Saturday, 14 December 2019

ಬೃಂದಾವನಿ ಜನನಿ ವಂದಿಸುವೆ ಸತತ ankita jagannatha vittala BRUNDAVANI JANANI VANDISUVE TULASI STUTIH



2nd Audio by Mrs. Nandini Sripad


 ಶ್ರೀ ತುಲಸೀ ಸ್ತುತಿ 

ಶ್ರೀ ಜಗನ್ನಾಥದಾಸಾರ್ಯ ವಿರಚಿತ  ತತ್ತ್ವಸುವ್ವಾಲಿ 

ಬೃಂದಾವನಿ ಜನನಿ ವಂದಿಸುವೆ ಸತತ ಜ -
ಲಂಧರನ ರಾಣಿ ಕಲ್ಯಾಣಿ । ಕಲ್ಯಾಣಿ ತುಳಸಿನಿಜ -
ಮಂದಿರೆ ಎನಗೆ ದಯವಾಗೆ ॥ 1 ॥

ಜಲಜಾಕ್ಷನಮಲಕಜ್ಜಲಬಿಂದು ಪೀಯೂಷ -
ಕಲಶದಲಿ ಬೀಳೆ ಜನಿಸಿದಿ । ಜನಿಸಿ ಹರಿಯಿಂದ ಶ್ರೀ -
ತುಲಸಿ ನೀನೆಂದು ಕರೆಸಿದಿ ॥ 2 ॥

ಶ್ರೀತರುಣಿವಲ್ಲಭನ ಪ್ರೀತಿವಿಷಯಳೆ ನಿನ್ನ
ನಾ ತುತಿಸಿ ಕೈಯ ಮುಗಿವೆನು । ಮುಗಿವೆ ಎನ್ನಯ ಮಹಾ -
ಪಾತಕವ ಕಳೆದು ಪೊರೆಯಮ್ಮ ॥ 3 ॥

ತುಲಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ
ಕಲುಷಕರ್ಮಗಳ ಎಣಿಸದೆ । ಎಣಿಸದೆ ಸಂಸಾರ -
ಜಲಧಿಯಿಂದೆಮ್ಮ ಕಡೆಹಾಯ್ಸು ॥ 4 ॥

ನೋಡಿದವ ದುರಿತ ಈಡ್ಯಾಡಿದವ ನಿನ್ನ ಕೊಂ -
ಡಾಡಿದವ ನಿತ್ಯ ಹರಿಪಾದ । ಹರಿಪಾದಕಮಲಗಳ
ಕೂಡಿದವ ಸತ್ಯ ಎಂದೆಂದು ॥ 5 ॥

ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ -
ವಂದಿಸಿದ ಜನರು ಸುರರಿಂದ । ಸುರರಿಂದ ನರರಿಂದ
ವಂದ್ಯರಾಗುವರು ಜಗದೊಳು ॥ 6 ॥

ಕಲುಷವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮೀ -
ನಿಲಯನಂಘ್ರಿಗಳ ಪೂಜಿಪ । ಪೂಜಿಪರಿಗೆ ಪರಮಮಂ -
ಗಳದ ಪದವಿತ್ತು ಸಲಹುವಿ ॥ 7 ॥

ಶ್ರೀತುಳಸಿದೇವಿ ಮನ್ಮಾತ ಲಾಲಿಸು ಜಗ -
 ನ್ನಾಥವಿಟ್ಠಲನ ಚರಣಾಬ್ಜ । ಚರಣಾಬ್ಜ ಎನ್ನ ಹೃತ್ಪದ್ಮದಲಿ
ನೀ ತೋರೆ ಕೃಪೆಯಿಂದ ॥ 8 ॥
**********


ವ್ಯಾಖ್ಯಾನ : 

ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
ಶ್ರೀಜಗನ್ನಾಥದಾಸಾರ್ಯ ವಿರಚಿತ  ತತ್ತ್ವಸುವ್ವಾಲಿ

ಶ್ರೀ ತುಲಸೀ ಸ್ತುತಿ

ಬೃಂದಾವನಿ ಜನನಿ ವಂದಿಸುವೆ ಸತತ ಜ -
ಲಂಧರನ ರಾಣಿ ಕಲ್ಯಾಣಿ । ಕಲ್ಯಾಣಿ ತುಳಸಿನಿಜ -
ಮಂದಿರೆ ಎನಗೆ ದಯವಾಗೆ ॥ 1 ॥

ಅರ್ಥ :- ಜಲಂಧರನ ರಾಣಿ = ಜಲಂಧರನ ಪತ್ನಿಯಾದ , ಬೃಂದಾವನಿ = ಬೃಂದಾವನರೂಪದಿಂದ (ತುಳಸೀ ಕಟ್ಟೆ) , ತುಳಸಿನಿಜಮಂದಿರೆ = ತುಳಸೀದೇವಿಗೆ ನಿಯತವಾಸಸ್ಥಾನಳಾದ , ಕಲ್ಯಾಣಿ = ಮಂಗಳಸ್ವರೂಪಳಾದ , ಜನನಿ = ಹೇ ತಾಯಿ ಬೃಂದೇ ! ಸತತ = ನಿತ್ಯವೂ , ವಂದಿಸುವೆ = (ನಿನ್ನನ್ನು) ನಮಸ್ಕರಿಸುತ್ತೇನೆ ; ಎನಗೆ = ನನಗೆ , ದಯವಾಗೆ = ಕೃಪೆದೋರು.

