲಿ ವಿಷ್ಣುವಿನ ದಶಾವತಾರಗಳು, ಅವನ ವಿವಿಧ ಲೀಲೆಗಳು ಅವನ ಮೇಲಿನ ಮುಕ್ತ ಸ್ತುತಿ ಮುಂತಾದವು ಪ್ರಮುಖವಾಗಿ ವ್ಯಕ್ತಗೊಂಡ ಭಾವಗಳಾಗಿವೆ.
ಅನುಭಾವ ನಿಗೂಢ ಮುಂಡಿಗೆಗಳು ವೈವಿದ್ಯಮಯವಾಗಿವೆ. ಮೇಲ್ನೋಟದ ಓದಿನಲ್ಲಿ ಸಾಮಾನ್ಯ ವಿಷಯಗಳ ವಿಚಾರವೆನ್ನಿಸಿದರೂ ಸೂಕ್ಷ್ಮ ಅವಲೋಕನದಿಂದ ನಿಗೂಢ ಅರ್ಥಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಉದಾಹರಣೆಗೆ “ಪರಮಪುರುಷ ನೀನೆಲ್ಲಿಕಾಯಿ” ಎಂಬ ಮುಂಡಿಗೆಯಲ್ಲಿ ಹಲವಾರು ತರಕಾರಿಗಳನ್ನು ಬಳಸಿಕೊಂಡು ಬೆಡಗನ್ನು ಸೃಷ್ಟಿಸಿದ್ದಾರೆ.
ಪರಮಪುರುಷ ನೀನೆಲ್ಲಿಕಾಯಿ
ಸರಸಿಯೊಳಗೆ ಕರಿಕೂಗಲುಕಾಯಿ
ಹಿರಿದು ಮಾಡಿದ ಪಾಪ ನುಗ್ಗೇಕಾಯಿ
ಹರಿ ನಿನ್ನ ಧ್ಯಾನ ಬಾಳೇಕಾಯಿ
ಸರುವ ಜೀವರ್ಗುಣಿಸಿಯುಂ ಬದನೆಕಾಯಿ
ಅರಿಷಡ್ವರ್ಗಗಳೊದಗಿಲಿಕಾಯಿ
ತಾತ್ಪರ್ಯ:- ಪರಮಪುರುಷನೇ ನೀನೆಲ್ಲಿದ್ದೀಯ? ನನ್ನನ್ನು ರಕ್ಷಿಸು (ನೀನೆಲ್ಲಿ ಕಾಯಿ)
ಸರೋವರದಲ್ಲಿ ಗಜೇಂದ್ರ ಮೊಸಳೆಯ ಬಾಯಿಗೆ ಸಿಕ್ಕಿ ಕೂಗಿಕೊಂಡಾಗ ಕಾಪಾಡು. (ಕರಿಕೂಗಲು ಕಾಯಿ)
ಅಪಾರವಾದ ಪಾಪ ಸಂಚಯವನ್ನೆಲ್ಲಾ ನುರಿದು ಪುಡಿಪುಡಿಯಾಗುವಂತೆ ಮಾಡು. (ನುಗ್ಗೆ ಕಾಯಿ)
ಹರಿ ನಿನ್ನ ಧ್ಯಾನವೇ ಉಸಿರಾಗಿ ಬಾಳುವಂತೆ ಮಾಡು. (ಬಾಳೇಕಾಯಿ)
ಎಲ್ಲ ಜೀವರಾಶಿಗಳನ್ನೂ ಉಣಿಸಿ ತಣಿಸಿ ಬೆಳೆಸುವ ನೀನು ಮಾತ್ರ ಉಣ್ಣದವನು. (ಜೀವರಿಗುಣಿಸಿಯುಂಬದನೆಕಾಯಿ) ಅರಿಷಡ್ವರ್ಗಗಳಿಲ್ಲದಂತೆ ರಕ್ಷಿಸು. (ಇಲಿಕಾಯಿ)
ಇನ್ನೊಂದು ಮುಂಡಿಗೆಯಲ್ಲಿ ಮೇಲುನೋಟಕ್ಕೆ ಬೀಸುವ ಕಲ್ಲಿನ ವರ್ಣನೆಯಾದರೆ ಗೂಢಾರ್ಥದಲ್ಲಿ ಪರಮಾತ್ಮನಿಗೆ ಹೋಲಿಸಲಾಗಿದೆ.
ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ,
ಇದರ ಕುರುಹು ಪೇಳಿ ಕುಳಿತಿರುವ ಜನರು,
ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ
ಗಂಟಲು ಮೂರು ಉಂಟು ಮೂಗಿಲ್ಲ
ಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು.
ತಾತ್ಪರ್ಯ:- ಬೀಸುವ ಕಲ್ಲನ್ನು ಹಿಡಿದು ಬೀಸುವ ಮರದ ಗೂಟವೇ ಒಂಟಿ ಕೊಂಬು. ಹೊಟ್ಟೆಯಲ್ಲಿ ಏನೂ ಇಲ್ಲ. ಖಾಲಿ ಶರೀರ. ಬೀಸುವ ಕಲ್ಲಿನ ಮೇಲ್ಭಾಗದ ಕಲ್ಲಿನಿಂದ ಧಾನ್ಯ ಇಳಿಯಲು ಮಾಡಿರುವ ಮೂರು ರಂದ್ರಗಳು. ಉಸಿರಾಟಕ್ಕೆ ಮೂಗು ಇಲ್ಲ. ಎಲ್ಲಿಯೂ ಚಲಿಸದೇ ಇರುವುದು. ಹತ್ತು ಹಲವಾರು ಧಾನ್ಯಗಳನ್ನು ಅದರ ಬಾಯಲ್ಲಿಟ್ಟಾಗ ತಿಂದು ಹಾಕುವುದು. ಇದು ಸಾಮಾನ್ಯವಾದ ಮೇಲುನೋಟದ ಅರ್ಥ.
ಪಾರಮಾರ್ಥಿಕ ಅರ್ಥದಲ್ಲಿ ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಎಂದರೆ ಮಾಯೆಯನ್ನು ನುಂಗುವ ಚೈತನ್ಯ ರೂಪಿ ಪರಮಾತ್ಮ ದೇಹವೆಂಬ ಮನೆಯೊಳಗೆ ಬಂದು ಕುಳಿತಿದ್ದಾನೆ. ಓಂ ಎಂಬಲ್ಲಿ ಓ ಅಕ್ಷರದ ಮೇಲೆ ದೀರ್ಘ ಸ್ವರದ ಕೊಂಬಿದೆ. ಸಾಂಸಾರಿಕ ವ್ಯಾಮೋಹದ ಕರುಳು ಒಡಲಿನಲ್ಲಿಲ್ಲ. ಓಂಕಾರದ ಅ ಉ ಮ ಮೂರಕ್ಷರಗಳೇ ಮೂರು ರಂದ್ರಗಳು. ವಿಷಯ ವಾಸನೆಯ ಗುಂಗಿಲ್ಲವೆಂಬುದೇ ಮೂಗಿಲ್ಲವೆಂಬುದರ ಅರ್ಥ. ಪಂಚಭೂತಗಳು, ಮನ, ಬುದ್ಧಿ, ಅಹಂಕಾರಗಳೂ ಸೇರಿ ಎಂಟು ಹಾಗೂ ಜ್ಞಾನೇಂದ್ರಿಯಗಳು ಹಾಗೂ ಕರ್ಮೇಂದ್ರಿಯಗಳೂ ಸೇರಿ ಹತ್ತು ಇವುಗಳ ಮೂಲಕ ಎಲ್ಲಾ ವಿಷಯಗಳನ್ನೂ ಅರಗಿಸಿಕೊಳ್ಳುವುದು ಅಂದರೆ ನಿರ್ಲಿಪ್ತತೆಯನ್ನು ತಂದುಕೊಳ್ಳುವುದು ಎಂದಾಗುತ್ತದೆ.
ಹೀಗೆಯೇ ‘ಕೆಂಪು ಮೂಗಿನ ಪಕ್ಷಿ’, ಲಟಪಟ ನಾ ಸೆಟೆಯಾಡುವನಲ್ಲ’, ಒಂಬತ್ತು ಹೂವಿಗೆ ಒಂದೇ ನಾಳವು’, ‘ಬಿತ್ತಾಕ ಹೋದಲ್ಲಿ ಬಿಡದೇ ಮಳೆ ಹೊಡೆದು’ ಮುಂತಾದ ಅಪೂರ್ವವಾದ ಅನೇಕ ಮುಂಡಿಗೆಗಳಿವೆ.
ಕನಕದಾಸರ ಮುಂಡಿಗೆಗಳು ಎಂದರೆ ಕಠಿನವಾದ ತೆಂಗಿನಚಿಪ್ಪಿನೊಳಗಿರುವ ತಿರುಳು ಮತ್ತು ಎಳನೀರಿನಂತೆ ಹಿತವಾದದ್ದು ಎಂಬುದು ಸರ್ವ ಸಮ್ಮತವಾದ ವಿಚಾರವಲ್ಲವೇ?
ಆಧಾರ:- ಡಾ. ಸುಧಾ ಸಂ. ಕೌಜಗೇರಿಯವರ ಲೇಖನ
****

ಮುಂಡಿಗೆಗಳು
                                    
'ಮುಂಡಿಗೆಗಳು' ಹರಿದಾಸ ಸಾಹಿತ್ಯದಲ್ಲಿ ಬರುವ  ಒಂದು ಪ್ರಾಕಾರ. ಮಂಡೆಗೆ ಕೆಲಸ ಕೊಡುವುದು ಮುಂಡಿಗೆ. ನೇರವಾಗಿ ಹೇಳಬೇಕಾದ  ವಿಚಾರಗಳನ್ನು ಸುತ್ತಿಬಳಸಿ ಹೇಳುವಂತೆ, ವೇದ, ಪುರಾಣಗಳಲ್ಲಿರುವ ವಿಚಾರಗಳನ್ನೆಲ್ಲ ಅದರೊಳಗೆ ಅಳವಡಿಸಿ ಚಿಂತನೆಗೆ ಅವಕಾಶ ಮಾಡಿಕೊಡುವುದಕ್ಕೆ 'ಮುಂಡಿಗೆ' ಎಂದು ಕರೆಯುತ್ತಾರೆ. 

'ಮುಂಡಿಗೆ' ಅಂದರೆ ಹೀಗಿರುತ್ತದೆ:-ಸಜ್ಜನರು ದಿನಗಳನ್ನು ಹೇಗೆ ಕಳೆಯುತ್ತಾರೆ?
ಉತ್ತರ:- ಸಜ್ಜನರು ಬೆಳಗ್ಗೆ ಜೂಜಾಡುತ್ತಾರೆ, ಮಧ್ಯಾಹ್ನ  ಸ್ತ್ರೀ  ವಿಹಾರದಲ್ಲಿ ಕಾಲಕಳೆಯುತ್ತಾರೆ, ರಾತ್ರಿ ಕಳ್ಳತನ ಮಾಡುತ್ತಾರೆ. 
ಇದೆಂತಹ ಉತ್ತರ ಅನ್ನಿಸಿದರೂ, ಇದರ  ಅಂತರಾರ್ಥ ಬೇರೆ ಇರುತ್ತದೆ. 

ಪ್ರಾತಃಕಾಲದಲ್ಲಿ  ದ್ಯೂತ ಪ್ರಸಂಗ :- ಅಂದರೆ ಮಹಾಭಾರತವನ್ನು ಶ್ರವಣ ಮಾಡುವ ಮೂಲಕ ಉತ್ತಮ ಚಿಂತನೆಯಲ್ಲಿ ಕಳೆಯುವುದು. 