ವಿಶೇಷಾಂಶ :- ಸ್ಕಾಂದಪುರಾಣದ ಕಾರ್ತೀಕಮಾಸಮಹಾತ್ಮ್ಯೆಯಲ್ಲಿ ಬೃಂದೆಯ ಕಥೆಯು ವರ್ಣಿತವಾಗಿದೆ. ಬೃಂದೆಯು ಜಲಂಧರನೆಂಬ ದಾನವೇಂದ್ರನ ಭಾರ್ಯೆ. ತನ್ನ ಪತಿಯ ರೂಪದಿಂದ ಬಂದು ಸಂಗವಿತ್ತ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರಳಾಗಿ , ಶ್ರೀತುಳಸಿಗೆ ಮಂದಿರಳಾಗಿ ಭಕ್ತರಿಂದ ಪೂಜ್ಯಳಾಗು ಎಂಬ ವರವನ್ನು ಪಡೆದಳು. ಭಗವದ್ಭಕ್ತರು ಮನೆಯ ಮುಂಭಾಗದಲ್ಲಿ ವೃಂದಾವನವನ್ನು ನಿರ್ಮಿಸಿ , ಶ್ರೀತುಳಸಿಯ ವೃಕ್ಷವನ್ನು ನೆಟ್ಟು, ಪೋಷಿಸಿ , ನಿತ್ಯವೂ ನಮಸ್ಕರಿಸಿ ಪೂಜಿಸುವರು. ವೃಂದಾವನದಲ್ಲಿ (ತುಳಸೀಕಟ್ಟೆಯಲ್ಲಿ) ಬೃಂದೆಯು ಸನ್ನಿಹಿತಳಾಗಿ ಪೂಜಿಸಲ್ಪಡುವಳು. ಅಂತೆಯೇ ತುಳಸೀಕಟ್ಟೆಯನ್ನು (ಅಲ್ಲಿ ಸನ್ನಿಹಿತಳಾದ ಬೃಂದೆಯನ್ನು) ಮೊದಲು ಪೂಜಿಸಿ ನಂತರ ಶ್ರೀತುಳಸಿಯನ್ನು ಪೂಜಿಸುವುದು. 

ಜಲಜಾಕ್ಷನಮಲಕಜ್ಜಲಬಿಂದು ಪೀಯೂಷ -
ಕಲಶದಲಿ ಬೀಳೆ ಜನಿಸಿದಿ । ಜನಿಸಿ ಹರಿಯಿಂದ ಶ್ರೀ -
ತುಲಸಿ ನೀನೆಂದು ಕರೆಸಿದಿ ॥ 2 ॥

ಅರ್ಥ :- ಜಲಜಾಕ್ಷನ = ಪುಂಡರೀಕಾಕ್ಷನೆಂಬ ಪ್ರಸಿದ್ಧನಾಮವುಳ್ಳ ಶ್ರೀವಿಷ್ಣುವಿನ , ಅಮಲಕಜ್ಜಲಬಿಂದು = ಪವಿತ್ರವಾದ ಕಣ್ಣೀರ ಹನಿಯು , ಪೀಯೂಷಕಲಶದಲಿ = ಅಮೃತಕಲಶದಲ್ಲಿ , ಬೀಳೆ = ಬೀಳಲು , ಜನಿಸಿದಿ = ಉತ್ಪನ್ನಳಾದಿ ; ಹರಿಯಿಂದ = ಶ್ರೀಹರಿಯಿಂದ , ಶ್ರೀತುಲಸಿ ಎಂದು = ಶ್ರೀತುಲಸಿ ಎಂಬುದಾಗಿ , ನೀನು , ಕರೆಸಿದಿ = ಕರೆಯಲ್ಪಟ್ಟಿರುವಿ (ನಾಮವನ್ನು ಹೊಂದಿರುವಿ).

ವಿಶೇಷಾಂಶ :- (1) ಹಿಂದಿನ ನುಡಿಯಲ್ಲಿ ಸಹ ತುಲಸಿಯ ಮಹಾತ್ಮೆಯು ಪ್ರಸಕ್ತವಾಗಿರುವುದೆಂದು ತಿಳಿಯಬೇಕು. 'ಬೃಂದಾವನೀ' ಎಂಬುದಕ್ಕೆ ಜಲಂಧರನ ರಾಣಿಯಾದ ಬೃಂದೆಯನ್ನು ತನ್ನೊಂದಿಗಿಟ್ಟುಕೊಂಡು ರಕ್ಷಣೆಮಾಡತಕ್ಕವಳೆಂದೂ , 'ತುಳಸಿ ನಿಜಮಂದಿರೆ' ಎಂಬುದನ್ನು ತುಳಸಿ ಮತ್ತು ನಿಜಮಂದಿರೆ ಎಂಬುದಾಗಿ ಭಿನ್ನ ಪದಗಳನ್ನಾಗಿ ಭಾವಿಸಿ , ನಿಜಮಂದಿರೆ ಎಂಬುದಕ್ಕೆ ಭಕ್ತಾಶ್ರಯಳೆಂಬ ಅರ್ಥವನ್ನೂ ತಿಳಿಯಬಹುದು. ತುಳಸಿಯು ಭಕ್ತಾಶ್ರಯಳೆಂಬ ಅರ್ಥಲಾಭವಾಗುವುದು.

(2) ದೇವದೈತ್ಯರು ಅಮೃತಲಾಭಕ್ಕಾಗಿ ಕ್ಷೀರಸಮುದ್ರವನ್ನು ಮಥನ ಮಾಡಿದಾಗ , ಧನ್ವಂತರಿರೂಪದಿಂದ ಶ್ರೀಹರಿಯು ಅಮೃತಕಲಶವನ್ನು ಕೈಯಲ್ಲಿ ಹಿಡಿದು ಮೇಲೆ ಬಂದನು. ನಿಜಭೃತ್ಯರಾದ ದೇವತೆಗಳು ಅಮೃತವನ್ನು ಸಾಧಿಸಿ ಜಯಶೀಲರಾದ್ದರಿಂದಲೋ ಎಂಬಂತೆ ಶ್ರೀಧನ್ವಂತರಿಯ ಕಣ್ಣುಗಳಿಂದ ಆನಂದಬಾಷ್ಫಗಳು ಸುರಿದವು. ಆ ಕಣ್ಣೀರಹನಿಯು ಅಮೃತಕಲಶದಲ್ಲಿ ಬಿದ್ದಿತು. ಆಗ ಅಲ್ಲಿ ಶ್ರೀತುಳಸಿಯು ಉತ್ಪನ್ನಳಾದಳು. ಶ್ರೀಹರಿಯ ಬಾಷ್ಪವೂ ಆನಂದಮಯವೇ ! ಹೀಗೆ ಶ್ರೀಹರಿ ಪ್ರಸನ್ನತೆಯಿಂದ ಜನಿಸಿದ ಶ್ರೀತುಲಸಿಯು ಪರಮಮಂಗಳ ಸ್ವರೂಪಳು. ಸರ್ವರಿಗೂ ಆನಂದಪ್ರದಳು - ಮಂಗಳಪ್ರದಳು - ಮಂಗಳದೇವತೆಯಾದ ರಮಾದೇವಿಯು ಕಲಾಯುಕ್ತಳು - ಶ್ರೀಹರಿಗೆ ಅತಿಪ್ರಿಯಳು.

(3) ಶ್ರೀಹರಿಯೇ ತನಗೆ ಪತಿಯಾಗಬೇಕೆಂಬ ಹಂಬಲದಿಂದ ಬಹು ಕಾಲ ಘೋರ ತಪಸ್ಸನ್ನಾಚರಿಸಿದ ಶ್ರೀತುಳಸೀದೇವಿಯು ಇಂದ್ರಸಾವರ್ಣಿ (ಮುಂದಿನ ಮನ್ವಂತರಾಧಿಪತಿಯ) ಕುಲೋತ್ಪನ್ನನಾದ ಧರ್ಮಧ್ವಜನೆಂಬ ರಾಜನ ಮಗಳಾಗಿ , ಲಕ್ಷ್ಮೀ ಅಂಶ (ಆವೇಶ)ದಿಂದ ಯುಕ್ತಳಾಗಿ ಅವತರಿಸಿದಳು. ಅಸದೃಶಸುಂದರಿಯಾದ ಆಕೆಯನ್ನು ರಾಜನಾದ ಧರ್ಮಧ್ವಜನು , ಲಕ್ಷ್ಮೀಸೌಂದರ್ಯಕ್ಕೆ ಸಮವಾದ ಸೌಂದರ್ಯವುಳ್ಳವಳೆಂಬ ಕಾರಣದಿಂದ (ತುಲ-ಸದೃಶ) 'ತುಲಸೀ' ಎಂಬುದಾಗಿ , ಆಕೆಯ ಸಹಜನಾಮದಿಂದಲೇ ಕರೆದನು. ಸದಾ ಶ್ರೀಹರಿಸಂಗದಲ್ಲಿ ವಿಹರಿಸಬೇಕೆಂಬ ಆಕೆಯ ಅಭೀಷ್ಟವನ್ನು ಸಲ್ಲಿಸಲು , ವೃಕ್ಷರೂಪದಿಂದ ಸದಾ ಪೂಜ್ಯಳಾಗಿ ವಿರಾಜಿಸುತ್ತ , ನನ್ನ ನಿತ್ಯ ಸಂಗವನ್ನು (ಭಕ್ತರು ಅರ್ಪಿಸುವುದರ ದ್ವಾರಾ) ಹೊಂದುವಿಯೆಂದು ವರದಾನ ಮಾಡಿದನಂತೆ ಕರುಣಾನಿಧಿ ಶ್ರೀಹರಿ !

ಶ್ರೀತರುಣಿವಲ್ಲಭನ ಪ್ರೀತಿವಿಷಯಳೆ ನಿನ್ನ
ನಾ ತುತಿಸಿ ಕೈಯ ಮುಗಿವೆನು । ಮುಗಿವೆ ಎನ್ನಯ ಮಹಾ -
ಪಾತಕವ ಕಳೆದು ಪೊರೆಯಮ್ಮ ॥ 3 ॥

ಅರ್ಥ :- ಶ್ರೀತರುಣಿವಲ್ಲಭನ = ಶ್ರೀಲಕ್ಷ್ಮೀದೇವಿಯ ಪ್ರಿಯತಮನಾದ ಶ್ರೀನಾರಾಯಣನ , ಪ್ರೀತಿವಿಷಯಳೆ = ಪ್ರೀತಿಪಾತ್ರಳಾದ ಹೇ ತುಳಸಿ ! ನಿನ್ನ = ನಿನ್ನನ್ನು , ನಾ = ನಾನು , ತುತಿಸಿ = ಸ್ತುತಿಸಿ , ಕೈಯ ಮುಗಿವೆನು = ಕೈಜೋಡಿಸಿ ಬೇಡುತ್ತೇನೆ ; ಎನ್ನಯ = ನನ್ನ , ಮಹಾಪಾತಕವ = ಮಹಾಪಾಪಗಳನ್ನು , ಕಳೆದು = ನೀಗಿ , ಪೊರೆಯಮ್ಮ = ರಕ್ಷಿಸು , ಹೇ ತಾಯಿ !