ಮಧ್ಯಾಹ್ನ   ಸ್ತ್ರೀ ಪ್ರಸಂಗ:-  ಸೀತಾಪಹರಣ ಮಾಡಿದ ಪ್ರಧಾನವಾದ ರಾಮಾಯಣ ಕಥೆ ಓದಿ, ಕೇಳುವ ಮೂಲಕ ಮಧ್ಯಾಹ್ನ ಕಾಲಕಳೆಯುತ್ತಾರೆ. 

ರಾತ್ರಿಯಲ್ಲಿ  ಚೋರತನ ಮಾಡುತ್ತಾರೆ:-  ಹಾಲು ಕದ್ದ ,ಬೆಣ್ಣೆ ಕದ್ದ ,ಮೊಸರು ಕದ್ದ, ಎಂಬ ನವನೀತ ಚೋರ ಕೃಷ್ಣನ ಕಥೆಯಾದ ಭಾಗವತವನ್ನು  ಪಾರಾಯಣ ಮಾಡುವ  ಮೂಲಕ, ಕಥೆಗಳನ್ನು ಶ್ರವಣ, ಮನನ, ಮಾಡಿ ಕೊಳ್ಳುವುದು. ಹೀಗೆ ಜ್ಞಾನಿಗಳು  ತ್ರಿಕಾಲ ಗಳಲ್ಲಿ,  ದಿನನಿತ್ಯದ ಕಾರ್ಯಗಳ ಜೊತೆ ಭಗವಂತನ  ಚಿಂತನೆಯಲ್ಲಿ ಕಾಲಕಳೆಯುತ್ತಾರೆ. 

ಕನಕದಾಸರ ಮುಂಡಿಗೆ ಕುರಿತು ಒಂದು ಚಿಂತನೆ:-  ಒಮ್ಮೆ ಕನಕದಾಸರು  ತಿರುಪತಿ ಕ್ಷೇತ್ರಕ್ಕೆ ಹೊರಟಿದ್ದರು. ಅವರು ಅಲ್ಲಿಗೆ ಹೋಗುವ ಕಾಲದಲ್ಲಿ , ದೇವಳದಲ್ಲಿರುವ ಮುಖ್ಯಸ್ಥರಿಗೆ,  ನಾಳೆ ದೇವಾಲಯಕ್ಕೆ ಹರಿದಾಸರು ಬರುತ್ತಾರೆ ಅವರಿಗೆ ದೇವಾಲಯದ ಮರ್ಯಾದೆ ಮಾಡಬೇಕು ಎಂದು ಕನಸು ಬಿತ್ತು. ಮರುದಿನ ದೇವಸ್ಥಾನದ ಪಾರುಪತ್ತೇದಾರರು,  ದೇವಸ್ಥಾನಕ್ಕೆ ಬರುವ ದಾಸರಿಗೆ ಮರ್ಯಾದೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕಾಯುತ್ತಿದ್ದರು. 

ಅದೇ  ಸಮಯಕ್ಕೆ ,  ಕನಕದಾಸರು ಕಂಬಳಿ ಹೊದ್ದುಕೊಂಡು, ಕೈಯಲ್ಲಿ ಏಕನಾದ ತಂಬೂರಿ ಹಿಡಿದು," ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ದೊಷ ರಾಶಿ ನಾಶಮಾಡೊ  ಶ್ರೀಶ ಕೇಶವ " ಎಂದು ಹೇಳುತ್ತಾ ಹೋಗುತ್ತಿದ್ದರು. ದಾಸರಿಗಾಗಿ ಕಾಯುತ್ತಿದ್ದವರು  ನೋಡಿದರು, ಆದರೆ  ದಾಸರೆಂದರೆ ತಲೆಗೆ ಪೇಟ ಹಾಕಿಕೊಂಡು, ಸೊಂಟಕ್ಕೆ ಶಲ್ಯ ಸುತ್ತಿಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕೈಯಲ್ಲಿ ತಂಬೂರಿ ಹಿಡಿದು ಭಜನೆ ಮಾಡುತ್ತಾ ಹೋಗುತ್ತಾರೆ. ಹೀಗೆ ತಿಳಿದು ಕೊಂಡಿದ್ದರು. ಆದರೆ  ಇವರು ಯಾರು?  ಹೀಗೆ ಯೋಚಿಸಿ ಅವರನ್ನೇ ಕೇಳಲು ಹೊರಟರು. ಸ್ವಾಮಿ ತಾವು ಯಾವ ದಾಸರು ಎಂದು ಕೇಳುತ್ತಾರೆ. 

ಭಗವಂತನ  ಕರುಣೆಗೆ ಪಾತ್ರರಾದ ದಾಸರು, ಭಾಗವತದ  ಸ್ಮರಣೆಯನ್ನು ಮಾಡುವಂಥ  ಉತ್ತರವನ್ನು ಮುಂಡಿಗೆ ರೂಪದಲ್ಲಿ ಕೊಡುತ್ತಾರೆ.
" ಪುಟ್ಟ ದಾಸ ನಾನಲ್ಲ, ದಿಟ್ಟ ದಾಸ ನಾನಲ್ಲ, ಸಿಟ್ಟು ದಾಸ ನಾನಲ್ಲ, ಸುಟ್ಟ ದಾಸ ನಾನಲ್ಲ, ಸುಡಗಾಡು ದಾಸ ನಾನಲ್ಲ, ಕಷ್ಟದಾಸ ನಾನಲ್ಲ, ಕೊಟ್ಟ ದಾಸ ನಾನಲ್ಲ, ಹೊಟ್ಟೆ ದಾಸನಲ್ಲ, ಇಟ್ಟಿಗೆ ದಾಸ ನಾನಲ್ಲ, ಶಿಷ್ಟ ದಾಸ ನಾನಲ್ಲ,ನಿಷ್ಠ ದಾಸ ನಾನಲ್ಲ, ಭ್ರಷ್ಟ ದಾಸ ನಾನಲ್ಲ, ಶ್ರೇಷ್ಠ ದಾಸ ನಾನಲ್ಲ, ವಿತ್ತ ದಾಸ ನಾನಲ್ಲ, ಹುತ್ತ ದಾಸ ನಾನಲ್ಲ.  ನಾನು ಈ ಶೋಡಶ ದಾಸರುಗಳ ದಾಸಾನುದಾಸರ  ದಾಸಿಯರ ಮನೆಯ ಮಂಕು ದಾಸರ ಮನೆಯ  ಶಂಕುದಾಸ ಬಾಡದಾದಿ ಕೇಶವನ ದಾಸಕಾಣೆ" ಎಂದು ಇಡೀ ಭಾಗವತೋತ್ತಮರ ಹೆಸರುಗಳನ್ನು  ಸ್ಮರಣೆ ಮಾಡುವಂಥ 'ಮುಂಡಿಗೆ'
ಪ್ರಾಕಾರದಲ್ಲಿ ಹೇಳುವ ಮೂಲಕ ಅವರಿಗೆ ಉತ್ತರವನ್ನು ಕೊಡುತ್ತಾರೆ. 
****
"ಮುಂಡಿಗೆ"ಎಂದರೆ  ಗೂಡಾರ್ಥ ಹೊಂದಿರುವ ಸಾಹಿತ್ಯ. ಮಂಡೆಗೆ(ತಲೆ)ಬಿಸಿ ನೀಡುವಂತಹ ಮುಂಡಿಗೆ 

ಶ್ರೀ ರಾಮದಾಸರ ಮುಂಡಿಗೆ ಚಿಂತನೆ

ನಮ್ಮವ್ವ ಈಕೆ ನಮ್ಮವ್ವ ಒಮ್ಮನ ಕೂಲಕಿ ? ನಮ್ಮವ್ವ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ

ಆರುವರುಮರ ರೊಟ್ಟಿಗಳು ಒಂದೆ ಸಾರಿಗೆ ಮುದ್ದೆ ಮಾಡಿ ನುಂಗಿದಳು ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು

ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗೆ ಬೀಳದಹಾಗೆ ಕುಡಿದಳು ಹತ್ತಡಿಗೊಳಿಗೆ ಪತ್ತೆಯಿಲ್ಲದೆ ತಿಂದು 8 ಮೆತ್ತಗೆ ಸುತ್ತಿಕೊಂಡು ಮಲಗಿದಳು

ಒಡಲನಿಲ್ಲದೆ ಕಾಯುವಳು ಇವಳು ಇಡೀ ಬ್ರಹ್ಮಾಂಡವ ನುಂಗಿದಳು ಪಿಡಿದೊಕ್ಕುಡಿತೆಲಿ ಕಡಲೇಳು ಕುಡಿದೊಡೆಯ ಶ್ರೀರಾಮನ ಕೂಡಿದಳು

___////////___//////// ____

ಅರ್ಥಾನುಸಂಧಾನ :-

ಮೇಲಿನ ಮುಂಡಿಗೆಗೆ ಮತಿಗೆ ತಿಳಿದಿತ್ತು ಅರ್ಥೈಸಲು ಪ್ರಯತ್ನ  ಮಾಡಿದ್ದೇನೆ.ತಪ್ಪಿದಲ್ಲಿ ಕ್ಷಮಿಸಿ 

ಈ ಮುಂಡಿಗೆಯಲ್ಲಿ ಮನಸ್ಸು ಮತ್ತು ಮಾಯೆ ಬಗ್ಗೆ ಹೇಳಿದ್ದಾರೆ. ಮಾಯೆ ಎಂಬ ಭಾವನೆ ಉಂಟಾಗಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿಷಯವನ್ನು ಪ್ರತಿ ನುಡಿಯಲ್ಲಿ ಹೇಳಿದ್ದಾರೆ.

"ನಮ್ಮವ್ವ ಈಕೆ ನಮ್ಮವ್ವ ಒಮ್ಮನ ಕೂಲಕಿ ? ನಮ್ಮವ್ವ ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು ಸುಮ್ಮನೆ ಕೂತಳ ಗುಮ್ಮವ್ವ"

ಈ ಪಲ್ಲವಿಯಲ್ಲಿ  ಮಾಯೆ ಮನಸ್ಸಿನ  ಜೊತೆ
ಆಡುವ ಆಟದ ಬಗ್ಗೆ ಹೇಳಿದ್ದಾರೆ. ಮನಸ್ಸು ಕಾಣದ. ಮುಟ್ಟದ ವಸ್ತುವಾಗಿದೆ. ಆದರೆ ದೇಹದ ಇಂದ್ರೀಯಗಳ ಆಟವನ್ನು ಮನಸ್ಸು ತನ್ನ  ಇಚ್ಛೆಯಂತೆ
ಆಡುತ್ತದೆ.ಈ ಮನಸ್ಸಿಗೆ ಮಾಯೆ ಆವರಿಸುದಾಗ
ಮಂಗನ ಕೈಯಲ್ಲಿ ಮಾಣಿಕ್ಯ ಕೋಟ್ಟಂತೆ, ಹೀಗೆ ಮಾಯೆ ಮನಸ್ಸಿನ ಜೊತೆ ಆಡಿ ಏನು ತಿಳಿಯದ ಹಾಗೆ ಇರುತ್ತದೆ.

"ಆರುವರುಮರ ರೊಟ್ಟಿಗಳು ಒಂದೆ ಸಾರಿಗೆ ಮುದ್ದೆ ಮಾಡಿ ನುಂಗಿದಳು ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ ವಾರೆಲಿ ಕೂತು ಸೂರೆ ಮಾಡಿದಳು"

"ಆರುವರ" ಮಾಯೆ ಆವರಿಸಿತೆಂದರೆ ನಮ್ಮಲ್ಲಿರವ ಅರಿಷಡ್ವರ್ಗಗಳಾದ ಕಾಮ,ಕ್ರೋಧ,ಲೋಭ,ಮೋಹ, ಮದ,ಮಾತ್ಸರ್ಯಗಳೆಂಬ ನಮ್ಮ ಆಂತರಿಕ ವೈರಿಗಳು. 
ಒಮ್ಮೆಲೆ ನಮ್ಮನ್ನು  ಆವರಿಸಿ ಮಾಯೆ ನುಂಗುವಳು.
ಇನ್ನು "ಎಂಟು ಭಾಂಡೆ ಅನ್ನ" ಅಂದರೆ 
ಅಷ್ಟಮದಗಳಾದ ಧನ,ಕುಲ,ವಿದ್ಯ,ರೂಪ,ಯೌವ್ವನ,
ಬಲ,ಪರಿವಾರ ಅಧಿಕಾರ. ಅರಿಷಡ್ವರ್ಗಗಳ ಜೊತೆ 
ಅಷ್ಟಮದಗಳು ಸೇರಿದಾಗ ಅಹಂಕಾರದಿಂದ ಮೆರೆಯುತ್ತಾನೆ. ಹೀಗೆ ಎಲ್ಲದಕ್ಕೂ ಮಾಯೆ ಕಾರಣ ಎಂದು ಈ ನುಡಿಯಲ್ಲಿ ಹೇಳಿದ್ದಾರೆ.

"ಎತ್ತಿ ತುಪ್ಪದ ಮೂರು ಡಬ್ಬಿಗಳು ಕುತ್ತಿಗೆ ಬೀಳದಹಾಗೆ ಕುಡಿದಳು ಹತ್ತಡಿಗೊಳಿಗೆ ಪತ್ತೆಯಿಲ್ಲದೆ ತಿಂದು  ಮೆತ್ತಗೆ ಸುತ್ತಿಕೊಂಡು ಮಲಗಿದಳು"

"ಎತ್ತಿ ತುಪ್ಪದ ಮೂರು ಡಬ್ಬಿಗಳು" ಅಂದರೆ
ಸಂಚಿತ,ಆಗಾಮಿ, ಪ್ರಾರಬ್ಧ . ಈ ಮೂರು ಕರ್ಮಗಳು ಸಹ ಮಾಯೆಗೆ ಒಳಪಡುತ್ತವೆ. ತ್ರಿವಿಧ ಕರ್ಮಗಳು ಪ್ರತಿ  ಜನ್ಮದಲ್ಲಿಯೂ ನಮ್ಮ ಜೊತೆ ಬರುತ್ತವೆ. 
"ಹತ್ತಡಿಗೊಳಿಗೆ" ಅಂದರೆ ನಮ್ಮ ಸ್ಥೂಲ ಶರೀರ ಇಂದ್ರೀಯಗಳು ಅರಿಷಡ್ವರ್ಗಗಳ ಜೊತೆ 
ಅಷ್ಟಮದಗಳು ಕೂಡಿ ತಾಮಸರಾಗಿ ಎಲ್ಲ ತ್ರಿವಿಧ ಕರ್ಮಗಳನ್ನು ಮಾಡಿಸುವ ಮಾಯೆ .

"ಒಡಲನಿಲ್ಲದೆ ಕಾಯುವಳು ಇವಳು ಇಡೀ ಬ್ರಹ್ಮಾಂಡವ ನುಂಗಿದಳು ಪಿಡಿದೊಕ್ಕುಡಿತೆಲಿ ಕಡಲೇಳು ಕುಡಿದೊಡೆಯ ಶ್ರೀರಾಮನ ಕೂಡಿದಳು"

ಕೊನೆಯ ನುಡಿಯ ಅರ್ಥವಾಗದೆ ಮಾಯೆ ಯಾರನ್ನು ಬಿಟ್ಟಿಲ್ಲ .ದೇವಾನುದೇವತೆಗಳಿಂದ ಹಿಡಿದು ತೃಣಾದಿ
ಜೀವರನ್ನು ಬಿಟ್ಟಿಲ್ಲ . ಪುರಾಣಾದಿ ಗ್ರಂಥಗಳಲ್ಲಿ ಕೇಳಿರಬಹುದು ಮಾಯೆಯಿಂದ ಒಳ್ಳೆಯದು ಮತ್ತು ಕೆಟ್ಟದ್ದು   ಎರಡು ಆಗಬಹುದು, ಪಿಂಡಾಂಡ ಮತ್ತು ಬ್ರಹ್ಮಾಂಡದಲ್ಲಿ ವ್ಯಾಪಿಸಿ ಅವರವರ 
ಕರ್ಮಾನುಸಾರ ಶ್ರೀಹರಿಯ ಇಚ್ಛೆಯಂತೆ ಕರ್ಮ ಮಾಡಿಸುವಳು.ಮಾಯೆ ಕೊನೆಗೆ ಶ್ರೀ ಹರಿಯಲ್ಲಿ ಕೂಡುವಳು.

✍️ ಪ್ರಿಯಾ  ಪ್ರಾಣೀಶ  ಹರಿದಾಸ
***

ಕೆಲವು ವರ್ಷಗಳ ಹಿಂದೆ ಕಾರಿನಲ್ಲಿ ಪಯಣಿಸುತ್ತಿದ್ದಾಗ ಕಾರಿನ ರೆಕಾರ್ಡ್ ಪ್ಲೇಯರ್ನಲ್ಲಿ ಖ್ಯಾತ ಗಾಯನಕಾರ ವಾಸು ದೀಕ್ಷಿತ್ ಹಾಡುತ್ತಿದ್ದ ಪುರಂದರದಾಸರ ರಚನೆ "ಮುಳ್ಳು ಕೊನೆಯ ಮೇಲೆ ಮೂರು ಕಟ್ಟೆಯ ಕಟ್ಟಿ" ಎಂಬ ಹಾಡು ಅತ್ಯಂತ ಅರ್ಥಗರ್ಭಿತವಾಗಿರುವಂತೆ ತೋರಿತು. ತನ್ನಲ್ಲಿ ಗೂಡಾರ್ಥಗಳನ್ನು ಹೊಂದಿರುವ ಈ ಹಾಡಿನ ಬೆಂಬತ್ತಿ ವಿವರ ಕೇಳಿದಾಗ ಬಹಳಷ್ಟು ಜನರಿಗೆ ಈ ಕುರಿತು ಏನೂ ಗೊತ್ತಿರಲಿಲ್ಲ. ಆದರೂ ನನ್ನ ಪ್ರಯತ್ನ ನಡೆದೇ ಇತ್ತು. ಅಂದು ಮುಖ ಪುಸ್ತಕದ ಯಾವುದೋ ಒಂದು ಪುಟದಲ್ಲಿ ಮುಳ್ಳು ಕೊನೆಯ ಮೇಲೆ ಮೂರು ಕಟ್ಟೆಯ ಕಟ್ಟಿ.... ಮುಂಡಿಗೆಯ ವಿವರವೇನೋ ದೊರೆಯಿತು. ಆದರೆ ಇನ್ನೂ ಹೆಚ್ಚಿನ ವಿಷಯ ಸಂಗ್ರಹಣೆಯ ಅವಶ್ಯಕತೆ ಇತ್ತು.

ಇತ್ತೀಚೆಗೆ ನನ್ನೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಕಾರ್ಯಕ್ರಮವೊಂದರಲ್ಲಿ ದಾಸ ಸಾಹಿತ್ಯದ ಕುರಿತು ಉತ್ತರಾದಿ ಮಠದಲ್ಲಿ ಅಧ್ಯಯನಗೈದ ಪ್ರಸ್ತುತ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಲ್ಲಿರುವ ಫಣೀಂದ್ರಾಚಾರ್ಯ  ಅವರು ಮಾತನಾಡಿದರು. ಅತ್ಯಂತ ಕಡಿಮೆ ಸಮಯದಲ್ಲಿ ದಾಸ ಸಾಹಿತ್ಯದಲ್ಲಿ ದಾಸರ ಪದಗಳು, ಭಜನೆಗಳು, ಮುಂಡಿಗೆಗಳು,

 ಸುಳಾದಿಗಳು ಉಗಾಭೋಗಗಳು ಹೀಗೆ ಹಲವಾರು ವಿಧಗಳ ಕುರಿತು ಅವರು ಉಪನ್ಯಾಸ ನೀಡಿದರು.

ಹಾಡಿದ್ದೆ ಹಾಡ್ತಾನೆ ಕಿಸ್ ಬಾಯಿ ದಾಸ ಎಂಬ ಪದದ ಅರ್ಥವನ್ನು ತಿಳಿದರೆ ಇನ್ನೆಂದು ಅದನ್ನು ಅಪಹಾಸ್ಯ ಮಾಡಲು ಬಳಸುವುದಿಲ್ಲ ನೀವು.

ಕಿಸಬಾಯಿ ಅಂದರೆ ದೊಡ್ಡ ಬಾಯಿ ಇರುವ ನರಸಿಂಹದೇವರು ಎಂದರ್ಥ. ಆ ನರಸಿಂಹ ದೇವರ ದಾಸನೇ ಹಿರಣ್ಯಕಶಿಪುವಿನ ಮಗ ಪ್ರಹ್ಲಾದ. ಆತ ಪದೇ ಪದೇ ಸ್ಮರಿಸುವುದು ತನ್ನ ನೆಚ್ಚಿನ ದೈವ ನಾರಾಯಣನನ್ನು. ಅಂದರೆ ನರಸಿಂಹದೇವರ ದಾಸ ಪ್ರಹ್ಲಾದ ಹಾಡಿದ್ದನ್ನೇ ಹಾಡುವನು ಅಂದರೆ ನಾರಾಯಣನ ನಾಮಸ್ಮರಣೆ ಮಾಡುತ್ತಿರುವನು ಎಂದರ್ಥ.
ಇನ್ನು ಮುಂಡಿಗೆಗಳಿಗೆ ಬಂದರೆ ಮುಂಡಿಗೆ ಎಂದರೆ ಮರಾಠಿ ಭಾಷೆಯಲ್ಲಿ 'ಮರದ ದಿಮ್ಮಿ' ಎಂದು ಅರ್ಥ. ಹೇಗೆ ಮರದ ದಿಮ್ಮಿಯನ್ನು ಸುಲಭವಾಗಿ ಎತ್ತಲು ಸಾಧ್ಯವಿಲ್ಲವೋ ಹಾಗೆಯೇ ಮುಂಡಿಗೆಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಕಷ್ಟ ಸಾಧ್ಯ.
ಮುಂಡಿಗೆ ಎಂದರೆ ತಲೆಗೆ ಕೆಲಸ ಕೊಡುವುದು ಅಂದರೆ ಬುದ್ಧಿ ಉಪಯೋಗಿಸುವುದು ಎಂದು ಅರ್ಥ. ದಾಸರು ತಮ್ಮ ಪಾಂಡಿತ್ಯ ಪ್ರದರ್ಶನಕ್ಕಾಗಿ ಮುಂಡಿಗೆಗಳನ್ನು ರಚಿಸಿಲ್ಲ ಬದಲಾಗಿ ತಮ್ಮ ಪರೋಕ್ಷ ಪ್ರಿಯತೆಯನ್ನು ಒಗಟಿನಂತಹ ಉತ್ತರಗಳನ್ನು ಹುಡುಕುವ ಜಾಣ್ಮೆ ಜನರಲ್ಲಿ ಹುಟ್ಟಲಿ ಎಂಬ ಕಾರಣದಿಂದ ಉಭಯ ಭಾಷಾ ವಿಷಾರದರಾದ ದಾಸರಲ್ಲಿ ಕನಕದಾಸರು, ಪುರಂದರದಾಸರು, ಮಹಿಪತಿ ದಾಸರು ವಿಜಯದಾಸರು ಮತ್ತು ಜಗನ್ನಾಥದಾಸರು ಮುಂತಾದವರು ಮುಂಡಿಗೆಗಳನ್ನು ರಚಿಸಿದ್ದಾರೆ.