ವಿಶೇಷಾಂಶ :- (1) ಶ್ರೀಕೃಷ್ಣನ ಷಣ್ಮಹಿಷಿಯರಲ್ಲಿ ಜಾಂಬವತೀದೇವಿಯು ಶ್ರೇಷ್ಠಳು. ರಮಾದೇವಿಯ ವಿಶೇಷವಾದ ಸನ್ನಿಧಾನಪಾತ್ರಳು. ಜಾಂಬವತಿಯೇ ಶ್ರೀತುಳಸೀರೂಪದಿಂದ ಶ್ರೀಹರಿಯ ನಿತ್ಯಸೇವೆಯಲ್ಲಿ ತೊಡಗಿರುವಳೆಂದು ( ' ತುಲಸೀ ಜಾಂಬವತೀ ಪ್ರೋಕ್ತಾ ' ) ಪುರಾಣವಾಕ್ಯವಿರುವುದೆಂದು ಸಂಪ್ರದಾಯ ಜ್ಞಾನಿಗಳು ಹೇಳುವರು. ' ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ಒಲ್ಲನೋ ಹರಿ ಕೊಳ್ಳನೋ ' ಎಂಬ ಹಿರಿಯ ದಾಸರ ಉಕ್ತಿಯು ಮನೆಮಾತಾಗಿರುವುದು ಈ ಕಾರಣದಿಂದಲೇ.

(2) ಎಲ್ಲ ಸುಗಂಧಪುಷ್ಫಗಳ ಪರಿಮಳವೂ ಶ್ರೀತುಳಸಿಯಲ್ಲಿರುವುವು. ಸೂಕ್ಷ್ಮ ಘ್ರಾಣೇಂದ್ರಿಯವುಳ್ಳ ಯೋಗಿಗಳು ಇದನ್ನರಿಯಬಲ್ಲರೆಂದು ಹೇಳಲಾಗಿದೆ. ಎಲ್ಲ ಕಾಲಗಳಲ್ಲಿ ಎಲ್ಲ ಪುಷ್ಫಗಳು ಪ್ರಫುಲ್ಲಿಸುವುದಿಲ್ಲ. ಸರ್ವ ಋತುಗಳಲ್ಲಿ ದೊರೆಯಬಹುದಾದ ಸರ್ವ ಪುಷ್ಫಗಳನ್ನು ಅರ್ಪಿಸಿದಂತಾಗುವುದು ಶ್ರೀತುಳಸಿಯನ್ನು ಅರ್ಪಿಸುವುದರಿಂದ.

(3) ಇಂತಹ ಶ್ರೀಹರಿಪ್ರೀತಿವಿಷಯಳಾದ ಶ್ರೀತುಳಸಿಯು ಅನುಗ್ರಹಿಸಿದರೆ ಮಹಾಪಾಪಗಳ ಪರಿಹಾರವಾಗುವುದೇನಾಶ್ಚರ್ಯ !

ತುಲಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ
ಕಲುಷಕರ್ಮಗಳ ಎಣಿಸದೆ । ಎಣಿಸದೆ ಸಂಸಾರ -
ಜಲಧಿಯಿಂದೆಮ್ಮ ಕಡೆಹಾಯ್ಸು ॥ 4 ॥

ಅರ್ಥ :- ತುಲಸಿ = ಹೇ ತುಳಸಿದೇವಿ ! ನಿನ್ನಡಿಗೆ = ನಿನ್ನ ಪಾದಗಳಿಗೆ , ನಾ = ನಾನು , ತಲೆಬಾಗಿ = ತಲೆಯನ್ನಿಟ್ಟು ನಮಸ್ಕರಿಸಿ , ಬಿನ್ನೈಪೆ = ವಿಜ್ಞಾಪಿಸಿಕೊಳ್ಳುತ್ತೇನೆ ; ಕಲುಷಕರ್ಮಗಳ = (ನನ್ನ) ದುಷ್ಕರ್ಮಗಳನ್ನು , ಎಣಿಸದೆ = ಗಮನಿಸದೆ , ಸಂಸಾರ ಜಲಧಿಯಿಂದ = ಸಂಸಾರವೆಂಬ ಸಾಗರದಿಂದ , ಎಮ್ಮ = ನಮ್ಮನ್ನು , ಕಡೆಹಾಯ್ಸು = ದಾಟಿಸು.