*ಪರೋಕ್ಷಪ್ರಿಯ ವಿವಾಹಿ ದೇವಾಹ  ಪ್ರತ್ಯಕ್ಷ ದ್ವಿಷಃ*

ಅಂದರೆ ದೇವತೆಗಳಿಗೂ ಕೂಡ ಪ್ರತ್ಯಕ್ಷವಾಗಿ ಹೊಗಳುವುದಕ್ಕಿಂತ ಪರೋಕ್ಷ ಪ್ರಶಂಸೆ ತುಂಬಾ ಆಪ್ತವೆನಿಸುತ್ತದೆ ಎಂದು ಇದರ ಅರ್ಥ.

ತಮ್ಮ ಕೃತಿಯಲ್ಲಿ ಪೂರ್ಣವಾಗಿ ಗೂಡಾರ್ಥಗಳಿರುವ ಹಾಡುಗಳನ್ನು ರಚಿಸಿದ್ದಾರೆ ಪಾಪೋಸು ಪೋದು ವಲ್ಲ ಎಂಬ ಹಾಡಿನಲ್ಲಿ ಚಪ್ಪಲಿ ಕಳೆದುಕೊಂಡು ದುಃಖಿಸುತ್ತಿರುವ ವ್ಯಕ್ತಿಯನ್ನು ಕುರಿತು ಹೇಳಿದರು ಚಪ್ಪಲಿ ಕಳೆದುಕೊಂಡ ವ್ಯಕ್ತಿ ತನ್ನ ಪಾಪವನ್ನು ಕೂಡ ಕಳೆದುಕೊಳ್ಳುತ್ತಾನೆ ಎಂದು ಇಲ್ಲಿ ಹೇಳಿದ್ದಾರೆ ಕೆಲವು ಮುಂಡಿಗೆಗಳು ಸೂಕ್ತಿಯಂತಿದ್ದು ಅವುಗಳ ರುಚಿ ಅನುಭವಿಸಿದ ಅನುಭವಿಗಳಿಗೆ ರಸದೌತಣವನ್ನು ನೀಡುತ್ತವೆ ಇನ್ನೂ ಕೆಲವು ಮುಂಡಿಗೆಗಳು ಶಾಸ್ತ್ರಕ್ಕೆ ವಿರುದ್ಧವಾಗಿ ಕಂಡು ಬರುತ್ತವೆ.


"ಗುರು ಹಿರಿಯರ ಬೈದವನೇ ಶಿಷ್ಯ"

ಇಂತಹ ಮುಂಡಿಗೆಗಳಲ್ಲಿ ಒಂದು.

ಪುರಂದರದಾಸರು, ಕನಕದಾಸರ ನಂತರ ವಿಜಯದಾಸರು ಗೋಪಾಲ ದಾಸರು ಜಗನ್ನಾಥದಾಸರು ಮೋಹನದಾಸರು ಪ್ರಾಣೇಶ ದಾಸರು ಮುಂತಾದ ಅನುಭವಿ ಸಂತರೂ ಮುಂಡಿಗೆಗಳನ್ನು ರಚಿಸಿದ್ದಾರೆ.

ಕನಕದಾಸರಂತೂ 'ಮುಂಡಿಗೆಯ ಬ್ರಹ್ಮ' ಎಂದೆ ಪ್ರಖ್ಯಾತರು.

ಮರನುಂಗುವ ಹಕ್ಕಿ ಮನೆಯೊಳಗೆ ಬಂದಿದೆ, ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ...... ಮುಂತಾದ ಮುಂಡಿಗೆಗಳು ಮಾಧ್ವ ತತ್ವದ ಪ್ರಧಾನ ಪ್ರಮೇಯಗಳನ್ನು ತಿಳಿಸಿಕೊಡುತ್ತದೆ.

ಹತ್ತುತಲೆ ಕೆಂಪಾಗಿಹನ ಆರುತಲೆ ಕಪ್ಪಾಗಿಹನ ಸಖನ ಸುತನ ಸ್ವಾಮಿಯ ವೈರಿಯ ತಮ್ಮನ ಸತಿ ಬಂದಳು ಈಗ...... ಇದೊಂದು ನಿದ್ರಾ ಮುಂಡಿಗೆ. ನಿದ್ರೆಯ ಕುರಿತಾಗಿ ಇರುವ ಮುಂಡಿಗೆ.

ಹತ್ತುತಲೆ ಕೆಂಪಾಗಿರುವುದು ಆರುತಲೆ ಕಪ್ಪಾಗಿರುವುದು... ಅಗ್ನಿ... ಅಗ್ನಿಯ ಸಖ ವಾಯು.... ವಾಯುಸುತ ಹನುಮಂತ... ಹನುಮಂತನ ಸ್ವಾಮಿ ಶ್ರೀರಾಮ.... ಶ್ರೀ ರಾಮನ ವೈರಿ ರಾವಣ.... ರಾವಣನ ತಮ್ಮ ಕುಂಭಕರ್ಣ (ನಿದ್ರೆಗೆ ಹೆಸರಾದ) ನ ಸತಿ ಎಂದರೆ  ಇದರ ಉತ್ತರ ಮತ್ತೆ ನಿದ್ರೆಯೇ

.... ಸಭೆಯಲ್ಲಿ ಕುಳಿತ ಯಾರಿಗಾದರೂ ನಿದ್ರೆ ಬರುತ್ತಿದ್ದರೆ  ಈ ಮುಂಡಿಗೆಯನ್ನು ಹೇಳಿದರೆ ಅವರ ತಲೆಯಲ್ಲಿ ಒಂದು ಹುಳುವನ್ನು ಬಿಟ್ಟಂತೆ . ಅರ್ಥವನ್ನು ಅರಿಯುವ ಹೊತ್ತಿಗೆ ಅವರ ನಿದ್ದೆ ಹಾರಿಯೇ ಹೋಗುತ್ತದೆ.

ಅಂತಹದೇ ಇನ್ನೊಂದು ಪುಟ್ಟ ಮುಂಡಿಗೆ

ಹರನ ಹಾರನ ಆಹಾರನ ಸುತನ ಸ್ವಾಮಿಯ ವೈರಿಯ ಅನುಜನ ಸತಿ ಬಂದಳೀಗ.... ಇದು ಕೂಡ ನಿದ್ದೆ ಬಂದಿತ್ತು ಎಂದೇ ಹೇಳುತ್ತದೆ.

ಮುಂಡಿಗೆಯ ಬ್ರಹ್ಮ ಕನಕದಾಸರನ್ನು ಅಪಹಾಸ್ಯ ಮಾಡಲೆಂದು ಒಮ್ಮೆ ಅವರ ವಿರೋಧಿಗಳು ಎಮ್ಮೆ ಹಡೆಯಿತು ಎಂಬುದನ್ನು ಕುರಿತು ಮುಂಡಿಗೆ ರಚಿಸಿ ಎಂದು ಹೇಳಿದಾಗ ಅವರು ರಚಿಸಿದ್ದು ಹೀಗೆ

ಯಮನ ವಾಹನ ಹಡೆಯಿತು.... ಹನ್ನೆರಡನೆಯ ತಾರೆಯ ಪೆಸರಳವಳ ತಾಯಿಯ ತಮ್ಮನ ಕತ್ತಲೊಳ್ ಗುದ್ದಿದವನ ಅಗ್ರಜನ ಪಿತನ ವಾಹನದ ಸತಿಗೆ ಪ್ರಸೂತಿ ಯಾಯಿತು

12ನೆಯ ತಾರೆ (ನಕ್ಷತ್ರ) ಉತ್ತರ....ಆಕೆಯ ತಾಯಿ ಸುಧೇಶ್ಣ ದೇವಿ (ವಿರಾಟರಾಯನ ಪತ್ನಿ) ....ಆಕೆಯ ತಮ್ಮ ಕೀಚಕನನ್ನು ಕತ್ತಲಲ್ಲಿ ಗುದ್ದಿದವ ಭೀಮ.... ಭೀಮನ ಅಗ್ರಜ ಧರ್ಮರಾಜ.... ಆತನ ಪಿತ ಯಮಧರ್ಮ..... ಯಮಧರ್ಮನ ವಾಹನ ಕೋಣ ....ಕೋಣನ ಸತಿ ಎಮ್ಮೆ... ಎಮ್ಮೆಗೆ ಪ್ರಸೂತಿ ಅಂದರೆ ಎಮ್ಮೆ ಹಡೆಯಿತು ಎಂದರ್ಥ.

ಅದೇ ಕನಕದಾಸರು ಮತ್ತೊಮ್ಮೆ ವಾಯುವಿಹಾರಕ್ಕೆಂದು ಹೊರಟಾಗ ಎಲ್ಲಿಗೆ ಹೊರಟಿದ್ದೀರಿ ಎಂದು ಪ್ರಶ್ನಿಸಿದಾಗ ಈ ಮುಂಡಿಗೆಯನ್ನು ಅವರು ಹೇಳಿದರು.

ಯಾರದೋ ಹೆಂಡತಿಯನ್ನು ಇನ್ನಾರೋ ಹೊಡೆದುಕೊಂಡು ಹೋದರಂತೆ. ಅವಳನ್ನು ಇನ್ನಾರೋ ಹುಡುಕಿಕೊಂಡು ಬಂದರಂತೆ. ನಾನು ಅವರಪ್ಪನ ಹುಡುಕಿಕೊಂಡು ಹೋಗುತ್ತಿದ್ದೇನೆ... ರಾಮನ ಪತ್ನಿ ಸೀತೆಯನ್ನು ರಾವಣ ಹೊಡೆದುಕೊಂಡು ಹೋದ ರಾವಣನನ್ನು ಹುಡುಕಿಕೊಂಡು ಹನುಮಂತನು ಹೋದ ಆ ಹನುಮಂತನ ಅಪ್ಪ ವಾಯುದೇವ ಅಂದರೆ ವಾಯುವಿಹಾರಕ್ಕೆ ನಾನು ಹೋಗುತ್ತಿದ್ದೇನೆ ಎಂದು ಅವರು ಉತ್ತರ ನೀಡಿದರು.

ಕೃಷ್ಣ ಪರಮಾತ್ಮನನ್ನು ಕುರಿತು ಬರೆದ ಒಂದು ಮುಂಡಿಗೆ ಹೀಗಿದೆ

ಸುರರ ವಾದ್ಯದ ಪೆಸರವನ.. ಬಸುರಲ್ಲಿ ಬಂದ ಉರಗನ ಅತ್ತೆಯ ಮಗನ ಹಿರಿಯ ತಮ್ಮನ ಸುತ್ತಿ ಬಾಧಿಸಲಾಗದೆ ಅವರಪ್ಪನ ತಿಂದನು ಧುರದೊಳ್ ಧ್ವಜದೊಳ್ ಕೀಲಿಸಿದಾತನ ವರ ಕುಮಾರರೆಲ್ಲರನು ಕೊಂದವನ ನಿಜಮಾತೆಯ ಕೂಡ ಪುಟ್ಟಿದನ ವೇಲಾಪುರದ ಆದಿಕೇಶವ ಸಲಹೋ

ಆನೇಕದುಂದುಭಿ ಎಂಬ ಹೆಸರನ್ನು ಪಡೆದಿದ್ದ ವಸುದೇವನ ಪತ್ನಿ ರೋಹಿಣಿಯ ಬಸಿರಲ್ಲಿ ಅವತರಿಸಿದ ಹಾವಿನ ಅವತಾರವಾದ ಬಲರಾಮನ ಅತ್ತೆ ಕುಂತಿಯ ಮಗ ಧರ್ಮರಾಜನ ಹಿರಿಯ ತಮ್ಮ ಭೀಮಸೇನನನ್ನು ಬಂಧಿಸಲಾಗದೆ ಅವರಪ್ಪನಾದ ವಾಯುವನ್ನು ತಿಂದನು. ದೂರ ಅಂದರೆ ಯುದ್ಧದಲ್ಲಿ ದುರ್ಯೋಧನನನ್ನು ಉರಗಕೇತನಾಗಿಸಿ ಲಕ್ಷ್ಮಣ ಕುಮಾರನೇ ಮೊದಲಾದವರನ್ನು ಕೊಂದ ನಿಜ ಮಾತೆಯಾದ ಸುಭದ್ರೆಯ ಅಭಿಮನ್ಯುವಿನ ಜೊತೆಗೆ ಹುಟ್ಟಿದ ಶ್ರೀ ಕೃಷ್ಣನಿಗೆ ನಮನ ಎಂದು.


ಪುರಂದರ ದಾಸರ ಮುಂಡಿಗೆಗಳಿಗೆ ಬಂದರೆ

ಮಾಡು ಸಿಕ್ಕದಲ್ಲ

ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ ಜೋಡು ಹೆಂಡರಿಗಂಜಿ ಓಡಿ ಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲ

ಎಚ್ಚರಗೊಳ್ಳಲಿಲ್ಲ ಮನವೇ ಹುಚ್ಚನಾದೆನಲ್ಲ

ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದು ಹೋಯಿತಲ್ಲ

ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ

ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ದೊಪ್ಪನೆ ಬಿತ್ತಲ್ಲ

ಯೋಗ ಬಂದಿತಲ್ಲ ಬದುಕುವಿಭಾಗವಾಯಿತಲ್ಲ

ಭೋಗಿಶಯನ ಶ್ರೀ ಪುರಂದರ ವಿಠಲನ ಆಗ ನೆನೆಯಲಿಲ್ಲ

ಈ ಮೇಲಿನ ಮುಂಡಿಗೆಯಲ್ಲಿ

ಮಾಡು ಸಿಕ್ಕದಲ್ಲ ಎಂದರೆ ಭಕ್ತಿಯು ಈ ಸಂಸಾರದಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ವೈಕುಂಠವು ಸಿಕ್ಕುತ್ತಿಲ್ಲ. ಬುದ್ಧಿ ಮತ್ತು ಮನಸ್ಸು ಎಂಬ ಜೋಡು ಹೆಂಡರಿಗೆ ಅಂಜಿ ಓಡಿ ಹೋಗುವಾಗ ಮನಸ್ಥಿತಿಯೆ ಬಿದ್ದು ಹೋಯಿತು.

ಬದುಕು ಇದ್ದಷ್ಟು ಕಾಲ ಭಗವಂತನ ಬಗ್ಗೆ ಎಚ್ಚರಗೊಳ್ಳಲಿಲ್ಲ... ಬೆಲ್ಲದ ಅಚ್ಚಿನಂತೆ ಎರಕಹೊಯ್ದ ಈ ಸಾಂಸಾರಿಕ ಸುಖದಲ್ಲಿ ಮುಳುಗಿ ಕಡೆಗೆ ದೊರೆತ ಅಲ್ಪಸುಖವು ಕೂಡ ಭಯಂಕರವಾದ ದುಃಖದ ಅಗ್ನಿಯಲ್ಲಿ ಕರಗಿ ಹೋಯಿತು.

ಹರಿನಾಮ ಸ್ಮರಣೆ ಎಂಬ ಪಾಯಸವನ್ನು ಉಣದೇ ಮುಪ್ಪು ಆವರಿಸಿತು... ಅಂದರೆ ದೇವರ ಆಧ್ಯಾತ್ಮದ ಕಡೆಗಿನ ನಮ್ಮ ನಡೆ ಸಾಧನ ಇಲ್ಲದೆ ಶೂನ್ಯವಾಯಿತು. ತುಪ್ಪದ ಬಿಂದಿಗೆಯಂತಹ ನಮ್ಮ ಶರೀರ ಬಿದ್ದು ಹೋಯಿತು ಎಂದರೆ ಸಾವು ಸಂಭವಿಸಿತು ಎಂದರ್ಥ.ತುಪ್ಪದ ಬಿಂದಿಗೆ ತಿಪ್ಪೆಗೆ ಬಿದ್ದಂತೆ ಅಂದರೆ ತಿಪ್ಪೆಗೆ ಬಿದ್ದ ತುಪ್ಪವನ್ನು ಎತ್ತಿಕೊಳ್ಳಲು ಆಗದಲ್ಲ.

ಈ ಸಾಧನದ ಶರೀರ ಪುಣ್ಯ ಪಾಪಗಳಿಂದಲೇ ವಿಭಾಗವಾಗಿ ಪುರಂದರ ವಿಠಲನನ್ನು ನೆನೆಯದೇ ಹೋಯಿತಲ್ಲ ಎಂದು ಪುರಂದರದಾಸರು ಈ ಮುಂಡಿಗೆಯಲ್ಲಿ ಹೇಳಿದ್ದಾರೆ.

ವಿಜಯದಾಸರ ಮುಂಡಿಗೆ

ಎರಡೊಂದು ಕಾಯ ನೋಡು 

ಎರಡೊಂದು ಕಳೆದು

ಎರಡೊಂದು ಗುಣ ಶೂನ್ಯ ವಿಜಯ ವಿಠಲ ಹರಿಯ ಎರಡೊಂದ ರೂಪ ಭಜಿಸಿ

ಎರಡೊಂದು ಆವರ್ತಿ ಪೊಳೆವ.

ಮೂರೊಂದು ವರ್ಣದ

ಮೂರೊಂದು ಕಡೆ ಬಿಂಬ ರೂಪ

ಮೂರೊಂದು ಆಗಿ ಭಜಿಸು

ಮೂರೊಂದು ಪುರುಷಾರ್ಥ

ಕಾಯ ಎಂದರೆ ಶರೀರ ಈ ದೇಹವು ಸ್ವರೂಪ, ಲಿಂಗ ಮತ್ತು ಸ್ಥೂಲ ಶರೀರಗಳೆಂದು ಮೂರು ಭಾಗಗಳು (೨+೧)

ಎರಡೊಂದನ್ನು(೨+೧) ಕಳೆದು ಅಂದರೆ ಸಂಚಿತ, ಅಗಾಮಿ ಮತ್ತು ಪ್ರಾರಬ್ಧಗಳೆಂಬ ಮೂರು ಕರ್ಮಗಳನ್ನು ಕಳೆಯಬೇಕು.

ಎರಡು ಒಂದು ಗುಣ(೨+೧) ಶೂನ್ಯ ಎಂದರೆ ಸತ್ವ ರಜಸ್ಸು ಮತ್ತು ತಮಸ್ಸು ಎಂಬ ಮೂರು ಪ್ರಾಕೃತ ಗುಣಗಳಿಂದ ರಹಿತನಾದವನು.

ಎರಡೊಂದು(೨+೧) ಸಾರಿ ನೆನೆದು ಅಂದರೆ ದಿನದ ಮೂರು ಹೊತ್ತು ಮುಂಜಾನೆ ಮಧ್ಯಾಹ್ನ ಮತ್ತು ಸಾಯಂಕಾಲ ಭಗವಂತನನ್ನು ನೆನೆಯಬೇಕು ಎಂದರ್ಥ.

ಎರಡೊಂದು ಸ್ಥಾನ ಸೇರು(೨+೧) ಅಂದರೆ ಶ್ವೇತದ್ವೀಪ, ಅನಂತಾಸನ ಮತ್ತು ವೈಕುಂಠ ಎಂಬ ಮೂರು ಸ್ಥಾನ ಸೇರಲು ಸಾಧನೆ ಮಾಡು

ಎರಡೊಂದು (೨+೧) ರೂಪ ಭಜಿಸಿ ಅಂದರೆ ಅಗ್ರೇಶ ಮೂಲೇಶ ಮತ್ತು ಪ್ರಾದೇಶಗಳೆಂಬ ಬಿಂಬರೂಪಗಳನ್ನು ಭಜಿಸಿ ಮುಕ್ತಿ ಪಡೆಯುವುದು.

ಎರಡೊಂದು ಆವರ್ತಿ ಪೊಳೆವ.... ಅಂಗುಷ್ಟದಷ್ಟು ಮೂರ್ತಿ, ಅಂಗುಷ್ಟಕ್ಕಿಂತ ಹೆಚ್ಚು ದೊಡ್ಡದಾದ ಮೂರುತಿ ಮತ್ತು ಚೋಟುದ್ದ ಮೂರುತಿಗಳನ್ನೇ ಕ್ರಮವಾಗಿ ಅಗ್ರೇಶ ಮೂಲೇಶ ಮತ್ತು ಪ್ರಾದೇಶಿ ಎನ್ನುವರು ಈ ರೀತಿ ಮೂರು ವಿಧವಾದ ಆಕಾರದಲ್ಲಿರುವ ದೇವರನ್ನು ಮೂರು ವಿಧವಾಗಿ ಧ್ಯಾನಿಸುವವರ ಹೃದಯದಲ್ಲಿ ದೇವರು ಇರುತ್ತಾನೆ.

ಮೂರೊಂದು ಯುಗದಲ್ಲಿ ಅಂದರೆ ಕೃತಯುಗ, ತ್ರೇತಾಯುಗ,  ದ್ವಾಪರ ಮತ್ತು ಕಲಿಯುಗಗಳಲ್ಲಿ (೩+೧)

ಮೂರೊಂದು ವರ್ಣದ ಅಂದರೆ ನಾಲ್ಕು ವರ್ಣದ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ ರೂಪಗಳು ಕ್ರಮವಾಗಿ ಬಿಳಿ, ಅರುಣ ವರ್ಣ, ಹಸಿರು ಮತ್ತು ನೀಲಿ ಬಣ್ಣಗಳಿಂದ ಕೂಡಿದ್ದು ನಾಲ್ಕು ಯುಗಗಳ ನಿಯಾಮಕವಾಗಿವೆ.

ಮೂರೊಂದು ಕಡೆ ಬಿಂಬ ರೂಪ ಅಂದರೆ ಸ್ವರೂಪ ದೇಹ ಲಿಂಗ ದೇಹ ಅನಿರುದ್ಧ ದೇಹ ಮತ್ತು ಸ್ತೂಲ ದೇಹಗಳಲ್ಲಿ ಬೆಂಬವಾಗಿರುವ ಭಗವಂತ

ಮೂರೊಂದು ಆಗಿ ಭಜಿಸು... ಸತ ಚಿತ್ ಆನಂದ ಆತ್ಮ ಭಗವಂತನೆಂದು ಪೂಜಿಸಬೇಕು

ಮೂರೊಂದು ಪುರುಷಾರ್ಥ... ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥವು ಲಭಿಸುತ್ತದೆ.