ವಿಶೇಷಾಂಶ :- ಶಾಸ್ತ್ರದ ವಿಧಿ ಮೀರಿದ್ದು ಹಾಗೂ ನಿಷಿದ್ಧಕರ್ಮಾಚರಣೆಯ ದೋಷಗಳು ಎಣಿಕೆಗೆ ಬಾರದಷ್ಟು ನಮ್ಮಿಂದ ನಿತ್ಯವೂ ಸಂಭವಿಸುತ್ತವೆ. ಇದರಿಂದಲೇ ಶ್ರೀದಾಸಾರ್ಯರು ' ಎಣಿಸದೆ ' ಎಂದರು. ದೇವತೆಗಳು ಗುಣಗ್ರಾಹಿಗಳು. ತಮ್ಮನ್ನು ಸೇವಿಸುವವರ ಭಕ್ತಿಯನ್ನು ಗಮನಿಸಿ ಅನುಗ್ರಹಿಸುತ್ತಾರೆ. ನಿಷಿದ್ಧವಾದ ಅಪಥ್ಯ ವಸ್ತುಗಳ ಸೇವನೆಯೂ 'ಕಲುಷಕರ್ಮ'ವೇ ಆಗಿರುವುದು. ಭೌತಿಕದೃಷ್ಟಿಯಿಂದ ಸಹ ಶ್ರೀತುಲಸಿಯು , ಅಪಥ್ಯದಿಂದ ಪ್ರಾಪ್ತವಾಗುವ ನಾನಾವಿಧ ರೋಗಗಳಿಗೆ , ದಿವ್ಯವಾದ ಔಷಧರೂಪವೂ ಆಗಿದೆ.

ನೋಡಿದವ ದುರಿತ ಈಡ್ಯಾಡಿದವ ನಿನ್ನ ಕೊಂ -
ಡಾಡಿದವ ನಿತ್ಯ ಹರಿಪಾದ । ಹರಿಪಾದಕಮಲಗಳ
ಕೂಡಿದವ ಸತ್ಯ ಎಂದೆಂದು ॥ 5 ॥

ಅರ್ಥ :- ನಿನ್ನ = ನಿನ್ನನ್ನು , ನೋಡಿದವ = ನೋಡಿದವನು , ದುರಿತ = ಪಾಪವನ್ನು , ಈಡ್ಯಾಡಿದವ = ಕಳೆದುಕೊಂಡವನೇ ಸರಿ ; ನಿತ್ಯ = ಪ್ರತಿದಿನವೂ , ಕೊಂಡಾಡಿದವ = ಸ್ತುತಿಸಿದವನು , ಹರಿಪಾದಕಮಲಗಳ = ಶ್ರೀಹರಿಯ ಪಾದಾರವಿಂದಗಳನ್ನು , ಕೂಡಿದವ = ಹೊಂದಿದವನೇ ಸರಿ ; ಎಂದೆಂದು = ಯಾವ ಕಾಲಕ್ಕೂ , ಸತ್ಯ = ಇದು ಸತ್ಯವೇ.

ವಿಶೇಷಾಂಶ :- (1) ಪ್ರಾತಃಕಾಲದಲ್ಲಿ ನಿತ್ಯವೂ ಶ್ರೀತುಳಸಿಯ ದರ್ಶನ ತೆಗೆದುಕೊಳ್ಳುವವರ ಪಾಪಗಳು ನಷ್ಟವಾಗುವುವೆಂಬುದೂ , ಭಕ್ತಿಪೂರ್ವಕ ಶ್ರೀತುಳಸಿಯ ಸ್ತೋತ್ರವನ್ನು ಪಠಿಸುವವರು ಶ್ರೀಹರಿಪಾದಗಳನ್ನು ಹೊಂದುವರೆಂಬುದೂ ಸತ್ಯ. ' ಕೂಡಿದವ ' - ಹೊಂದಿದವನು ಎಂದು ನಿಶ್ಚಿತಭವಿಷ್ಯವನ್ನು ಆಗಿಹೋದಂತೆಯೇ ನಿರೂಪಿಸುವ ಪದ್ಧತಿಯ ಪ್ರಕಾರ ಹೇಳಿರುವರು. ದರ್ಶನ-ಸ್ತೋತ್ರಗಳ ಈ ಫಲಗಳು ಅತ್ಯಂತ ನಿಶ್ಚಯವೆಂದು ಇದರಿಂದ ತಿಳಿಯಬೇಕು. ಶ್ರೀಹರಿಯನ್ನು ಹೊಂದುವ ಅರ್ಹತೆಯುಳ್ಳವರಿಗೇನೆ (ಮುಕ್ತಿಯೋಗ್ಯರಿಗೆ ಮಾತ್ರ) ಶ್ರೀತುಳಸಿಯ ದರ್ಶನ - ಸ್ತೋತ್ರಗಳಲ್ಲಿ ಶ್ರದ್ಧೆಯುಂಟಾಗುತ್ತದೆಂಬುದೂ ಇಲ್ಲಿ ಸೂಚಿತವೆಂದು ತಿಳಿಯಬೇಕು.
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ।
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ ॥
ಎಂದು ನಿತ್ಯವೂ ಪ್ರಾತಃಕಾಲದಲ್ಲಿ ಹೇಳಿಕೊಳ್ಳುವ ಸ್ತೋತ್ರವು ಶ್ರೀತುಲಸಿಯ ಪವಿತ್ರ ರೂಪವನ್ನು ನಿರೂಪಿಸುತ್ತದೆ. ತುಳಸೀ ವೃಕ್ಷದ ಮೂಲದಲ್ಲಿ ಎಲ್ಲಾ ತೀರ್ಥಾಭಿಮಾನಿಗಳೂ , ಮಧ್ಯದಲ್ಲಿ ಸರ್ವ ದೇವತೆಗಳೂ , ಅಗ್ರಭಾಗದಲ್ಲಿ ಸಕಲ ವೇದಾಭಿಮಾನಿಗಳೂ ಸನ್ನಿಹಿತರಾಗಿರುವಾಗ , ಶ್ರೀತುಲಸಿಯ ಸೇವೆಯು ಯಾವ ಅಭೀಷ್ಟವನ್ನು ದೊರಕಿಸಲಾರದು? ಸರ್ವಾಭೀಷ್ಟಗಳೂ ಸಿದ್ಧವಾಗುತ್ತವೆ. 

ಪಾಪಾನಿ ಯಾನಿ ರವಿಸೂನುಪಟಸ್ಥಿತಾನಿ
ಗೋಬ್ರಹ್ಮಬಾಲಪಿತೃಮಾತೃವಧಾಧಿಕಾನಿಃ ।
ನಶ್ಶಂತಿ ತಾನಿ ತುಲಸೀವನದರ್ಶನೇನ
ಗೋಕೋಟಿದಾನಸದೃಶಂ ಫಲಮಾಪ್ನುವಂತಿ ॥
ಗೋ , ಬ್ರಹ್ಮ , ಬಾಲ , ತಂದೆ , ತಾಯಿ ಈ ಹತ್ಯೆಗಳಿಂದ ಬರುವ ಪಾಪಗಳಿಂದಲೂ ಅಧಿಕವಾದ , ಯಮದೇವನ ಪಟ್ಟಿಯಲ್ಲಿರುವ ನಮ್ಮ ಪಾಪಗಳೆಲ್ಲ ಶ್ರೀತುಲಸಿಯ ದರ್ಶನದಿಂದ ನಾಶಹೊಂದುವುದಲ್ಲದೆ , ಅನೇಕ ಸಂಖ್ಯಾಕವಾದ ಗೋದಾನದ ಫಲವೂ ಲಭಿಸುತ್ತದೆ. ಆದ್ದರಿಂದಲೇ ಶ್ರೀದಾಸರವರು ' ನೋಡಿದವ ದುರಿತ ಈಡ್ಯಾಡಿದವ ' ಎಂದುದು.

ತುಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ ।
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ ॥

ತುಲಸಿಯಿರುವ ಸ್ಥಳದಲ್ಲಿ ಶ್ರೀಹರಿಸನ್ನಿಧಾನವು ನಿತ್ಯವೆಂದು ಮೇಲಿನ ಪ್ರಮಾಣದಲ್ಲಿರುವುದರಿಂದ , ತುಲಸಿಯ ಸೇವೆಯಿಂದ ಶ್ರೀಹರಿಸೇವೆ ಲಭಿಸಿದಂತೆಯೇ ಅಲ್ಲವೇ ! ಆದುದರಿಂದ ಶ್ರೀದಾಸಾರ್ಯರು ತುಲಸಿಯ ಸ್ತೋತ್ರವು ಶ್ರೀಹರಿಸ್ತೋತ್ರವನ್ನು ಕೂಡಿಯೇ ಇದ್ದು , ಹರಿಯ ಅನುಗ್ರಹಸಿದ್ಧವೆಂದು ಸೂಚಿಸುತ್ತಾರೆ. " ನಿನ್ನ ಕೊಂಡಾಡಿದವ ಹರಿಪಾದಕಮಲಗಳ ಕೂಡಿದವ " ಎಂಬುದರಿಂದ.

ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ -
ವಂದಿಸಿದ ಜನರು ಸುರರಿಂದ । ಸುರರಿಂದ ನರರಿಂದ
ವಂದ್ಯರಾಗುವರು ಜಗದೊಳು ॥ 6 ॥

ಅರ್ಥ :- ನಿಂದಿಸಿದವರೆಲ್ಲ = ಶ್ರೀತುಳಸೀದೇವಿಯನ್ನು ನಿಂದಿಸಿದವರೆಲ್ಲ , ಜಗದೊಳು = ಜಗತ್ತಿನಲ್ಲಿ , ನಿಂದ್ಯರಾಗುವರು = ನಿಂದಿಸಲ್ಪಡುವರು , ಅಭಿವಂದಿಸಿದ ಜನರು = ಭಕ್ತಿಯಿಂದ ನಮಸ್ಕರಿಸಿ ಸ್ತುತಿಸಿದವರು , ಸುರರಿಂದ = ದೇವತೆಗಳಿಂದಲೂ , ನರರಿಂದ = ಮನುಷ್ಯರಿಂದಲೂ ವಂದ್ಯರಾಗುವರು = ಪೂಜ್ಯರಾಗುವರು.

ವಿಶೇಷಾಂಶ :- ಸಾಧನೆಗಾಗಿ ಮನುಷ್ಯರಾಗಿ ಜನಿಸಿದ ದೇವತೆಗಳು ಸರ್ವರಿಂದ ವಂದ್ಯರು - ವಂದಿಸಲ್ಪಡಲು ಅರ್ಹರಾಗುವರು. ಮನುಷ್ಯಾದಿ ಅವರರಾದ ಜೀವರು ಯಥಾಯೋಗ್ಯವಾಗಿ ಸುರರಿಂದ ಸಹ ಗೌರವಿಸಲ್ಪಡಲು ಅರ್ಹರಾಗುವರು , ' ವಾಂಛಂತಿ ಕರಸಂಸ್ಪರ್ಶಂ ತೇಷಾಂ (ತೇಷಾಂ = ಸಾಲಿಗ್ರಾಮ ಸ್ಪರ್ಶವನ್ನು ನಿತ್ಯ ಮಾಡುವ ಮಾನವರ ) ದೇವಾಃ ಸ ವಾಸವಾಃ ' ಎಂಬಂತೆ.

ಕಲುಷವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮೀ -
ನಿಲಯನಂಘ್ರಿಗಳ ಪೂಜಿಪ । ಪೂಜಿಪರಿಗೆ ಪರಮಮಂ -
ಗಳದ ಪದವಿತ್ತು ಸಲಹುವಿ ॥ 7 ॥

ಅರ್ಥ :- ಕಲುಷವರ್ಜಿತೆ = ಹೇ ದೋಷರಹಿತಳೆ ತುಳಸಿ ! ನಿನ್ನ ದಳಗಳಿಂದಲಿ = ನಿನ್ನ ಎಲೆಗಳಿಂದ , ಲಕ್ಷ್ಮೀನಿಲಯನ = ಶ್ರೀಮಹಾಲಕ್ಷ್ಮಿಗೂ ನಿತ್ಯಾಶ್ರಯನಾದ ಶ್ರೀನಾರಾಯಣನ , ಅಂಘ್ರಿಗಳ = ಪಾದಗಳನ್ನು , ಪೂಜಿಪರಿಗೆ = ಪೂಜೆಮಾಡುವವರಿಗೆ , ಪರಮಮಂಗಳದ ಪದವ = ಮೋಕ್ಷವನ್ನು , ಇತ್ತು = ಕೊಟ್ಟು , ಸಲಹುವಿ = ರಕ್ಷಿಸುವಿ.

ವಿಶೇಷಾಂಶ :- (1) ' ಪರಮಮಂಗಳಪದವ ' ಎಂಬುದಕ್ಕೆ ವೈಕುಂಠಾದಿ ಅಪ್ರಾಕೃತ (ಲಕ್ಷ್ಮ್ಯಾತ್ಮಕ) ಲೋಕಗಳನ್ನು ಅಥವಾ ಚಿದಾನಂದಾತ್ಮಕ ಸ್ವಸ್ವರೂಪದ ಆವಾರ್ಭಾವವನ್ನು , ಪರಮಾತ್ಮನಲ್ಲಿ ಸ್ಥಿತಿರೂಪವಾದ ಸಾಯುಜ್ಯ ಮುಕ್ತಿಯನ್ನು , ಅತಿಶಯ ಪುಣ್ಯಸಾಧಕವಾದ ಸಂಪತ್ತನ್ನು , ಯಥಾರ್ಥ ತತ್ತ್ವಜ್ಞಾನವನ್ನು , ಶುದ್ಧವಾದ ವಿರಕ್ತಿಯನ್ನು ಎಂಬ ಮುಂತಾದ ನಾನಾರ್ಥಗಳನ್ನು ಸೇವಿಸುವವರ ಯೋಗ್ಯತಾನುಸಾರವಾಗಿ ತಿಳಿಯಬಹುದು.

(2) ಶ್ರೀತುಳಸಿಯು ಮೋಕ್ಷವನ್ನು ಕೊಡುವಳೆಂದರೆ , ಲಕ್ಷ್ಮ್ಯಾವೇಶಯುತಳಾಗಿ ಶ್ರೀಹರಿಯ ಅನುಜ್ಞೆಯಿಂದ ; ಸ್ವತಂತ್ರಳಾಗಿ ತಾನೇ ಅಲ್ಲವೆಂದು ತಿಳಿಯತಕ್ಕದ್ದು.

ಶ್ರೀತುಳಸಿದೇವಿ ಮನ್ಮಾತ ಲಾಲಿಸು ಜಗ-
ನ್ನಾಥವಿಟ್ಠಲನ ಚರಣಾಬ್ಜ । ಚರಣಾಬ್ಜ ಎನ್ನ ಹೃತ್ಪದ್ಮದಲಿ
ನೀ ತೋರೆ ಕೃಪೆಯಿಂದ ॥ 8 ॥

ಅರ್ಥ :- ಶ್ರೀತುಳಸಿದೇವಿ = ಹೇ ತೇಜೋವಿಶಿಷ್ಟಳಾದ ತುಳಸಿ! ಮನ್ಮಾತ = ನನ್ನ ಮಾತನ್ನು , ಲಾಲಿಸು = ಚಿತ್ತಕ್ಕೆ ತಂದುಕೋ ; ನೀ = ನೀನು , ಜಗನ್ನಾಥವಿಟ್ಠಲನ = ಜಗದೊಡೆಯನಾದ ಶ್ರೀವಿಟ್ಠಲನ , ಚರಣಾಬ್ಜ = ಪಾದಪದ್ಮಗಳನ್ನು , ಎನ್ನ ಹೃತ್ಪದ್ಮದಲಿ = ನನ್ನ ಹೃದಯಕಮಲದಲ್ಲಿ , ಕೃಪೆಯಿಂದ = ದಯಮಾಡಿ , ತೋರೆ = ತೋರಿಸಮ್ಮ.