ಹೀಗೆ ದಾಸರು ಮುಂಡಿಗೆಗಳ ಮೂಲಕ ನಮ್ಮ ಮಸ್ತಕಕ್ಕೆ ಹೆಚ್ಚಿನ ಜ್ಞಾನವನ್ನು ಧಾರೆ ಎರೆದಿದ್ದಾರೆ. ಒಗಟಿನ ರೂಪದಲ್ಲಿರುವ ಈ ಮುಂಡಿಗೆಗಳನ್ನು ಬಿಡಿಸುತ್ತಾ ಹೋದರೆ ಆಧ್ಯಾತ್ಮದ, ಭಗವದ್ ಚಿಂತನೆಯ ಅನಾವರಣವಾಗುತ್ತದೆ. ಮನಸ್ಸು ಪ್ರಾಕೃತವನ್ನು ಮರೆತು ಪಾರಮಾರ್ಥದಲ್ಲಿ ಲೀನವಾಗುತ್ತದೆ. ಮುಂಡಿಗೆಗಳು ನಮ್ಮಬುದ್ಧಿಗೆ ಕಸರತ್ತನ್ನು ನೀಡುವುದರ ಜೊತೆಗೆ ನಮ್ಮ ಮನಸ್ಸಿನ ಚಂಚಲ ಚಿತ್ತವನ್ನು ಹೊಡೆದೋಡಿಸಿ  ಚಿಂತನೆಗೆ ದಾರಿ ಮಾಡಿ ಕೊಡುತ್ತದೆ. ಅಂತಹ ಮುಂಡಿಗೆಗಳನ್ನು ಬಿಡಿಸಲು ಮಂಡೆ ಉಪಯೋಗಿಸೋಣ. ಇನ್ನೂ ಹೆಚ್ಚು ಹೆಚ್ಚು ಮುಂಡಿಗೆಗಳ ವಿವರಗಳನ್ನು ಅರಿಯೋಣ ಎಂಬ ಆಶಯದೊಂದಿಗೆ

- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
***

.
‘ಮುಂಡಿಗೆ’ ಎಂಬುದು ದಾಸಸಾಹಿತ್ಯದ ಸಂದರ್ಭದಲ್ಲಿ ಮೂಡಿದ ಸುಲಭವಾಗಿ ಬಿಡಿಸಲಾಗದ ಒಗಟಿನಂತಹ ರಚನೆಗಳು. ಬಿಗಿಯಾಗಿ ಹಿಡಿದ ಮುಷ್ಟಿಕೆಯಲ್ಲಿನ ಪದಾರ್ಥವನ್ನು ಬಿಡಿಸಿಕೊಳ್ಳಲು ಹೇಗೆ ಸುಲಭವಲ್ಲವೋ ಹಾಗೆಯೇ ಮುಂಡಿಗೆಗಳ ಹೂರಣವನ್ನು ಹೊರತೆಗೆಯುವುದು ಅಷ್ಟೇ ಕಷ್ಟಸಾಧ್ಯ. ಮುಷ್ಟಿಕೆ ಎಂಬ ಪದದಿಂದ ಮುಂಡಿಗೆ ಪದ ರೂಪುಗೊಂಡಿರಬೇಕೆಂದು ವಿದ್ವಾಂಸರ ಅಭಿಪ್ರಾಯ. ಪದ್ಯ ನಿಬದ್ಧವಾಗಿ ‘ಬೆಡಗಿನ ವಚನ’ಗಳನ್ನು ಹೋಲುವ ಮುಂಡಿಗೆಗಳು; ರೂಪಕ, ಸಂಕೇತ, ಪ್ರತಿಮೆಗಳ ಮೂಲಕ, ತತ್ವಸ್ವರೂಪ ಹಾಗೂ ಅನುಭಾವದ ನಿಗೂಢತೆಯನ್ನೂ, ಹೇರಳವಾದ ಪುರಾಣ ಪ್ರಸಂಗಗಳನ್ನೂ ಒಳಗೊಂಡಿರುತ್ತವೆ. ಇವುಗಳು ವಿವಿಧ ಛಂದಸ್ಸಿನಲ್ಲಿದ್ದು ಪಲ್ಲವಿ, ಅನುಪಲ್ಲವಿ ಮತ್ತು 3, 5, 7, 9 ಹೀಗೆ ದಾಸ ಸಾಹಿತ್ಯದ ನಿಯಮದಂತೆ ಬೆಸ ಸಂಖ್ಯೆಯ ಚರಣಗಳನ್ನು ಕೆಲವೊಮ್ಮೆ ಸಮ ಸಂಖ್ಯೆಯ ಚರಣಗಳನ್ನೂ ಹೊಂದಿದ್ದು ತಾಳಬದ್ಧವಾಗಿ ಹಾಡಲೂ ಸಾಧ್ಯವಿರುವುದರಿಂದ ಇವುಗಳನ್ನು ಮುಂಡಿಗೆ ಹಾಡುಗಳು, ಮುಂಡಿಗೆ ಕೀರ್ತನೆಗಳು ಎಂದೂ ಕರೆಯುತ್ತಾರೆ.

“ಕ್ಲಿಷ್ಟ ಮಂತ್ರಭಾಗಗಳಾದ ‘ಬ್ರಹ್ಮೋದ್ಯ’ ಗಳೇ ಮುಂದೆ ಚಿತ್ರ ಕಾವ್ಯಕ್ಕೆ ಸ್ಫೂರ್ತಿಯಾದವು. ಸಂಸ್ಕೃತ ಲೌಕಿಕ ಕಾವ್ಯಗಳಲ್ಲಿನ ಗರ್ಭ ಕವಿತ್ವ. ಶ್ಲೇಷ ಚಿತ್ರ. ಗೂಢ ಚಿತ್ರ, ವರ್ಣಚಿತ್ರ, ಪ್ರಹೇಲಿಕಾ ಮುಂತಾದ ಪ್ರಕಾರಗಳಲ್ಲಿರುವ ಈ ಬೆಡಗು ಕನ್ನಡ ಕಾವ್ಯಗಳಲ್ಲಿಯೂ ಮುಂದುವರಿಯಿತು” ಎಂದು ಬಹುಶ್ರುತ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಅಭಿಪ್ರಾಯಪಡುತ್ತಾರೆ.

ದ್ವಾ ಸುಪರ್ಣಾ ಸಯುಜಾ ಸಖಾಯಾ
ಸಮಾನಂ ವೃಕ್ಷಂ ಪರಿಷಸ್ವಜಾತೇ |
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ
ಅನಶ್ನನ್ನನ್ಯೋ ಅಭಿಚಾಕಶೀತಿ ||

(ಒಂದೇ ಮರದಲ್ಲಿ ಕುಳಿತ ಎರಡು ಪಕ್ಷಿಗಳಲ್ಲಿ ಒಂದು ಹಣ್ಣನ್ನು ಸವಿಯುತಿದ್ದರೆ ಮತ್ತೊಂದು ಅದರ ಗೊಡವೆಯೇ ಇಲ್ಲದೆ ಹಾಯಾಗಿ ಕುಳಿತಿದೆ ಎಂಬುದು ಭಾವ) ಈ ವೇದಮಂತ್ರವೂ ಮೂಂಡಿಗೆಗಳ ರಚನೆಗೆ ಸ್ಪೂರ್ತಿ ಎನ್ನುತ್ತಾರೆ. ವೇದಗಳಲ್ಲಿಯೂ ಉಪನಿಷತ್ತುಗಳಲ್ಲಿಯೂ ಇಂತಹ ಒಗಟುಗಳು ಅಥವಾ ಮುಂಡಿಗೆಗಳು ಸಾಕಷ್ಟು ಕಂಡುಬರುತ್ತವೆ. ಜ್ಞಾನಿಗಳಿಗೆ ಇವುಗಳ ಅಂತರಾಳವನ್ನು ಹೊಕ್ಕು ಅರ್ಥಮಾಡಿಕೊಳ್ಳುವುದು ಬಹಳ ಸುಲಭ. ಸಾಮಾನ್ಯರಿಗೆ ಅದು ಕಬ್ಬಿಣದ ಕಡಲೆ.

ಕಾಡುಕೇದಗೆ, ಗಡುತರವಾದ ದೊಣ್ಣೆ, ಮರದ ದಿಮ್ಮಿ, ಲೋಹಕವಚ, ಒಡಪು ಇತ್ಯಾದಿ ವಿಪುಲಾರ್ಥಗಳೂ ಮುಂಡಿಗೆಗೆ ಇದ್ದು ಒಟ್ಟಿನಲ್ಲಿ ಮಂಡೆ ಬಿಸಿಮಾಡಿ ಬುದ್ಧಿ ಶಕ್ತಿಗೆ ಸವಾಲಾಗಿ, ರಹಸ್ಯಾರ್ಥಗಳನ್ನು ಹೊಂದಿರುವ ಕೃತಿಗಳೇ ಮುಂಡಿಗೆಗಳು.

ಕನ್ನಡದ ಕವಿರಾಜಮಾರ್ಗಕಾರನಾದ ಶ್ರೀವಿಜಯನಲ್ಲದೆ, ಪಂಪನಾದಿಯಾಗಿ ಚಂದ್ರರಾಜ, ಗುರುಲಿಂಗವಿಭು, ಗೋವಿಂದ, ಮುರಿಗೆ ದೇಶಿಕೇಂದ್ರ, ಸರ್ವಜ್ಞ, ಚಿಕ್ಕುಪಾಧ್ಯಾಯ, ಕುಮಾರವ್ಯಾಸ ನಿಜಗುಣ ಶಿವಯೋಗಿ ರತ್ನಾಕರವರ್ಣಿ ಹೀಗೆ ಹಲವಾರು ಕವಿಗಳು ಚಿತ್ರಕವಿತ್ವದ ಈ ಒಂದು ಬಗೆಯ ವೈಶಿಷ್ಟ್ಯಕ್ಕೆ ಮಾರುಹೋಗಿ ಅದನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ವಚನ ಸಾಹಿತ್ಯದ ಸಂದರ್ಭದಲ್ಲಿ ಮೂಡಿದ ಅಲ್ಲಮನ ಬೆಡಗಿನ ವಚನಗಳೂ ಮುಂಡಿಗೆಗಳೆ. ಅಲ್ಲದೆ ಪುರಂದರ ದಾಸ, ಕನಕದಾಸ, ಮಹೀಪತಿ ದಾಸರು. ಪ್ರಸನ್ನ ವೆಂಕಟದಾಸರು, ಭಾಗಣ್ಣದಾಸರು, ಪ್ರಾಣೇಶದಾಸರು, ಕಾಖಂಡಕೀ ಕೃಷ್ಣರಾಯರು ಮುಂತಾದವರೆಲ್ಲ ಮುಂಡಿಗೆಗಳನ್ನು ರಚಿಸಿದ್ದರೂ ಕನಕದಾಸರ ಮುಂಡಿಗೆಗಳು ಸಂಖ್ಯೆಯಲ್ಲಿಯೂ(ಸುಮಾರು 50), ಸ್ವಾರಸ್ಯದಲ್ಲಿಯೂ, ತಿಣುಕಿಸುವುದರಲ್ಲಿಯೂ ಉಳಿದವರೆಲ್ಲದಕ್ಕಿಂತ ವೈಶಿಷ್ಟ್ಯಪೂರ್ಣವಾಗಿರುವುದರಿಂದಲೇ, ಕನಕನನ್ನು ಕೆಣಕಬೇಡ, ಕೆಣಕಿ ತಿಣುಕಬೇಡ ಎಂಬ ನುಡಿಗಟ್ಟೇ ಪ್ರಸಿದ್ಧವಾಗಿದೆ. ಅದೂ ಒಂದು ಕಾರಣವಾಗಿ ಕನಕದಾಸರನ್ನು ಮುಂಡಿಗೆಗಳ ಜನಕ ಎಂದೂ ಕರೆಯುತ್ತಾರೆ.