ವಿಶೇಷಾಂಶ : ಶ್ರೀತುಳಸೀದೇವಿಯ ಸೇವೆಯು ಶ್ರೀಹರಿಯ ಸಾಕ್ಷಾತ್ಕಾರವನ್ನು (ಅಪರೋಕ್ಷಜ್ಞಾನವನ್ನು) ದೊರಕಿಸಲು ಶಕ್ತವಾದ್ದರಿಂದ , ಅದರಿಂದ ಮೋಕ್ಷವು ತಪ್ಪದೇ ಲಭಿಸುವುದರಿಂದ ಸರ್ವ ಸಜ್ಜನರು ಆಕೆಯನ್ನು ನಿಷ್ಠೆಯಿಂದ ನಿತ್ಯವೂ ಸೇವಿಸಬೇಕೆಂದು ಸೂಚಿಸಿರುತ್ತಾರೆ.

ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃಪಾವನೀ
ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ।
ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ ॥


ತುಲಸಿಯ ದರ್ಶನದಿಂದ ಸಮಸ್ತ ಪಾಪಪರಿಹಾರ , ಸ್ಪರ್ಶದಿಂದ ದೇಹಶುದ್ಧಿ , ನಮಸ್ಕಾರದಿಂದ ರೋಗನಾಶ , ನೀರೆರೆವುದರಿಂದ ಯಮನ ಬಾಧೆ ಪರಿಹಾರ , ತುಳಸಿಯನ್ನು ಬೆಳೆಸುವುದರಿಂದ ಹರಿಭಕ್ತಿಯ ಜನನ , ಶ್ರೀಹರಿಗೆ ತುಳಸಿಯ ಸಮರ್ಪಣೆಯಿಂದ ಮೋಕ್ಷಪ್ರಾಪ್ತಿ . ಇವುಗಳನ್ನು ಮೇಲಿನ ಪ್ರಮಾಣಶ್ಲೋಕವು ತಿಳಿಸುತ್ತದೆ. ಇಷ್ಟೂ ಅಭಿಪ್ರಾಯವನ್ನು ಶ್ರೀದಾಸಾರ್ಯರು ಈ ತುಳಸೀಸ್ತೋತ್ರದಲ್ಲಿ ಅಡಗಿಸಿದ್ದಾರೆ.
ವ್ಯಾಖ್ಯಾನ : 
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
************

 ಬೃಂದಾವನಿ ಜನನಿ ವಂದಿಸುವೆ ಸತತ । ಜ ।

ಲಂಧರನ ರಾಣಿ ಕಲ್ಯಾಣಿ । ಕಲ್ಯಾಣಿ ತುಳಸಿ ನಿಜ ।
ಮಂದಿರೆ ಎನಗೆ ದಯವಾಗೆ ।। ೧ ।।

ಜಲಜಾಕ್ಷನಮಲ ಕಜ್ಜಲ ಬಿಂದು । ಪೀಯೂಷ ।

ಕಲಶದಲಿ ಬೀಳೆ ಜನಿಸಿದಿ । ಜನಿಸಿ ಹರಿಯಿಂದ ಶ್ರೀ ।
ತುಳಸಿ ನೀನೆಂದು ಕರೆಸಿದಿ ।। ೨ ।।

ಶ್ರೀ ತರುಣಿವಲ್ಲಭನ ಪ್ರೀತಿ ವಿಷಯಳೇ ನಿನ್ನ ।

ನಾ ತುಳಸಿ ಕೈಯ ಮುಗಿವೆನು । ಮುಗಿವೆ ಎನ್ನಯ ಮಹಾ ।
ಪಾತಕವ ಕಳೆದು ಪೊರೆಯಮ್ಮಾ ।। ೩ ।।

ತುಳಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ ।

ಕಲುಷ ಕರ್ಮಗಳ ಎಣಿಸದೆ । ಎಣಿಸದೆ ಸಂಸಾರ ।
ಜಲಧಿಯಿಂದೆಮ್ಮ ಕಡೆಹಾಯ್ಸು ।। ೪ ।।

ನೋಡಿದವ ದುರಿತ ಈಡ್ಯಾಡಿದವ ನಿನ್ನ । ಕೊಂ ।

ಡಾಡಿದವ ನಿತ್ಯ ಹರಿ ಪಾದ । ಹರಿ ಪಾದ ಕಮಲಗಳ ।
ಕೂಡಿದವ ಸತ್ಯ ಎಂದೆಂದು ।। ೫ ।।

ನಿಂದಿಸಿದವರೆಲ್ಲ ನಿಂದ್ಯರಾಗುವರು । ಅಭಿ ।

ವಂದಿಸಿದ ಜನರು ಸುರರಿಂದ । ಸುರರಿಂದ ನರರಿಂದ ।
ವಂದ್ಯರಾಗುವರು ಜಗದೊಳು ।। ೬ ।।

ಕಲುಷ ವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮೀ ।

ನಿಲಯನಂಘ್ರಿಗಳ ಪೂಜಿಪ । ಪೂಜಿಪರಿಗೆ ಪರಮ । ಮಂ ।
ಗಲದ ಪದವಿತ್ತು ಸಲಹುವಿ ।। ೭ ।।

ಶ್ರೀ ತುಳಸೀದೇವಿ ಮನ್ಮಾತ ಲಾಲಿಸು । ಜಗ ।

ನ್ನಾಥ ವಿಠಲನ ಚರಣಾಬ್ಜ । ಚರಣಾಬ್ಜ ಎನ್ನ ಹೃತ್ಪದ್ಮದಲ್ಲಿ ।
ನೀ ತೋರೆ ಕೃಪೆಯಿಂದ ।। ೮ ।।
***

No comments:

Post a Comment