ಮುಂಡಿಗೆಗಳಿಗೆ ನಮ್ಮ ದೇಶದಲ್ಲಿ ಒಂದು ಪರಂಪರೆಯೇ ಇದೆ. ಭೀಮನನ್ನು ಸುತ್ತಿಕೊಂಡ ಅಜಗರನ(ಶಪಿತನಾಗಿ ಹೆಬ್ಬಾವಿನ ರೂಪದಲ್ಲಿದ್ದ ನಹುಷ)ಪ್ರಶ್ನೆ, ಯಕ್ಷಪ್ರಶ್ನೆ, ಪ್ರಶ್ನೋತ್ತರ ಮಾಲಿಕಾ, ಬೇತಾಳನ ಪ್ರಶ್ನೆಗಳು ಇವೆಲ್ಲಾ ನಮ್ಮಲ್ಲಿ ಯಾವತ್ತಿನಿಂದಲೂ ಪ್ರಚಲಿತವಾಗಿವೆ. ಇಲ್ಲಿ ಬರುವ ಪ್ರಶ್ನೆಗಳು ಗೂಢವಾಗಿರುವುದರಿಂದ ಇವುಗಳನ್ನೂ ಮುಂಡಿಗೆಗಳ ಗುಂಪಿಗೆ ಸೇರಿಸಬಹುದಾಗಿದೆ. ಮುಂಡಿಗೆಯ ಸಾಹಿತ್ಯದಲ್ಲಿ ಪೌರಾಣಿಕ ವಾವೆವರಸೆಯ ಮುಂಡಿಗೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೂ ಅನುಭಾವದ, ತತ್ವಾರ್ಥ ಚಿಂತನೆಯ ಮುಂಡಿಗೆಗಳು ಸಾಕಷ್ಟಿವೆ.

ಮುಂಡಿಗೆಗಳಲ್ಲಿ ಹುದುಗಿಸಿರುವ ಪುರಾಣ ಪ್ರಸಂಗಗಳನ್ನು, ಪಾತ್ರಗಳನ್ನು ಬಿಡಿಸುತ್ತಾ ಹೋದಂತೆ ಕೊಡುವ ಖುಷಿಯೇ ಬೇರೆ. ಕಷ್ಟವಾದೊಂದು ಪ್ರಶ್ನೆ ಪತ್ರಿಕೆಯನ್ನು ಯಶಸ್ವಿಯಾಗಿ ಉತ್ತರಿಸಿದಷ್ಟೇ ಗೆಲುವಿನ ಸಂತೋಷವನ್ನೂ ಕೊಡುವುದು ಸುಳ್ಳಲ್ಲ. ಅದರೆ ಅವುಗಳಿಗೆ ಬೇಕಾದದ್ದು ನಮ್ಮ ರಾಮಾಯಣ ಮಹಾಭಾರತ, ಭಾಗವತ, ಶಿವಪುರಾಣ, ಇತ್ಯಾದಿ ಪುರಾಣಗಳ ವಿಸ್ತೃತ ಅರಿವು.

ಇನ್ನು ಅನುಭಾವ ಎಂಬುದಕ್ಕೆ ವಿ. ಎಸ್. ಆಪ್ಟೆಯವರ ಸಂಸ್ಕೃತ –ಇಂಗ್ಲೀಷ್ ನಿಘಂಟುವಿನಲ್ಲಿ(ಂಟಿ exಣeಡಿಟಿಚಿಟ mಚಿಟಿiಜಿesಣಚಿಣioಟಿ oಡಿ iಟಿಜiಛಿಚಿಣioಟಿ oಜಿ ಚಿ ಜಿeeಟiಟಿg- ಭಾವ – bಥಿ ಚಿಠಿಠಿಡಿoಠಿಡಿiಚಿಣe sಥಿmಠಿಣoms) ಸಂಕೇತಗಳ ಮೂಲಕ ತಿಳಿಯುವ ಭಾವನೆ ಎಂಬ ಅರ್ಥವಿದೆ. ಹೀಗೆ ಪ್ರತಿಮಾತ್ಮಕ ವಿಧಾನದಿಂದ ಭಗವಂತನ ಕುರಿತ ಪಾರಮಾರ್ಥಿಕ ಜ್ಞಾನವನ್ನು ತಿಳಿಯುವವರು ಅನುಭಾವಿಗಳು.

ಅನುಭವ ಇಂದ್ರಿಯಗಮ್ಯವಾದುದು. ಅಥವಾ ಇಂದ್ರಿಯಗಳಿಂದ ದೊರಕುವ ಸಂವೇದನೆ ಅನುಭವ. ಭವವನ್ನು ಅನುಸರಿಸಿಕೊಂಡು ಹೋಗುವುದು ಅನುಭವ. ಇಂದ್ರಿಯಾತೀತವಾದ ಅನುಭವವನ್ನು ಅನುಭಾವ ಎನ್ನಲಾಗುತ್ತದೆ. ತತ್ವಜ್ಞಾನವನ್ನು ಈ ಕಾರಣದಿಂದಲೇ ಅನುಭಾವ ಎನ್ನುತ್ತಾರೆ.

ಮುಂಡಿಗೆಗಳಲ್ಲಿ ಸಂಕೇತ, ರೂಪಕಗಳ ಮೂಲಕ ತಾತ್ವಿಕ ಜಿಜ್ಞಾಸೆಯನ್ನು ಹಲವು ಸಾಧಕರು ಮಾಡಿದ್ದಾರೆ.

ಭಗವದ್ಗೀತೆಯಲ್ಲಿ ಬರುವ ‘ನವದ್ವಾರೇ ಪುರೇ’ ಎಂಬ, ‘ಒಂಭತ್ತು ಬಾಗಿಲ ಮನೆ’ ಎಂದು ದಾಸರು ಹೇಳುವ ನವರಂಧ್ರಗಳೇ(ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ಮೂಗಿನ ಹೊಳ್ಳೆಗಳು, ಬಾಯಿ, ಮೂತ್ರದ್ವಾರ, ಗುದದ್ವಾರ) ನವ ಗಾಯಗಳು. ಅಲ್ಲದೆ ಈ ಸ್ಥೂಲ ಶರೀರ ದೊರೆತಾಗ ಹೊಸದಾಗಿ ಬಂದು ಸೇರಿಕೊಂಡವಾದ್ದರಿಂದ ನವಗಾಯವೂ ಹೌದು. ಗಾಯ ಕಟ್ಟುವುದು ಎಂದರೆ ನಿಯಂತ್ರಿಸುವುದು. ಇವು ಇಂದ್ರಿಯಗಳ ದ್ವಾರಗಳಾದ್ದರಿಂದ ನಿಯಂತ್ರಣಕ್ಕೆ ಸಿಕ್ಕದೆ ಹತ್ತೂ ದಿಕ್ಕಿಗೆ ಹೊರಚಾಚಿಯೇ ಇರುತ್ತವೆ. ಗಾಳಿ ಹಾಕುವುದು ಎಂದರೆ ಪ್ರಾಣಾಯಾಮದ ಮೂಲಕ ಪ್ರಾಣಶಕ್ತಿಯ ಗಾಳಿ ಹಾಕುವವರೂ ಇಲ್ಲ.

“ಮಾಡು ಇಲ್ಲ, ಮಳೆಯೂ ಇಲ್ಲ ಆದರೂ ಮರದ ಮೇಲೆ ನೀರ ಕಂಡೆ”.ಈ ದೇಹವೆಂಬ ಮರದ(ಏಷೋಶ್ವತ್ಥಃ ಸನಾತನಃ)ತುತ್ತ ತುದಿ ಶಿರ. ಅಲ್ಲಿರುವ ಸಹಸ್ರಾರ ಚಕ್ರದಲ್ಲಿ ಅಮೃತ ರಸ ತೊಟ್ಟಿಕ್ಕುತ್ತದೆ ಎಂಬ ಯೋಗಶಾಸ್ತ್ರದ ಅರ್ಥವನ್ನಿಲ್ಲಿ ಕನಕದಾಸರು ಹುದುಗಿಸಿದ್ದಾರೆ. ಇನ್ನು ‘ಕಾಡು ಸುಡುವುದು ಕಂಡೆ, ಬೂದಿಯ ಕಾಣಲಿಲ್ಲ’, ಎಂದರೆ ಸತತ ಯೋಗಾನುಸಂಧಾನದಿಂದ, ಧ್ಯಾನದಿಂದ ಪಾಪ ರಾಶಿಯು ನಿಶ್ಶೇಷ ದಗ್ಧವಾಗಿ ಹೋದರೆ ಕಲ್ಮಷ ರೂಪವಾದ ಯಾವ ಬೂದಿಯೂ ಉಳಿಯುವುದಿಲ್ಲ ಎಂದರ್ಥ.

‘ಬಿತ್ತಲಿಲ್ಲ ಬೆಳೆಯಲಿಲ್ಲ, ನೆಟ್ಟು ನೀರು ತೋರಲಿಲ್ಲ’: ಭಗವಚ್ಚಿಂತನೆಯ, ಭಗವಂತನ ಧ್ಯಾನವೆಂಬ ಬೀಜವನ್ನು ಬಿತ್ತಲಿಲ್ಲ, ಸಾಧನೆಯ ನೀರು ಹಾಕಿ ಪೋಷಿಸಲಿಲ್ಲ. ಬದಲಿಗೆ ದುಡ್ಡಿನ ಮೋಹವೆಂಬ ರೊಕ್ಕದ ಪ್ರಾಣಿಯನ್ನು ಹೊತ್ತುಕೊಂಡು ತಿರುಗಿದೆ ಎಂದರೆ ಹೆಚ್ಚು ಹೆಚ್ಚು ಹಣಗಳಿಸುವ ಮೋಹದಿಂದ ಭಗವನ್ನಾಮವೆಂಬ ಸಿರಿಯಿಂದ ಚ್ಯುತನಾಗಿ ಬಿಟ್ಟೆ ಎಂಬ ಪರಿತಾಪ. ಹೀಗೆ 10 ಚರಣಗಳಲ್ಲಿ ಸಾಗುತ್ತದೆ ಕನಕದಾಸರ ಈ ಅನುಭಾವದ ಮುಂಡಿಗೆ.

ಆಡಿ ಪೊತ್ತವನೊಬ್ಬ ನೋಡಿ ತಿರುಗಿದನೊಬ್ಬ

ಓಡಾಡಿದವನೊಬ್ಬ ಈ ಮೂವರು

ಆಡಿದವಗೆ ಕಿವಿಯಿಲ್ಲ ನೋಡಿದನ ಮಗ ಪಾಪಿ

ಓಡಾಡಿದವನೊಬ್ಬ ಓಡನಯ್ಯ

ಬಾಲ್ಯವೆಂಬುದು ಅತ್ಯಂತ ಚಟುವಟಿಕೆಯ ಕಾಲ. ಬಾಲಕ ಆಡಿ ಪೊತ್ತವನು. ಯೌವನ ತಾರುಣ್ಯವೆಂಬುದು ಹೊಸ ಹೊಸ ನೋಟಗಳನ್ನು ಚೆಲುವಿನ ದೃಶ್ಯಗಳನ್ನು, ಚೆಲುವನ್ನು ನೋಡಿ ನೋಡಿ ಅನುಭವಿಸಿ ಆಸ್ವಾದಿಸಲು ಹಪಹಪಿಸುವ ವಯಸ್ಸು. ಆದ್ದರಿಂದ ನೋಡಿ ತಿರುಗಿದವನು ತರುಣ. ಇದು ತಾರುಣ್ಯಾವಸ್ಥೆಯನ್ನು ಬಿಂಬಿಸುವ ಸಾಲು. ಆಡಿದವಗೆ ಕಿವಿಯಿಲ್ಲ. ಬಾಲ್ಯದಲ್ಲಿ ಮಕ್ಕಳು ಯಾವುದನ್ನೂ ಯಾರನ್ನೂ ಕೇಳುವುದಿಲ್ಲ. ಆದ್ದರಿಂದ ಬಾಲಕನಿಗೆ ಕಿವಿಯಿಲ್ಲ. ಬಾಲಕ ತರುಣನಾದಂತೆ ತಪ್ಪು ಸರಿಗಳ, ಪಾಪ ಪುಣ್ಯಗಳ ವಿವೇಚನೆಯುಂಟಾಗಿರುತ್ತದೆ. ಆದರೂ ಅವನಿಂದ ಪಾಪಗಳು ಘಟಿಸುತ್ತಲೇ ಇರುತ್ತವಾದ್ದರಿಂದ ಅವನು ಪಾಪಿ. ಓಡಾಡಿದವನು ಎಂದರೆ ತನ್ನ ಜೀವನವನ್ನು ಕೆಲಸ ಕಾರ್ಯ ಆಸೆ ಆಕಾಂಕ್ಷೆಗಳ ಹಿಂದೆ ಓಡಾಡುತ್ತಲೇ ಕಳೆಯುತ್ತಾ ಬಂದು ಈಗ ವೃದ್ಧಾಪ್ಯದಲ್ಲಿರುವವನು. ಆದರೆ ಹಣ್ಣಾಗಿ ಜೀರ್ಣವಾಗಿರುವ ಅವನೀಗ ಓಡಲಾರದವನಾಗಿದ್ದಾನೆ.

ಮಾಯಾಕಾರನು ಒಬ್ಬ ಕಾಯ ಬಡಲಿಗನೊಬ್ಬ ಕಾಯಗಿರಿ ಪೊತ್ತೊಬ್ಬ ಈ ಮೂವರು ಮಾಯಕಾರನಿಗೆ ರೂಪ ಕಾಯಬಡಿಗ ಚೆಲ್ವ ಕಾಯಗಿರಿ ಪೊತ್ತವನು ಕಡು ಧರ್ಮಿಯು

ಬಾಲ್ಯ ತಾರುಣ್ಯ ವೃದ್ಧಾಪ್ಯದಲ್ಲಿ ಮನುಷ್ಯರು ಹೇಗಿರುತ್ತಾರೆ, ಹೇಗೆ ಕಾಣುತ್ತಾರೆ, ಯಾವ ಸ್ಥಿತಿಯನ್ನು ಹಾಯುತ್ತಿರುತ್ತಾರೆ ಎಂಬುದನ್ನು ಬಲು ಮಾರ್ಮಿಕವಾಗಿ ಈ ಚರಣದಲ್ಲಿ ಕನಕದಾಸರು ಹೀಗೆ ಹೇಳುತ್ತಾರೆ:

ಎಳೆಯ ವಯಸ್ಸಿನ ಮಕ್ಕಳು ಬಲು ಮುದ್ದಾಗಿರುತ್ತಾರೆ. ಅದರಲ್ಲೂ ಅವರ ಮೊಗ, ಮಾತು ನಗು ಎಲ್ಲವೂ ಅತಿ ಮೋಹಕ. ಅದಕ್ಕೇ ಶಿಶು ಮಾಯಕಾರ. ತಾರುಣ್ಯದಲ್ಲಿ ಅವನು ಕಾಯಬಡಲಿಗ. ತನಗಾಗಿ ತನ್ನ ಪರಿವಾರಕ್ಕಾಗಿ ಸದಾ ದುಡಿಮೆಯಲ್ಲಿ ತನ್ನ ದೇಹವನ್ನು ತೊಡಗಿಸಿಕೊಂಡಿರುತ್ತಾನೆ. ಆದರೆ ಮೊದಲಿನ ಈ ಎರಡು ಅವಸ್ಥೆಗಳನ್ನು ದಾಟುವ ಹೊತ್ತಿಗೆ ಅವನ ದೇಹ ಬಾಳಿನ ಹೊರೆಯನ್ನು ಹೊತ್ತು ಸೋತಿರುತ್ತದೆ. ಬದುಕಿನ ನಿಸ್ಸಾರತೆಯು ಅರಿವಾಗುತ್ತಾ ಹೋಗಿ ಜೀವನದಲ್ಲಿ ಧರ್ಮಶ್ರದ್ಧೆಯ ಅಧ್ಯಾತ್ಮದ ಪ್ರವೇಶವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಭಗವದನುಗ್ರಹದಿಂದ ಈ ಲೇಖಕಿಯೂ ಮುಂಡಿಗೆಯ ಸಾಹಿತ್ಯದಲ್ಲಿ ಒಂದಿಷ್ಟು ಕೃಷಿ ಮಾಡಿ ಇದುವರೆವಿಗೂ 220 ಕ್ಕೂ ಹೆಚ್ಚಿನ ವೈವಿಧ್ಯಮಯವಾದ ಮುಂಡಿಗೆಗಳನ್ನು(ಅರ್ಥ ವಿವರಣೆಯ ಸಮೇತ. 5 ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಾಭಾರತದಲ್ಲಿರುವ ವೈಜ್ಞಾನಿಕ ವಿಚಾರಗಳು; ವನಸ್ಪತಿ, ರಾಶಿಚಕ್ರ, ರಾಗಮುಂಡಿಗೆ, ಸ್ವರಾಕ್ಷರ, ನಿರ್ದಂತ್ಯ, ನಿರೋಷ್ಠ್ಯ, ಜನಪದಧಾಟಿ, ಗಾದೆಗಳನ್ನುಬಳಸಿರುವ ಮುಂಡಿಗೆ; ಜಗತ್ಸøಷ್ಟಿ ವಿಕಾಸವಾದ, ಸಂಯುಕ್ತಾಕ್ಷರ ರಹಿತ; ಇತ್ಯಾದಿ ಇತ್ಯಾದಿ ಅಪರೂಪದ ವಿಷಯಗಳು ಮತ್ತು ರಾಮಾಯಣ, ಮಹಾಭಾರತಗಳನ್ನು ಸಂಕ್ಷಿಪ್ತವಾಗಿ ಅಲ್ಲದೆ ಖಂಡಖಂಡಗಳನ್ನೂ, ಪರ್ವಪರ್ವಗಳನ್ನೂ – ಶ್ರೀಮದ್ಭಾಗವತ, ಹನುಮಂತನ ಲೀಲಾವಿಲಾಸ, ಶ್ರೀಕೃಷ್ಣ ಲೀಲಾವಿಲಾಸ ಮತ್ತು ಕೇವಲ ಸುಂದರಕಾಂಡವನ್ನು ಮಾತ್ರ) ಹೀಗೆ; ಮತ್ತು 1000 ಕ್ಕೂ ಅಧಿಕ ಸಂಖ್ಯೆಯ ಕೀರ್ತನೆಗಳನ್ನೂ( 3 ಸಂಕಲನಗಳಲ್ಲಿ), 200 ಕ್ಕೂ ಮೀರಿದ ಉಗಾಭೋಗಗಳನ್ನೂ ಬೇಲೂರು ‘ಚೆನ್ನಕೇಶವ’ ನ ಅಂಕಿತದಲ್ಲಿ ರಚಿಸಿ ದಾಸಸಾಹಿತ್ಯದ ಅನಂತ ವಾರಿಧಿಗೆ ತನ್ನ ನಾಲ್ಕಾರು ಬಿಂದುಗಳನ್ನು ವಿನಯದಿಂದ ಸೇರಿಸಿರುವುದುಂಟು. ಇದು ದಾಖಲೆ ಸಂಖ್ಯೆಯ ಮುಂಡಿಗೆ ಎನಿಸಿದರೂ; ಗುಣ ಮಹಿಮೆಯಲ್ಲಿ, ಭಕ್ತಿಭಾವದಲ್ಲಿ, ಭಾಷಾ ರಚನೆಯಲ್ಲಿ ಆ ಮಹಿಮಾನ್ವಿತರಾದ ದಾಸವರೇಣ್ಯರ ಹತ್ತಿರಕ್ಕೂ ಬರಲಾರದೆಂಬ ಸತ್ಯದ ಅರಿವಿದೆ. ಅವರೆಲ್ಲ ಶಿಖರದಲ್ಲಿರುವವರು. ನಾನು ಆ ಗಿರಿಯ ಬುಡದ ಒಂದು ಸಣ್ಣ ಹುಲ್ಲಿನೆಸಳು ಅಷ್ಟೆ. ಅನುಭಾವದ ಮುಂಡಿಗೆಗಳು ಎಂದು ವಿದ್ವಾಂಸರ ಅಭಿಪ್ರಾಯದ ಮುಂಡಿಗೆಗಳಲ್ಲಿ ಎರಡನ್ನು ಕೆಳಗೆ ಕಾಣಿಸಿರುತ್ತೇನೆ. ‘ಅವುಗಳ ಅರ್ಥ ವಿಸ್ತಾರದ ಸಾಧ್ಯತೆಗಳು, ಹೊಸಹೊಸ ಹೊಳಹುಗಳು ಮತ್ತು ಸುಳಿವುಗಳು ಸ್ಫುರಣವಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ಇವುಗಳಿಗೆ ಅರ್ಥ ಕೊಡಬೇಡಿ’ ಎಂದು ಸಲಹೆ ನೀಡಿದವರು ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು’. ಆದ್ದರಿಂದ ಇವುಗಳ ಅರ್ಥಾನುಸಂಧಾನವನ್ನು(‘ವಿನೂತನ ಕವಿತೆಯಿದೆಂದು ಕಡೆಗಣಿಸದೆ) ಸಹೃದಯ ವಿದ್ವಾಂಸರು ಮಾಡಬಹುದು ಎಂದು ಆಶಿಸಿ, ಮಾಡಲಿ

- ರತ್ನಾ ಮೂರ್ತಿ
*** 


just scroll down for all devaranama 


know more 
   click
 dasa sahitya prakaragalu ದಾಸ ಸಾಹಿತ್ಯದ ರೂಪಗಳು ಪ್ರಕಾರಗಳು

***



click










ಕಂಡೆ ನಾನೊಂದು ಕೌತುಕವ ಆಯಿ ಅಜ್ಜನ ankita mahipati KANDE NAANONDU KAUTUKAVA AAYI AJJANA ಮುಂಡಿಗೆ MUNDIGE

ಕಾಸನಿತ್ತು ಕೊಂಡರಾರು ಕಾಸನಿತ್ತು ಕೊಂಡರಾರು ankita channakeshava ಮುಂಡಿಗೆ mundige

ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ purandara vittala TAARAKKA BINDIGE NA NEERIGE HOGUVE ಮುಂಡಿಗೆ mundige

ನಕ್ಷತ್ರ ಸುತನ ಅನುಜನು ನಕ್ಷತ್ರದೊಳಿದ್ದ ನವನೀತತಮಂ ankita pranesha vittala ಮುಂಡಿಗೆ MUNDIGE

ನಮೋ ನಮೋ ನಾರಾಯಣ ನಮೋ ಶ್ರುತಿ ಪಾರಾಯಣ ankita neleyadikeshava 
ಮುಂಡಿಗೆ mundige









****

just scroll down for other devaranama 



1 comment:

  1. Kudos to all your efforts.. God bless you with all the happiness sir!!

    ReplyDelete